ಹೌದು ಕಾಮ್ರೇಡ್, “ ಮನಕೊಂದು ಮಾತ ಹೇಳದೆ ಹೋದೆಯಾ ಹಂಸ,,, “ ಎಂಬ ಕವಿತೆಯಲ್ಲಿ ಹೇಳಿರುವಂತೆ ನೀವು ಏಕಾಏಕಿ ನಿರ್ಗಮಿಸಿಬಿಟ್ಟಿರಿ. ಹೇಳದೆ ಕೇಳದೆ ಎಂದು ಖಂಡಿತವಾಗಿಯೂ ಆರೋಪಿಸುವುದಿಲ್ಲ ಕಾಮ್ರೇಡ್, ಏಕೆಂದರೆ ಸಂಜೆ 6.30ರ ಸಭೆಗೆ ತಯಾರಾಗುತ್ತಿದ್ದ ಶಿಸ್ತಿನ ಸಿಪಾಯಿ ತನಗೇ ಅರಿವಿಲ್ಲದೆ ಕ್ಷಣಮಾತ್ರದಲ್ಲಿ ಉಸಿರು ಕಳೆದುಕೊಂಡಿರುವುದು ತಿಳಿಯಿತು. ಶರಣರ ಸಾವು ಮರಣದಲ್ಲಿ ಕಾಣು ಎಂಬ ಹಳೆಯ ನಾಣ್ಣುಡಿಯಂತೆ ನೀವು ಮೌನವಾಗಿ, ಹೆಚ್ಚು ಸದ್ದು ಮಾಡದೆ, ವೈದ್ಯರಿಗೂ ತ್ರಾಸು ಕೊಡದೆ ಹೊರಟುಬಿಟ್ಟಿರಿ. ನಿಮ್ಮ ಅಂಗಾಂಗಗಳು ಮತ್ತು ದೇಹ ವೈದ್ಯಕೀಯ ಪ್ರಯೋಗಕ್ಕೊಳಪಡುವುದರಿಂದ ನಿಮ್ಮ ಜೀವ ಪಂಚಭೂತಗಳಲ್ಲಿ ಲೀನವಾಗಲಿಲ್ಲ. ಸದಾ ಜನರ ನಡುವೆಯೇ ಇರುತ್ತಿದ್ದ ಈ ಜೀವ ಇನ್ನು ಮುಂದೆಯೂ ಯಾವುದೋ ಒಂದು ಜೀವದೊಡನೆ ಸಾಂಕೇತಿಕವಾಗಿಯಾದರೂ ಇರುತ್ತದೆ.

ಆದರೂ ಇನ್ನು ಮುಂದೆ ಜ್ಯೋತಿ (ನಿಮ್ಮ ಮಗಳು) ಸಿಕ್ಕಾಗ ಅಣ್ಣ ಹೇಗಿದ್ದಾರೆ ಎಂದು ಕೇಳಲಾಗುವುದಿಲ್ಲವಲ್ಲಾ ಕಾಮ್ರೇಡ್. ಹೌದು ಹೆತ್ತೊಡಲ ಸಂಬಂಧಗಳು ಇಲ್ಲದಿದ್ದರೂ ನನ್ನ ಪಾಲಿಗೆ ನೀವು ಹಿರಿಯಣ್ಣನಂತೆಯೇ ಇದ್ದಿರಿ. ನನ್ನ ಕಳೆದ ನಾಲ್ಕು ದಶಕಕ್ಕೂ ಹೆಚ್ಚಿನ ಬದುಕಿನಲ್ಲಿ ಎಷ್ಟೊಂದು ಪಾತ್ರಗಳನ್ನು ನಿಮಗೆ ವಹಿಸಿದ್ದೆ. ಅಣ್ಣ, ಮಾರ್ಗದರ್ಶಿ, ಸಂಗಾತಿ ಅಥವಾ ಕಾಮ್ರೇಡ್, ಆದರ್ಶಪ್ರಾಯ ನಾಯಕ, ಸೈದ್ಧಾಂತಿಕ ಮೇಷ್ಟ್ರು ಹೀಗೆ. ಮನೆಯವರೊಡನೆ ಮಾತನಾಡುವಾಗ ನೀವು ಅನಂತು ಆಗಿರುತ್ತಿದ್ದಿರಿ, ಸೋದರಿಯರೊಡನೆ, ಮಕ್ಕಳೊಡನೆ ಮಾತನಾಡುವಾಗ ಅಣ್ಣ. ಅತ್ತಿಗೆಯೊಡನೆ (ನಿಮ್ಮ ಮಡದಿ) ಮಾತನಾಡುವಾಗಲೂ ʼ ಅಣ್ಣ ಹೇಗಿದ್ದಾರೆ ʼ ಎಂಬ ವಾಡಿಕೆಯ ಪ್ರಶ್ನೆಗೆ 45ಕ್ಕೂ ಹೆಚ್ಚು ವರ್ಷಗಳ ವಯಸ್ಸಾಗಿದೆ.

