ಉತ್ತರ ಪ್ರದೇಶದ ಆಗ್ರಾದ ಖಾಸಗಿ ಉಪಧ್ಯಾಯ ಆಸ್ಪತ್ರೆಯ ಮುಂಭಾಗದಲ್ಲಿ ಆಮ್ಲಜನಕ ಸಿಲಿಂಡರ್ಗಾಗಿ ಸೋಂಕಿತರ ಸಂಬಂಧಿಯೊಬ್ಬರು ಪೊಲೀಸರ ಕಾಲಿಗೆ ಬಿದ್ದು, ಮನವಿ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಆ ವರದಿಗಳ ಪ್ರಕಾರ, ಆತನ ತಾಯಿಗೆ ನೀಡಲಾಗಿದ್ದ ಪ್ರತ್ಯೇಕ ಆಕ್ಸಿಜನ್ ಸಿಲಿಂಡರ್ ಅನ್ನು ವಾಪಸ್ ತೆಗೆದುಕೊಂಡು ಹೋಗದಂತೆ ವ್ಯಕ್ತಿ ಪೊಲೀಸರ ಕಾಲಿಗೆ ಬಿದ್ದು ಮನವಿ ಮಾಡಿಕೊಂಡಿದ್ದಾನೆಂದು ತಿಳಿಸಿದ್ದರೆ, ಪೊಲೀಸ್ ಮೂಲಗಳ ಪ್ರಕಾರ ಆತನ ತಾಯಿಗೆ ನೀಡಲಾಗಿದ್ದ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿತ್ತು. ಅದಕ್ಕಾಗಿ ಅದನ್ನು ತೆಗೆದುಕೊಂಡು ಹೋಗುತ್ತಿದ್ದೆವು, ಆತ ಆ ವೇಳೆ ಸಿಲಿಂಡರ್ಗಾಗಿ ಮನವಿ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
“ಆಪ್ಕೆ ಚರಣನ್ ಮೇ ವಿನಂತಿ ಕರ್ತಾ ಹೂ, ಭೈಯಾ ಮೇರಿ ಮಾ ಕೋ ಬಚಾ ಲೊ” (ನಾನು ನಿಮ್ಮ ಪಾದ ಮುಟ್ಟಿ ವಿನಂತಿಸುತ್ತಿದ್ದೇನೆ ದಯವಿಟ್ಟು ನನ್ನ ತಾಯಿಯನ್ನು ಉಳಿಸಿ) ಎಂದು ಆತ ಆಳುತ್ತಾ ತನ್ನ ನೋವನ್ನು ತೋಡಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೈರಲ್ ವೀಡಿಯೊವನ್ನು ಯುವ ಕಾಂಗ್ರೆಸ್ ಟ್ವಿಟರ್ನಲ್ಲಿ ಹಂಚಿಕೊಂಡು ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ದೃಷ್ಯವನ್ನು ನೋಡಿದರೆ ಹೃದಯ ಕರಗುತ್ತದೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಗಾಗಿ ಮೀಸಲಿಟ್ಟ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗದಂತೆ ಪೊಲೀಸರ ಮುಂದೆ ಬೇಡಿಕೊಳ್ಳುತ್ತಿರುವುದು ಮನಕಲಕುವಂತಹದ್ದು, ಇಲ್ಲಿ ಪೊಲೀಸರ ಅವಮಾನವೀಯ ವರ್ತನೆ ಬಿಂಬಿಸುತ್ತದೆ ಎಂದಿದೆ.
ಕೆಲವು ದಿನಗಳಿಂದ ಆಗ್ರಾದಲ್ಲಿ ಹೆಚ್ಚು ಆಕ್ಸಿಜನ್ ಕೊರತೆ ಉಂಟಾಗಿದೆ. ಇದರಿಂದ ಕೆಲವರು ತಮ್ಮ ಸಂಬಂಧಿಗಳ ಚಿಕಿತ್ಸೆಗಾಗಿ ಸ್ವಂತ ಸಿಲಿಂಡರ್ ಖರೀದಿಸಿ ಆಸ್ಪತ್ರೆಗೆ ಕೊಡಲಾಗುತ್ತಿದೆ ಎಂದು ವರದಿಯಾಗುತ್ತಿವೆ. ಆದರೆ ಉತ್ತರ ಪ್ರದೇಶ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂಬ ಹೇಳಿಕೆಯ ಬೆನ್ನಲೆ, ಇಂತಹ ಘಟನೆಗಳು ಹೆಚ್ಚು ಬೆಳಕಿಗೆ ಬರುತ್ತಿರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ದೇಶದಲ್ಲಿ ಕೋವಿಡ್ ಉಲ್ಬಣ ಹೆಚ್ಚುತ್ತಿದ್ದು, ಬೆಡ್, ಔಷಧಿ, ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆಯಾಗುತ್ತಿರುವುದು ದಿನಂ ಪ್ರತಿ ಸುದ್ದಿಯಾಗುತ್ತಿದೆ. ದೇಶದಲ್ಲಿಂದು 24 ಗಂಟೆಯಲ್ಲಿ 3.79 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆ. 3,645 ಸೋಂಕಿತರು ಸಾವನ್ನಪ್ಪಿದ್ದಾರೆ.