ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾ ಕಳೆದ ವರ್ಷ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಳೆದ ವರ್ಷ ತನ್ನ ಜನಸಂಖ್ಯೆಯಲ್ಲಿ ಇಳಿಕೆಯನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ (ಎನ್‌ಬಿಎಸ್) ಮಂಗಳವಾರ ಬಹಿರಂಗಪಡಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, ಚೀನಾದ ಜನಸಂಖ್ಯೆಯು 2022 ರ ಕೊನೆಯಲ್ಲಿ ಸುಮಾರು 1,411,750,000 (1.4 ಶತಕೋಟಿ) ಇತ್ತು. ಇದು ಹಿಂದಿನ ವರ್ಷದ ಅಂತ್ಯಕ್ಕಿಂತ ಸುಮಾರು 8,50,000 ಕಡಿಮೆ.
ಈ ಕುಸಿತವು ಚೀನಾ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದಕ್ಕೆ ಪ್ರಬಲ ಪುರಾವೆಯಾಗಿ ಜನಸಂಖ್ಯಾ ಪ್ರಮಾಣ ಕುಸಿದ 2022ರಲ್ಲಿ ಚೀನಾ ಕೇವಲ 3 ಪ್ರತಿಶತದಷ್ಟು ಅಭಿವೃದ್ಧಿಯನ್ನು ಮಾತ್ರ ದಾಖಲಿಸಿದೆ. ಇದು ಈ ನಲುವತ್ತು ವರ್ಷಗಳಲ್ಲಿ ಅತ್ಯಂತ ದುರ್ಬಲ ಪ್ರಗತಿಯಾಗಿರುತ್ತದೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳು ಹೇಳಿವೆ. ಜೊತೆಗೆ ಪ್ರಸ್ತುತ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿರುವ ಭಾರತವು ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಳ್ಳಲಿದೆ ಎಂದೂ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ಚೀನಾದ ಬೈದು (Baidu) ಸರ್ಚ್ ಇಂಜಿನ್‌ನಲ್ಲಿ ಬೇಬಿ ಸ್ಟ್ರಾಲರ್‌ಗಳಿಗಾಗಿ 2022ರಲ್ಲಿ ಮಾಡಿರುವ ಆನ್ ಲೈನ್ ಹುಡುಕಾಟಗಳು ಶೇಕಡಾ 17 ರಷ್ಟು ಕಡಿಮೆಯಾಗಿದೆ ಮತ್ತು 2018ಕ್ಕೆ ಹೋಲಿಸಿದರೆ ಇದು ಶೇಕಡಾ 41 ರಷ್ಟು ಕಡಿಮೆ. ಇದಲ್ಲದೆ, ಮಗುವಿನ ಬಾಟಲಿಗಳ ಹುಡುಕಾಟಗಳು 2018 ಕ್ಕೆ ಹೋಲಿಸಿದರೆ ಅದರ ಮೂರನೇ ಒಂದು ಭಾಗದಷ್ಟೂ ಇಲ್ಲ ಎಂದು ವರದಿಯು ಬೊಟ್ಟು ಮಾಡಿದೆ. ಅದೇ ಹೊತ್ತಿಗೆ ಭಾರತದಲ್ಲಿ, ಗೂಗಲ್ ಟ್ರೆಂಡ್ ಹೇಳುವಂತೆ 2022 ರಲ್ಲಿ ಬೇಬಿ ಬಾಟಲ್‌ಗಳ ಹುಡುಕಾಟದಲ್ಲಿ 15 ಪ್ರತಿಶತದಷ್ಟು ಜಿಗಿತವನ್ನು ತೋರಿಸಿದೆ. ಈ ಮಧ್ಯೆ ಚೀನಾದಲ್ಲಿ ವೃದ್ಧಾಶ್ರಮಗಳಿಗಾಗಿ ನಡೆಸಿದ ಆನ್‌ಲೈನ್ ಹುಡುಕಾಟಗಳು ಕಳೆದ ವರ್ಷ ಎಂಟು ಪಟ್ಟು ಹೆಚ್ಚಾಗಿವೆ ಎನ್ನಲಾಗಿದೆ.
