Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ವಿವೇಕಾನಂದರ ಸಂದೇಶವೂ  ಸಾಮಾಜಿಕ ವಿವೇಕವೂ

ನಾ ದಿವಾಕರ

ನಾ ದಿವಾಕರ

January 12, 2023
Share on FacebookShare on Twitter

ವಿವೇಕಾನಂದರ ಜನ್ಮದಿನದಂದು ನಮ್ಮಲ್ಲಿ ಜಾಗೃತವಾಗಬೇಕಿರುವುದು ಸಮಾಜಮುಖಿ ಅಂತರ್‌ಪ್ರಜ್ಞೆ

ಹೆಚ್ಚು ಓದಿದ ಸ್ಟೋರಿಗಳು

ಬ್ರಾಹ್ಮಣ ಮುಖ್ಯಮಂತ್ರಿಯ ಕುರಿತು ಕುಮಾರಸ್ವಾಮಿ ಹುಟ್ಟುಹಾಕಿರುವ ಚರ್ಚೆ

ಮಂಡ್ಯ: ತೋಟದ ಮನೆಗೆ ನುಗ್ಗಿದ ಚಿರತೆ

ಹೃದಯಾಘಾತದಿಂದ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

19ನೆಯ ಶತಮಾನದ ದ್ವಿತೀಯಾರ್ಧವನ್ನು ಭಾರತೀಯ ಇತಿಹಾಸದ ಬೌದ್ಧಿಕ-ಸಾಂಸ್ಕೃತಿಕ ಪುನರುತ್ಥಾನದ ಕಾಲಘಟ್ಟ ಎಂದು ಗುರುತಿಸಿದರೆ ಅತಿಶಯೋಕ್ತಿಯಾಗಲಾರದು. 1856ರಲ್ಲಿ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಧಿಕ್ಕರಿಸಿ ಸಮಾನತೆಯ ಸಂದೇಶ ಸಾರಿದ ನಾರಾಯಣಗುರು, 1861ರಲ್ಲಿ ವಿಶ್ವಮಾನವ ಸಂದೇಶವನ್ನು ಮೊಟ್ಟಮೊದಲ ಬಾರಿ ಸಾರಿದ ಮಹಾನ್‌ ಚಿಂತಕ ರವೀಂದ್ರನಾಥ ಠಾಗೂರ್‌, 1863ರಲ್ಲಿ ಭಾರತಕ್ಕೆ ಅಧ್ಯಾತ್ಮದ ಶಕ್ತಿಯನ್ನು ಉದ್ದೀಪನಗೊಳಿಸಿದ ಮತ್ತು ಜಗತ್ತಿಗೆ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪರಿಚಯ ಮಾಡಿದ ಯುಗದ ಸಂತ ಸ್ವಾಮಿ ವಿವೇಕಾನಂದ, 1869ರಲ್ಲಿ ದೇಶಕ್ಕೆ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಿದ ಮಹಾತ್ಮ ಗಾಂಧಿ,  1889ರಲ್ಲಿ ಆಧುನಿಕ ಭಾರತಕ್ಕೆ ಒಂದು ಸ್ವಷ್ಟ ಕಾಯಕಲ್ಪ ನೀಡಿದ ಜವಹರಲಾಲ್‌ ನೆಹರೂ ಮತ್ತು 1891ರಲ್ಲಿ ಭಾರತದ ಜಾತಿ ವ್ಯವಸ್ಥೆಯ ಕ್ರೌರ್ಯಗಳನ್ನು ಎದುರಿಸಿ ಇಡೀ ವಿಶ್ವಕ್ಕೆ ಸಮಾನತೆ ಮತ್ತು ಆತ್ಮಗೌರವದ ಸಂದೇಶವನ್ನು ಬೌದ್ಧಮ್ಮದ ಮೂಲಕ ನೀಡಿದ ಡಾ ಬಿ ಆರ್‌ ಅಂಬೇಡ್ಕರ್‌ ಜನಿಸಿದ್ದರು. ಬಹುಶಃ ಯಾವುದೇ ದೇಶದಲ್ಲೂ ಐವತ್ತು ವರ್ಷಗಳ ಅವಧಿಯಲ್ಲಿ ಇಂತಹ ವಿಭಿನ್ನ ಚಿಂತನಾವಾಹಿನಿಗಳ ಬೌದ್ಧಿಕ ಕಣಜಗಳು ಜನಿಸಿರಲಾರರು.

