ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವ ಇದೆ. ಚುನಾವಣೆಗಳು ಕ್ರಮಬದ್ಧ ರೀತಿಯಲ್ಲಿ ನಡೆದರೆ ಪ್ರಜಾಪ್ರಭುತ್ವ ಯಶಸ್ವಿಯಾದಂತೆ, ಚುನಾವಣೆ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಪ್ರಮುಖವಾಗಿರುತ್ತದೆ. ಮತದಾರರು ತಮ್ಮ ಮತವನ್ನು ಕಡ್ಡಾಯವಾಗಿ ಚಲಾಯಿಸುವುದರಿಂದ ಪ್ರತಿನಿಧಿತ್ವದ ಆಯ್ಕೆಯ ದಿಕ್ಕನ್ನು ಬದಲಾಯಿಸಬಹುದು. ಪ್ರಾಚೀನ ಭಾರತದಲ್ಲಿನ ಗಣಸಂಘ ವ್ಯವಸ್ಥೆ ಹಾಗೂ ಗ್ರೀಕ್ ನಗರದ ರಾಜ್ಯಗಳು ನೇರ ಪ್ರಜಾಪ್ರಭುತ್ವ ಮಾದರಿಯಲ್ಲಿ ಕಾರ್ಯನಿರ್ಹಿಸುವುದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು
ಸ್ಪೂರ್ತಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಅಂಶಗಳಿರುತ್ತವೆ. ಪ್ರಜಾಪ್ರಭುತ್ವವೆಂದರೆ ಒಂದು ಬಗೆಯ ಸರ್ಕಾರವೆನಿಸಿದರೂ ಅದರ ಯಶಸ್ಸು ಪ್ರಜಾ ಪ್ರತಿನಿಧಿಗಳ ಕೈಯಲ್ಲಿ ಇರುತ್ತದೆ. ಉತ್ತಮ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಬಹಳ ಮಹತ್ವ ಪಡೆದಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವವನ್ನು ಅರಿತು ಸಂವಿಧಾನ ರಚನಾಕಾರರು ಸ್ವತಂತ್ರ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. 15ನೇ ಭಾಗದಲ್ಲಿರುವ 324 ರಿಂದ 329 ರವರೆಗಿನ ವಿಧಿಗಳು ಚುನಾವಣೆಗಳ ಬಗ್ಗೆ ನಿಯಮಗಳನ್ನು ಒಳಗೊಂಡಿವೆ.
ದೇಶದ ಜನರ ಆಡಳಿತದ ಸ್ವರೂಪ ಮತ್ತು ಕಾರ್ಯವಿಧಾನವನ್ನು ಆ ದೇಶದ ಜನರು ಆಯ್ಕೆ ಮಾಡುವರು. ಜನರ ಕಲ್ಯಾಣವನ್ನು ಸುನಿಶ್ಚಿತಗೊಳಿಸುವುದು ಆಡಳಿತದ ಪ್ರಮುಖ ಉದ್ದೇಶ. ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು
ಸಮಾನವಾಗಿ ಹಂಚಿಕೆ ಮಾಡುವ ಜನರ ಕಲ್ಯಾಣನ್ನು ಸಾಧಿಸಲು ಪ್ರಜಾಪ್ರಭುತ್ವವನ್ನು ಭಾರತದ ಸಂವಿಧಾನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ಸಮಿತಿ ನೀಡಿದೆ. ಇದೊಂದು ಅಮೂಲ್ಯ ಕೊಡುಗೆ ಮತ್ತು ಜೀವಂತ ದಾಖಲೆ.
ಸ್ವಾತಂತ್ರ್ಯ ಭಾರತದಲ್ಲಿ ಮೊಟ್ಟಮೊದಲಿಗೆ ಸ್ವಾಯತ್ತ ಸಂವಿಧಾನಿಕ ಚುನಾವಣಾ ಆಯೋಗವನ್ನು ಸ್ಥಾಪಿಸಿಕೊಂಡು ಅದರ ಮೂಲಕ ಒಂದೇ ನಾಣ್ಯದ ಮುಖಗಳಂತಿರುವ
ಆದರೂ ವೆಚ್ಚಮುಕ್ತ ಮತ್ತು ಭಯಮುಕ್ತ ಚುನಾವಣೆಗಳತ್ತ ಸಾಗಬೇಕಾದ ಅಗತ್ಯ ನಮ್ಮನ್ನು ಕಾಡುತ್ತಲೇ ಇದೆ. ಸಾರ್ವಜನಿಕ ಜೀವನದಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ರಾಜಕೀಯ ಅಪರಾಧೀಕರಣವು ಸಂದಿಗ್ದತೆಗೆ ದೂಡಿದ್ದು,
ಇದರಿಂದ ಚುನಾವಣಾ ವ್ಯವಸ್ಥೆಯ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಂಭೀರವಾಗಿ ಪ್ರಶ್ನಿಸುವಂತಾಗಿದೆ. ಈ ಕುರಿತು ತಜ್ಞರು, ಮಾಧ್ಯಮಗಳು ಪದೇ ಪದೇ ಚರ್ಚೆ ಮಾಡುತ್ತಲೇ ಇವೆ. ಅದಕ್ಕೆ ತಕ್ಕಂತೆ ಚುನಾವಣಾ ಚಟುವಟಿಕೆಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತೆ ಮಾಡಿವೆ.
