• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ವಿವೇಕ ಸ್ಮಾರಕಕ್ಕಾಗಿ ಅವಿವೇಕದ ನಡೆ ತರವೇ?

ನಾ ದಿವಾಕರ by ನಾ ದಿವಾಕರ
June 27, 2021
in ಅಭಿಮತ
0
ವಿವೇಕ ಸ್ಮಾರಕಕ್ಕಾಗಿ ಅವಿವೇಕದ ನಡೆ ತರವೇ?
Share on WhatsAppShare on FacebookShare on Telegram

ಮೈಸೂರಿನಲ್ಲಿ ವಿವೇಕಾನಂದರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಡೀ ಸಮಾಜವೇ ವಿವೇಕದ ಶೋಧದಲ್ಲಿ ತೊಡಗಿರುವ ಸಂದರ್ಭದಲ್ಲಿ ಶಿಕ್ಷಣ ಮತ್ತು ಇತಿಹಾಸ ಸ್ಮರಣೆಯ ನಡುವಿನ ಸಂಘರ್ಷ ವಿವೇಕಾನಂದರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಆರಾಧನಾ ಸಂಸ್ಕೃತಿಯಲ್ಲಿ ಸಾಕಷ್ಟು ಕ್ರಮಿಸಿರುವ ಭಾರತೀಯ ಸಮಾಜ ಇತಿಹಾಸದ ಸ್ಮರಣೆ  ಸ್ಥಾವರಗಳಿಂದ ಮಾತ್ರವೇ ಸಾಧ್ಯ ಎನ್ನುವ ಮನಸ್ಥಿತಿಗೆ ತಲುಪಿದೆ. ಇತಿಹಾಸದ ಘಟನೆಗಳು ಮತ್ತು ಚಾರಿತ್ರಿಕ ವ್ಯಕ್ತಿಗಳು ಜಂಗಮ ಸ್ವರೂಪಿಯಾಗಿರುವುದಕ್ಕೂ, ಸ್ಥಾವರ ರೂಪಿಯಾಗಿರುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಪೆರಿಯಾರ್ ಅವರ ಚಿಂತನೆಗಳಲ್ಲೇ ಗ್ರಹಿಸಬಹುದು. ಭಿನ್ನ ಚಿಂತನೆಗಳು ಸತತ ಹಲ್ಲೆಗೊಳಗಾಗುತ್ತಿರುವ ಸಂದರ್ಭದಲ್ಲಿ, ಸಾಂಸ್ಕೃತಿಕ ಚಿಂತಕರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿಯಲ್ಲಿ ವಿವೇಕಾನಂದರನ್ನು ಸಮಾಜದ ಅವಕಾಶವಂಚಿತ ಮಕ್ಕಳ ಭವಿಷ್ಯಕ್ಕೆ ಮುಖಾಮುಖಿಯಾಗಲು ಮುಂದಾಗಿರುವುದು ನಮ್ಮ ಸಮಾಜೋ ಸಾಂಸ್ಕೃತಿಕ ವಿವೇಚನೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ADVERTISEMENT

ಧರ್ಮ, ಅಧ್ಯಾತ್ಮ ಮತ್ತು ಸಂಸ್ಕೃತಿಯ ನೆಲೆಗಳು ಒಂದು ನಿರ್ದಿಷ್ಟ ಅಧಿಕಾರ ರಾಜಕಾರಣದ ಚೌಕಟ್ಟಿಗೆ ಒಳಪಡುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಚಿಂತನೆಗಳು ಸಮಾಜವನ್ನು ಸೃಜನಶೀಲತೆಯತ್ತ, ಸಂವೇದನೆಯ ಮಾರ್ಗದಲ್ಲಿ, ವೈಚಾರಿಕತೆಯ ಹಾದಿಯಲ್ಲಿ ಕರೆದೊಯ್ಯಬೇಕು. ದುರಂತ ಎಂದರೆ ಈ ನೆಲೆಗಳ ಸಾಂಸ್ಥೀಕರಣ ಪ್ರಕ್ರಿಯೆ ವೈಚಾರಿಕತೆಯ ಸಮಾಧಿಗಳನ್ನು ನಿರ್ಮಿಸುತ್ತಿದೆ. ಈ ಸಮಾಧಿಗಳನ್ನೇ ಸ್ಮಾರಕಗಳೆಂದು ಬಿಂಬಿಸಲಾಗುತ್ತಿದೆ. ಭಾರತದ ಇತಿಹಾಸದಲ್ಲಿ ಆಧ್ಯಾತ್ಮಿಕ ಚಿಂತನೆಗಳ ಚೌಕಟ್ಟಿನಲ್ಲೇ ಸಮಾಜ ಸುಧಾರಣೆಗಾಗಿ ಶ್ರಮಿಸಿದವರಲ್ಲಿ ವಿವೇಕಾನಂದರೂ ಒಬ್ಬರು. ಇಂದಿನ ಏಕಮುಖಿ ಸಾಂಸ್ಕೃತಿಕ ಚಿಂತನಾ ವಾಹಿನಿಯಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿರುವುದೂ ಸತ್ಯ .