ಭಾರತದ ಬಹುಸಾಂಸ್ಕೃತಿಕ ಇತಿಹಾಸ ಮತ್ತು ಸಮಕಾಲೀನ ಸಂದರ್ಭದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಎಲ್ಲ ಮಹನೀಯರ ಚಿಂತನೆಗಳೂ ಸಹ ವರ್ತಮಾನದ ಸಮಾಜಕ್ಕೆ ಮತ್ತು ಭವಿಷ್ಯದ ತಲೆಮಾರಿಗೆ ಮಾರ್ಗದರ್ಶಿ ಜೀವನಸೂತ್ರಗಳಾಗಿ ಕಾಣುತ್ತವೆ. ಇಂದು ನಾವು ನಿರ್ಮಿಸಿಕೊಂಡಿರುವ ಸೈದ್ಧಾಂತಿಕ ಚಿಂತನಾ ವೇದಿಕೆಗಳಿಂದ ಮತ್ತು ಬೌದ್ಧಿಕ ಚೌಕಟ್ಟುಗಳಿಂದ ಹೊರನಿಂತು, ಮುಂದಿನ ತಲೆಮಾರಿನ ಉಜ್ವಲ ಭವಿಷ್ಯದ ದೃಷ್ಟಿಯಲ್ಲಿ ನೋಡಿದಾಗ, ಈ ಎಲ್ಲ ಮಹನೀಯರ ಆಶಯಗಳ ಹೂರಣವನ್ನು ನಾವು ಸಮಾಜದ ಮುಂದಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಮಹನೀಯರ ಪೈಕಿ ಒಬ್ಬರಾದ ಯುಗದ ಸಂತ ಎಂದೇ ಕರೆಯಲ್ಪಡುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶ ಇಂದು ಆಚರಿಸುತ್ತಿದೆ. ನಮ್ಮದೇ ಆದ ದೃಷ್ಟಿಕೋನಗಳಿಗನುಸಾರವಾಗಿ ವಿವೇಕಾನಂದರನ್ನು ನಿರ್ವಚಿಸಿಕೊಂಡು, ನಾವು ಜನವರಿ 12ನ್ನು ಸಂಭ್ರಮಿಸುತ್ತಿದ್ದೇವೆ. ಯುವ ಜನತೆಗೆ ಆಧ್ಯಾತ್ಮಿಕ ಶಕ್ತಿ, ಪ್ರೇರಣೆ ಮತ್ತು ಸಂದೇಶವನ್ನು ರವಾನಿಸಿದ ವಿವೇಕಾನಂದರ ಜಯಂತಿಯನ್ನು ಸಹಜವಾಗಿಯೇ ಯುವಜನೋತ್ಸವದ ರೂಪದಲ್ಲಿ ಸರ್ಕಾರಗಳೂ ಆಚರಿಸುತ್ತಿವೆ.

ವಿಭಿನ್ನ ನೆಲೆಯ ವಿವೇಕವಾಣಿ

ವಿವೇಕಾನಂದರನ್ನು ವರ್ತಮಾನದ ಭಾರತ ಮೂರು ವಿಭಿನ್ನ ನೆಲೆಗಳಲ್ಲಿ ಕಾಣುತ್ತಿದೆ. ಹಿಂದೂ ಧರ್ಮ ಪ್ರತಿಪಾದಕರಿಗೆ ಮತ್ತು ಇದನ್ನೇ ತಮ್ಮ ಘೋಷವಾಕ್ಯವನ್ನಾಗಿಸಿಕೊಂಡಿರುವ ರಾಜಕೀಯ-ಸಾಂಸ್ಕೃತಿಕ ಗುಂಪುಗಳಿಗೆ ವಿವೇಕಾನಂದರು ಧಾರ್ಮಿಕ ಪುನರುತ್ಥಾನದ ದಿವ್ಯ ಶಕ್ತಿಯಾಗಿ ಕಾಣುತ್ತಾರೆ. ಅವರ ಚಿಂತನೆಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದಾಗ ಈ ಪ್ರತಿಪಾದನೆಗೆ ಸರಕಾಗುವಂತಹ ಹಲವು ಸಂದೇಶಗಳು ದೊರೆಯುವುದೂ ಸಹಜ. ಏಕೆಂದರೆ ವಿವೇಕಾನಂದರ ದೃಷ್ಟಿಯಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ ಮುಖ್ಯವಾಗಿತ್ತು. ಹಿಂದುತ್ವ ಪ್ರತಿಪಾದಕರು ಮುಂದಿಡುವ ಹಿಂದೂ ಧರ್ಮಕ್ಕೂ ವಿವೇಕಾನಂದರ ಸನಾತನ ಹಿಂದೂ ಧರ್ಮಕ್ಕೂ ಇರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ನಾವು, ಅವರ ಚಿಂತನೆಗಳು ಭಾರತದ ಬಹುಸಂಸ್ಕೃತಿಗೆ ಹೇಗೆ ಪೂರಕವಾಗಲಿದೆ ಎನ್ನುವುದನ್ನು ಗ್ರಹಿಸುವುದು ಅತ್ಯವಶ್ಯ.

