ಚಂದ್ರಯಾನ 3 ನೌಕೆ ಕಾರ್ಯಾಚರಣೆಯ ವಿಕ್ರಮ್ ಲ್ಯಾಂಡರ್ ಮತ್ತೆ ಚಂದ್ರನ ಮೇಲೆ ಇಳಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೋಮವಾರ (ಸೆಪ್ಟೆಂಬರ್ 4) ಹೇಳಿದೆ.
ಈ ಕುರಿತು ಇಸ್ರೊ ಎಕ್ಸ್ ಖಾತೆಯಲ್ಲಿ ಬೆಳಿಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. “ವಿಕ್ರಮ್ ಲ್ಯಾಂಡರ್ ತನ್ನ ಉದ್ದೇಶಗಳನ್ನು ಮೀರಿದೆ. ಭಾನುವಾರ ನಡೆದ ಚಂದ್ರಯಾನ 3ರ ಲ್ಯಾಂಡರ್ ಹೋಪ್ (ಭರವಸೆ) ಪ್ರಯೋಗ ಯಶಸ್ವಿಯಾಗಿದೆ. ಆಜ್ಞೆಯ ಮೇರೆಗೆ ವಿಕ್ರಮ್ ಲ್ಯಾಂಡರ್ ತನ್ನ ಎಂಜಿನ್ಗಳನ್ನು ಹಾರಿಸಿತು. ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು” ಎಂದು ಇಸ್ರೊ ಮಾಹಿತಿ ನೀಡಿದೆ.
ಈ ಕುರಿತು ವಿಡಿಯೊವೊಂದನ್ನು ಇಸ್ರೊ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.