ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 3 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದ ನಂತರ ಇಡೀ ಭಾರತವು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಭಾರತೀಯ ಹಾಕಿ ಆಟಗಾರ್ತಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿ ಹ್ಯಾಟ್ರಿಕ್ ಗೋಲು ಗಳಿಸಿದ್ದ ವಂದನಾ ಕಟಾರಿಯಾರ ಊರು ಹರಿದ್ವಾರದ ರೋಶ್ನಾಬಾದ್‌ನಲ್ಲಿ ಮೇಲ್ಜಾತಿಯ ಪುರುಷರಿಬ್ಬರು ಜಾತಿ ನಿಂದನೆ ಮಾಡಿರುವ ಘಟನೆ ವರದಿಯಾಗಿದೆ.
ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾದ ವಿರುದ್ಧ ಪೈಪೋಟಿಯ ಪ್ರದರ್ಶನ ನೀಡಿದರೂ ಸಹ, ರಾಣಿ ರಾಂಪಾಲ್ ನಾಯಕತ್ವದ ಭಾರತೀಯ ಮಹಿಳಾ ತಂಡವು ಚಿನ್ನದ ಪದಕಕ್ಕೆ ಅರ್ಹವಾಗುವು ಪಂದ್ಯಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು ಮತ್ತು 1-2 ರಲ್ಲಿ ಸೋತಿತು. ಇಡೀ ದೇಶವು ಒಟ್ಟಾಗಿ ತಂಡವನ್ನು ಅಭಿನಂದಿಸಿ ಮತ್ತು ಗ್ರೇಟ್ ಬ್ರಿಟನ್‌ನ ವಿರುದ್ಧ ಮುಂಬರುವ ಕಂಚಿನ ಪದಕಕ್ಕಾಗಿ ನಡೆಯುವ ಮುಖಾಮುಖಿಗೆ ತಮ್ಮ ಶುಭಾಶಯಗಳನ್ನು ಕಳುಹಿಸಿದರೆ, ವಂದನಾರ ರೋಶ್ನಾಬಾದ್ ಮಾತ್ರ ವಿಕೃತಿಗಾಗಿ ಸುದ್ದಿಯಾಯಿತು.
ತಂಡದ ಸ್ಟಾರ್ ಆಟಗಾರ್ತಿ ವಂದನಾರ ಜಾತಿಯನ್ನು ಗುರಿಯಾಗಿಸಿಕೊಂಡ ಮೇಲ್ವರ್ಗದ ಪುರುಷರು ವಂದನಾ ಅವರ ಮನೆಯ ಸುತ್ತ ನೆರೆದು ಕುಟುಂಬ ಸದಸ್ಯರನ್ನು ಕರೆದು “ತಂಡವು ಹೆಚ್ಚು ದಲಿತ ಆಟಗಾರರನ್ನು ಹೊಂದಿದ್ದರಿಂದ ಸೋತಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ. ವಂದನಾ ಅವರ ಸಹೋದರ ಶೇಖರ್ TOI ಜೊತೆ ಮಾತನಾಡುತ್ತಾ “ಸೋಲಿನ ನಂತರ ನಾವು ಬೇಸರಗೊಂಡಿದ್ದೆವು. ಆದರೆ ನಮ್ಮ ತಂಡವು ಹೋರಾಡಿತು. ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ ” ಅಂದಿದ್ದಾರೆ.
“ಇದ್ದಕ್ಕಿದ್ದಂತೆ, ಪಂದ್ಯದ ನಂತರ, ನಮಗೆ ಜೋರಾಗಿ ಶಬ್ದಗಳು ಕೇಳಿತು. ನಮ್ಮ ಮನೆಯ ಹೊರಗೆ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು. ನಾವು ಹೊರಗೆ ಹೋದಾಗ, ನಮ್ಮ ಹಳ್ಳಿಯ ಇಬ್ಬರು ಪುರುಷರನ್ನು ನೋಡಿದೆವು . ಅವರು ಮೇಲ್ಜಾತಿಯವರಾಗಿದ್ದು ನಮ್ಮ ಮನೆಯ ಮುಂದೆ ನೃತ್ಯ ಮಾಡುತ್ತಿದ್ದರು”ಎಂದು ಹೇಳಿದ್ದಾರೆ.
ಅವರು ಜಾತಿ ನಿಂದನೆ ಮಾಡಿದರು, ನಮ್ಮ ಕುಟುಂಬವನ್ನು ಅವಮಾನಿಸಿದರು ಮತ್ತು ಭಾರತೀಯ ತಂಡದಲ್ಲಿ ಹಲವು ದಲಿತ ಆಟಗಾರರು ಇರುವುದರಿಂದ ತಂಡವು ಸೋತಿದೆ ಎಂದರು ಎಂದಿದ್ದಾರೆ. “ಕೇವಲ ಹಾಕಿ ಮಾತ್ರವಲ್ಲ ಎಲ್ಲಾ ಕ್ರೀಡಗಳಿಂದಲೂ ದಲಿತರನ್ನು ದೂರವಿಡಬೇಕು” ಎಂದು ಅವರು ಹೇಳಿರುವುದಾಗಿ ಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ನಂತರ, ಅವರು ತಮ್ಮ ಬಟ್ಟೆಗಳನ್ನು ತೆಗೆದು ಮತ್ತೆ ನೃತ್ಯ ಮಾಡಲು ಪ್ರಾರಂಭಿಸಿದರು. ಇದು ಸ್ಪಷ್ಟವಾಗಿ ಜಾತಿ ಆಧಾರಿತ ದಾಳಿ” ಎಂದು ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಎಫ್ಐಆರ್ ನ್ನು ಇನ್ನಷ್ಟೇ ದಾಖಲಿಸಬೇಕಿದೆ. ಎಸ್‌ಹೆಚ್ಒ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣದ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ದೂರು ಸ್ವೀಕರಿಸಲಾಗಿದ್ದು ತನಿಖೆಗೆ ಆದೇಶಿಸಿದ್ದೇವೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳು ಕಳೆದ ಮೇಲೂ ಮೀಸಲಾತಿ ಯಾಕೆ ಬೇಕು? ಜಾತಿ ಆಧಾರಿತ ತಾರತಮ್ಯ, ಶೋಷಣೆ ಈಗ ಎಲ್ಲಿ ನಡೆಯುತ್ತಿವೆ ಎಂದು ಕೇಳುವವರಿಗೆ ಈ ಪ್ರಕರಣ ಕಣ್ಣು ತೆರೆಸುವಂತಿದ್ದು ಭಾರತದಲ್ಲಿ ಇನ್ನೂ ಅಂತರ್ಗತವಾಗಿರುವ ಜಾತಿ ಪೆಡಂಭೂತ ಮತ್ತೊಮ್ಮೆ ಬಯಲಿಗೆ ಬಂದಿದೆ. ಅದು ಒಲಿಂಪಿಕ್ ಪದಕ ವಿಜೇತರನ್ನೂ ಕಾಡುವುತ್ತಿರುವುದು ನವಭಾರತದ ದುರಂತ.