ದೇಶದಲ್ಲಿ 6452 ಜಾತಿಗಳು, 16 ಮತಧರ್ಮಗಳು 152 ಬುಡಕಟ್ಟುಗಳಿರುವ ಬೃಹತ್ ರಾಷ್ಟ್ರ. 28 ರಾಷ್ಟ್ರೀಯ ಹಬ್ಬ, 11618 ಭಾಷೆ, 1568000 ಹಳ್ಳಿಗಳಲ್ಲಿ ಚುನಾವಣೆ ಹಬ್ಬವಾಗಿ ಏರ್ಪಟ್ಟಿದೆ. ಭಾರತದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶ, 740 ಜಲ್ಲೆಗಳನ್ನು ಹೊಂದಿರುವ ಬೃಹತ್ ರಾಷ್ಟ್ರದಲ್ಲಿ, ಲೋಕಸಭೆಯ 543 ಸ್ಥಾನಕ್ಕೆ ಚುನಾವಣೆ
ನಡೆಯುತ್ತಿದೆ. ಸಂಸದೀಯ ಪ್ರಜಾಪ್ರಭುತ್ವವು ರಾಜಕೀಯ ಪಕ್ಷಗಳ ಆಧಾರಿತವಾಗಿದೆ. ಭಾರತದಲ್ಲಿ 1200 ರಾಜಕೀಯ ಪಕ್ಷಗಳಿದ್ದು, ಅವುಗಳಲ್ಲಿ 150 ಪಕ್ಷಗಳು ಸಕ್ರಿಯವಾಗಿ ಕಾರ್ಯನಿರತವಾಗಿವೆ. ಸ್ವಾತಂತ್ರ್ಯೋತ್ತರ ಭಾರತವು ಸಾಕಷ್ಟು ಅಭಿವೃದ್ಧಿ ಹೊಂದಿದ ಉದ್ಯಮ ವಲಯ ಹಾಗೂ ಮೂಲ ಸೌಕರ್ಯದಲ್ಲಿನ ಬೆಳವಣಿಗೆಯೊಂದಿಗೆ ಸಾರ್ವಭೌಮ ದೇಶವಾಗಿ ಹೊರಹೊಮ್ಮಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ನಿರುದ್ಯೋಗ, ಆರೋಗ್ಯ ಮತ್ತು ಶಿಕ್ಷಣ ಗುಣಮಟ್ಟದ ಕೊರತೆ, ಜನರ ಕೊಂಡುಕೊಳ್ಳುವ ಶಕ್ತಿಯಲ್ಲಿ ತೀರ್ವ ಕುಸಿತ ಹಾಗೂ ನಗರ/ಗ್ರಾಮೀಣ ಋಣಗ್ರಸ್ಥರ ಸಂಖ್ಯೆ ಹೆಚ್ಚಾಗುತ್ತಿರುವುದು ಕಾಣುತ್ತೇವೆ. ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯು ಬಂದಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ವಾಣಿಯೇ ದೈವಾವಾಣಿಯಾಗಿದೆ.