ಎಲ್ಲ ಕಾಲಘಟ್ಟಗಳಲ್ಲೂ ಸಮಾಜ ಸುಧಾರಣೆಯ ಮೂಲವನ್ನು ಶಿಕ್ಷಣ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶಗಳ ಮೂಲಕವೇ ಕಾಣಬಹುದು. ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್‍ರಾಯ್, ರವೀಂದ್ರನಾಥ ಠಾಗೂರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಅಂಬೇಡ್ಕರ್, ವಿವೇಕಾನಂದ ಎಲ್ಲರೂ ಇದೇ ಹಾದಿಯನ್ನು ತಮ್ಮದೇ ಆದ ಸಾಂಸ್ಕೃತಿಕ ಚಿಂತನೆಗಳ ಮೂಲಕ ಕ್ರಮಿಸಿರುವುದನ್ನು ಗಮನಿಸಬಹುದು. ತಾತ್ವಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿ ನೋಡಿದರೂ ಈ ಚಿಂತನಾವಾಹಿನಿಯಲ್ಲಿ ಒಂದು ಸಮಾನ ಎಳೆ ಕಂಡುಬಂದರೆ ಅದು ಶಿಕ್ಷಣಕ್ಕೆ ಸಂಬಂಧಿಸಿರುತ್ತದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಶೈಕ್ಷಣಿಕ ಅವಕಾಶ ಮತ್ತು ಸುಧಾರಣೆ ಎಂದರೆ ಅದು ಕೆಳಸ್ತರದ ಜನಸಮುದಾಯಗಳ, ಅವಕಾಶವಂಚಿತರ, ಶೋಷಿತರ ಪರವಾಗಿಯೇ ಇರುತ್ತದೆ ಎನ್ನುವುದು ಇಂದಿಗೂ ಸತ್ಯ ಅಲ್ಲವೇ ? ಸಮಾಜದ ಶೋಷಿತರಿಗೆ, ಅವಕಾಶವಂಚಿತರಿಗೆ ಮೂಲ ಶಿಕ್ಷಣ ಒದಗಿಸುವ ಜಂಗಮ ಸ್ವರೂಪಿ ಸಂಸ್ಥೆಯೊಂದರ ಸಮಾಧಿಯ ಮೇಲೆ ಜಂಗಮ ಸನ್ಯಾಸಿಯ ಸ್ಥಾವರ ನಿರ್ಮಿಸುವ ಚಿಂತನೆಯನ್ನು ‘ವಿವೇಕ’ಯುತ ಎನ್ನಲು ಸಾಧ್ಯವೇ ?

