ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡಕ್ಕೆ ಗೆಲುವು ಸಿಕ್ಕಿದೆ. ತನ್ನ ಅನುಮತಿ ಇಲ್ಲದೆ ಸಿನಿಮಾಗಳಲ್ಲಿ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಮೋಹಕತಾರೆ ರಮ್ಯಾಗೆ ಹಿನ್ನಡೆಯಾಗಿದೆ. ಚಿತ್ರ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗಲೇ ರಮ್ಯಾ ದೂರ ದಾಖಲಿಸಿದ್ದು ಚಿತ್ರತಂಡಕ್ಕೂ ಅಚ್ಚರಿ ಮೂಡಿಸಿತ್ತು. ಹೀಗಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡ ಕೂಡ ನ್ಯಾಯಾಲಯದ ಮೊರೆ ಹೋಗಿತ್ತು. ಕಳೆದ ಎರಡು ದಿನಗಳಿಂದ ನಡೆದ ವಿಚಾರಣೆಯನ್ನು ಪರಿಶೀಲಿಸಿದ ಬಳಿಕ ಕಮರ್ಷಿಯಲ್ ಕೋರ್ಟ್, ಚಿತ್ರತಂಡದ ಪರವಾಗಿ ತೀರ್ಪು ನೀಡಿದ್ದು, ಮೊದಲೇ ನಿಗದಿಪಡಿಸಿದ್ದ ದಿನಾಂಕವಾದ ಜುಲೈ 21ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಈ ತೀರ್ಪು ತಮ್ಮ ಪರವಾಗಿ ಬಂದಿದ್ದಕ್ಕೆ ಚಿತ್ರತಂಡ ನರ್ತಕಿ ಚಿತ್ರಮಂದಿರದ ಎದುರು ಪಟಾಕಿ ಸಿಡಿಸಿ ಹಾಡು ಹೇಳಿ ಸಂಭ್ರಮಿಸಿದೆ.

ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, ನಾಳೆ ನಮ್ಮ ಸಿನಿಮಾ ರಿಲೀಸ್ ಅದಕ್ಕೆ ಒಂದು ತಡೆಯಾಜ್ಞೆ ಬಂದಿತ್ತು. ರಮ್ಯಾ ಮ್ಯಾಮ್ ಸ್ಟೇ ತಂದಿದ್ದರು. ಆದ್ರೆ ಇವತ್ತು ಕೇಸ್ ತೆರವುಗೊಳಿಸಲಾಗಿದೆ. ರಿಲೀಸ್ ಗೆ ತೊಂದರೆ ಇಲ್ಲ. ಮೂರು ನಾಲ್ಕು ದಿನಗಳಿಂದ ಇದ್ರಲ್ಲಿ ಓಡಾಟ ಇದ್ದಿದ್ದರಿಂದ ಬುಕ್ಕಿಂಗ್ ಓಪನ್ ಆಗಿರಲಿಲ್ಲ. ಈಗ ಬುಕ್ಕಿಂಗ್ ಶುರುವಾಗಿದೆ. ದಯವಿಟ್ಟು ಬುಕ್ಕಿಂಗ್ ಮಾಡಿ ನಾಳೆ ಥಿಯೇಟರ್ ಗೆ ಬನ್ನಿ. ಖುಷಿಯಿಂದನೇ ಆಕ್ಟಿಂಗ್ ಮಾಡಿದ್ದರು. ಅವರ ಮೇಲೆ ನಮಗೆ ತುಂಬಾ ಗೌರವ ಇದೆ. ಅವರು ಲೇಡಿ ಸೂಪರ್ ಸ್ಟಾರ್. ನಮ್ಮ ಸಿನಿಮಾಗೆ ಸ್ಟೇ ತಂದಿದ್ದು ಸ್ವಲ್ಪ ಬೇಜಾರ್ ಆಗಿದೆ ಎಂದರು.
ನಿರ್ಮಾಪಕ ವರುಣ್ ಗೌಡ ಮಾತನಾಡಿ, ಯಾವುದೋ ಒಂದು ಮಿಸ್ ಅಂಡರ್ಸ್ಟ್ಯಾಂಡಿಗ್ ನಿಂದ ಈ ರೀತಿ ಆಗಿದೆ. ನಮಗೆ ರಮ್ಯಾ ಮೇಡಂ ಬಗ್ಗೆ ಬೇಜಾರ್ ಇಲ್ಲ. ಮನೆಯಲ್ಲಿ ಅಣ್ಣ ತಮ್ಮ ಗಲಾಟೆ ಮಾಡಿಕೊಂಡಾಗ ಏನಾಗುತ್ತದೆ. ಮನಸ್ತಾಪ ಉಂಟಾಗುತ್ತದೆ. ಆ ರೀತಿ ಒಂದು ಮನಸ್ತಾಪ ಅಷ್ಟೇ ಎಂದರು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ಬಹುತೇಕ ಹೊಸಬರೇ ಸೇರಿ ಮಾಡಿದ್ದಾರೆ. ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ಬಹಳ ಗಮನ ಸೆಳೆದಿದೆ. ಸಿನಿಮಾದಲ್ಲಿ ರಮ್ಯಾ ಮಾತ್ರವೇ ಅಲ್ಲದೆ ರಿಷಬ್ ಶೆಟ್ಟಿ, ಲೂಸಿಯಾ ಪವನ್ ಕುಮಾರ್, ಶೈನ್ ಶೆಟ್ಟಿ ಮತ್ತು ನಟ ದಿಗಂತ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆ ನಿತಿನ್ ಕೃಷ್ಣಮೂರ್ತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಝೀ ಸ್ಟುಡಿಯೊಸ್ ವಿತರಣೆ ಮಾಡುತ್ತಿದ್ದು, ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡುತ್ತಿದ್ದಾರೆ.