
ಮೈಸೂರು ನಗರಾಭಿವೃದ್ಧಿ ಪಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಡೆಸುತ್ತಿರುವ ‘ಮೈಸೂರ ಚಲೋ’ ಪಾದಯಾತ್ರೆಗೆ ಕಾಂಗ್ರೆಸ್ ನಾಯಕರೆಲ್ಲರೂ ಒಕ್ಕೊರಲಿನಿಂದ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡು ಕೌಂಟರ್ ಕೊಟ್ಟಿದ್ದಾರೆ.

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲು ಮೈಸೂರಿನಲ್ಲಿ ಶುಕ್ರವಾರ (ಆ.9) ಆಯೋಜಿಸಿದ್ದ ಜನಾಂದೋಲನ ಸಭೆಯಲ್ಲಿ ಕಾಂಗ್ರೆಸ್ ನಾಯಕರು, “ಸಿಎಂ ಸಿದ್ದರಾಮಯ್ಯ ಜೊತೆ ನಿಂತಿದ್ದೇವೆ, ಅವರ ರಾಜೀನಾಮೆ ಕೊಡಲು ಬಿಡುವುದಿಲ್ಲ” ಎಂಬ ಸಂದೇಶ ಸಾರಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಮೊದಲಿಗೆ ಮಾತನಾಡಿ, “ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೇವೆ. ಅವರ ಪರ ನಿಲ್ಲುತ್ತೇವೆ. ಅವರು ರಾಜೀನಾಮೆ ಕೊಡಲು ನಾವು ಬಿಡುವುದಿಲ್ಲ” ಎಂದು ವಾಗ್ದಾನ ಮಾಡಿದರು.“ಬಜೆಟ್‌ನಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ.ಇದೀಗ ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಲಾಗುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ಕಿಡಿಕಾರಿದರು.“ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನಾಯಕತ್ವದಲ್ಲಿ ಜನಪ್ರಿಯ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ.

ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಸಲಾಗುತ್ತಿದೆ. ಶೋಷಿತರು, ಮಹಿಳೆಯರು ಹಾಗೂ ರೈತರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ಹೇಳಿದರು.ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಪ್ರಪಂಚದಲ್ಲೇ ಕುಖ್ಯಾತಿ ಪಡೆದಿರುವ ಯಡಿಯೂರಪ್ಪ ಅವರು ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದುಕೊಂಡಿದ್ದರು.

ಈಗ ಮರಿ ಯಡಿಯೂರಪ್ಪ ಅಪ್ಪನನ್ನು ಹಾಳು ಮಾಡಿದರು. ಭ್ರಷ್ಟಾಚಾರ ಮಾಡಿದ್ದಾರೆ.ಸಿಎಂ ಸಹಿಯನ್ನು ಮಗನೇ ಮಾಡುತ್ತಿದ್ದನು. ಇದರ ಬಗ್ಗೆ ತನಿಖೆ ಆಗಬೇಕು.ನಕಲಿ ಸಹಿ ಮಾಡಲಾಗಿದೆ. ಹಗರಣದ ಪಿತಾಮಹ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ” ಎಂದು ಹರಿಹಾಯ್ದರು.“83 ವರ್ಷದ ಹಿಂದೆ ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ಮಾಡಿದರು.

ಇದೊಂದು ಪವಿತ್ರವಾದ ದಿನ.ಬಿಜೆಪಿ ವಿರುದ್ಧ ನಮ್ಮ ಹೋರಾಟ ಇದಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.ಸಚಿವ ಜಮೀರ್ ಅಹಮದ್ ಮಾತನಾಡಿ,”‘ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ಮುಡಾ ಪ್ರಕರಣ ಇಟ್ಟುಕೊಂಡು ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್ ಪ್ರಯತ್ನಿಸುತ್ತಿದೆ. ಸಿದ್ದರಾಮಯ್ಯ ಅವರ ಬಾವೈದ ದಾನವಾಗಿ ಕೊಟ್ಟಿರುವ ಜಾಗವನ್ನೇ ಇದೀಗ ವಿವಾದ ಮಾಡಲಾಗಿದೆ.ಬಹುಮತ ಬಂದಿರುವ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದು ಟೀಕಿಸಿದರು.