ವಿವೇಕಾನಂದರ ಸ್ಮಾರಕ ನಿರ್ಮಿಸಲು ಯಾರೂ ಅಡ್ಡಿಪಡಿಸುವುದಿಲ್ಲ. ಅಡ್ಡಿಪಡಿಸಲು ಸಾಧ್ಯವೂ ಇಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಸ್ಮಾರಕಗಳ ಹಿಂದೆ ಒಂದು ಪ್ರಬಲ ಸಾಂಸ್ಕೃತಿಕ ಚಿಂತನೆ, ಸಾಂಸ್ಕೃತಿಕ ರಾಜಕಾರಣ ಮತ್ತು ಮತಧಾರ್ಮಿಕ ಹಿತಾಸಕ್ತಿಗಳು ಅಡಗಿರುತ್ತವೆ. ಭಾರತದ ಸಾಂಸ್ಕೃತಿಕ ರಾಜಕಾರಣ ಮತೀಯ ಮೂಲಭೂತವಾದದ ಹಿಡಿತದಲ್ಲಿ ನಲುಗುತ್ತಿರುವ ಸಂದರ್ಭದಲ್ಲಿ ಈ ಸಾಮುದಾಯಿಕ ಹಿತಾಸಕ್ತಿಗಳು ಅಧ್ಯಾತ್ಮವನ್ನು ಹಿಂದಿಕ್ಕಿ ಮತಧಾರ್ಮಿಕ ಅಸ್ಮಿತೆಗಳನ್ನೇ ಅಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿಯೇ ಇವೆ. ಕಳೆದ ಮೂರು ದಶಕಗಳಲ್ಲಿ ವಿವೇಕಾನಂದರು ಇಂತಹ ಒಂದು ಬೆಳವಣಿಗೆಗೆ ಬಲಿಯಾಗಿರುವುದನ್ನು ಗಮನಿಸಬಹುದು. ವಿವೇಕಾನಂದರ ಚಿಂತನೆಗಳ ಗುತ್ತಿಗೆ ಪಡೆದವರಂತೆ ವರ್ತಿಸುವ ಮಗಳು ಮಠಗಳು ಕೃಷ್ಣನನ್ನು ಆಕ್ರಮಿಸಿರುವ ಇಸ್ಕಾನ್‍ನಂತೆಯೇ ಕಾಣುತ್ತಿವೆ. ಹಾಗಾಗಿ ಇಲ್ಲಿ ವಿವೇಕಾನಂದರು ಒಂದು ಶಿಲೆಯಾಗಿ ಉಳಿದುಬಿಡುತ್ತಾರೆ. ಅವರ ಜಂಗಮ ಸ್ವರೂಪ ಮರೆಯಾಗಿಬಿಡುತ್ತದೆ.

ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿ ಇಲ್ಲಿನ ನಿರಂಜನ ಮಠದಲ್ಲಿ ತಂಗಿದ್ದುದು ನಿಜಕ್ಕೂ ಚಾರಿತ್ರಿಕವಾಗಿ ಸ್ಮರಣಾರ್ಹ. ಈ ಮಠದ ಆವರಣದಲ್ಲಿ ವಿವೇಕಾನಂದರ ಸ್ಮರಣೆಗಾಗಿ ಸ್ಮಾರಕವನ್ನು ನಿರ್ಮಿಸುವುದು ಸಹ ಸ್ವಾಗತಾರ್ಹವೇ. ಆದರೆ ಈ ಮಠಕ್ಕೆ ಹೊಂದಿಕೊಂಡಂತಿರುವ 140 ವರ್ಷಗಳ ಇತಿಹಾಸ ಇರುವ ಒಂದು ಶಾಲೆಯನ್ನು ಕೆಡವಿ ಸ್ಮಾರಕವನ್ನು ನಿರ್ಮಿಸುವುದು ಸಾಂಸ್ಕೃತಿಕ ಕ್ರೌರ್ಯ. ಶಾಲೆಯನ್ನು ಉಳಿಸಿ ಎಂದು ಹೋರಾಟ ಮಾಡುವವರನ್ನು ವಿವೇಕ ಸ್ಮಾರಕದ ವಿರೋಧಿಗಳು ಎಂದು ನಂಬಿಸುವ ಪ್ರಯತ್ನ ಕೆಲವು ಹಿರಿಯ ಸಾಹಿತಿಗಳಿಂದಲೂ ನಡೆಯುತ್ತಿರುವುದು ಬೌದ್ಧಿಕ ದಾರಿದ್ರ್ಯದ ಸಂಕೇತವಷ್ಟೇ.  ಇಲ್ಲಿ ಸ್ಮಾರಕವನ್ನು ವಿರೋಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಿರಂಜನ ಮಠದಲ್ಲಿ ವಿವೇಕಾನಂದರು ತಂಗಿದ್ದುದೇ ಆದರೆ ಆ ಮಠವನ್ನೇ ಕೆಡವಿ ವಿವೇಕ ಸ್ಮಾರಕವನ್ನು ನಿರ್ಮಿಸಬಹುದಲ್ಲವೇ ? ಶಾಲೆಯನ್ನೇ ಏಕೆ ಕೆಡವಬೇಕು ? ಶಾಲೆಯನ್ನು ಮುಚ್ಚುವುದಿಲ್ಲ ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸುತ್ತೇವೆ ಎಂದು ಹೇಳುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಮಠ, ಆಶ್ರಮ, ದೇವಾಲಯ ಮುಂತಾದ ಸ್ಥಾವರಗಳನ್ನು ವಿರೋಧಿಸುತ್ತಲೇ, ಅವಕಾಶವಂಚಿತರಿಗೆ, ದುರ್ಬಲ ವರ್ಗಗಳಿಗೆ, ಶೋಷಿತರಿಗೆ ಶಿಕ್ಷಣ ಒದಗಿಸಿ ಎಂದು ಉಪದೇಶಿಸಿದ ಜಂಗಮ ಸನ್ಯಾಸಿಯ ಸ್ಮಾರಕ ನಿರ್ಮಿಸಲು ಶಾಲೆಯನ್ನು ಕೆಡವುವುದರ ಔಚಿತ್ಯವಾದರೂ ಏನು ? ಹಿರಿಯ ಸಾಹಿತಿಗಳು ಸ್ಪಷ್ಟೀಕರಣ ನೀಡಬೇಕು.