ಪ್ರೀತಿ ವಾತ್ಸಲ್ಯದ ಭಾವ ಜಗತ್ತಿನಲ್ಲಿ
ಹೊರ ಜಗತ್ತಿಗೆ ನೀವು ಕಾರ್ಮಿಕ ನಾಯಕರಾಗಿ ಕಂಡಿರಿ, ಮನೆಯೊಳಗೆ ನೀವು ಎಲ್ಲರನ್ನೂ ಸಾಕಿ ಸಲಹಿ ಒಂದು ಘಟ್ಟ ತಲುಪಿಸಿದ ಹಿರಿಯಣ್ಣನಾಗಿ ಕರ್ತವ್ಯ ನಿಭಾಯಿಸಿದಿರಿ. ಊಟದ ತಟ್ಟೆ ತೊಳೆಯುವುದರಿಂದ ಹಿಡಿದು ಎಲ್ಲ ಕೆಲಸಗಳಲ್ಲೂ ತಮ್ಮ ಕೆಲಸ ತಾವೇ ಮಾಡಿಕೊಳ್ಳುವ ಒಂದು ಉದಾತ್ತ ಮಾದರಿಗೆ ನೀವು ಜೀವನವಿಡೀ ಸಾಕ್ಷಿಯಾಗಿದ್ದುದು ಅಪರೂಪವೇ ಸರಿ. ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ಮತ್ತು ಮನುಜ ಸಂಬಂಧಗಳಿಗೆ ಬಹಳ ಮುಖ್ಯವಾದ ಪ್ರೀತಿ ವಾತ್ಸಲ್ಯಗಳನ್ನು ನಿಮ್ಮ ನಿತ್ಯ ಜೀವನದ ಒಂದು ಭಾಗವಾಗಿ 82 ವರ್ಷಗಳನ್ನು ಸವೆಸಿದ ನಿಮ್ಮೊಡನೆ ಆತ್ಮೀಯ ಗಳಿಗೆಗಳನ್ನು ಕಳೆಯುವುದೆಂದರೆ ಅಲ್ಲಿ ಹಾಸ್ಯ, ನಗು, ತಮಾಷೆ, ಲೇವಡಿ ಎಲ್ಲವೂ ಇರುತ್ತಿದ್ದುದು ಈಗ ಒಂದೊಂದಾಗಿ ನೆನಪಾಗುತ್ತಿದೆ ಕಾಮ್ರೇಡ್.

ʼ ಆಗಲೇ ಫೋನ್ ಮಾಡಿದ್ದೆ ನೀನು ಪಿಕ್ ಮಾಡಲಿಲ್ಲ ʼ ಎಂದು ನೀವು ಹೇಳುವಾಗ ʼ ಸ್ನಾನ ಮಾಡ್ತಿದ್ದೆ ಕಾಮ್ರೇಡ್ ʼ ಎಂದು ಉತ್ತರಿಸಿದ ಕೂಡಲೇ ʼ ಓಹೋ ದುರಭ್ಯಾಸವೂ ಇದೆಯಾ ನಿನಗೆ ʼ ಎಂದು ಕೇಳುತ್ತಿದ್ದ ನಿಮ್ಮ ಹಾಸ್ಯಪ್ರಜ್ಞೆಯನ್ನು ಮರೆಯಲಾದೀತೇ ಕಾಮ್ರೇಡ್. ಈ ರೀತಿಯ ಸಂಭಾಷಣೆಗಳು ನಮ್ಮ ನಡುವೆ ನೇರವಾಗಿ, ದೂರವಾಣಿ ಮೂಲಕ (ನೀವು ಕೊನೆಯವರೆಗೂ ಚರವಾಣಿಯನ್ನು (Mobile) ಮುಟ್ಟಲೇ ಇಲ್ಲ ಬಿಡಿ) ನಡೆದಾಗಲೆಲ್ಲಾ ಅಲ್ಲಿ ರಸಭರಿತ ಮಾತುಗಳ ನಡುವೆ ಕಮ್ಯುನಿಸ್ಟ್ ಪಕ್ಷ, ಜನಪರ ಚಳುವಳಿ, ದೇಶದ ಪರಿಸ್ಥಿತಿ, ನಮ್ಮ ಅಂದರೆ ಕಮ್ಯುನಿಸ್ಟ್ರರ ಕರ್ತವ್ಯ, ಕಾರ್ಮಿಕ ಚಳುವಳಿಯ ಸಮಸ್ಯೆಗಳು ಹೀಗೆ ಎಲ್ಲವೂ ನುಸುಳಿ ಹೋಗುತ್ತಿದ್ದವು. ಬಹುಶಃ 45 ನಿಮಿಷಗಳಿಗೂ ಕಡಿಮೆ ಸಮಯ ದೂರವಾಣಿಯಲ್ಲಿ ಮಾತನಾಡಿರುವುದು ಬಹಳವೇ ಅಪರೂಪ ಎನ್ನಬಹುದು.