ಮತ್ತೊಂದು ನೆಲೆಯಲ್ಲಿ ವಿವೇಕಾನಂದರಲ್ಲಿ ಸಮಾಜ ಸುಧಾರಕರಾಗಿಯೂ ಕಾಣಲಾಗುತ್ತದೆ. ಭಾರತದ ಶ್ರೇಣೀಕೃತ ಸಮಾಜದೊಳಗಿನ ಕ್ರೌರ್ಯ, ಅಸಮಾನತೆ ಮತ್ತು ಅಸಹಿಷ್ಣುತೆಗಳನ್ನು ಪ್ರಶ್ನಿಸುತ್ತಲೇ ವಿವೇಕಾನಂದರು ಶೂದ್ರ ಸಮುದಾಯದ, ಶೋಷಿತರ, ದಮನಿತರ ಒಳಬೇಗುದಿಗಳನ್ನು ಗ್ರಹಿಸಿ ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಧಿಕ್ಕರಿಸಿದ್ದರು. ಈ ನಿಟ್ಟಿನಲ್ಲಿ ವಿವೇಕರು ಪ್ರತಿಪಾದಿಸಿದ ರಾಷ್ಟ್ರದ ಪರಿಕಲ್ಪನೆಯಲ್ಲಿ ಶೋಷಿತರ ಧ್ವನಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು ಎನ್ನುವುದು ವಸ್ತುನಿಷ್ಠ-ಸೂಕ್ಷ್ಮಗ್ರಾಹಿಗಳಿಗೆ ಅರ್ಥವಾದೀತು. ಸಮಾಜ ಸುಧಾರಣೆಯಲ್ಲಿ ಶುದ್ಧೀಕರಣ, ನಿರಾಕರಣ ಮತ್ತು ಸುಧಾರಣಾ ಎಂಬ ಮೂರು ಪ್ರಕ್ರಿಯೆಗಳಿರುತ್ತವೆ. ಈ ಪ್ರಕ್ರಿಯೆಯಲ್ಲಿ ಸಮಾಜಸುಧಾರಣೆಯನ್ನು ಬಯಸುವ ಯಾವುದೇ ಬೋಧಕ-ಚಿಂತಕ-ಸುಧಾರಕರಾದರೂ ಶ್ರೇಣೀಕೃತ ಅಸಮಾನತೆಗೆ ಕಾರಣವಾದ ಬೌದ್ಧಿಕ ಮಾಲಿನ್ಯಗಳನ್ನು ತೊಳೆಯಲು ಮುಂದಾಗುವುದು ಸ್ವಾಭಾವಿಕ.  ಠಾಗೂರ್‌, ನಾರಾಯಣಗುರು, ಅಂಬೇಡ್ಕರ್‌ ಅವರಂತೆಯೇ ವಿವೇಕಾನಂದರೂ ಇದೇ ಪ್ರಯತ್ನ ಮಾಡಿರುವುದನ್ನು ಅವರ ಸಮಗ್ರ ಬರಹಗಳಲ್ಲಿ ಗುರುತಿಸಬಹುದು.

ಈ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಧಾರ್ಮಿಕ ನಂಬಿಕೆಗಳನ್ನು, ವೈದಿಕ-ಅವೈದಿಕ ಕರ್ಮಠರ ಆಚಾರ ವಿಚಾರಗಳನ್ನು, ಅವೈಚಾರಿಕ ಮತ್ತು ಅವೈಜ್ಞಾನಿಕ ಚಿಂತನಾ ಧೋರಣೆಗಳನ್ನು ಧಿಕ್ಕರಿಸುವುದು ಅನಿವಾರ್ಯವಾಗುತ್ತದೆ. ಇಂದಿನ ಆಧುನಿಕ ನಾಗರಿಕತೆಯ ನಡುವೆಯೂ ಭಾರತೀಯ ಸಮಾಜವನ್ನು ಕಾಡುತ್ತಿರುವ ಮೌಢ್ಯ, ಕಂದಾಚಾರ, ಆಡಂಬರ, ಡಂಬಾಚಾರ ಮತ್ತು ಧಾರ್ಮಿಕ ಆಚಾರ ವಿಚಾರಗಳನ್ನು ಉಗ್ರವಾಗಿ ಖಂಡಿಸಿರುವುದೇ ಅಲ್ಲದೆ, ಜನಸಮುದಾಯಗಳಿಗೆ ಅತ್ಯವಶ್ಯವಾದ ಆಧ್ಯಾತ್ಮಿಕತೆ, ಆತ್ಮಸ್ಥೈರ್ಯ ಮತ್ತು ಜೀವನೋತ್ಸಾಹವನ್ನು ತುಂಬುವ ನಿಟ್ಟಿನಲ್ಲಿ ವಿವೇಕರ ಸಂದೇಶಗಳನ್ನು ಹೇರಳವಾಗಿ ಕಾಣಬಹುದು.  ಓರ್ವ ಸಮಾಜ ಸುಧಾರಕರಾಗಿ ವಿವೇಕಾನಂದರು ವರ್ತಮಾನದ ಭಾರತೀಯ ಸಮಾಜಕ್ಕೆ ಈ ಸ್ವರೂಪದಲ್ಲೇ ಹೆಚ್ಚು ಅಪ್ಯಾಯಮಾನವಾಗಬೇಕಿದೆ.