ಅಭಿವೃದ್ಧಿ ರಾಜಕಾರಣದಲ್ಲಿ ಮುಳುಗಡೆ, ವಿನಾಶ ಮತ್ತು ಪುನರ್ವಸತಿ ಎಂಬ ಪರಿಕಲ್ಪನೆಗಳು ಹೊಸ ವ್ಯಾಖ್ಯಾನವನ್ನು ಪಡೆದಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಸಾವಿರಾರು ಗ್ರಾಮಗಳ ಮುಳುಗಡೆಯಾದ ನಂತರ ಒಂದು ಸ್ಥಾವರ ಕೆಲವೇ ಜನರಿಗೆ ಉಪಯುಕ್ತವಾಗುವುದನ್ನು ಕಾಣುತ್ತಿದ್ದೇವೆ. ಅಥವಾ ಮುಳುಗಡೆಯಾದ ಗ್ರಾಮಗಳ ಜನತೆಗೆ ಕಿಂಚಿತ್ತೂ  ಉಪಯುಕ್ತವಾಗದಿರುವುದನ್ನೂ ಗಮನಿಸುತ್ತಿದ್ದೇವೆ. ಆದರೂ ಈ ಜನಸಮುದಾಯಗಳು ಅಭಿವೃದ್ಧಿಗಾಗಿ ಮಾಡಬೇಕಾದ ಈ ತ್ಯಾಗವನ್ನು ಸರಿದೂಗಿಸಲು ಪುನರ್ವಸತಿ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಮನುಷ್ಯನ ಅಸ್ತಿತ್ವಕ್ಕೂ ಮತ್ತು ಮೂಲ ನೆಲೆಗೂ ಇರುವ ಸೂಕ್ಷ್ಮ ಸಂಬಂಧಗಳು ಇಲ್ಲಿ ಪರಿಗಣನೆಗೇ ಬರುವುದಿಲ್ಲ. ಒಂದು ಶಾಲೆಯನ್ನೂ ಹೀಗೆಯೇ ನೋಡಬೇಕಾಗುತ್ತದೆ. ಶತಮಾನಕ್ಕೂ ಹೆಚ್ಚು ಕಾಲ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಒಂದು ಶಾಲೆಯ ಅಸ್ತಿತ್ವವನ್ನು ಮತ್ತೊಂದರಲ್ಲಿ ವಿಲೀನಗೊಳಿಸುವ ಮೂಲಕ ಉಳಿಸಲು ಸಾಧ್ಯವಿಲ್ಲ.  ಇದ್ದರೂ ಒಂದು ಪೀಳಿಗೆಯ ಕಾಲ ನೆಪಮಾತ್ರಕ್ಕೆ ನೆನಪಿನಲ್ಲಿದ್ದು ನಂತರ ಕಾಲದಲ್ಲಿ ಲೀನವಾಗುತ್ತದೆ. ಮೈಸೂರು ಬ್ಯಾಂಕ್, ವಿಜಯ ಬ್ಯಾಂಕ್ ಈ ನಿಟ್ಟಿನಲ್ಲಿ ನಡೆದಿರುವುದನ್ನು ಕಂಡಿದ್ದೇವೆ. ಒಂದು ಶಾಲೆಯೂ ಅಷ್ಟೇ ಅಲ್ಲವೇ. ದೇವರಾಜ ಶಾಲೆಯಲ್ಲಿ ವಿಲೀನಗೊಳ್ಳುವ ಎನ್‍ಟಿಎಂ ತನ್ನ ನೆಲೆಯನ್ನು ಕಳೆದುಕೊಳ್ಳುವುದೇ ಅಲ್ಲದೆ ಕೊಂಚ ಕಾಲದ ಬಳಿಕ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತದೆ.

