ಜನವರಿ ಮೂರರಿಂದ ಭಾರತದಲ್ಲಿ 15-18 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು ಮಕ್ಕಳಿಗೆ ನೀಡಲು ಸರ್ಕಾರ ಶಿಫಾರಸು ಮಾಡಿದೆ. ಸಾಮಾನ್ಯವಾಗಿ ವ್ಯಾಕ್ಸಿನೇಷನ್ ಆದ ನಂತರ ತಲೆ ಸುತ್ತು, ಮೈ ಕೈ ನೋವು, ಜ್ವರ, ಶೀತ ಮುಂತಾದ ಅಡ್ಡಪರಿಣಾಮಗಳು ಕಂಡು ಬರುತ್ತವೆ. ಇಂಹ ಸಂದರ್ಭಗಳಲ್ಲಿ ವಯಸ್ಕರಿಗೆ ಪ್ಯಾರಸಿಟಮಾಲ್ ನೀಡಲಾಗುತ್ತಿತ್ತು. ಆದರೆ ಮಕ್ಕಳ ವಿಷಯದಲ್ಲಿ ಪ್ರಿಸ್ಕ್ರಿಪ್ಷನ್ ಭಿನ್ನವಾಗಿದೆ ಮತ್ತು ವ್ಯಾಕ್ಸಿನ್ ತಯಾರಕ ಕಂಪೆನಿಯಾದ ಭಾರತ್‌ಟೆಕ್ ಪ್ಯಾರಾಸಿಟಮಾಲ್ ಅಥವಾ ಯಾವುದೇ ನೋವು ನಿವಾರಕ ಔಷಧ ಮಕ್ಕಳಿಗೆ ನೀಡಬಾರದು ಎಂದಿದೆ.
ಲಸಿಕೆ ತಯಾರಕರು ಹೇಳಿರುವುದೇನು?
ಚುಚ್ಚುಮದ್ದಿನ ನಂತರ ಕೆಲವು ರೋಗನಿರೋಧಕ ಕೇಂದ್ರಗಳು ಪ್ಯಾರಸಿಟಮಾಲ್ 500 ಮಿಗ್ರಾಂ ಮಾತ್ರೆಗಳನ್ನು ಶಿಫಾರಸು ಮಾಡುತ್ತಿವೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಭಾರತ್ ಬಯೋಟೆಕ್ “ಕೋವಾಕ್ಸಿನ್ ಲಸಿಕೆ ಹಾಕಿದ ನಂತರ ಯಾವುದೇ ಪ್ಯಾರೆಸಿಟಮಾಲ್ ಅಥವಾ ನೋವು ನಿವಾರಕಗಳನ್ನು ಶಿಫಾರಸು ಮಾಡುವುದಿಲ್ಲ” ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಕೆಲವು ಕೋವಿಡ್-19 ಲಸಿಕೆಗಳಿಗೆ ಪ್ಯಾರಸಿಟಮಾಲ್ ಅನ್ನು ಶಿಫಾರಸು ಮಾಡಲಾಗಿದೆ, ಆದರೆ ಕೋವಾಕ್ಸಿನ್‌ಗೆ ಶಿಫಾರಸು ಮಾಡಲಾಗಿಲ್ಲ ಎಂದು ಕಂಪನಿಯು ಪ್ರತಿಪಾದಿಸಿದೆ. ವ್ಯಾಕ್ಸಿನೇಷನ್ ನಂತರ ಅನುಭವಿಸಿದ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಸಾಮಾನ್ಯವಾಗಿ 2-3 ದಿನಗಳಲ್ಲಿ ಅದಾಗಿಯೇ ಹೋಗುತ್ತವೆ. ಲಸಿಕೆ ತನ್ನ ಕೆಲಸವನ್ನು ಮಾಡುತ್ತಿದೆ ಎಂಬವುದಕ್ಕೆ ಅಡ್ಡ ಪರಿಣಾಮಗಳು ಸಾಕ್ಷಿಯಾಗಿವೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳದಿರುವುದು COVID- ವಿರುದ್ಧ ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದೂ ಅದು ಹೇಳಿದೆ.
