ಚೆನ್ನೈ: ದಕ್ಷಿಣ ಭಾರತದ ಹಿರಿಯ ನಟಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 1:59ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

94 ವರ್ಷದ ಸಾಹುಕಾರ್ ಜಾನಕಿ ಅವರು ಸುಮಾರು ಏಳು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು.

ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರವು 2022ರಲ್ಲಿ ಸಾಹುಕಾರ್ ಜಾನಕಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಹಿರಿಯ ನಟಿಯ ಅಗಲಿಕೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.







