ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬುದು ಬಹುತೇಕ ಅಧಿಕೃತಗೊಂಡ ಬಳಿಕ ವರ್ತೂರು ಪ್ರಕಾಶ್ ಹತಾಶರಾಗಿರುವ ಹಾಗೆ ವರ್ತಿಸುತ್ತಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಬರುವುದಾದರೆ ಕೋಲಾರಕ್ಕೆ ಬರಲಿ ಎಂದು ಸಾರ್ವಜನಿಕವಾಗಿ ತೊಡೆ ತಟ್ಟಿದ್ದ ವರ್ತೂರು ಈಗ ತಮ್ಮ ವರಸೆಯನ್ನು ಬದಲಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದಿರುವ ವರ್ತೂರು, ತಾನು ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸದಂತೆ ತನಗೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿದ್ಧರಾಮಯ್ಯ ಸ್ಪರ್ಧೆಗೆ ಬೆದರಿದಂತೆ ವರ್ತಿಸಿದ ವರ್ತೂರು ಪ್ರಕಾಶ್, ದಲಿತ, ಒಕ್ಕಲಿಗರನ್ನು ಸಿದ್ಧರಾಮಯ್ಯ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪರ ಸಹಾನುಭೂತಿ ತೋರಿ ಒಕ್ಕಲಿಗರ ಮನಸ್ಸು ಗೆಲ್ಲಲು ಪ್ರಯತ್ನಿಸಿರುವ ವರ್ತೂರು, ಖರ್ಗೆ, ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿ ದಲಿತರ ಮನಸೆಳೆಯಲು ಪ್ರಯತ್ನಿಸಿದ್ದಾರೆ.
ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವರ್ತೂರು ಪ್ರಕಾಶ್, “ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ತೇಜೋವದೆ ಮಾಡಲಾಗುತ್ತಿದೆ. ತಾನು ಸಿದ್ಧರಾಮಯ್ಯ ವಿರುದ್ಧ ಸ್ಪರ್ಧಿಸದಂತೆ ತನಗೆ ಒತ್ತಡ ಹಾಕಲಾಗುತ್ತಿದೆ” ಎಂದು ಹೇಳಿದ್ದಾರೆ.
“ಯಾವ ಯಾವ ಪಕ್ಷದವರು ಎಲ್ಲೆಲ್ಲಿ ಹೋಗ್ತಿದ್ದಾರೆ ಅಂತ ಗೊತ್ತು.ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಗ್ರಾಮಗಳಲ್ಲಿ ವರ್ತೂರು ಪ್ರಕಾಶ್ ಮೇಲೆ ಪ್ರೀತಿಯಿಂದ ವಲಸೆ ಬರುತ್ತಿದ್ದಾರೆ, ಅದರಲ್ಲಿ ಹೆಚ್ಚಾಗಿ ಜೆಡಿಎಸ್ ನವರು ಬಿಜೆಪೆ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ನನಗೆ ಈ ಕ್ಷಣದವರೆಗೂ ಯಾರು ರಾಜಕೀಯ ಗುರು ಇಲ್ಲ. ನನ್ನ ಸ್ವಂತ ಶಕ್ತಿ ಇಂದ ನಾನು ಗೆದ್ದಿದ್ದು, ಮಂತ್ರಿಯಾಗಿದ್ದೇನೆ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸ್ವಂತ ನಿರ್ದಾರದಿಂದ ಕೋಲಾರಕ್ಕೆ ಬರುತ್ತಿದ್ದಾರೆ.ನಾನೇನು ಅವರನ್ನ ಕೋಲಾರಕ್ಕೆ ಬನ್ನಿ ಎಂದು ಕರೆದಿಲ್ಲ. ಕೋಲಾರಕ್ಕೆ ಬರುವ ಮೊದಲು ಅವರ ಮೇಲೆ ಅಪಾರ ಗೌರವ ಇತ್ತು, ಜ.೯ ರಂದು ಅವರ ಮೇಲೆ ಇದ್ದ ಗೌರವ ಕಳೆದುಕೊಂಡ್ರು ಕೋಲಾರ ಕ್ಷೇತ್ರದಲ್ಲಿ ಕುರುಬ ಸಮುದಾಯ ವರ್ತೂರು ಪ್ರಕಾಶ್ ಜೊತೆ ಇದ್ದಾರೆ, ನಾನು ೨೦೦೮ ರಲ್ಲಿ ಕೋಲಾರಕ್ಕೆ ಬಂದಾಗ ೧೦% ನಮ್ಮ ಸಮುದಾಯ ನನ್ನ ಜೊತೆಗಿತ್ತು. ಕೆಲವರು ನನಗೆ ವಿರೋಧಾನೇ, ನನಗೆ ಮತಗಳು ಇರುವುದು ಹಳ್ಳಿಗಳಲ್ಲಿ. ನನಗೀಗ ಮೂರು ದಿನದಿಂದ ಆನೆ ಬಂದಿದೆ ಎಂದು ಹೇಳಿದ್ದಾರೆ.