ಈ ಕ್ಷಣಗಳೆಲ್ಲವೂ ಸ್ಮೃತಿಯಲ್ಲಿ ಹಾದು ಹೋಗುತ್ತಿದೆ ಕಾಮ್ರೇಡ್, ಈ ಗಂಭೀರ ಚರ್ಚೆಗಳ ನಡುವೆ ʼ ನಿನ್ನ ಹೆಂಡತಿ, ಮಗಳು ಹೇಗಿದ್ದಾರೆ ʼ ಎಂದು ಕೇಳುವುದನ್ನಂತೂ ನೀವು ಮರೆಯುತ್ತಿರಲಿಲ್ಲ. ಅದಲ್ಲವೇ ಬಾಂಧವ್ಯದ ಸೊಗಡು. ಮನೆಗೆ ಬಂದರೆ ಅಲ್ಲಿಂದ ಪಕ್ಷದ ಕಚೇರಿಗೆ, ಕಚೇರಿಗೆ ಬಂದರೆ ಅಲ್ಲಿಂದ ಮನೆಗೆ ಕೈ ಹಿಡಿದು ಕರೆದೊಯ್ದ ಅನೇಕ ಸಂದರ್ಭಗಳು ನೆನಪಾಗುತ್ತವೆ ಕಾಮ್ರೇಡ್. ಈ ಸಮಯದಲ್ಲಿ ನಾವು ನಡೆಸಿದ ಚರ್ಚೆಗಳು ಮತ್ತು ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳು ನನ್ನ ಎದೆಯಾಳದಲ್ಲಿ ದಾಖಲಾಗಿಬಿಟ್ಟಿವೆ ಕಾಮ್ರೇಡ್. ಈ ಸಂವಾದಗಳಲ್ಲಿ ನಾನು ಗಮನಿಸುತ್ತಲೇ ಬಂದಿದ್ದು ನಿಮ್ಮ ಖಚಿತ ನಿಲುವುಗಳ ನಡುವೆಯೂ, ಹಿಂದೆ ಇಟ್ಟಿರಬಹುದಾದ ತಪ್ಪು ಹೆಜ್ಜೆಗಳನ್ನು ಒಪ್ಪಿಕೊಳ್ಳುವ ಹೃದಯವೈಶಾಲ್ಯ. ಖಾಸಗಿ ಮಾತುಕತೆಯಾದರೂ ಈ ವಿಶಾಲ ಮನಸ್ಸು ಎಲ್ಲರಿಗೂ ಇರುವುದಿಲ್ಲ.

