ಕೊಲ್ಲಾಪುರ: ತುಂಬು ಗರ್ಭಿಣಿಯಾದ ಪತ್ನಿಯ ಆರೈಕೆ ಹಾಗೂ ಹೆರಿಗೆ ಸಮಯದಲ್ಲಿ ಭಾವನಾತ್ಮಕ ಬೆಂಬಲವಾಗಿ ಇರಲು ರಜೆ ಮೇಲೆ ಬಂದಿದ್ದ ಭಾರತೀಯ ಸೇನೆಯ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗು ಜನಿಸುವುದಕ್ಕೆ ಕೆಲವೇ ಕ್ಷಣಗಳು ಬಾಕಿಯಿರುವಾಗಲೇ ಯೋಧ ಸಾವನ್ನಪ್ಪಿದ್ದಾರೆ.

ಶುಕ್ರವಾರ ರಾತ್ರಿ ಭಾರತೀಯ ಸೇನೆಯ ಹವಲ್ದಾರ್ ಪ್ರಮೋದ್ ಜಾಧವ್ (35) ಅವರು ಸತಾರಾ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಅತ್ತ, ಅಪಘಾತದ ಕೆಲವೇ ಸಮಯದಲ್ಲಿ ಅವರ ಪತ್ನಿ ರುತುಜಾ ಜಾಧವ್ ಅವರು ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಪ್ರಮೋದ್ ಜಾಧವ್ ಅವರು ಲಡಾಖ್‌ನ ಲೇಹ್ ಪ್ರದೇಶದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವಾರಗಳ ಹಿಂದಷ್ಟೇ ಪತ್ನಿಯ ಆರೈಕೆಗೆಂದು ಅವರು ತಮ್ಮ ಸ್ವಗ್ರಾಮವಾದ ಸತಾರಾ ಜಿಲ್ಲೆಯ ಡೇರ್ ಟರ್ಫ್ ಆರೆ ಗ್ರಾಮಕ್ಕೆ ರಜೆ ಪಡೆದು ಆಗಮಿಸಿದ್ದರು. ಶುಕ್ರವಾರ ಸಂಜೆ ಹೆರಿಗೆಗಾಗಿ ರುತುಜಾ ಅವರನ್ನು ಸತಾರಾದ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಬಳಿಕ ಮನೆಗೆ ತೆರಳಿ ಅಗತ್ಯ ವಸ್ತುಗಳನ್ನು ತರಲು ಪ್ರಮೋದ್ ಜಾಧವ್ ಬೈಕ್‌ನಲ್ಲಿ ಹೊರಟಿದ್ದರು.

ವಾಡೆಗಾಂವ್ ಫಾಟಾ ಬಳಿ ಮಾರುಕಟ್ಟೆಗೆ ತರಕಾರಿಗಳನ್ನು ಸಾಗಿಸುತ್ತಿದ್ದ ಮಿನಿ ಟ್ರಕ್, ಯೋಧನ ಬೈಕ್‌ಗೆ ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಮೋದ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಪ್ರಮೋದ್ ಪಾರ್ಥಿವ ಶರೀರಕ್ಕೆ ನವಜಾತ ಮಗಳು ಹಾಗೂ ಪತ್ನಿ ಅಂತಿಮ ವಿದಾಯ ಹೇಳುವ ವಿಡಿಯೋ ವೈರಲ್ ಆಗುತ್ತಿದ್ದು, ಈ ಸನ್ನಿವೇಶ ಹೃದಯವಿದ್ರಾವಕವಾಗಿದೆ.