ನಾವು ಪ್ರಜಾಪ್ರಭುತ್ವಕ್ಕಾಗಿ ಏಕೆ ಕೆಲಸ ಮಾಡಬೇಕು? ಎಂದರೆ ಮತದಾನ ತತ್ವ ಭಾರತೀಯರೆಲ್ಲರಿಗೂ ತನಗೆ ದೊರಕಿರುವ ಪರಮಾಧಿಕಾರವನ್ನು ಕನಿಷ್ಠ ಪಕ್ಷ ಚುನಾವಣೆ ನಡೆಯುವ ಕಾಲದಲ್ಲಾದರೂ ಚಲಾಯಿಸುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದ್ದರಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ಎಲ್ಲಾ ಪ್ರಜೆಗಳು ಕಾರಣರು. ಅವರೇ ಅದರ ಆಧಾರ. ಅವರ ಕಲ್ಯಾಣಕ್ಕಾಗಿಯೇ ಸಂವಿಧಾನವನ್ನು ಸ್ಥಾಪಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಸಮಾನತೆಯ ತತ್ವವನ್ನು ಆಧರಿಸಿದೆ. ಮತದಾನದ ಮೂಲಕ ತಮಗೆ ಉಚಿತವೆಂದು ಕಂಡು ಬಂದಂತಹ ಪಕ್ಷವನ್ನು ಹಾಗೂ ಪಕ್ಷದ ನಾಯಕತ್ವ ಸರ್ಕಾರದ ಅಧಿಕಾರದ ಗಾದಿಗೆಗೆ ಏರಿಸುವುದಕ್ಕೆ ಅವಕಾಶವಿದೆ. ಪಕ್ಷದ ಅಧಿಕಾರವನ್ನು ತೆಗೆದು ಹಾಕುವುದಕ್ಕೆ ಸ್ವಾತಂತ್ರ್ಯವನ್ನು ನೀಡುತ್ತದೆ. ಪಕ್ಷ ಸರ್ಕಾರ ಅಥವಾ ಪಕ್ಷಗಳ ನೀತಿಯನ್ನು ಕಾರ್ಯಕ್ರಮಗಳನ್ನು ಮತ್ತು ಕಾರ್ಯದಕ್ಷತೆಯನ್ನು ಪರಿಶೀಲಿಸಿ ಅವುಗಳನ್ನು ಕುರಿತು ಟೀಕಿಸುವುದಕ್ಕೆ ಅವಕಾಶ ನೀಡುತ್ತದೆ.
ಧಕ್ಕೆಯುಂಟು ಮಾಡುವಂತಹ ಕಾನೂನಿನ ವಿರುದ್ಧ ರಕ್ಷಣೆಯನ್ನು ಪಡೆಯುವುದಕ್ಕೂ ಅವಕಾಶ ಕಲ್ಪಿಸುತ್ತದೆ.
ರಾಷ್ಟ್ರದ ಮೂಲ ಶಾಸನವಾದ ಸಂವಿಧಾನದ ಬಗ್ಗೆ ಪಕ್ಷ ಸರ್ಕಾರಗಳು ಅಧಿಕಾರ ಮೀರಿ ವರ್ತಿಸಿದಾಗ ಅಥವಾ ಆ ಸಂವಿಧಾನವನ್ನು ತಮಗೆ ಅನುಕೂಲವಾಗುವಂತೆ ಬದಲಾಯಿಸಿದಾಗ ಅಂತಹ ಪಕ್ಷ ಸರ್ಕಾರಗಳನ್ನು ಮತದಾನದ ಮೂಲಕ ವಜಾ ಮಾಡಿ ಸಂವಿಧಾನದ ಪಾವಿತ್ರ್ಯವನ್ನು, ಮೌಲ್ಯಗಳನ್ನು ಕಾಪಾಡುವಂತಹ ಪಕ್ಷಗಳನ್ನು ಅಧಿಕಾರತ್ವಕ್ಕೆ ತರುವುದರ ಮೂಲಕ ತಾವೇ ರಚಿಸಿ ಅಂಗೀಕರಿಸಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವುದಕ್ಕೆ ಪ್ರಜಾಪ್ರಭುತ್ವ ಅವಕಾಶ ಕಲ್ಪಿಸುತ್ತದೆ. ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಆಚರಣೆಗೆ ತರದೇ ಇರುವಂತಹ ಪಕ್ಷ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಮತದಾರರಿಗೆ ಅವಕಾಶ ನೀಡುತ್ತದೆ. ಎಲ್ಲಾ ಸರ್ಕಾರಗಳು ಪ್ರಜೆಗಳ ಪ್ರತಿನಿಧಿಗಳಾಗಿ ಮತ್ತು ಪ್ರಜೆಗಳಿಗೆ ಜವಾಬ್ದಾರಿಯುತವಾಗಿ ಪ್ರಜೆಗಳ ಕೋರಿಕೆಯನುಸಾರವಾಗಿ ಸರ್ಕಾರಗಳು ಕಾರ್ಯ ಮಾಡುವಂತೆ ಮಾಡುತ್ತದೆ ಹಾಗೂ ಪ್ರಜಾಪ್ರಭುತ್ವ ತತ್ವವನ್ನು ಎತ್ತಿ ಹಿಡಿಯುತ್ತದೆ.