ಅನುಕರಣೀಯ ಆದರ್ಶಗಳ ನೆನಪು
ನಿಮ್ಮ ಅಗಲಿಕೆಯ ನಂತರ ಕೋಲಾರದ ಗೆಳೆಯ ವಿ.ಎಸ್.ಎಸ್. ಶಾಸ್ತ್ರಿಯೊಡನೆ ಮಾತನಾಡುತ್ತಿದ್ದಾಗ“ ನೋಡಯ್ಯಾ ಅವರ ಸಾವಿಗೆ ದುಃಖಿಸಬೇಡ, Don’t feel sad, ಅವರು ಪೂರ್ಣ ಜೀವನ ನಡೆಸಿದ್ದಾರೆ, ನೋವಿಲ್ಲದೆ ಹೊರಟಿದ್ದಾರೆ, ಪ್ರಾಮಾಣಿಕವಾಗಿ ಬದುಕಿದ್ದಾರೆ, Be proud of him ” ಎಂದು ಅವರು ಹೇಳಿದಾಗ ಎಷ್ಟು ಸತ್ಯ ಎನಿಸಿತು. 1970ರ ದಶಕದಲ್ಲಿ ಶಾಸ್ತ್ರಿ ಮತ್ತು ಅಂಥವರಿಗೆ ಅನುಕರಣೀಯ ಆದರ್ಶ (Idol) ಆಗಿದ್ದ ನೀವು 80ರಲ್ಲಿ ನನಗೂ ಅಷ್ಟೇ ಆದರ್ಶಪ್ರಾಯರಾಗಿದ್ದಿರಿ. ನಿರ್ಗಮಿಸುವ ಕ್ಷಣದವರೆಗೂ ನಿಮ್ಮೊಳಗಿನ ಆದರಣೀಯ, ಅನುಕರಣೀಯ ವ್ಯಕ್ತಿತ್ವದಲ್ಲಿ ಯಾವ ಬದಲಾವಣೆಯನ್ನೂ ಗುರುತಿಸಲಾಗುವುದಿಲ್ಲ. ಇದು ಅಪರೂಪವಲ್ಲವೇ ಕಾಮ್ರೇಡ್ ?
ನೀವು ಪ್ರತಿನಿಧಿಸಿದ್ದ ಸಿಪಿಐ ಪಕ್ಷದ ನಿಲುವುಗಳ ಬಗ್ಗೆ ನನ್ನಲ್ಲಿದ್ದ ಭಿನ್ನಮತ ಮತ್ತು ಒಟ್ಟಾರೆ ಕಮ್ಯುನಿಸ್ಟ್ ಚಳುವಳಿಯಲ್ಲಿ ಗುರುತಿಸುತ್ತಿದ್ದ ಲೋಪಗಳು, ನಿಮ್ಮೊಡನೆಯೇ ನಾನು ವ್ಯಕ್ತಪಡಿಸುತ್ತಿದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಎಲ್ಲದಕ್ಕೂ ನಿಮ್ಮ ಬಳಿ ಸಿದ್ಧ ಉತ್ತರ ಇರುತ್ತಿತ್ತು. ಆದರೆ ʼ ನಾನೇ ಸರಿ ʼ ಎಂಬ ದಾರ್ಷ್ಟ್ಯವನ್ನು ಎಂದೂ ಕಂಡಿರಲಿಲ್ಲ. “ ಪಕ್ಷದ ನಿಲುವು ಹೀಗಿದೆಯಪ್ಪ ಅದರ ಬಗ್ಗೆ ಏನೂ ಹೇಳಲಾರೆ, ಆದರೆ ವೈಯುಕ್ತಿಕವಾಗಿ ನನ್ನ ನಿಲುವು ಇದು ,,,,” ಎಂದು ನಿಸ್ಪೃಹತೆಯಿಂದ ನೀವು ಹೇಳಿದ್ದು ನನಗೆ ನೆನಪಿದೆ. ವಿಚಾರ ಏನೇ ಇರಲಿ, ಈ ನಿಲುವು ಪ್ರಜಾಪ್ರಭುತ್ವದ ಅಂತಃಶಕ್ತಿಯಲ್ಲವೇ ಕಾಮ್ರೇಡ್. ಅದು ವ್ಯಕ್ತಿಗತ ನೆಲೆಯಲ್ಲಿ, ವೈಯುಕ್ತಿಕವಾಗ ನಿಮ್ಮೊಳಗೆ ನಾನು ಕಂಡಂತಹ ಔದಾತ್ಯ.