ಭಾರತದ ಸಾಂಸ್ಕೃತಿಕ ರಾಜಕಾರಣ ಇಂದು ನವ ಉದಾರವಾದಿ ಮಾರುಕಟ್ಟೆ ವ್ಯವಸ್ಥೆಯ ಒಂದು ಭಾಗವಾಗಿದೆ. ಒಂದು ಸ್ಮಾರಕ ನಿರ್ಮಾಣದ ಹಿಂದೆ ಬಂಡವಾಳ, ಮಾರುಕಟ್ಟೆ, ಪ್ರವಾಸೋದ್ಯಮದ ಲಾಭ ಮತ್ತು ರಾಜಕಾರಣದ ಸಮ್ಮಿಲನವನ್ನು ಸ್ಪಷ್ಟವಾಗಿ ಗುರುತಿಸಲೂ ಸಾಧ್ಯ. ವಿವೇಕ ಸ್ಮಾರಕವೂ ಸಹ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಅಧ್ಯಾತ್ಮವನ್ನು ಬಿಕರಿಗಿಡುವ ಒಂದು ಜಗುಲಿ ಕಟ್ಟೆಯಾಗುತ್ತದೆ. ಮತ್ತೊಂದೆಡೆ ಶಿಕ್ಷಣದ ವಾಣಿಜ್ಯೀಕರಣದ ಹಾದಿಯಲ್ಲಿ ಬಹುದೂರ ಸಾಗಿರುವ #ಆತ್ಮನಿರ್ಭರ ಭಾರತ, ಶಿಕ್ಷಣ ಕ್ಷೇತ್ರದ ಖಾಸಗೀಕರಣಕ್ಕೆ ಹೊಸ ಶಿಕ್ಷಣ ನೀತಿಯನ್ನೇ ಪ್ರಕಟಿಸಿದೆ. ಸರ್ಕಾರಿ ಶಾಲೆಗಳ ಉಳಿವು ಈ ನಿಟ್ಟಿನಲ್ಲಿ ಅರಣ್ಯರೋದನ ಎನಿಸಬಹುದು. ಆದರೂ ಈ ದೇಶದ ಶೋಷಿತ ಸಮುದಾಯಗಳಿಗೆ ಸರ್ಕಾರಿ ಶಾಲೆಗಳ ಉಳಿವು ಬದುಕಿನ ಪ್ರಶ್ನೆಯಾಗುತ್ತದೆ. ಸ್ವಸ್ಥ ಸಮಾಜದ ಬುನಾದಿಯಾಗಬೇಕಾದ ಸಂಸ್ಥೆಯೊಂದರ ಸಮಾಧಿಯ ಮೇಲೆ ನಿರ್ಮಿಸುವ ಸ್ಮಾರಕ ಈ ಬದುಕಿನ ಪ್ರಶ್ನೆಗೆ ಮುಖಾಮುಖಿಯಾಗಲೂ ಸಾಧ್ಯವಿಲ್ಲ.