ಮೂರನೆಯದಾಗಿ ವಿವೇಕಾನಂದರು ಇಂದು ಕೆಲವೇ ತಾತ್ವಿಕ ನೆಲೆಗಳ ಬಂಧಿಯಾಗಿರುವುದನ್ನೂ ಗಮನಿಸುತ್ತಿದ್ದೇವೆ. ಹಿಂದುತ್ವ ಪ್ರತಿಪಾದಕರಿಗೆ ಮತ್ತು ಆಳುವ ರಾಜಕೀಯ ಪಕ್ಷಗಳಿಗೂ ಸಹ ವಿವೇಕಾನಂದರ ಸಂದೇಶಗಳು ರಾಜಕೀಯ ಧೃವೀಕರಣದ ಒಂದು ವಸ್ತುವಾಗಿ ಕಾಣುವ ಸಾಧ್ಯತೆಗಳೇ ಹೆಚ್ಚಾಗಿವೆ. ಹಾಗಾಗಿಯೇ ಇಂದು ಸಂಭ್ರಮಿಸಲಾಗುತ್ತಿರುವ ಯುವ ಜನೋತ್ಸವಗಳಲ್ಲಿ ವಿವೇಕಾನಂದರು ಒಪ್ಪದಿರುವಂತಹ ಆಡಂಬರ-ಅಂಧ ವಿಶ್ವಾಸಗಳೇ ಢಾಳಾಗಿ ಕಂಡುಬರುತ್ತವೆ. ವಿವೇಕರ ಇತಿಹಾಸ ಪ್ರಸಿದ್ಧ ಸಂದೇಶ “ ಏಳಿ ಎದ್ದೇಳಿ ಗುರಿಮುಟ್ಟುವವರೆಗೂ ನಿಲ್ಲದಿರಿ “ ಇಂದು ನಮ್ಮ ನಡುವೆ ಸದಾ ಮೊಳಗುತ್ತಲೇ ಇರುತ್ತದೆ. ಈ ಸಂದೇಶವನ್ನು ವರ್ತಮಾನದ ಅಸ್ಮಿತೆಗಳ ಚೌಕಟ್ಟಿನಲ್ಲಿಟ್ಟು ನೋಡುವುದರಿಂದ ಜಾಗೃತವಾಗುವ ಅಂತರ್‌ ಪ್ರಜ್ಞೆಯೂ ದಿಕ್ಕುತಪ್ಪಿದಂತಾಗುತ್ತದೆ. ಇಂದು ಏಳಬೇಕಿರುವುದು ಯಾರು ? ಏತಕ್ಕೆ ? ಯಾರಿಗಾಗಿ ?  ಯಾವ ಗುರಿ ಸಾಧನೆಗಾಗಿ  ? ಈ ಪ್ರಶ್ನೆಗಳನ್ನು ಮುಂದಿಟ್ಟು ನೋಡಿದಾಗ, ಸಮಕಾಲೀನ ರಾಜಕೀಯ-ಸಾಂಸ್ಕೃತಿಕ ಚಿಂತನಾವಾಹಿನಿಗಳು ಯುವ ಸಮೂಹದ ಮುಂದೆ ಹಲವು ಬಣ್ಣಗಳ ಮಂಜಿನ ಪರದೆಗಳನ್ನು ಸೃಷ್ಟಿಸಿಬಿಡುತ್ತದೆ. ಆದರೆ ಮೂಲತಃ ವಿವೇಕರ ಈ ಸಂದೇಶ ಸಮಾಜದ ಆಂತರ್ಯದ ಮಾಲಿನ್ಯಗಳನ್ನು ತೊಳೆಯುವ ಜವಾಬ್ದಾರಿಯನ್ನು ಯುವ ಸಮುದಾಯಕ್ಕೆ ನೀಡುತ್ತದೆ ಎನ್ನುವುದನ್ನು ನಾವು ಮರೆತುಬಿಡುತ್ತೇವೆ.