“ ಆಗ ನೀವು ತೆಗೆದುಕೊಂಡ ತೀರ್ಮಾನ ,ಈಗ ಯೋಚಿಸುವಾಗ ತಪ್ಪು ಎನಿಸುವುದಿಲ್ಲವೇ ?” ಎಂಬ ನನ್ನ ಕೆಲವು ಜಿಜ್ಞಾಸೆಗಳಿಗೆ ಒಂದೇ ಮಾತಿನಲ್ಲಿ “ I agree with you ” ಎಂದು ನೀವು ಹೇಳುತ್ತಿದ್ದುದು ನೆನಪಿದೆ. Communists should look to the past with retrospection and move ahead with Introspection ( ಕಮ್ಯುನಿಸ್ಟರು ತಮ್ಮ ಗತಕಾಲವನ್ನು ಪೂರ್ವಾವಲೋಕನದಿಂದ ನೋಡಬೇಕು, ಭವಿಷ್ಯದೆಡೆಗೆ ಆತ್ಮಾವಲೋಕನದೊಂದಿಗೆ ನಡೆಯಬೇಕು) ಎಂಬ ನನ್ನ ಖಚಿತ ನಿಲುವಿಗೆ ನಿಮ್ಮ ಮಾತುಗಳು ಪೂರಕವಾಗಿರುತ್ತಿದ್ದವು. ಖಾಸಗಿ ಚರ್ಚೆಗಳಲ್ಲಿ ನಿಮ್ಮಲ್ಲಿ ಈ ಗುಣವನ್ನು ನಾನು ಕಂಡಿದ್ದೆ. ಇಂತಹ ಅನೇಕ ಪ್ರಸಂಗಗಳು ಇಂದು ನೆನಪಾಗುತ್ತಿವೆ ಕಾಮ್ರೇಡ್. ನಿಮ್ಮೊಳಗಿದ್ದ ಜನಪರ ಕಾಳಜಿ ಮತ್ತು ಕಮ್ಯುನಿಸ್ಟರಾಗಿ ನೀವು ಕಂಡಿದ್ದ ಕನಸುಗಳು ಅಪಾರ, ಹಾಗೆಯೇ ಅದರ ಇತಿಮಿತಿಗಳೂ ಸಹ ನಿಮಗೆ ತಿಳಿದಿತ್ತು.

ವೈಯುಕ್ತಿಕ ಬದುಕಿನ ಕೆಲ ನೆನಪುಗಳು
ಈ ಸೈದ್ಧಾಂತಿಕ ಮಾತುಕತೆಯಿಂದ ವೈಯುಕ್ತಿಕ ಬದುಕಿಗೆ ಹೊರಳೋಣವೇ ಕಾಮ್ರೇಡ್ ?
ನನ್ನ ಜೀವನದ ಅತ್ಯಂತ ಕಠಿಣ ದಾರಿಯಲ್ಲಿ ಕ್ರಮಿಸುತ್ತಿದ್ದಾಗ, ನಿಮ್ಮ ಸಂಪರ್ಕ ಸಾಧಿಸಿದ ನನಗೆ ಮೊದಲ ಭೇಟಿಯಲ್ಲೇ ಕಂಡಿದ್ದು ನಿಮ್ಮೊಳಗಿನ ಸಹೃದಯತೆ ಮತ್ತು ನಿಸ್ಪೃಹ ಬಾಂಧವ್ಯದ ತುಡಿತ. ತಲೆಯ ಮೇಲೆ ಸೂರಿಲ್ಲದೆ ಅನ್ನಾಹಾರಗಳಿಲ್ಲದೆ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅಂಡಲೆಯುತ್ತಿದ್ದಾಗ, ನಿಮ್ಮ ಮನೆಗೆ ಬರುತ್ತಿದ್ದೆ. ನಿಮ್ಮ ಸೋದರ ಶ್ರೀನಿವಾಸನ ಸ್ನೇಹ ನನ್ನನ್ನು ಎಳೆದುತಂದಿತ್ತು. ಎಲ್ಲಾದರೂ ಕೆಲಸ ಕೊಡಿಸಿ ಕಾಮ್ರೇಡ್ ಎಂದು ಒಮ್ಮೆ ಕೇಳಿದಾಗ “ ನೋಡಪ್ಪಾ ನಾನು ಶಿಫಾರಸು ಮಾಡುವುದಿಲ್ಲ, ನೀನು ಕೆಲಸ ಹುಡುಕು, ಸಿಗುವವರೆಗೂ ಬೇಕಾದರೆ ನಮ್ಮ ಮನೆಯಲ್ಲಿರು, ಅಗತ್ಯ ಎನಿಸಿದಾಗ ಬಂದು ನಮ್ಮೊಂದಿಗೇ ಇದ್ದು ಕೆಲಸ ಹುಡುಕು ,,,” ಎಂಬ ನಿಮ್ಮ ಭರವಸೆಯ ಮಾತುಗಳು ಇಂದಿಗೂ ಪ್ರತಿಧ್ವನಿಸುತ್ತದೆ ಕಾಮ್ರೇಡ್.