ಸಾರ್ವತ್ರಿಕ ವಯಸ್ಕರ ಮತದಾನದ ತತ್ವವು ಜನ ಸಾಮಾನ್ಯರಲ್ಲಿ ರಾಜಕೀಯ ತಿಳುವಳಿಕೆ, ಜ್ಞಾನ, ಅರಿವು ಮತ್ತು ಜಾಗೃತಿಯನ್ನುಂಟು ಮಾಡುತ್ತದೆ. ಚುನಾವಣಾ ಸ್ಪರ್ದಿಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮ ನೀತಿ, ಕಾರ್ಯಕ್ರಮಗಳು ಯೋಜನೆಗಳನ್ನು ಜನತೆಯ ಮುಂದೆ ಇಟ್ಟು ರಾಷ್ಟ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುವುದರಿಂದಾಗಿ ಸಾರ್ವತ್ರಿಕ ರಾಜಕೀಯ ಪ್ರಜ್ಞೆ ಬೆಳೆಯಲು ಸಹಾಯಕವಾಗುತ್ತದೆ.
ಈ ಲೋಕಸಭಾ ಚುನಾವಣೆಯಲ್ಲಿ ನಿರ್ಭಯವಾಗಿ ನಿಮ್ಮ ಮತ ಹಾಕಿ, ಇತರರೆಲ್ಲರೂ ತಮ್ಮ ಮತಗಳನ್ನು ಮುಕ್ತವಾಗಿ ಚಲಾಯಿಸಲು ಪ್ರೋತ್ಸಾಹಿಸಿ, ನೀವು ಮತಚಲಾಯಿಸಲು ಬಯಸುವ ಅಭ್ಯರ್ಥಿಗಳು/ಪಕ್ಷಗಳನ್ನು ಪರಿಶೀಲಿಸಿ, ಅಭ್ಯರ್ಥಿಯು ‘ಒಳ್ಳೆಯವನಾಗಿದ್ದರೂ’ ನಾವು ಅವರು ಪ್ರತಿನಿಧಿಸುವ ಪಕ್ಷ/ಸಿದ್ಧಾಂತಗಳ ಬಗ್ಗೆ ಜಾಗರೂಕರಾಗಿರಬೇಕು, ‘ಖಾಲಿ’ ಭರವಸೆಗಳಿಂದ ವಂಚಿತರಾಗಬೇಡಿ, ಸಾರ್ವಜನಿಕ ಚರ್ಚೆಗಳು / ಅವರೊಂದಿಗೆ
ಸಂವಾದಗಳನ್ನು ಆಯೋಜಿಸಿ ಮತ್ತು ಅವರ ಅಭಿಪ್ರಾಯಗಳು/ನಿಲುವುಗಳು/ಭರವಸೆಗಳು/ ಹಿಂದಿನ ಸಾಧನೆಯಿಂದ ನಿರ್ಣಯಿಸಿ, ಹಿಂದಿನ ಚುನಾವಣೆಗಳ ಅವರ ಚುನಾವಣಾ ಪ್ರಣಾಳಿಕೆಯನ್ನು ಅಧ್ಯಯನ ಮಾಡಿ ಮತ್ತು ಈ ಪ್ರಣಾಳಿಕೆಯನ್ನು ಆಧರಿಸಿ ಆಡಳಿತ ಪಕ್ಷ / ಹಾಲಿ ಅಭ್ಯರ್ಥಿ ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆಯೇ ಎಂದು ನೋಡಿ, ಬಡ ಆದಿವಾಸಿಗಳು, ದಲಿತರು, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರು, ವಿಕಲಚೇತನರು ಮತ್ತು ಉದ್ದೇಶಿತ ವ್ಯಕ್ತಿಗಳಂತಹ ತಾರತಮ್ಯ/ದುರ್ಬಲ ಸಮುದಾಯಗಳ ಬಗ್ಗೆ ಅವರ ಅಭಿಪ್ರಾಯಗಳ ಬಗ್ಗೆ ತರ್ಕಿಸಿ, ನೀರು, ಶಿಕ್ಷಣ, RTI, ನೋಟು ಅಮಾನ್ಯೀಕರಣ, ಆಹಾರ ಭದ್ರತೆ, ಪರಿಸರ ವಿಜ್ಞಾನ, ಉದ್ಯೋಗ,
ಆಡಳಿತ ಮತ್ತು ಜಾಗತೀಕರಣದಂತಹ ನಿರ್ಣಾಯಕ ವಿಷಯಗಳ ಮೇಲೆ ಅವರ ನಿಲವುಗಳೇನು ಎಂಬುದನ್ನು ಪರಿಶೀಲಿಸಿಕೊಳ್ಳಿ, ದೇಶದ ಭವಿಷ್ಯದ ಬಗ್ಗೆ ಯೋಚಿಸಿ; ಸಮೀಪದೃಷ್ಟಿ ಮತ್ತು/ಅಥವಾ ಸ್ವಾರ್ಥಿಯಾಗಿರಬೇಡಿ
ಸಂಸದೀಯ ಪದ್ದತೀಯ ಪ್ರಜಾಪ್ರಭುತ್ವದ ಯಶಸ್ವೀ ಕಾರ್ಯಾಚರಣೆಗೆ ರಾಜಕೀಯ ಸ್ಥಿರತೆ ಹಾಗೂ ವರ್ಚಸ್ಸಿಗೆ ನೈಜವಾದ ಮತ್ತು ಶುದ್ಧವಾದ ಚುನಾವಣಾ ಪದ್ಧತಿ ಅಗತ್ಯ. ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವ ಜನಪ್ರಿಯವಾಗಿದೆ. ಮತದಾನ ಜನರಿಗೆ ರಾಜಕೀಯ ವಿದ್ಯೆಯನ್ನು ಒದಗಿಸುವಂತಹ ಅತ್ಯುತ್ತಮ ಶಿಕ್ಷಣ ಶಾಲೆಯಂತಿದ್ದು.
