ಗುವಾಹಟಿ : ಏ.06: ನೇಥನ್ ಎಲಿಸ್ ಪರಿಣಾಮಕಾರಿ ಬೌಲಿಂಗ್ನಿಂದಾಗಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರಿನ ಐಪಿಎಲ್ ಪಂದ್ಯದಲ್ಲಿ ಜಯ ಗಳಿಸಿತು. ಆ ಮೂಲಕ ಟೂರ್ನಿಯಲ್ಲಿ ಸತತ 2ನೇ ಗೆಲುವಿಗೆ ಮುತ್ತಿಕ್ಕಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ತಂಡ ಕೊನೆಯ ಓವರ್ನಲ್ಲಿ ಮಣಿಸಿದೆ. ಪಂಜಾಬ್ ನೀಡಿದ್ದ ದೊಡ್ಡ ಮೊತ್ತವನ್ನು ಚೇಸ್ ಮಾಡುವಲ್ಲಿ ವೈಫಲ್ಯ ಅನುಭವಿಸಿದ ರಾಯಲ್ಸ್, ಕೇವಲ 5 ರನ್ಗಳಿಂದ ಶರಣಾಗಿದೆ.
ಶಿಖರ್ ಧವನ್ (ಅಜೇಯ 86) ಮತ್ತು ಪ್ರಭು ಶಿಮ್ರಾನ್ (60) ಅವರ ಅರ್ಧಶತಕದ ಬಲದಿಂದ ಪಂಜಾಬ್ ಕಿಂಗ್ಸ್, 4 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡಕ್ಕೆ ನಥನ್ ಎಲ್ಲಿಸ್ ಶಾಕ್ ನೀಡಿದರು. ಇದರ ನಡುವೆ ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ್ ಜುರೆಲ್ ಆಟದ ದಿಕ್ಕನ್ನೇ ಬದಲಿಸಿದರು. ಆದರೆ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. ಇದರೊಂದಿಗೆ ಸಂಜು ಪಡೆ, 192 ರನ್ ಗಳಿಸಿತು.
ಪಂಜಾಬ್ ನೀಡಿದ್ದ ಬೃಹತ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್, ಆರಂಭಿಕ ಆಘಾತಕ್ಕೆ ಒಳಗಾಯಿತು. ಮೊದಲ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್, 11 ರನ್ಗಳಿಗೆ ಆಟ ಮುಗಿಸಿದರು. ಇನ್ನು ಆರಂಭಿಕರಾಗಿ ಬಡ್ತಿ ಪಡೆದಿದ್ದ ಆರ್ ಅಶ್ವಿನ್, 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋಸ್ ಬಟ್ಲರ್ 19 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ರಾಜಸ್ಥಾನ್ಗೆ ಸೋಲಿನ ಆತಂಕ್ಕೆ ಸಿಲುಕಿತು.
ಬಳಿಕ ನಾಯಕ ಸಂಜು ಸ್ಯಾಮ್ಸನ್, ಪ್ರತಿ ಹೋರಾಟ ನಡೆಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಚಚ್ಚಿದ್ದ ಸಂಜು, ತಂಡಕ್ಕೆ ಜೀವ ತುಂಬಿದರು. ಆದರೆ 42 ರನ್ ಗಳಿಸಿದ್ದಾಗ ನಥನ್ ಎಲ್ಲಿಸ್ಗೆ ವಿಕೆಟ್ ಒಪ್ಪಿಸಿದರು. ರಿಯಾನ್ ಪರಾಗ್ ಸ್ಪೋಟಕ ಇನ್ನಿಂಗ್ಸ್ ಕಟ್ಟಿದರೂ ಗೆಲುವನ್ನು ಹತ್ತಿರಕ್ಕೆ ತಂದು ನಿಲ್ಲಿಸುವಲ್ಲಿ ವಿಫಲರಾದರು. ದೇವದತ್ ಪಡಿಕ್ಕಲ್ ಸ್ಲೋ ಇನ್ನಿಂಗ್ಸ್ ಕಟ್ಟಿ ಟೀಕೆಗೆ ಗುರಿಯಾದರು. 26 ಎಸೆತಗಳಲ್ಲಿ 21 ರನ್ಗಳಿಸಿದರು. ಅತ್ತ ಸೋಲಿನ ಸುಳಿಗೆ ಸಿಲುಕ್ಕಿದ್ದ ರಾಜಸ್ಥಾನ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದು ಶಿಮ್ರಾನ್ ಹೆಟ್ಮೆಯರ್-ಧ್ರುವ್ ಜುರೆಕ್. ಕೊನೆಯಲ್ಲಿ ಮನಮೋಹಕ ಬ್ಯಾಟಿಂಗ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 7 ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನೂ ಆಡಿದರು. ಕೊನೆಯ 2 ಓವರ್ಗಳಲ್ಲಿ 34 ರನ್ ಅಗತ್ಯ ಇತ್ತು. 19ನೇ ಓವರ್ನಲ್ಲಿ ಧ್ರುವ್ ಜುರೆಲ್, ಆರ್ಷ್ದೀಪ್ ಬೌಲಿಂಗ್ನಲ್ಲಿ 18 ರನ್ ಚಚ್ಚಿದರು.