ಇದನ್ನೂ ಓದಿ: ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3
ಹೀಗೆ ಬೆಳೆದ ನಮ್ಮ Comradarie ಒಂದು ಹಂತದ ನಂತರ ನೆಂಟಸ್ತನಕ್ಕೆ ಹೊರಳಿದ್ದು ಆಕಸ್ಮಿಕವಾದರೂ, ನನ್ನ ಸೋದರಿಯ ಮದುವೆಗೆ ನಿಮ್ಮ ಕುಟುಂಬದಿಂದಾದ ಉಪಕಾರವನ್ನು ಹೇಗೆ ಮರೆಯಲಿ ಕಾಮ್ರೇಡ್. ನೀವು ಯಾರಿಗೂ ಹೇಳಬೇಡ ಎಂದಿದ್ದಿರಿ, ಇಂದು ನೀವಿಲ್ಲದ ಗಳಿಗೆಯಲ್ಲಿ ನಿಮಗೇ ನೆನಪಿಸುತ್ತೇನೆ, ಆ ಮದುವೆಗೆ ನೀವು ನೀಡಿದ ಹಣಸಹಾಯ ಆ ಸಂಕಟದ ದಿನಗಳಲ್ಲಿ ನೆಮ್ಮದಿಯನ್ನು ನೀಡಿದ್ದನ್ನು ಹೇಗೆ ಮರೆಯಲಿ ಕಾಮ್ರೇಡ್. ಅಂದಿನಿಂದ ನಿಮ್ಮ ಕುಟುಂಬದವರಲ್ಲಿ ಒಬ್ಬನಾಗಿಯೇ ಒಡನಾಟದಲ್ಲಿರುವ ನನ್ನ ಬದುಕನ್ನು ಅರ್ಥಪೂರ್ಣವಾಗಿಸಿರುವುದು ನೀವು ಹೊಸೆದ ಬಾಂಧವ್ಯ ಮತ್ತು ಇಡೀ ಕುಟುಂಬದ ಪ್ರೀತಿ ವಾತ್ಸಲ್ಯಗಳು. ಈಗ ಅಲ್ಲಿ ಕಾಣುವ ನಿರ್ವಾತವನ್ನು (Vacuum) ಯಾರು ತುಂಬಲು ಸಾಧ್ಯ ಕಾಮ್ರೇಡ್ ?

ಇದಕ್ಕಿಂತಲೂ ಮಿಗಿಲಾಗಿ ನೀವು ನನ್ನ ಸೋದರಿಯ ಸಮಸ್ಯೆಗಳಿಗೆ, ನನ್ನ ಸಂಕಟಗಳಿಗೆ ಸ್ಪಂದಿಸುತ್ತಿದ್ದ ರೀತಿ ಮತ್ತು ನೀಡುತ್ತಿದ್ದ ಸಾಂತ್ವನ ಮರೆಯಲಾದೀತೇ ಕಾಮ್ರೇಡ್. ಸಹಾಯ ಅಥವಾ ನೆರವು ಭೌತಿಕ ವಿದ್ಯಮಾನಗಳಲ್ಲ ಕಾಮ್ರೇಡ್, ದಿಕ್ಕುಗಾಣದೆ ನಿಂತಾಗ ಮುಂದಿನ ಹಾದಿ ತೋರುವ ಔದಾತ್ಯ ಮತ್ತು ಪ್ರಾಮಾಣಿಕ ಸಲಹೆಗಳು ಬದುಕಿನ ದಿಕ್ಕನ್ನೇ ಬದಲಿಸುತ್ತದೆ ಕಾಮ್ರೇಡ್. ಇತ್ತೀಚಿನ ನನ್ನ ಮಗಳ ವಿವಾಹದವರೆಗೂ ಈ ದಿಕ್ಸೂಚಿಯಾಗಿ ನೀವು ನನ್ನ ಬದುಕಿಗೆ ಸ್ಪಂದಿಸಿದ್ದೀರಿ. ಇದಕ್ಕೆ ಥ್ಯಾಂಕ್ಸ್ ಹೇಳಿದರೆ ಅದು ಕ್ಲೀಷೆಯಾಗಿಬಿಡುತ್ತದೆ ಅಲ್ಲವೇ ? ಈ ಔಪಚಾರಿಕತೆಯನ್ನೂ ಮೀರಿದ ಸಾಂತ್ವನವನ್ನು ನೀವು ನೀಡಿದ್ದಿರಿ. ಅದು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದ ಕ್ಷಣಗಳು ಕಾಮ್ರೇಡ್. ಗೆಳೆಯ ಶಾಸ್ತ್ರಿ, ಈಗ ನಮ್ಮೊಡನಿಲ್ಲದ ಸಂಗಾತಿ ಲಕ್ಷ್ಮೀನಾರಾಯಣ್ ಮತ್ತು ನಿಮಗೆ ನನ್ನ ಕೃತಜ್ಞತೆಗಳನ್ನು ಹೇಗೆ ಸಲ್ಲಿಸಲು ಸಾಧ್ಯ ಕಾಮ್ರೇಡ್. ಇದು ಶಾಶ್ವತ ಜಿಜ್ಞಾಸೆಯಾಗಿಯೇ ಉಳಿದುಬಿಡಲಿ.
