

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡೂ ಹಂತಗಳು ಮುಕ್ತಾಯ ಆಗಿವೆ. ಮೊದಲ ಹಂತ ಏಪ್ರಿಲ್ 26 ರಂದು ನಡೆದಿತ್ತು. ಆ ಬಳಿಕ ಮೇ 7ರಂದು ಎರಡನೇ ಹಂತದ ಚುನಾವಣೆಯೂ ನಡೆದಿದ್ದು, ಎರಡೂ ಹಂತದ ಚುನಾವಣೆಯಲ್ಲೂ ಉತ್ತಮ ಮತದಾನ ಆಗಿದೆ. ಎರಡೂ ಹಂತಗಳನ್ನು ಹೋಲಿಕೆ ಮಾಡಿ ನೋಡಿದಾಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ಆಗಿದ್ದರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ನಡೆದಿದೆ. ಆದರೆ ರಾಜ್ಯಾದ್ಯಂತ ಲೆಕ್ಕಾಚಾರ ನೋಡಿದಾಗ ಮೊದಲ ಹಂತದಲ್ಲಿ ಶೇ. 69.56 ರಷ್ಟು ಹಾಗು ಎರಡನೇ ಹಂತದಲ್ಲಿ ಶೇ. 70.41ರಷ್ಟು ಮತದಾನ ಆಗಿದೆ. ರಾಜ್ಯದಲ್ಲಿ ಒಟ್ಟು ಸರಾಸರಿ ನೋಡಿದಾಗ ಶೇ. 69.96 ರಷ್ಟು ಮತದಾನ ಆಗಿದೆ ಎನ್ನುವುದು ಚುನಾವಣಾ ಆಯೋಗದ ಅಧಿಕೃತ ಮಾಹಿತಿ.

ರಾಜ್ಯದಲ್ಲಿ ಶೇಕಡ 70ರಷ್ಟು ಜನರು ಪ್ರಜಾಪ್ರಭುತ್ವದ ಹಬ್ಬ, ಚುನಾವಣೆಯಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ಕಳೆದ ಮೂರು ಬಾರಿಯ ಸರಾಸರಿ ಅಂಕಿ ಅಂಶವನ್ನು ನೋಡಿದಾಗ ಈ ಬಾರಿಯ ಮತದಾನ ಹೆಚ್ಚಳ ಆಗಿರುವುದು ನಿಚ್ಚಳವಾಗಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಶೇ. 67.20 ರಷ್ಟ ಮತದಾನ ಆಗಿತ್ತು. ಆ ಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮತದಾನ ಏರಿಕೆ ಕಂಡಿತ್ತು. ಅಂದರೆ ಶೇ. 68.81ರಷ್ಟು ಮತದಾನ ನಡೆದಿತ್ತು. ಇದೀಗ ಶೇಕಡ 69.96 ರಷ್ಟು ಮತದಾನ ಆಗಿದೆ. ಕಳೆದ ಮೂರು ಬಾರಿಯ ಅಂಕಿ ಅಂಶಗಳನ್ನು ನೋಡಿದಾಗ ಮತದಾರ ಜಾಗೃತನಾಗುತ್ತಿದ್ದಾನೆ ಎನಿಸುತ್ತದೆ.

ಮತದಾನ ಹೆಚ್ಚಳ ಆದಷ್ಟು ಯಾರಿಗೆ ಲಾಭ..?

ಯಾವುದೇ ಒಂದು ಸರ್ಕಾರ ಅಧಿಕಾರದಲ್ಲಿ ಇದ್ದಾಗ ಮತದಾನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎಂದರೆ ಅದು ಸರ್ಕಾರದ ವಿರುದ್ಧ ರೋಸಿಹೋಗಿ ಜನರು ಹಕ್ಕು ಚಲಾವಣೆ ಮಾಡಿದ್ದಾರೆ ಎಂದರ್ಥ. ಅಂದರೆ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಅಸ್ತಿತ್ವದಲ್ಲಿ ಇದ್ದರೆ ಆಳುವ ಸರ್ಕಾರದ ವಿರುದ್ಧ ಮತಚಲಾವಣೆ ಮಾಡಿದ್ದಾರೆ ಎಂದು ಅರ್ಥೈಸಬಹುದು. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಯಾವ ಸರ್ಕಾರದ ವಿರುದ್ಧ ಮತದಾರನ ಕಿಚ್ಚು ಮತದಾನದಲ್ಲಿ ಕಾಣಿಸಿದೆ ಎನ್ನುವುದನ್ನು ಮತ ಎಣಿಕೆ ದಿನ ಫಲಿತಾಂಶ ಪ್ರಕಟ ಆದಾಗ ಗೊತ್ತಾಗುತ್ತದೆ. ಆದರೆ ಈ ಬಾರಿ ಲೆಕ್ಕಾಚಾರ ಕಾಂಗ್ರೆಸ್ಗೆ ಸಹಾಯ ಆಗಿರಬಹುದು ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲೂ ಮಹಿಳೆಯರಿಗೆ ಗೃಹಲಕ್ಷ್ಮೀ ಹಾಗು ಶಕ್ತಿ ಯೋಜನೆಯನ್ನು ಕೊಟ್ಟಿರುವುದು ಕಾಂಗ್ರೆಸ್ ವಿಶ್ವಾಸವನ್ನು ಹೆಚ್ಚಿಸಿದೆ. ಪ್ರತಿ ತಿಂಗಳು 2 ಸಾವಿರ ಪಡೆಯುತ್ತಿರುವ ಮಹಿಳಾ ಮತದಾರರು ಕಾಂಗ್ರೆಸ್ನ ಹಸ್ತದ ಗುರುತಿಗೆ ಮನಸೋತು ಮತಹಾಕಿದ್ದಾರೆ ಎನ್ನುವುದು ಕಾಂಗ್ರೆಸ್ಸಿಗರ ನಂಬಿಕೆ. ಇನ್ನು ಮೋದಿ ಇಡೀ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸುವಂತೆ ಮಾಡಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಲೆಕ್ಕಕ್ಕಿಲ್ಲ. ಇದು ದೇಶದ ಚುನಾವಣೆ ಎನ್ನುವುದು ಬಿಜೆಪಿ ನಾಯಕರ ಮಾತು. ಮತದಾರನ ಮನದಾಳ ಇದೀಗ EVM ನಲ್ಲಿ ಭದ್ರವಾಗಿದೆ. ಯಾವ ಪಕ್ಷದ ನಂಬಿಕೆ ಗೆದ್ದಿದೆ ಎನ್ನುವುದು ಜೂನ್ 4ರ ಮತ ಎಣಿಕೆ ದಿನ ಬಯಲಾಗಲಿದೆ.
ಕೃಷ್ಣಮಣಿ












