ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಬೀಳುವಂತೆಯೇ ಕಾಣುತ್ತಿಲ್ಲ. ಬಿ ವೈ ವಿಜಯೇಂದ್ರ ಬದಲಾವಣೆ ಮಾಡಬೇಕು ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಂಡಾಯ ತಂಡ ಪಟ್ಟು ಹಿಡಿದಿದೆ. ಇದೇ ವಿಚಾರವಾಗಿ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ ನಡೆಸಿದ್ದು, ಯತ್ನಾಳ್ ಸೇರಿದಂತೆ ವೀರಶೈವ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಬಂಡಾಯ ಸಭೆಯಲ್ಲಿ ಯಡಿಯೂರಪ್ಪ ಹಠಾವೋ.. ಲಿಂಗಾಯತ ಬಚಾವೋ ಘೋಷ ವಾಕ್ಯ ಮೊಳಗಿಸಲಾಗಿದೆ. ಮನೆ ಮನೆಗೆ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಯತ್ನಾಳ್ ಟೀಮ್ ಲಿಂಗಾಯತ ನಾಯಕರ ಸಭೆ ಮಾಡಿದ ವಿಚಾರಕ್ಕೆ ದಾವಣಗೆರೆಯಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ. ನಾನು ಸಾಕಷ್ಟು ಲಿಂಗಾಯತ ಒಳ ಪಂಗಡ ಮಠಾಧೀಶರ ಸಂಪರ್ಕ ಮಾಡಿದ್ದೀನಿ. ಆದಷ್ಟು ಬೇಗ ವೀರಶೈವ ಲಿಂಗಾಯತ ಸಭೆ ಮಾಡಿ, ವಿಜಯೇಂದ್ರ, ಯಡಿಯೂರಪ್ಪ ಅವರಿಗೆ ಬೆನ್ನಿಗೆ ನಿಲ್ಲುವಂತೆ ಸಮಾವೇಶ ಮಾಡ್ತೀವಿ ಎಂದಿದ್ದಾರೆ. ಜೊತೆಗೆ ನಿವ್ಯಾರು ಲಿಂಗಾಯತ ನಾಯಕರಲ್ಲ ನೀವೆಲ್ಲಾ ಡಮ್ಮಿ ನಾಯಕರು ಎಂದಿರುವ ರೇಣುಕಾಚಾರ್ಯ, ನೀವೆಲ್ಲ ತಿರಸ್ಕೃತ ನಾಣ್ಯಗಳು ಎಂದಿದ್ದಾರೆ.

ಲಿಂಗಾಯತ ಮಠಾಧೀಶರು ಎಲ್ಲ ಒಳಪಂಗಡ ಸಮುದಾಯದ ಸೇರಿ ದೊಡ್ಡ ಸಮಾವೇಶ ಮಾಡ್ತೀವಿ. ಬಿ.ವೈ ವಿಜಯೇಂದ್ರ ಅವರನ್ನ ಮುಂದಿನ ಸಿಎಂ ಮಾಡ್ತೀವಿ. ಮುಖ್ಯಮಂತ್ರಿ ಮಾಡೋಕೆ ಎಲ್ಲಾ ರೀತಿಯ ಸಿದ್ಧತೆ ಮಾಡ್ತೀವಿ ಎಂದಿದ್ದಾರೆ. ಇನ್ನು ಕೆಲವರು ನಾವೇ ಲಿಂಗಾಯತ ನಾಯಕ, ಹಿಂದೂ ನಾಯಕ ಎಂದು ಹೇಳಿಕೊಂಡು ಓಡಾಡ್ತಾರೆ. ಆದರೆ ಅವರೆಲ್ಲಾ ಚಲಾವಣೆಯಲ್ಲಿ ಇಲ್ಲದ ನಾಣ್ಯ ಎನ್ನುವ ಮೂಲಕ ಲಿಂಗಾಯತರ ಸಭೆ ನಡೆಸಿದ ಬಂಡಾಯ ಟೀಮ್ಗೆ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.

ನಮಗೆ ಹೈಕಮಾಂಡ್ ನಾಯಕರು ಬಿ.ಎಸ್ ಯಡಿಯೂರಪ್ಪ ಬರ್ತ್ ಡೇ ಮಾಡೋಕೆ ಬೇಡ ಅಂದಿಲ್ಲ. ಆದರೆ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗು ಯಡಿಯೂರಪ್ಪ ಅವರು ಬೇಡ ಅಂತ ಹೇಳಿದ್ದಾರೆ. ಸದ್ಯಕ್ಕೆ ಬೇಡ ಅಂತ ಹೇಳಿದ್ದಾರೆ ಹೀಗಾಗಿ ಗೌರವ ಕೊಟ್ಟು ಸುಮ್ಮನಿದ್ದೇವೆ. ಆದರೆ ಯಡಿಯೂರಪ್ಪ ಬರ್ತ್ ಡೇ ಮಾಡೋಕೆ ಬೇಡ ಅಂತ ಹೇಳಿಲ್ಲ. ಒಂದು ವೇಳೆ ನಾವು ಸಮಾವೇಶ ಮಾಡಿದ್ರೆ ಹೈಕಮಾಂಡ್ ನಾಯಕರೇ ಕಾರ್ಯಕ್ರಮದಲ್ಲಿ ಭಾಗಿ ಆಗ್ತಾರೆ ಎಂದಿದ್ದಾರೆ.