ಪರಿಹಾರೋಪಾಯಗಳು
ವ್ಯಾಕ್ಸಿನ್ ಪಡೆದ ನಂತರ ಸೌಮ್ಯವಾದ ಜ್ವರ, ತಲೆನೋವು, ಇಂಜೆಕ್ಷನ್ ಚುಚ್ಚಿದಲ್ಲಿ ನೋವು ಮುಂತಾದ ರೋಗಲಕ್ಷಣಗಳನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಕೆಲವು ಮಕ್ಕಳು ಮಾತ್ರ ಈ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ. ಆದರೆ ಆ ಮಕ್ಕಳಿಗೆ ಲಸಿಕೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಇದರ ಅರ್ಥವಲ್ಲ. ಲಸಿಕೆ ಪಡೆದ ನಂತರ ಮಗುವು ಒಂದು ವೇಳೆ ರೋಗಲಕ್ಷಣವನ್ನು ತೋರಿದರೆ, ಪ್ಯಾರಸಿಟಮಾಲ್ ಹೊರತುಪಡಿಸಿ ಇತರ ಪರಿಹಾರಗಳತ್ತ ಗಮನಹರಿಸಬೇಕು.
ದ್ವಾರಕಾದ ಎಚ್‌ಸಿಎಂಸಿಟಿ ಮಣಿಪಾಲ್ ಆಸ್ಪತ್ರೆಯಲ್ಲಿನ ಶಿಶುವೈದ್ಯರಾದ ಡಾ. ನೀತಾ ಕೇಜ್ರಿವಾಲ್ ಅವರು ನೋವು ಮತ್ತು ಜ್ವರವನ್ನು ಕಡಿಮೆ ಮಾಡಲು ಇಂಜೆಕ್ಷನ್ ಚುಚ್ಚಿದ ಸ್ಥಳದಲ್ಲಿ ಕೋಲ್ಡ್ ಕಂಪ್ರೆಸ್ ಅಥವಾ ಐಸ್ ಪ್ಯಾಕ್‌ಗಳನ್ನು ಇಡಲು ಸಲಹೆ ನೀಡುತ್ತಾರೆ. ವಾಕರಿಕೆ ಅಥವಾ ವಾಂತಿಗಾಗಿ, ಅವರು ಶಿಶುವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡುತ್ತಾರೆ. ಸೌಮ್ಯ ಜ್ವರದ ಸಂದರ್ಭದಲ್ಲಿ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಮಕ್ಕಳಿಗೆ ಪ್ಯಾರಸಿಟಮಾಲ್ ಅನ್ನು ನೀಡಬಹುದು. ಮಕ್ಕಳು ತೀವ್ರವಾದ ಅಡ್ಡಪರಿಣಾಮಗಳನ್ನು ಅನುಭವಿಸಿದರೆ ಮತ್ತು ಹೆಚ್ಚಿನ ಜ್ವರವನ್ನು ಹೊಂದಿದ್ದರೆ, ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ ಎನ್ನುತ್ತಾರೆ ಅವರು.
“ಕೋವಿಡ್ ಲಸಿಕೆಗಳನ್ನು ಸ್ವೀಕರಿಸುವ ಮಕ್ಕಳಿಗೆ (15-18 ವರ್ಷ ವಯಸ್ಸಿನ) ಪ್ಯಾರೆಸಿಟಮಾಲ್ ನೀಡುವುದನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ಅವರಲ್ಲಿ ಹೆಪಟೊಟಾಕ್ಸಿಸಿಟಿ (ಔಷಧದ ಒಡ್ಡುವಿಕೆಯಿಂದ ಉಂಟಾಗುವ ಯಕೃತ್ತಿನ ಹಾನಿ) ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ” ಎನ್ನುತ್ತಾರೆ ಭಾರತೀಯ ಬೆನ್ನುಮೂಳೆಯ ಗಾಯಗಳ ಕೇಂದ್ರದ ಇಂಟರ್ನಲ್ ಮೆಡಿಸಿನ್‌ನ ಹಿರಿಯ ಸಲಹೆಗಾರರಾದ ಡಾ. ಕರ್ನಲ್ ವಿಜಯ್ ದತ್ತಾ
ಪ್ಯಾರಾಸಿಟಮಾಲ್ ಹೊರತಾಗಿ ಮಕ್ಕಳು ಸರಿಯಾಗಿ ತಿನ್ನುವುದನ್ನು, ಸಾಕಷ್ಟು ಪ್ರಮಾಣದ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮತ್ತು ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ ಎಂದು ಪೋಷಕರಿಗೆ ವೈದ್ಯರು ಸಲಹೆ ನೀಡುತ್ತಾರೆ.