ಚೀನಾದ ಜನಸಂಖ್ಯಾ ಶಾಸ್ತ್ರದ ಇತಿಹಾಸವನ್ನು ಗಮನಿಸಿದರೆ ‘ಗ್ರೇಟ್ ಲೀಪ್ ಫಾರ್ವರ್ಡ್’ ಎಂದು ಕರೆಯಲ್ಪಡುವ ಮಾವೋ ಝೆಡಾಂಗ್ ಕೃಷಿ ನೀತಿಯಿಂದ ಉಂಟಾದ ಮಹಾ ಕ್ಷಾಮವನ್ನು ದೇಶವು 1960 ರಲ್ಲಿ ಎದುರಿಸಿದಾಗ ಕೊನೆಯ ಬಾರಿಗೆ ಚೀನಾದ ಜನಸಂಖ್ಯೆಯು ಕುಸಿದಿತ್ತು. ಈಗ ಅಂತಹ ಯಾವುದೇ ಅವಘಡಗಳು ಸಂಭವಿಸದೇ ಇದ್ದರೂ 2022 ರಲ್ಲಿ ಚೀನಾವು ಪ್ರತಿ 1,000 ಜನರಿಗೆ 6.77 ಜನನ ಪ್ರಮಾಣವನ್ನು ಮಾತ್ರ ದಾಖಲಿಸಿದ್ದು ಹಿಂದಿನ ವರ್ಷದಲ್ಲಿ 7.52ಕ್ಕೆ ಹೋಲಿಸಿದರೆ ಇದು 0.75ಅಷ್ಟು ಕಡಿಮೆ ಎಂದು NBS ಹೇಳಿದೆ. ಅದೇ ರೀತಿ ಚೀನಾವು 2022ರಲ್ಲಿ 1974 ರ ನಂತರ ಹೆಚ್ಚು ಸಾವಿನ ಪ್ರಮಾಣವನ್ನು ದಾಖಲಿಸಿದ್ದು ಪ್ರತಿ 1,000 ಜನರಿಗೆ 7.37 ಸಾವುಗಳಾಗಿವೆ. 2021 ರಲ್ಲಿ ಈ ದರ 7.18 ರಷ್ಟಿತ್ತು. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು 2050 ರ ವೇಳೆಗೆ ಚೀನಾದ ಜನಸಂಖ್ಯೆಯು 109 ಮಿಲಿಯನ್‌ಗೆ ಕುಗ್ಗಲಿದೆ ಎಂದು ಯುಎನ್ ತಜ್ಞರು ಹೇಳಿದ್ದಾರೆ, ಇದು 2019 ರಲ್ಲಿ ಅವರು ಅಂದಾಜು ಮಾಡಿದ್ದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು.
ಈ ರೀತಿಯ ಜನಸಂಖ್ಯೆಯ ಕುಸಿತಕ್ಕೆ 1980 ರ ದಶಕದಲ್ಲಿ ಹೇರಲ್ಪಟ್ಟ ಕಟ್ಟುನಿಟ್ಟಾದ ‘ಒಂದು ಮಗುವಿನ ನೀತಿ’ ಕಾರಣವೆಂದು ಹೇಳಲಾಗಿದೆ. ಅದರ ಜೊತೆಗೆ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಮತ್ತು ಕಳೆದ ವರ್ಷ ತೆಗೆದುಹಾಕಲಾದ ‘ಶೂನ್ಯ-ಕೋವಿಡ್’ ನೀತಿಯು ಹಾನಿಯನ್ನು ಮತ್ತಷ್ಟು ಹೆಚ್ಚಿಸಿತು. ಚೀನಾದಲ್ಲಿರುವ ಜೀವನ ವೆಚ್ಚದ ಏರಿಕೆ, ಉನ್ನತ ಶಿಕ್ಷಣದ ಬೇಡಿಕೆಯೂ ಜನಸಂಖ್ಯೆಯ ಇಳಿಕೆಯಲ್ಲಿ ತನ್ನ ಕೊಡುಗೆ ನೀಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಚೀನಾದ ಕೆಲ ಸ್ಥಳೀಯ ಸರ್ಕಾರಗಳು ಕಡಿಮೆ ಜನನ ಪ್ರಮಾಣವನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿವೆ. ಇವುಗಳಲ್ಲಿ ತೆರಿಗೆ ವಿನಾಯಿತಿಗಳು, ದೀರ್ಘಾವಧಿಯ ಮಾತೃತ್ವ ರಜೆ ಮತ್ತು ವಸತಿ ಸಬ್ಸಿಡಿಗಳು ಸೇರಿವೆ. ಉದಾಹರಣೆಗೆ, ಚೀನಾದ ದಕ್ಷಿಣ ನಗರವಾದ ಶೆನ್‌ಜೆನ್ ಈಗ ಮಗುವಿಗೆ ಮೂರು ವರ್ಷ ವಯಸ್ಸಿನವರೆಗೆ ಜನನ ಭತ್ಯೆಗಳನ್ನು ನೀಡುತ್ತದೆ. ಪೂರ್ವದ ನಗರವಾದ ಜಿನಾನ್ ಜನವರಿ 1 ರಿಂದ ಎರಡನೇ ಮಗುವನ್ನು ಹೊಂದಿರುವ ಪ್ರತಿ ದಂಪತಿಗಳಿಗೆ ಮಾಸಿಕ 600 ಯುವಾನ್‌ಗಳನ್ನು ಪಾವತಿಸಲು ಪ್ರಾರಂಭಿಸಿದೆ.