ರಾಜಕೀಯ ವ್ಯವಸ್ಥೆಯ ಮೂಲಾಧಾರವಾಗಿದೆ. ಇದುವರೆಗಿನಾ ಚುನಾವಣೆಗಳನ್ನು ದಕ್ಷತೆಯಿಂದ ನಡೆಸಿದರೂ ಚುನಾವಣಾ ಅಕ್ರಮವನ್ನು ತಡೆಯಲು ಸಂಪೂರ್ಣ ಯಶಸ್ವಿಯಾಗಿಲ್ಲ. ನಮ್ಮ ಹಕ್ಕನ್ನು ನಾವು ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ. ಅದನ್ನು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ, ಪ್ರಜಾಪ್ರಭುತ್ವವೇ ನಮಗೆ ದಿಕ್ಕು.ಮತದಾನ ಮಾಡದೇ ರಾಜಕೀಯದ ಬಗ್ಗೆ ಮಾತನಾಡುವ ಹಕ್ಕು ಇರುವುದಿಲ್ಲ, ಒಟ್ಟಾರೆಯಾಗಿ ಜನಪರ ಮತ್ತು ಮಹಿಳಾಪರ ಸರ್ಕಾರ ಅಧಿಕಾರಕ್ಕೆ ಬರಬೇಕು ಹಾಗೂ ಮತದಾನ ಮಾಡುವ ಮೂಲಕ ಅಂತಹ ಸರ್ಕಾರವನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಭಾರತ ಚುನಾವಣಾ ಆಯೋಗವೂ ಯಾವೊಬ್ಬ ಮತದಾರನೂ ಹೊರಗುಳಿಯಬಾರದು ಮತ್ತು ಪ್ರತಿಯೊಂದು ಮತವೂ ಅತ್ಯಮೂಲ್ಯ ಎಂಬ ತಾತ್ವಿಕ ನೆಲಗಟ್ಟಿನಡಿ, ಭವಿಷ್ಯದ ಮತದಾರರು,
ನೂತನ ಮತದಾರರು ಮತ್ತು ವಯಸ್ಕ ಮತದಾರರನ್ನು ಗುರಿಯಾಗಿಸಿಕೊಂಡು ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ನಾಡಿನ, ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿ ಮತದಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ. ರಾಷ್ಟ್ರದ ಬೆಳವಣಿಗೆಯೂ ಮತದಾರರಾದ ಪ್ರಜೆಗಳ ಕೈಯಲ್ಲಿದೆ.
“ಬನ್ನಿ ಎಲ್ಲರೂ ತಪ್ಪದೇ ಮತದಾನ ಮಾಡೋಣ ಭಾರತದ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗೋಣ.”
ಲೇಖಕರು
ಡಾ.ರಾಜೇಂದ್ರಪ್ರಸಾದ್ .ಪಿ , ಎಂಎಸ್‌ಡಬ್ಲ್ಯೂ, ಪಿಹೆಚ್‌ಡಿ
ಮುಖ್ಯಸ್ಥರು, ಸೋಷಿಯಲ್ ವರ್ಕರ್ಸ್ ಅಶೋಷಿಯೇಷನ್ ಫಾರ್ ಡೆವಲಫ್‌ಮೆಂಟ್ (ಸ್ವಾದ್)