ಬೇಸಿಗೆಯ ಬಿಸಿ ಬೇಗೆಗೆ ಭೂಮಿಯೇ ಬಾಯಿ ಬಿಟ್ಟು ನಿಲ್ಲುತ್ತೆ. ನಗರದಲ್ಲಿ ಬೇಸಿಗೆ ಮುನ್ನವೇ ಬಿಸಿಲಿನ ಬೇಗೆ ಹೆಚ್ಚಾಗಿದೆ. ಹೀಗಾಗಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುವ ಆತಂಕ ಕಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಜಲಕ್ಷಾಮ ಉಂಟಾಗುವ ಆತಂಕ ಎದುರಾಗಿದೆ. ಬೇಸಿಗೆ ಕಾಲದ ಆರಂಭದಲ್ಲೇ ಈ ಬಾರಿ ಅಂತರ್ಜಲದ ಪ್ರಮಾಣ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಇಳಿಕೆ : ಕೊಳವೆ ಬಾವಿಗಿಲ್ಲ ಅನುಮತಿ!
ಬೇಸಿಗೆ ಬಂದರೆ ಸಾಕು ಹನಿ ಜನಿ ನೀರಿಗೂ ಹಾಹಾಕಾರ ಶುರುವಾಗುತ್ತೆ. ಕಾವೇರಿ ನೀರು ಬರಲ್ಲ ಅಂತ ಜನ ಬೋರವೆಲ್ ಮೊರೆ ಹೋಗುತ್ತಾರೆ. ಹಾಗಾಗಿಯೇ ಅಂತರ್ಜಲ ಮಟ್ಟ ಕುಸಿತ ಕಾಣುತ್ತೆ. ನಗರದಲ್ಲಿ ಬೇಸಿಗೆ ಮುನ್ನವೇ ನೂರಾರು ಕೊಳವೆ ಬಾವಿಗಳು ಬತ್ತಿ ಹೋಗಿವೆ. 200ಕ್ಕೂ ಹೆಚ್ಚು ಕೊಳವೆ ಬಾವಿಗಳು ಈಗಾಗಲೇ ಬತ್ತಿದ್ದು, ಇನ್ನೂ ನೂರಾರು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯಲು ಆರಂಭಿಸಿವೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಲಮಂಡಳಿ ಅಂತರ್ಜಲ ಗುಣಮಟ್ಟ ಏರಿಸುವ ಹಿತದೃಷ್ಟಿಯಿಂದ ಕಾವೇರಿ ನೀರು ಪೂರೈಕೆಯಾಗ್ತಿರುವ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯುವದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಬೋರ್ ವೆಲ್ ಮೊರೆ ಹೋಗುತ್ತಿದ್ದಾರೆ. ಆದರೆ ಪ್ರತಿ ಬೋರ್ ವೆಲ್‌ಗೂ ಇಂತಿಷ್ಟು ಅಂತರವಿರಬೇಕು ಎನ್ನುವ ನಿಯಮಗಳಿವೆ. ಆದರೆ ಅದೆಲ್ಲವನ್ನೂ ಗಾಳಿಗೆ ತೂರಿ ಅಕ್ಕ ಪಕ್ಕದಲ್ಲೇ ಬೋರ್ ವೆಲ್ ಕೊರೆಯಲಾಗುತ್ತಿದೆ. ಕೊಳವೆ ಬಾವಿ ಕೊರೆಯಲು ಅವಕಾಶ ಕೋರಿ ಎಷ್ಟೇ ಅರ್ಜಿ ಬಂದರೂ, ಖುದ್ದು ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದ್ದರೆ ಅವಕಾಶ ನೀಡದಿರಲು ಜಲಮಂಡಳಿ ತೀರ್ಮಾನಿಸಿದೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ.
ಬೆಂಗೂರಿನಲ್ಲಿದೆ 4 ಲಕ್ಷಕ್ಕೂ ಅಧಿಕ ಕೊಳವೆ ಬಾವಿ!
ನಗರದಲ್ಲಿ ಸುಮಾರು 4 ಲಕ್ಷದಷ್ಟು ಕೊಳವೆ ಬಾವಿಗಳಿದ್ದು, ಇದರಲ್ಲಿ ಜಲಮಂಡಳಿಗೆ ಸೇರಿದ ಸುಮಾರು 9,300 ಸಾರ್ವಜನಿಕ ಕೊಳವೆ ಬಾವಿಗಳು ಮತ್ತು ಬಿಬಿಎಂಪಿಗೆ ಸೇರಿದ 1200ಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಇದೀಗ ಹೊಸದಾಗಿ ಕೊರೆಯುವ ಬೋರ್ ವೆಲ್ ಗಳಿಗೆ ಬೇಸಿಗೆ ಮುಗಿಯುವರಿಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ. ಯಾವದೇ ಬೋರ್ವೆಲ್ ಅನುಮತಿ ಇಲ್ಲದೆ ಕೊರೆದರೆ ಸೂಕ್ತ ಕ್ರಮ ಕೈಗೊಳ್ಳಲು ಈ ಬಾರಿ ಬೆಂಗಳೂರು ಜಲಮಂಡಳಿ ಮುಂದಾಗಿದೆ.
ಅವೈಜ್ಞಾನಿಕ ಬೋರ್ ವೆಲ್ ಗಳಿಂದ ಜಲಕ್ಷಾಮ!
ಇನ್ನೂ ಅವೈಜ್ಞಾನಿಕವಾಗಿ ಕೊರೆಯುವ ಕೊಳವೆ ಬಾವಿಗಳಿಂದಾಗಿ ಅಂತರ್ಜಲ ಮಟ್ಟ ಮತ್ತಷ್ಟು ಹದಗೆಡಲಿದೆ. ಅಂತರ್ಜಲ ಸುರಕ್ಷತೆ ದೃಷ್ಟಿಯಿಂದ ಈ ಬಾರಿಯ ಬೇಸಿಗೆ ಬರುವ ಮೊದಲೇ ಜಲಕ್ಷಾಮಕ್ಕೆ BWSSB ಹೊಸ ದಾರಿ ಈ ರೀತಿ ಕಂಡುಕೊಂಡಿದೆ. ನಗರದ ಪ್ರತಿಯೊಬ್ಬ ಗ್ರಾಹಕರಿಗೂ ನೀರು ಸಮರ್ಪಕವಾಗಿ ಪೂರೈಕೆ ಮಾಡುವುದು ಜಲ ಮಂಡಳಿ ಜವಾಬ್ದಾರಿಯಾಗಿದೆ. ಇಲ್ಲವಾದರೆ ಗ್ರಾಹಕರು ಮಾತ್ರ ನೀರು ಇಲ್ಲದೆ ಪರಿತಪ್ಪಿಸಬೇಕಾಗುತ್ತೆ. ಇನ್ನು ಹೀಗೆ ಮುಂದುವರೆದರೆ ದುಬಾರಿ ಬೆಲೆ ಕೊಟ್ಟರೂ ನೀರಿಗಾಗಿ ಪರದಾಡುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.