ಅಯೋಧ್ಯೆಯ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲು ಜನವರಿ 22 ರಂದು ರಾಜ್ಯದ ಕಾಂಗ್ರೆಸ್ ಸರಕಾರವು ರಜೆ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ರಾಜ್ಯಗಳು 22ರಂದು ರಜೆ ಘೋಷಿಸಿವೆ. ಕೇಂದ್ರ ಸರಕಾರವೂ ಅರ್ಧ ದಿನ ರಜೆ ಘೋಷಿಸಿದೆ. ರಾಜ್ಯ ಸರಕಾರವೂ ರಜೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಹಿಂದುಗಳು ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಲು ಈ ಮೂಲಕ ಅವಕಾಶ ಮಾಡಿಕೊಡಿ ಎಂದು ಅವರು ತಿಳಿಸಿದರು.
ರಾಮಮಂದಿರ ಉದ್ಘಾಟನೆ ದಿನ ರಜೆ ಘೋಷಣೆ ಮಾಡುವಂತೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜ.22ರಂದು ರಾಜ್ಯದಲ್ಲೂ ರಜೆ ಘೋಷಣೆ ಮಾಡುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ. ರಾಮನ ವಿಷಯದಲ್ಲಿ ರಾಜಕೀಯ ಬೇಡ. ಅಂದು ರಾಜ್ಯದಲ್ಲೂ ರಜೆ ಘೋಷಣೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ರಾಜ್ಯದ ಜನರು ಮನೆಯಿಂದಲೇ ಕೂತು ನೋಡಲಿ. ಮುಸ್ಲೀಮರೂ ಅಯೋಧ್ಯೆಗೆ ಬರುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಮತ್ತು ಸಂಸದ ಅನಂತ್ ಕುಮಾರ್ ಹೆಗಡೆ ನಡುವೆ ಟಾಕ್ ವಾರ್ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ನಾಲ್ಕೈದು ದಿನ ನೀವು ಟೀಕೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಅನಂತ್ ಕುಮಾರ್ ಹೆಗಡೆಯವರಿಗೆ ಪ್ರಾರ್ಥನೆ ಮಾಡುತ್ತೇನೆ. ಅನಂತ್ ಕುಮಾರ್ ಹೆಗಡೆ ಒಬ್ಬ ದೇಶ ಭಕ್ತ, ದೈವ ಭಕ್ತ. ಆದರೆ, ನಾಲ್ಕೈದು ದಿನ ಟೀಕೆ ಮಾಡುವುದು ಬೇಡ ಎಂದು ಸಲಹೆ ನೀಡಿದರು.