ಆಂಧ್ರಪ್ರದೇಶ : ವಿಶಾಖಪಟ್ಟಣಂನಿಂದ ಹೊರಡಬೇಕಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯು ಬುಧವಾರ ಸಂಭವಿಸಿದೆ. ಕಲ್ಲು ತೂರಾಟದ ಬಳಿಕ ವಂದೆಭಾರತ್ ಎಕ್ಸ್ಪ್ರೆಸ್ ರೈಲನ್ನು ಮರುನಿಗದಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿದೆ.
ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಸಿ – 8 ಕೋಚ್ ಕಿಟಕಿ ಗಾಜು ಒಡೆದು ಹೋಗಿದೆ. ಹೀಗಾಗಿ ಬುಧವಾರದಂದು ವಿಶಾಖಪಟ್ಟಣದಿಂದ 5:45ಕ್ಕೆ ಹೊರಡುವ ವಂದೇಭಾರತ್ ಎಕ್ಸ್ಪ್ರೆಸ್ ರೈಲನ್ನು 9:45ಕ್ಕೆ ಮರು ನಿಗದಿ ಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ. ಕಳೆದ ಮೂರು ತಿಂಗಳಲ್ಲಿ ವಿಶಾಖಪಟ್ಟಣದಿಂದ ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ನಡೆದ ಕಲ್ಲು ತೂರಾಟದ ಮೂರನೇ ಪ್ರಕರಣ ಇದಾಗಿದೆ.

ಇದಕ್ಕೂ ಮುನ್ನ ಜನವರಿಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ವಂದೇಭಾರತ್ ರೈಲಿನ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು.
ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ವಂದೇಭಾರತ್ ಎಕ್ಸ್ಪ್ರೆಸ್ ಕೋಚ್ನ ಗಾಜಿನ ಫಲಕಕ್ಕೆ ಹಾನಿಯುಂಟಾಗಿದೆ. ಡಿವಿಜನಲ್ ರೈಲ್ವೆ ಮ್ಯಾನೇಜರ್ ಅನುಪ್ ಕುಮಾರ್ ಸೇತುಪತಿ ನೀಡಿರುವ ಮಾಹಿತಿಯ ಪ್ರಕಾರ, ವಂದೇ ಭಾರತ್ ರೈಲು ನಿರ್ವಹಣೆಗಾಗಿ ವಿಶಾಖಪಟ್ಟಣಂಗೆ ತಲುಪುತ್ತಿದ್ದಂತೆಯೇ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರೈಲಿನ ಬೋಗಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ವಿಶಾಖಪಟ್ಟಣಂ ನಿಲ್ದಾಣದಿಂದ ಪ್ರಸ್ತುತ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗಿದ್ದು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.