ಆದರ್ಶಪ್ರಾಯ ವ್ಯಕ್ತಿತ್ವಕ್ಕೆ ವಿದಾಯ
ಕರ್ತವ್ಯ ಬದ್ಧತೆ, ಸೈದ್ದಾಂತಿಕ ನಿಷ್ಠೆ, ಪ್ರಾಮಾಣಿಕತೆ, ಸರಳ ಜೀವನಶೈಲಿ, ಎಲ್ಲರನ್ನೂ ಪ್ರೀತಿಸುವ ಮನೋಭಾವ, ಸೈದ್ಧಾಂತಿಕ-ರಾಜಕೀಯ ವಿರೋಧಿಗಳನ್ನೂ ಸ್ನೇಹದಿಂದ ಕಾಣುವ ಔದಾತ್ಯ ಇವೆಲ್ಲವೂ ನೀವು ಕಲಿಸಿದ ಪಾಠಗಳೇ ಕಾಮ್ರೇಡ್. ಕಾರ್ಮಿಕ ಚಳುವಳಿಯಲ್ಲಿ ನಿಮ್ಮೊಡನೆ ಭಾಗವಹಿಸಿದ ಧರಣಿ, ಮುಷ್ಕರ, ವೇದಿಕೆಯ ಕಾರ್ಯಕ್ರಮಗಳು, ಉಪವಾಸ ಮುಷ್ಕರ ಇವೆಲ್ಲವೂ ಸಹ ನಿಮ್ಮೊಳಗಿನ ಒಬ್ಬ ಕಾಮ್ರೇಡ್ ಎಷ್ಟು ಅನುಕರಣೀಯ ಎನ್ನುವುದನ್ನು ಸ್ಪಷ್ಟಪಡಿಸಿವೆ. ನನ್ನ ಈ ಮಾತುಕತೆಯಲ್ಲಿ ಈ ಪರ್ವವನ್ನು ಕುರಿತು ಹೇಳುವುದಿಲ್ಲ. ಏಕೆಂದರೆ ಕಾಮ್ರೇಡ್ ಅನಂತಸುಬ್ಬರಾವ್ ಗಿಂತಲೂ ನನಗೆ ಆಪ್ತವಾಗಿದ್ದುದು ಮನೆಯೊಳಗಿನ ಸೋದರ ಭಾವದ ಅನಂತು.