ವಿವೇಕರ ಸಂದೇಶದಲ್ಲಿ ಮಾನವ ಪ್ರಜ್ಞೆ 

ಧಾರ್ಮಿಕ ನೆಲೆಯಲ್ಲಿ ವಿವೇಕಾನಂದರನ್ನು ನೋಡುವಾಗ ನಮಗೆ ಸಹಜವಾಗಿ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದ ಅವರ ಮಾತುಗಳು ನೆನಪಾಗುತ್ತವೆ. ಪ್ರತಿಯೊಂದು ಧರ್ಮವೂ ತನ್ನ ಶ್ರೇಷ್ಠತೆಯನ್ನೇ ಹೊದ್ದುಕೊಂಡು, ಪಾವಿತ್ರ್ಯತೆ, ಪರಿಶುದ್ಧತೆಯ ಕವಚಗಳಿಂದ ಸಂರಕ್ಷಿಸಿಕೊಳ್ಳುತ್ತಿದ್ದ ಒಂದು ಕಾಲಘಟ್ಟದಲ್ಲಿ ವಿಶ್ವಸಮುದಾಯವನ್ನು ಕುರಿತು ವಿವೇಕಾನಂದರು ʼʼ ಸೋದರ ಸೋದರಿಯರೇ ʼʼ ಎಂದು ಸಂಬೋಧಿಸಿದ್ದೇ ಒಂದು ಕ್ರಾಂತಿಕಾರಕ ಸಂಚಲನವನ್ನು ಉಂಟುಮಾಡಿತ್ತು. ಆದರೆ ಹಿಂದೂ ಧರ್ಮದ ಬಗ್ಗೆ ವಿವೇಕಾನಂದರಲ್ಲಿದ್ದ ಅಭಿಮಾನ ಮತ್ತು ಗೌರವಾದರಗಳು ಅವರನ್ನು ಭಾರತೀಯ ಸಮಾಜದೊಳಗಿನ ತಾರತಮ್ಯಗಳಿಗೆ ಕುರುಡಾಗಿಸಲಿಲ್ಲ ಎನ್ನುವುದನ್ನೂ ಮನಗಾಣಬೇಕಿದೆ. ಹಾಗಾಗಿಯೇ ವಿವೇಕಾನಂದರು ತಮ್ಮ ವಿಶ್ವಪರ್ಯಟನೆಯಲ್ಲಿ ಈ ದೇಶದ ಜನಸಾಮಾನ್ಯರ ಮೊದಲ ಆದ್ಯತೆ ಮತ್ತು ಅಗತ್ಯಗಳು ಯಾವುದು ಎಂಬುದನ್ನು ಮನಗಂಡಿದ್ದರು.

ಒಂದೆಡೆ ವಸಾಹತುಶಾಹಿಯ ಕ್ರೌರ್ಯ, ಮತ್ತೊಂದೆಡೆ ಆಂತರಿಕವಾಗಿ ರಾಜಪ್ರಭುತ್ವಗಳ ದಬ್ಬಾಳಿಕೆ, ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಮಾನುಷ ಪದ್ಧತಿಗಳು, ಅಸ್ಪೃಶ್ಯತೆ ಮತ್ತು ಸ್ತ್ರೀ ಶೋಷಣೆಯಂತಹ ದೌರ್ಜನ್ಯಗಳು, ಬಡವ-ಶ್ರೀಮಂತರ ನಡುವಿನ ಕಂದಕಗಳು ಇವೆಲ್ಲವೂ ವಿವೇಕಾನಂದರನ್ನು ಅತಿಯಾಗಿ ಕಾಡಿದ್ದವು ಎನ್ನುವುದನ್ನು ಅವರ ಬರಹಗಳಲ್ಲಿ ಗುರುತಿಸಬಹುದು. ಮಾನವತೆಯ ಘನತೆಯನ್ನು ಎತ್ತಿಹಿಡಿಯುವ ಮತ್ತು ಪ್ರತಿ ವ್ಯಕ್ತಿಯ ಆತ್ಮಗೌರವವನ್ನು ಸಂರಕ್ಷಿಸುವ ಜವಾಬ್ದಾರಿ ನಾಗರಿಕತೆಯನ್ನು ಹೊದ್ದುಕೊಂಡಿರುವ ಪ್ರತಿ ವ್ಯಕ್ತಿಯ ಹೆಗಲ ಮೇಲಿದೆ ಎಂಬ ವಾಸ್ತವವನ್ನು ಅರಿತಿದ್ದರಿಂದಲೇ, ವಿವೇಕಾನಂದರು, ಅಸ್ಪೃಶ್ಯತೆ, ಶೋಷಣೆ, ಅಸಮಾನತೆ, ದೌರ್ಜನ್ಯ ಮತ್ತು ತಾರತಮ್ಯಗಳಿಂದ ಕೂಡಿದ ಊಳಿಗಮಾನ್ಯ-ಜಾತಿಗ್ರಸ್ಥ-ಮೌಢ್ಯಗರ್ಭಿತ ಸಮಾಜದ ವಿರುದ್ಧ ಬೌದ್ಧಿಕ ನೆಲೆಯಲ್ಲಿ ಹೋರಾಡಲು ಯುವ ಸಮೂಹಗಳಿಗೆ ಕರೆ ನೀಡಿದ್ದರು. ಅವರ “ ಏಳಿ ಎದ್ದೇಳಿ,,,,,” ಸಂದೇಶದ ಹಿಂದೆ ಅಂತರ್ಗತವಾಗಿ ಅಡಗಿರುವ ಈ ಕ್ರಾಂತಿಕಾರಕ ಸಂದೇಶವನ್ನು ವರ್ತಮಾನದ ಸಂದರ್ಭದಲ್ಲಿ ಬಳಸುವಾಗ ನಮ್ಮಲ್ಲಿ, ಈ ಕ್ಷಣದಲ್ಲಿ ನಮ್ಮ ಸುತ್ತಲೂ ತಾಂಡವಾಡುತ್ತಿರುವ ಅದೇ ಶತಮಾನಕಾಲದ ಅಸಮತೆಯ ನೆಲೆಗಳು ನಮಗೆ ಕಾಣಿಸಲೇಬೇಕಲ್ಲವೇ ? ಹಾಗೆ ಕಂಡಾಗ ಮಾತ್ರವೇ ನಮಗೆ ವಿವೇಕಾನಂದರೊಳಗೆ ಓರ್ವ ಸಮಾಜ ಸುಧಾರಕ ಅಥವಾ ಧರ್ಮ ಸುಧಾರಕರು ಕಾಣಲು ಸಾಧ್ಯ.