ಸಿದ್ಧರಾಮಯ್ಯ ರನ್ನು ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸಿದ ವರ್ತೂರು, “ಸಿದ್ದರಾಮಯ್ಯ ವಿರುದ್ದ ದಲಿತ ಸಂಘಟನೆಗಳು ಹ್ಯಾಡ್ ಬಿಲ್ ಹಂಚುತ್ತಿದ್ದಾರೆ. ಪರಮೇಶ್ವರ, ಖರ್ಗೆ, ಸೇರಿದಂತೆ ಇತರ ದಲಿತರ ನಾಯಕರನ್ನು ತುಳಿದ ಸಿದ್ದರಾಮಯ್ಯ ವಿರುದ್ದ ಕರಪತ್ರ ಹಂಚುತ್ತಿದ್ದಾರೆ, ವಿಎಲ್.ಪಾಟೀಲ್, ಅವರ ಮಗ ಹನುಮಂತರಾವ್ ಪಾಟೀಲ್ ವಿವೇಕ್ ರಾವ್ ಪಾಟೀಲ್ ತಲೆ ಎತ್ತದೇ ಮಾಡಿದ್ದು ಸಿದ್ದರಾಮಯ್ಯ. ದಲಿತರಿಗೆ ಗೊಲ್ಲರಿಗೆ, ಕುರುಬರಿಗೆ ಮೋಸ ಮಾಡಿದ್ದು ಸಿದ್ದರಾಮಯ್ಯ. ಇವರ್ಯಾರು ಸಿದ್ದರಾಮಯ್ಯರಿಗೆ ಓಟ್ ಹಾಕೋದಿಲ್ಲ” ಎಂದು ಹೇಳಿದ್ದಾರೆ.
ಇದರ ನಡುವೆ ಸಿದ್ದರಾಮಯ್ಯರಿಗೆ ಸವಾಲು ಹಾಕಿದ ಪ್ರಕಾಶ್, “ಯೂ ಟರ್ನ್ ಹೊಡಿಬಾರದು. ನಿಮ್ಮ ತಾಕತ್ ತೋರಿಸಬೇಕು. ನನ್ನ ಪರವಾಗಿ ಪ್ರಚಾರಕ್ಕೆ ಇಡೀ ರಾಜ್ಯದಿಂದ ೫೦ ಸಾವಿರ ಜನ ನಮ್ಮ ಸಮಾಜದ ಜನ ಬರ್ತಾರೆ” ಎಂದು ಹೇಳಿದ್ದಾರೆ.
ಒಕ್ಕಲಿಗರ ಗಮನ ಸೆಳೆಯಲು ನಿಖಿಲ್‌ರನ್ನು ಎಳೆದು ತಂದಿರುವ ವರ್ತೂರು, “ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮುಗಿಸಿದ್ದು ಸಹ ಇದೇ ಸಿದ್ದರಾಮಯ್ಯ. ಮೊಳಕೆಯಲ್ಲೇ ನಿಖೀಲ್ ಕುಮಾರಸ್ವಾಮಿನಾ ತುಳಿದಿದ್ದಾರೆ “ ಎಂದು ಜೆಡಿಎಸ್ ಪರ ಸಹಾನುಭೂತಿಯನ್ನು ವರ್ತೂರು ಪ್ರಕಾಶ್ ತೋರಿದ್ದಾರೆ.
ರಾಜಕೀಯ ಪ್ರಾರಂಭ ಮಾಡಿ ಬೆಳೆದ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದಿಸೋ ತೀರ್ಮಾನ ಸ್ವಂತದ್ದು.ನನ್ನನ್ನ ಮುಗಿಸಬೇಕು ಅಂತನೇ ವೈಯುಕ್ತಿವಾಗಿ ಕೋಲಾರಕ್ಕೆ ಬರ್ತಿದ್ದಾರೆ, ಕೋಲಾರದಲ್ಲಿ ಅಲ್ಲದೇ ರಾಜ್ಯದಲ್ಲೇ ಈ ಬಾರಿ ಸಿದ್ದರಾಮಯ್ಯರಿಗೆ ರಾಜಕೀಯ ಅಂತ್ಯ ಹಾಗುತ್ತೆ, ಇಲ್ಲಿನ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯ ಗೆ ಮಾಹಿತಿ ಈಗಾಗಲೇ ಹೋಗಿರುತ್ತದೆ ಹಾಗಾಗಿ ಕೋಲಾರದಿಂದ ಯೂ ಟರ್ನ್ ಹೊಡಿತಾರೆ ಅಂತ ನನ್ನ ಅನಿಸಿಕೆ, ಸಿದ್ದರಾಮಯ್ಯ ನೀನು ಕೋಲಾರಕ್ಕೆ ಬಂದು ಬೆಂಕಿ ಇಟ್ಟಿದ್ದೀಯಾ, ಚುನಾವಣೆಗೆ ಯೂ ಟರ್ನ್ ಹೊಡಿಯದೇ ಕೋಲಾರದಲ್ಲಿ ನೀನೇ ಇಟ್ಟಿರುಬ ಬೆಂಕಿಯಲ್ಲಿ ಬೇಯಬೇಕು, ನಮ್ಮ ಸಮುದಾಯದಲ್ಲಿ ಒಡಕು ಇಲ್ಲ, ಸಿದ್ದರಾಮಯ್ಯ ಪರ ಯಾರು ಹೋಗಲ್ಲ, ನಾನು ಹೈವೋಲ್ಟೇಜ್ ಹಾಗೂ ಹಸಿದ ಹೆಬ್ಬುಲಿ, ನನ್ನ ಬಳಿ ಯಾರು ಬರೋಕೆ ಜಾನ್ಸೇ ಇಲ್ಲ, ರಾಜಿ ಸಂಧಾನನೇ ಇಲ್ಲ ಮಾತೂ ಸಹ ಇಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.