ಬದುಕಿನ ಪಯಣದಲ್ಲಿ ನಮಗಿಂತ ಹಿರಿಯರು ಒಬ್ಬೊಬ್ಬರಾಗಿ ನಿರ್ಗಮಿಸುವುದನ್ನು ನೋಡುವಾಗ ಮನಸ್ಸಿಗೆ ವೇದನೆಯಾಗುತ್ತದೆ ಕಾಮ್ರೇಡ್. ನಿಮ್ಮಂತಹ ನಿಸ್ಪೃಹ ಸ್ನೇಹಮಯಿ ಸಂಗಾತಿ ಹಠಾತ್ತನೆ ನಿರ್ಗಮಿಸಿದಾಗ ಆ ವೇದನೆ ಮಡುಗಟ್ಟಲಾರಂಭಿಸುತ್ತದೆ. ಪದೇಪದೇ ನಡೆದುಬಂದ ಹಾದಿಯ ಒಡನಾಟಗಳನ್ನು ನೆನಪಿಸುತ್ತಲೇ ಇರುತ್ತದೆ. ಈ ನೆನಪುಗಳ ನಡುವೆ ನೀವು ಕಲಿಸಿದ ಪಾಠಗಳು ಮತ್ತು ನೀಡಿದ ಸಲಹೆಗಳು, ಸೈದ್ದಾಂತಿಕವಾಗಿ, ತಾತ್ವಿಕವಾಗಿ, ವೈಯುಕ್ತಿಕ ಬದುಕಿನ ಅಂತರ್‌ವಾಹಿನಿಯಾಗಿ ಪ್ರವಹಿಸುತ್ತಲೇ ಇರುತ್ತದೆ. ಆ ಭಾವನಾತ್ಮಕ ಅಲೆಗಳ ಏರಿಳಿತದಲ್ಲೇ ನೀವು ಬಿಟ್ಟುಹೋದ ಹೆಜ್ಜೆ ಗುರುತುಗಳನ್ನು ಸ್ಮರಿಸುತ್ತಲೇ ಇರುತ್ತೇನೆ ಕಾಮ್ರೇಡ್.

“ Before I breathe my last , I should carry a feeling that , I have given something lasting to the society ” (ನನ್ನ ಕೊನೆಯುಸಿರಿಗೆ ಮುನ್ನ ನನ್ನ ಮನದಾಳದಲ್ಲಿ, ನಾನು ಈ ಸಮಾಜಕ್ಕೆ ಶಾಶ್ವತವಾದ ಕೊಡುಗೆಯನ್ನು ಕೊಟ್ಟಿದ್ದೇನೆ ಎಂಬ ಭಾವನೆ ಇರುವುದಾದರೆ ನನ್ನ ಜೀವನ ಸಾರ್ಥಕ) ಎಂದು ಸುಮಾರು 25 ವರ್ಷಗಳ ಹಿಂದೆ ನೀವು ಹೇಳಿದ ಮಾತುಗಳು ಇಂದು ಮರುದನಿಸುತ್ತಿವೆ ಕಾಮ್ರೇಡ್. ನಿಮ್ಮ ಆ ಭಾವನೆ ಸಾಕಾರಗೊಂಡಿದೆ. ನಿಮ್ಮ ಭೌತಿಕ ಬದುಕು ಸಾರ್ಥಕತೆಯೊಂದಿಗೆ ಕೊನೆಯಾಗಿದೆ. ಆದರೆ ನಿಮ್ಮ ನೆನಪು ಕೊನೆಯಾಗುವುದಿಲ್ಲ ಕಾಮ್ರೇಡ್. ಸದಾ ಇರುತ್ತೀರಿ, ಈ ಎದೆಯಲ್ಲಿ ಬದುಕಿನ ಹೆಜ್ಜೆಗಳಲ್ಲಿ ಭವಿಷ್ಯದ ಪ್ರತಿ ಗಳಿಗೆಯಲ್ಲಿ.
ನೀವು ಮತ್ತೆ ಬರಲಾರಿರಿ, ಹೋಗಿ-ಬನ್ನಿ ಎನ್ನಲಾಗುವುದಿಲ್ಲ. ಆದರೆ ಸದಾ ನನ್ನೊಳಗೆ ಭಾವನಾತ್ಮಕವಾಗಿ ಇರುತ್ತೀರಿ. ಅಲ್ಲಿಯೇ ಇರಿ ಎಂದು ಮಾತ್ರ ಹೇಳಬಲ್ಲೆ. ಆ ನೆನಪುಗಳೊಂದಿಗೆ ದಿನಗಳು ಸವೆಯುತ್ತವೆ.
ಕಡತ ಮುಗಿಸುವ ಮುನ್ನ ಕಣ್ಣಿಂದ ಹೊರಬಂದ ಒಂದೆರಡು ಹನಿಗಳು ಎಲ್ಲವನ್ನೂ ಹೇಳುತ್ತವೆ.
ಲಾಲ್ ಸಲಾಂ ಕಾಮ್ರೇಡ್












