ಸುದ್ದಿ ಸಂಸ್ಥೆಗಳ ಒಕ್ಕೂಟವು ಇಸ್ರೇಲ್ ಮೂಲದ ಸ್ಪೈವೇರ್ ತಯಾರಕರ ಗ್ರಾಹಕರು ಪೆಗಾಸಸ್ ಸ್ಪೈವೇರ್ ಉಪಕರಣವನ್ನು ಪತ್ರಕರ್ತರ ಮತ್ತು ಇತರ ಗಣ್ಯರ ವಿರುದ್ಧ ಹೇಗೆ ಬಳಸಿದ್ದಾರೆ ಎಂದು ವರದಿಗಳನ್ನು ಪ್ರಕಟಿಸಿದ ನಂತರ ಎನ್ಎಸ್ಒ ಸಮೂಹದ ಸಹ-ಸಂಸ್ಥಾಪಕ ಶಲೆವ್ ಹುಲಿಯೊ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಪೆಗಾಸಸ್ ಪ್ರಾಜೆಕ್ಟ್‌ಗೆ ಸಂಬಂಧಿತ ವರದಿಗಳು ಪ್ರಕಟವಾದ ಒಂದು ದಿನದ ನಂತರ ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ಪೆಗಾಸಸ್ ಪ್ರಾಜೆಕ್ಟ್ ಬಳಸುತ್ತಿರುವ ಸಾವಿರಾರು ಗ್ರಾಹಕರ ಪಟ್ಟಿಯನ್ನು ಹುಲಿಯೊ ಮುಂದಿಟ್ಟಿದ್ದಾರೆ. ಅಲ್ಲದೆ ಪೆಗಾಸಸ್ ಗ್ರಾಹಕರ ಕಾರ್ಯಾಚರಣೆಗಳು ಮತ್ತು ಎನ್‌ಎಸ್‌ಒಗೆ ಯಾವುದೇ ಸಂಬಂಧವಿಲ್ಲ ಎಂದೂ ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ. ಆದರೆ ಪತ್ರಕರ್ತರ ಮೇಲಿನ ಗೂಢಡಾಚಾರಿಕೆಗಳು ಸೇರಿದಂತೆ ವರದಿಯಾಗಿರುವ ಹಲವು ಆರೋಪಗಳು ‘ಕಳವಳಕಾರಿ’ ಎಂದು ಅವರೂ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. .
“ತನ್ನ ಸ್ಪೈವೇರ್ ದುರುಪಯೋಗವಾಗುತ್ತಿರುವ ಬಗ್ಗೆ ಪ್ರತಿ ಆರೋಪಗಳ ಬಗ್ಗೆಯೂ ತನಗೆ ಕಳವಳ ಇದೆ” ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. “ಇದು ನಾವು ಗ್ರಾಹಕರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಲ್ಲಂಘಿಸುತ್ತದೆ. ನಾವು ಪ್ರತಿ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಅದು ನಿಜವೆಂದು ಕಂಡುಕೊಂಡರೆ, ನಾವು ಅವರ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುತ್ತೇವೆ ” ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಪೆಗಾಸಸ್ ಅನ್ನು ಗಣ್ಯ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿ ದುರುಪಯೋಗಪಡಿಸಿಕೊಂಡ ಒಂದು ಪ್ರಕರಣವೂ ಸೇರಿದಂತೆ, ದುರುಪಯೋಗದ ಆರೋಪದ ಮೇಲೆ 2016 ರ ನಂತರ ಅದು ತನ್ನ ಐದು ಕ್ಲೈಂಟ್‌ಗಳನ್ನು ರದ್ದುಗೊಳಿಸಿದೆ ಎಂದು ಎನ್‌ಎಸ್‌ಒ ತನ್ನ ಇತ್ತೀಚಿನ ಪಾರದರ್ಶಕತೆ ವರದಿ (transparent report) ಯಲ್ಲಿ ತಿಳಿಸಿತ್ತು.
ಪ್ರಕಟಣೆಯ ಮೊದಲು, ಎನ್‌ಎಸ್‌ಒ ತನ್ನ ಕಾನೂನು ಸಲಹೆಗಾರರ ಮೂಲಕ ಪೆಗಾಸಸ್ ಮೇಲಿನ ಆರೋಪವನ್ನು ಆಧಾರರಹಿತ ಮತ್ತು ಉತ್ಪ್ರೇಕ್ಷೆ ಎಂದು ಕರೆದಿತ್ತು. ಕಳೆದ ವಾರದ ಹೇಳಿಕೆಗಳಲ್ಲಿ ಅದು ತನ್ನ ಗ್ರಾಹಕರಿಗೆ ಒದಗಿಸಿದ ಸ್ಪೈವೇರ್ ಅನ್ನು ನಿರ್ವಹಿಸುವುದಿಲ್ಲ ಮತ್ತು ಅವರ ನಿರ್ದಿಷ್ಟ ಗುಪ್ತಚರ ಚಟುವಟಿಕೆಗಳ ಬಗ್ಗೆ ‘ಯಾವುದೇ ಒಳನೋಟವನ್ನು ಹೊಂದಿಲ್ಲ’ ಎಂದು ಹೇಳಿತ್ತು.

ಭಾನುವಾರ ಹೆಚ್ಚು ಸಮಾಧಾನಕರ ಶೈಲಿಯಲ್ಲಿ ಮಾತನಾಡಿದ ಹುಲಿಯೊ “ಕಂಪನಿಯು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಬಗ್ಗೆ ಕಾಳಜಿ ವಹಿಸುತ್ತದೆ” ಎಂದು ಹೇಳಿದ್ದಾರೆ. “ಕೆಲವು ಸಂದರ್ಭಗಳಲ್ಲಿ ನಮ್ಮ ಗ್ರಾಹಕರು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, NSO ನ ಪಾರದರ್ಶಕತೆ ಮತ್ತು ಜವಾಬ್ದಾರಿ ವರದಿಯಲ್ಲಿ ನಾವು ವರದಿ ಮಾಡಿದಂತೆ, ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಗ್ರಾಹಕರಿಗೆ ನಾವು ಇಡೀ ಸಿಸ್ಟಮನ್ನು ಸ್ಥಗಿತಗೊಳಿಸಿದ್ದೇವೆ” ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಕಂಪನಿಯು ಕಳೆದ 12 ತಿಂಗಳಲ್ಲಿ ಇಬ್ಬರು ಗ್ರಾಹಕರನ್ನು ಅಮಾನತುಗೊಳಿಸಿದೆ ಎಂದು ಎನ್ಎಸ್ಒ ಮುಖ್ಯಸ್ಥರು ಹೇಳಿದ್ದಾರೆ.