ಇದ್ರಿಂದ ಕೊನೆಯ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ಜಯಿಸಲು 16 ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿಮ್ರಾನ್ ಹೆಟ್ಮೆಯರ್, ರನೌಟ್ ಆದರು. ಆದರೆ ಧ್ರುವ್ ಕೊನೆಯವರೆಗೂ ಹೋರಾಟ ನಡೆಸಿದರೂ, ಗೆಲುವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಐಪಿಎಲ್ನ ದುಬಾರಿ ಆಟಗಾರ ಸ್ಯಾಮ್ ಕರನ್, 16 ರನ್ಗಳನ್ನು ಡಿಪೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಪಂಜಾಬ್ ಗೆಲುವನ್ನು ಖಚಿತಪಡಿಸಿದರು. ರಾಜಸ್ಥಾನ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಪಂಜಾಬ್ ಪರ ಎಲ್ಲಿಸ್ 4 ವಿಕೆಟ್, ಆರ್ಷದೀಪ್ 2 ವಿಕೆಟ್ ಪಡೆದು ಮಿಂಚಿದರು.
ಅರ್ಧಶತಕ ಸಿಡಿಸಿದ ಪ್ರಭು-ಧವನ್ :
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, ಅದ್ಭುತ ಆರಂಭ ಪಡೆಯಿತು. ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಪ್ರಭು ಶಿಮ್ರಾನ್ ಸಿಂಗ್ ಮತ್ತು ಶಿಖರ್ ಧವನ್, ರಾಜಸ್ಥಾನ್ ರಾಯಲ್ಸ್ ಬೌಲರ್ಗಳ ಬೆವರಿಳಿಸಿದರು. ಅದರಲ್ಲೂ ಪ್ರಭು ಶಿಮ್ರಾನ್, ಸ್ಪೋಟಕ ಇನ್ನಿಂಗ್ಸ್ ಕಟ್ಟುವ ಮೂಲಕ ಅರ್ಧಶತಕ ಸಿಡಿಸಿದರು. ಬೌಲರ್ಗಳ ಮೇಲೆ ಸವಾರಿ ಮಾಡಿದ ಈ ಜೋಡಿ, ಮೊದಲ ವಿಕೆಟ್ಗೆ ಕಲೆ ಹಾಕಿದ್ದು, 90 ರನ್.
ಸಂಜು ಪಡೆಯ ಬೌಲರ್ಗಳ ವಿರುದ್ಧ ದಂಡಯಾತ್ರೆ ನಡೆಸಿದ ಪ್ರಭು, ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. 34 ಎಸೆತಗಳನ್ನು ಎದುರಿಸಿದ 7 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ ತಂಡದ 60 ರನ್ ಸಿಡಿಸಿದರು. ವೇಗದ ಮತ್ತು ಸ್ಪಿನ್ ಬೌಲರ್ಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಗಬ್ಬರ್, ನಾಯಕನಾಗಿ ರನ್ ತೇರು ಎಳೆದರು. 56 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ ಅಜೇಯ 86 ರನ್ ಸಿಡಿಸಿದರು.
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನುಕ ರಾಜಪಕ್ಸೆ ಅವರ ಕೈಗೆ ಚೆಂಡು ಬಡಿದ ಕಾರಣ, ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದರು. ಆ ಬಳಿಕ ಕ್ರೀಸ್ಗೆ ಬಂದ ಜಿತೇಶ್ ಶರ್ಮಾ ಅಗ್ರೆಸ್ಸಿವ್ ಬ್ಯಾಟಿಂಗ್ ನಡೆಸಿದರು. 16 ಎಸೆತಗಳಲ್ಲಿ 27 ರನ್ ಗಳಿಸಿ ಚಹಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಸಿಕಂದರ್ ರಾಝಾ 1 ರನ್ಗೆ ಅಶ್ವಿನ್ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಶಾರೂಖ್ ಖಾನ್ 11 ರನ್ ಗಳಿಸಿ ನಿರ್ಗಮಿಸಿದರು. ರಾಜಸ್ಥಾನ ಪರ ಹೋಲ್ಡರ್ 2 ವಿಕೆಟ್ ಪಡೆದರೆ ಅಶ್ವಿನ್, ಚಹಲ್ ತಲಾ 1 ವಿಕೆಟ್ ಪಡೆದರು.