“ ಧರ್ಮ ಎಂದರೆ, ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ, ಮಾನವ ಪ್ರೇಮವನ್ನು ವಿಸ್ತರಿಸುತ್ತ ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವುದು ” ಎನ್ನುವ ವಿವೇಕಾನಂದರ ಕಲ್ಪನೆಗೆ ರೆಕ್ಕೆ ಪುಕ್ಕ ಜೋಡಿಸದೆ, ಅವರೇ ಬಿಟ್ಟುಹೋದ ಅಧ್ಯಾತ್ಮದ ನೆಲೆಯಲ್ಲಿ, ಜೀವನದರ್ಶನದ ನೆಲೆಗಟ್ಟಿನಲ್ಲಿ, ಸಮಷ್ಟಿ ಪ್ರಜ್ಞೆಯ ಚೌಕಟ್ಟಿನಲ್ಲಿ ಅವರ ಸಂದೇಶಗಳನ್ನು ಅನುಸರಿಸುವುದೇ ಆದರೆ ಭಾರತ ಇಂದು ಕಾಣುತ್ತಿರುವ ಮತದ್ವೇಷ, ಧಾರ್ಮಿಕ ಅಸಹನೆ ಮತ್ತು ಜಾತಿ ದೌರ್ಜನ್ಯಗಳಿಂದ ಮುಕ್ತವಾಗುವುದು ಸುಲಭ. . “ ನಾವು ಇಷ್ಟೊಂದು ಜನ ಸಂನ್ಯಾಸಿಗಳು ನಾಡಿನ ತುಂಬ ತಿರುಗುತ್ತ, ತತ್ವ ಬೋಧನೆ ಮಾಡುತ್ತ ಏನು ಮಾಡಿದ್ದೇವೆ? ಇದೆಲ್ಲ ಎಂಥ ಹುಚ್ಚುತನ! ಅಜ್ಞಾನ ದಾರಿದ್ರ್ಯಗಳಿಂದ ಕೇವಲ ಪಶುಗಳಂತೆ ಬದುಕುತ್ತಿರುವ ಈ ನಾಡಿನ ಜನರಿಗೆ ನಾವೇನು ಮಾಡಿದ್ದೇವೆ? ನಾವು ಹಳ್ಳಿ ಹಳ್ಳಿಗಳಿಗೂ ಹೋಗಬೇಕು. ಜನಕ್ಕೆ ಶಿಕ್ಷಣ ನೀಡಬೇಕು. ಜನಸಾಮಾನ್ಯರನ್ನು ಮೇಲೆತ್ತಬೇಕು” ಎಂಬ ವಿವೇಕರ ಪ್ರಬುದ್ಧ ಸಂದೇಶವನ್ನು, ಇಂದು ಸರ್ಕಾರಕ್ಕೆ ಮೌಲ್ಯ ಶಿಕ್ಷಣದ ಸಲಹೆ ನೀಡಿರುವ ಕೆಲವು ಮಠಾಧಿಪತಿಗಳು ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕಿದೆ.

 “ಒಬ್ಬ ವಿಧವೆಯ ಕಣ್ಣೀರನ್ನು ಒರೆಸಲಾರದ, ಒಂದು ಅನಾಥ ಶಿಶುವಿಗೆ ಒಂದು ತುತ್ತು ಅನ್ನವನ್ನು ಕೊಡಲಾಗದ ದೇವರಲ್ಲೂ ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ.” ಎಂದು ಘೋಷಿಸಿರುವುದೇ ಅಲ್ಲದೆ . “ ಸ್ವರ್ಗವಿದೆಯೋ ಇಲ್ಲವೋ, ನರಕವಿದೆಯೋ ಇಲ್ಲವೋ ಇದೆಲ್ಲ ಯಾರಿಗೆ ಬೇಕು? ನಮ್ಮೆದುರಿಗೆ ದುಃಖತಪ್ತವಾದ ಪ್ರಪಂಚವಿದೆ, ಆ ದುಃಖವನ್ನು ಕಡಿಮೆ ಮಾಡಲು ಬುದ್ಧನಂತೆ ಒಂದಿಷ್ಟು ಪ್ರಯತ್ನ ಮಾಡಿರಿ ” ಎಂಬ ವಿವೇಕಾನಂದರ ಆಧ್ಯಾತ್ಮಿಕ ಧೋರಣೆ, ಭಾವನಾರೂಢ ಅಧ್ಯಾತ್ಮಕ್ಕಿಂತಲೂ ಭಿನ್ನವಾಗಿದ್ದುದನ್ನು ನಾವು ಗ್ರಹಿಸಬೇಕಿದೆ. ನಿಜವಾದ ಮನುಷ್ಯನನ್ನು ರೂಪಿಸುವುದೇ ಧರ್ಮದ ಉದ್ದೇಶವಾಗಿರಬೇಕು, ಸ್ವಂತಿಕೆಯನ್ನು ಕಳೆದುಕೊಂಡು, ಅವೈಚಾರಿಕತೆಯಲ್ಲಿ ಜಡಗಟ್ಟಿದ ಮನುಷ್ಯರನ್ನು ವಿವೇಚನಾಯುಕ್ತರನ್ನಾಗಿ ಮಾಡಿ, ಸಹಜೀವಿಗಳಿಗೆ ಸ್ಪಂದಿಸುವಂತಹ ವ್ಯಕ್ತಿಯನ್ನಾಗಿ ರೂಪಿಸುವುದು ನಿಜವಾದ ಧರ್ಮದ ಉದ್ದೇಶವಾಗಿರಬೇಕು ಎಂಬ ಸಂದೇಶವನ್ನು ವಿವೇಕರು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ.