ಶಾಲೆಯನ್ನು ಉಳಿಸಲು ಹೋರಾಡುತ್ತಿರುವ ಸಮಾಜಮುಖಿಗಳನ್ನು ಕೆಲವು ಸಾಸ್ಕೃತಿಕ ರಾಯಭಾರಿಗಳು ಅವಿವೇಕಿಗಳು ಎಂದು ಮೂದಲಿಸುತ್ತಿದ್ದಾರೆ. ಎಸ್ ಎಲ್ ಭೈರಪ್ಪ ಅವರಂತಹ ಸಾಹಿತಿಗಳು ವಿವೇಕ ಸ್ಮಾರಕ ವಿರೋಧಿಸುವವರನ್ನು ದೇಶದ್ರೋಹಿಗಳ ರೀತಿ ಬಿಂಬಿಸುತ್ತಿದ್ದಾರೆ. ರಾಜಪ್ರಭುತ್ವದಲ್ಲಿ ಉಗಮಿಸಿದ ಒಂದು ಜನೋಪಯೋಗಿ ಶಿಕ್ಷಣ ಸಂಸ್ಥೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಧಿ ನಿರ್ಮಿಸುವುದು ವಿವೇಕಯುತವೇ ? ವಿವೇಕ ಸ್ಮಾರಕ ನಿರ್ಮಿಸಲು ಶಾಲಾ ಕಟ್ಟಡ ಇರುವ ಜಾಗವೇ ಬೇಕು ಎನ್ನುವವರು ಇದನ್ನು ಯೋಚಿಸಬೇಕು. ಇಷ್ಟಕ್ಕೂ ಸ್ಮಾರಕ ಎಂದರೆ ಅಮೃತಶಿಲೆಯಿಂದಲೇ ನಿರ್ಮಿಸಬೇಕು,  ಬಣ್ಣದ ಕಾರಂಜಿ ಇರುವ ಅದ್ಭುತ ವಿಸ್ಮಯ ಲೋಕವನ್ನು ಸೃಷ್ಟಿಸುವಂತಿರಬೇಕು ಎಂದೇನಿಲ್ಲ ಅಲ್ಲವೇ ? ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಲು ಸ್ಮಾರಕದ ಸ್ವರೂಪಕ್ಕಿಂತಲೂ ಐತಿಹ್ಯ ಮುಖ್ಯವಲ್ಲವೇ ? ಈಗಿರುವ ಎನ್‍ಟಿಎಂ ಶಾಲೆಯನ್ನೇ ವಿವೇಕಾನಂದ ಸ್ಮಾರಕ ಮಾದರಿ ಶಾಲೆ ಎಂದು ಮರುನಾಮಕರಣ ಮಾಡಿ, ಆವರಣದಲ್ಲೊಂದು ವಿವೇಕಾನಂದರ ಪುತ್ಥಳಿ ನಿರ್ಮಿಸಿದರೂ ಅದು ಸ್ಮಾರಕವೇ ಆಗುತ್ತದೆ ಅಲ್ಲವೇ ? ಹೀಗೆ ಯೋಚಿಸಲು ಸಾಧ್ಯವಿಲ್ಲ ಎನ್ನುವುದಾದರೆ ವಿವೇಚನೆಯನ್ನು ಕಳೆದುಕೊಂಡಿರುವ ನಮ್ಮ ವಿವೇಕಕ್ಕೇ ಒಂದು ಸ್ಮಾರಕ ನಿರ್ಮಿಸುವುದು ಒಳಿತು. ಭವಿಷ್ಯದ ಪೀಳಿಗೆಗೆ ಮಾರ್ಗಸೂಚಿಯಾದರೂ ಆದೀತು.

Previous Post

ಗದಗಿನ ಬಿಂದಕಟ್ಟಿ ಗುಡ್ಡದಲ್ಲೂ ಬಂತು ಜಿಪ್ ಲೈನ್ ಸಾಹಸ ಕ್ರೀಡೆ

Next Post

ಅನಗತ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಣಕುತ್ತಿರುವ ಡಿ.ಕೆ. ಶಿವಕುಮಾರ್!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಅನಗತ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಣಕುತ್ತಿರುವ ಡಿ.ಕೆ. ಶಿವಕುಮಾರ್!

ಅನಗತ್ಯವಾಗಿ ಸಿದ್ದರಾಮಯ್ಯ ಅವರನ್ನು ಕೆಣಕುತ್ತಿರುವ ಡಿ.ಕೆ. ಶಿವಕುಮಾರ್!

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada