ರನ್ ಮೆಷಿನ್ ಎಂದೇ ಹೆಸರಾಗಿದ್ದ ವಿರಾಟ್ ಕೊಹ್ಲಿ ಈಗ ರನ್ ಬರ ಎದುರಿಸುತ್ತಿದ್ದಾರೆ. ಕೆಲವು ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕಿಂಗ್ ಕೊಹ್ಲಿ ಇದೀಗ ಏಷ್ಯಾಕಪ್ ಗೆ ಮರಳಿದ್ದಾರೆ. ಆದರೆ ಕೊಹ್ಲಿ ಏಷ್ಯಾಕಪ್ ನಲ್ಲಿ ಏನೆಲ್ಲಾ ದಾಖಲೆ ಮಾಡಿದ್ದಾರೆ ಗೊತ್ತಾ?
ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಆದರೆ ಏಷ್ಯಾಕಪ್ ನಲ್ಲಿ ವಿಶಿಷ್ಟ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದು ಈಗಲೂ ಎದುರಾಳಿ ಪಡೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ.
ಕೊಹ್ಲಿ ಏಷ್ಯಾಕಪ್ ನಲ್ಲಿ 100ನೇ ಟಿ-20 ಪಂದ್ಯ ಆಡಲಿದ್ದಾರೆ. ಆಗಸ್ಟ್ 28ರಂದು ಈ ಅವಿಸ್ಮರಣೀಯ ಪಂದ್ಯ ಕೂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಿರುವುದರಿಂದ ಇನ್ನಷ್ಟು ಕುತೂಹಲ ಮೂಡಿಸಿದೆ.
ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಈಗ ಪ್ರತಿಷ್ಠಿತ ಏಷ್ಯಾಕಪ್ ಕ್ರಿಕೆಟ್ ಗೆ ಮರಳಿದ್ದಾರೆ. ಭಾರತ ಏಷ್ಯಾಕಪ್ ನಲ್ಲಿ ಪ್ರಾಬಲ್ಯ ಹೊಂದಿದ್ದು, 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2018 ಹೊರತುಪಡಿಸಿದರೆ ಉಳಿದೆಲ್ಲಾ ಆವೃತ್ತಿಗಳಲ್ಲಿ ಕೊಹ್ಲಿ ಸಾರಥ್ಯದಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ.
2012ರ ಆವೃತ್ತಿಯಲ್ಲಿ ಕೊಹ್ಲಿ ಪಾಕಿಸ್ತಾನ ವಿರುದ್ಧ ಜೀವನಶ್ರೇಷ್ಠ 183 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಮಿಂಚಿದ್ದರು.
ಏಷ್ಯಾಕಪ್ ನಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ 3ನೇ ಬ್ಯಾಟ್ಸ್ ಮನ್ ಕೊಹ್ಲಿ ಆಗಿದ್ದಾರೆ. ವೀರೇಂದ್ರ ಸೆಹ್ವಾಗ್ 113.87 ಸರಾಸರಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 112.04ರ ಸರಾಸರಿ ಹೊಂದಿರುವ ಸುರೇಶ್ ರೈನಾ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 99.60ರ ಸರಾಸರಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಇರುವ ಇಬ್ಬರು ಈಗಾಗಲೇ ನಿವೃತ್ತಿ ಹೇಳಿದ್ದರೆ ಕೊಹ್ಲಿ ಶತಕ ಬಾರಿಸಿ 2 ವರ್ಷ ಕಳೆದಿದ್ದು, ಮತ್ತೆ ಫಾರ್ಮ್ ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
2010ರಲ್ಲಿ ಏಷ್ಯಾಕಪ್ ಗೆ ಪಾದರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಮೂರು ಆವೃತ್ತಿಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದು, ಇದು ನಾಲ್ಕನೇ ಆವೃತ್ತಿ ಆಗಿದೆ.
ಕೊಹ್ಲಿಏಷ್ಯಾಕಪ್ ನಲ್ಲಿ 16 ಪಂದ್ಯಗಳನ್ನು ಆಡಿದ್ದು, 63.83ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 3 ಶತಕ ಹಾಗೂ 2 ಅರ್ಧಶತಕ ಸೇರಿದಂತೆ ೭೬೬ ರನ್ ಗಳಿಸಿದ್ದಾರೆ. ಏಷ್ಯಾಕಪ್ ಟಿ-೨೦ಗೆ ಬದಲಾದ ನಂತರ 5 ಪಂದ್ಯಗಳಲ್ಲಿ 153 ರನ್ ಗಳಿಸಿದ್ದು, 76.50ರ ಸರಾಸರಿ ಕಾಯ್ದುಕೊಂಡಿದ್ದಾರೆ.