ವರ್ತಮಾನದಲ್ಲಿ ವಿವೇಕರ ಸ್ಥಾನ

ವಿವೇಕಾನಂದರ ಈ ಚಿಂತನಾಧೋರಣೆಯ ನೆಲೆಯಲ್ಲಿ ನಿಂತು ನೋಡಿದಾಗ, ಜನವರಿ 12ರಂದು ನಾವು ಸಂಭ್ರಮಿಸುವ ಯುವ ಜನೋತ್ಸವದ ಸ್ವರೂಪ ಹೇಗಿರಬೇಕು ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಇಂದು ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿವೆ, ಹೆಚ್ಚು ಜಟಿಲವಾಗುತ್ತಿವೆ. ಒಂದೆಡೆ ಯುವ ಸಮೂಹದ ದಿಕ್ಕುತಪ್ಪಿಸುವ ಸಾಂಘಿಕ ಪ್ರಯತ್ನಗಳು ಸಮಾಜದಲ್ಲಿ ಈಗಾಗಲೇ ಇರುವ ಬಿರುಕುಗಳನ್ನು ಹಿಗ್ಗಿಸುವ, ಗೋಡೆಗಳನ್ನು ಎತ್ತರಿಸುವ, ಬೇಲಿಗಳನ್ನು ಕಠಿಣವಾಗಿಸುವ ನಿಟ್ಟಿನಲ್ಲಿ ಸಫಲವಾಗುತ್ತಿವೆ. ಯುವ ಸಮೂಹವನ್ನು ಕಾಡುತ್ತಿರುವ ನಿರುದ್ಯೋಗ, ಬೆಲೆಏರಿಕೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಭದ್ರತೆ, ಸಾಂಸ್ಕೃತಿಕ ಪ್ರತ್ಯೇಕತೆ ಇವೆಲ್ಲವನ್ನೂ ನೇಪಥ್ಯಕ್ಕೆ ಸರಿಸಿ, ಜಾತಿ ಧರ್ಮಗಳ ಭಾವನಾತ್ಮಕ ಜಗತ್ತಿನಲ್ಲಿ ವಿಹರಿಸುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇತ್ತೀಚಿನ ಕೆಲವು ಅತ್ಯಾಚಾರ, ಕೊಲೆ ಮತ್ತಿತರ ಮಹಿಳಾ ದೌರ್ಜನ್ಯಗಳ ಬಗ್ಗೆ ಕಣ್ಣಾಡಿಸಿದಾಗ ಯುವ ಸಮೂಹವು ಪಾತಕೀಕರಣದತ್ತ ಸಾಗುತ್ತಿರುವ ಲಕ್ಷಣಗಳು ಢಾಳಾಗಿ ಕಾಣುತ್ತವೆ.

ಈ ಯುವ ಸಮೂಹಕ್ಕೆ ನಾವು ನೀಡುವ ಮಾರ್ಗದರ್ಶಕ ಸಂದೇಶಗಳು ಯಾವುದೇ ನಿರ್ದಿಷ್ಟ ಧಾರ್ಮಿಕ, ಮತೀಯ, ಜಾತಿ ಪ್ರಣೀತ ಚೌಕಟ್ಟುಗಳ ನಿರ್ಬಂಧಕ್ಕೊಳಗಾಗದೆ, ಒಂದು ಮಾನವೀಯ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿದ್ದರೆ ಬಹುಶಃ ವರ್ತಮಾನದ ಹಲವಾರು ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಶೋಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇಂದು ಸ್ವಾಮಿ ವಿವೇಕಾನಂದರು ನಮಗೆ ಅಪ್ಯಾಯಮಾನವಾಗುತ್ತಾರೆ. ಆರಂಭದಲ್ಲಿ ಉಲ್ಲೇಖಿಸಿದ ಮಹಾನ್‌ ಚಿಂತಕರ ಸಾಲಿನಲ್ಲಿ ವಿವೇಕಾನಂದರನ್ನು ಯಾವ ಶ್ರೇಣಿಯಲ್ಲಿ ನಿಲ್ಲಿಸುವುದು ಎಂದು ಯೋಚಿಸುವುದರ ಬದಲು, ಈ ಎಲ್ಲ ಚಿಂತಕರು ಹುಟ್ಟುಹಾಕಿದಂತಹ ಮಾನವೀಯ ಮೌಲ್ಯಗಳ ಹೂರಣವನ್ನು ಯುವ ಸಮೂಹಕ್ಕೆ ಉಣಬಡಿಸಿದಲ್ಲಿ, ಇಂದು ದೇಶಾದ್ಯಂತ ಆಚರಿಸಲಾಗುತ್ತಿರುವ ಯುವಜನೋತ್ಸವವೂ ಸಾರ್ಥಕವಾಗುತ್ತದೆ.  ವಿವೇಕಾನಂದರ ಸಂದೇಶಗಳನ್ನೂ ಸಾಕಾರಗೊಳಿಸಿದಂತಾಗುತ್ತದೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಮೀಸಲಾತಿ ನೀಡದ ಸಿಎಂ ಮಣಿಸಲು ಅಖಾಡದಲ್ಲೇ ಸ್ಕೆಚ್​ ಹಾಕಿದ ಪಂಚಮಸಾಲಿ ಸಮುದಾಯ..!
ಕರ್ನಾಟಕ

ಮೀಸಲಾತಿ ನೀಡದ ಸಿಎಂ ಮಣಿಸಲು ಅಖಾಡದಲ್ಲೇ ಸ್ಕೆಚ್​ ಹಾಕಿದ ಪಂಚಮಸಾಲಿ ಸಮುದಾಯ..!

by ಕೃಷ್ಣ ಮಣಿ
February 6, 2023
D. K. Shivakumar : ಕೆಲವೊಂದು ಕ್ಷೇತ್ರದಲ್ಲಿ ನೀವು ಗೆಲ್ಲೋದು ಸವಾಲಾಗಿದ್ಯಾ..! | Pratidhvani
ರಾಜಕೀಯ

D. K. Shivakumar : ಕೆಲವೊಂದು ಕ್ಷೇತ್ರದಲ್ಲಿ ನೀವು ಗೆಲ್ಲೋದು ಸವಾಲಾಗಿದ್ಯಾ..! | Pratidhvani

by ಪ್ರತಿಧ್ವನಿ
February 2, 2023
ಈ ಬಾರಿ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಸೋಲುತ್ತಾರೆ
ರಾಜಕೀಯ

ಈ ಬಾರಿ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಸೋಲುತ್ತಾರೆ

by ಪ್ರತಿಧ್ವನಿ
February 7, 2023
A super talented kid : ಮೈಸೂರುನ ಪುಟ್ಟ ಪೋರಿಯಗೆ ಅಂತಾರಾಷ್ಟ್ರೀಯ ಗೌರವ | Viral Video | #pratidhvaninews
ವಿಡಿಯೋ

A super talented kid : ಮೈಸೂರುನ ಪುಟ್ಟ ಪೋರಿಯಗೆ ಅಂತಾರಾಷ್ಟ್ರೀಯ ಗೌರವ | Viral Video | #pratidhvaninews

by ಪ್ರತಿಧ್ವನಿ
February 8, 2023
Full Meals ಸಿನಿಮಾದಲ್ಲಿ ಎಲ್ಲಾ ರೀತಿಯ ಮನೋರಂಜನೆ ಇರುತ್ತದೆ
ಸಿನಿಮಾ

Full Meals ಸಿನಿಮಾದಲ್ಲಿ ಎಲ್ಲಾ ರೀತಿಯ ಮನೋರಂಜನೆ ಇರುತ್ತದೆ

by ಪ್ರತಿಧ್ವನಿ
February 7, 2023
Next Post
BC Patil : ಕೊರೊನಾ ಟೈಂನಲ್ಲಿ ಕರ್ನಾಟಕ ಜನರ ಜೀವನವನ್ನು ಉಳಿಸಿದ ದೇವರು ಅವರು | Pratidhvani

BC Patil : ಕೊರೊನಾ ಟೈಂನಲ್ಲಿ ಕರ್ನಾಟಕ ಜನರ ಜೀವನವನ್ನು ಉಳಿಸಿದ ದೇವರು ಅವರು | Pratidhvani

Haripriya | Vashitasimha | Love ಸಿಂಹಪ್ರಿಯನ ಕಂಪ್ಲೀಟ್‌ ಲವ್‌ ಸ್ಟೋರಿ ಹೇಗಾಯ್ತು ಎಂದು ಹೇಳಿದ್ದಾರೆ ನೋಡಿ!

Haripriya | Vashitasimha | Love ಸಿಂಹಪ್ರಿಯನ ಕಂಪ್ಲೀಟ್‌ ಲವ್‌ ಸ್ಟೋರಿ ಹೇಗಾಯ್ತು ಎಂದು ಹೇಳಿದ್ದಾರೆ ನೋಡಿ!

ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist