ಉಚಿತವಾಗಿ ನೀಡಬೇಕಾದ ಲಸಿಕೆಯನ್ನು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸಾಮಾಜಿಕ, RTI ಕಾರ್ಯಕರ್ತ ಹೆಚ್ ಎಂ ವೆಂಕಟೇಶ್ ದೂರು ನೀಡಿದ್ದಾರೆ.
ಲಸಿಕೆ ಪಡೆಯುವ ಬಗ್ಗೆ ವಿಚಾರಿಸುವ ಸಲುವಾಗಿ ವೆಂಕಟೇಶ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆ ಮಾಡಿದಾಗ ಶಾಸಕ ರವಿ ಸುಬ್ರಹ್ಮಣ್ಯ ಅವರ ಹೆಸರು ಪ್ರಸ್ತಾಪವಾಗಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ಅನುಗ್ರಹ ವಿಠ್ಠಲ (ಎ.ವಿ) ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿರುವ ವೆಂಕಟೇಶ್, ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿದ ಆಡಿಯೊ ತುಣುಕನ್ನೂ ದೂರಿನ ಜೊತೆ ಒದಗಿಸಿದ್ದು, ಈ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಫೋನ್ ಮಾತುಕತೆಯಲ್ಲಿ ರವಿ ಸುಬ್ರಹ್ಮಣ್ಯ ಅವರ ಕಡೆಯಿಂದಲೇ ಲಸಿಕೆ ಸರಬರಾಜು ಆಗುವುದಾಗಿಯೂ, ಲಸಿಕೆ ಮಾರಾಟವಾದ ಹಣವೆಲ್ಲವೂ ಶಾಸಕರ ಕಛೇರಿಗೆ ಹೋಗುವುದಾಗಿಯೂ ಪ್ರಸ್ತಾಪವಾಗಿದೆ.
‘ನನಗೆ ಮತ್ತು ಮಗನಿಗೆ ಲಸಿಕೆ ಬೇಕಿತ್ತು’ ಎಂದು ವೆಂಕಟೇಶ್, ಎ.ವಿ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದ್ದಾರೆ. ‘ಲಸಿಕೆಗೆ ನೋಂದಣಿ ಮಾಡಿಕೊಳ್ಳಿ. ಕನ್ಫರ್ಮೇಶನ್ ಮೆಸೇಜ್ ಬಂದರೆ ಬನ್ನಿ. ಶಾಸಕ ರವಿ ಸುಬ್ರಹ್ಮಣ್ಯ ಕಚೇರಿ ಅಥವಾ ವಾಸವಿ ಆಸ್ಪತ್ರೆಯಿಂದ ಅನುಮತಿ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬನ್ನಿ. ಲಸಿಕೆಗೆ ₹ 900 ಶುಲ್ಕವಿದೆ. ಆ ದುಡ್ಡು ನಮಗೆ ಬರುವುದಿಲ್ಲ. ಅದು ರವಿ ಸುಬ್ರಹ್ಮಣ್ಯ ಕಚೇರಿಗೆ ಹೋಗುತ್ತದೆ. ನಮಗೆ ಇನ್ನು ಲಸಿಕೆ ಬಂದಿಲ್ಲ. ಅವರ ಕಡೆಯವರೇ ಆಸ್ಪತ್ರೆಗೆ ಬಂದು ಲಸಿಕೆ ಹಾಕಿ ಹೋಗುತ್ತಿದ್ದಾರೆ. ಅವರೇ ಮಾರ್ಕೆಟಿಂಗ್ ಕೂಡಾ ಮಾಡುತ್ತಿದ್ದಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಕೂಡಾ ಹಣ ಕೊಟ್ಟು ಲಸಿಕೆ ಹಾಕಿಸಿಕೊಂಡಿದ್ದೇವೆ’ ಎಂದು ಆಸ್ಪತ್ರೆ ಸಿಬ್ಬಂದಿ ಉತ್ತರಿಸುತ್ತಾರೆ.

‘ಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ನಿಮಗೆ ಹೇಗೆ ಲಸಿಕೆ ಸಿಕ್ಕಿತು. ಬಿಬಿಎಂಪಿಯವರು ಉಚಿತವಾಗಿ ಲಸಿಕೆ ಕೊಡುತ್ತಿದ್ದಾರಲ್ಲ. ಜೊತೆಗೆ, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ಏಕೆ ಪಡೆಯುತ್ತಿದ್ದೀರಾ. ನಾವು ಬಡವರು. ನಿಗದಿತ ದರ ಪಡೆಯಿರಿ, ಲಸಿಕೆ ಉಚಿತವಾಗಿ ಕೊಡುವುದಾಗಿ ಹೇಳಿರುವ ಮತ ಪಡೆದು ಮಾರಾಟ ಮಾಡಿದರೆ ಹೇಗೆ’ ಎಂದು ವೆಂಕಟೇಶ್ ಪ್ರಶ್ನಿಸುತ್ತಾರೆ. ಅದಕ್ಕೆ ಸಿಬ್ಬಂದಿ, ‘ಆಗುವುದಿಲ್ಲ ಸರ್. ಬಿಬಿಎಂಪಿಯವರಿಂದಲೇ ಇಲ್ಲಿ ಲಸಿಕೆ ಹಾಕಲಾಗುತ್ತಿದೆ. ನಾವು ರವಿ ಸುಬ್ರಮಣ್ಯ ಅವರಿಗೆ 700 ರುಪಾಯಿ ತೆತ್ತು ಖರೀದಿಸುತ್ತಿದ್ದೇವೆ. ನಮ್ಮ ಸಿಬ್ಬಂದಿಗಳೇ ಹಣ ತೆತ್ತು ಲಸಿಕೆ ಹಾಕಿಸಿದ್ದಾರೆ. ನಿಮಗೆ ಕಡಿಮೆ ದರಕ್ಕೆ ಹಾಕಿಸಲು ಬರುವುದಿಲ್ಲ, ಉಚಿತವಾಗಿ ಬೇಕೆಂದರೆ ಬೇರೆ ಕಡೆಯಿಂದ ಲಸಿಕೆ ಹಾಕಿಸಿಯೆಂದು ಸಿಬ್ಬಂದಿ ಕರೆ ಕಡಿತಗೊಳಿಸಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕರ ಹೆಸರು ಕೇಳಿ ಬಂದಿರುವ ಬೆನ್ನಲ್ಲೇ ವ್ಯಾಕ್ಸಿನೇಷನ್ ದಂಧೆಯಲ್ಲೂ ಬಿಜೆಪಿ ಶಾಸಕರ ಹೆಸರು ಪ್ರಸ್ತಾಪವಾಗಿರುವುದು ಸಾಕಷ್ಟು ಚರ್ಚೆಗೆ ಆಸ್ಪದವಾಗಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರವಿ ಸುಬ್ರಹ್ಮಣ್ಯ, ಆಡಿಯೋದಲ್ಲಿರುವುದು ಆಸ್ಪತ್ರೆಯ ಸಿಬ್ಬಂದಿಯೇ ಅಲ್ಲವೆಂದು ಸಮಜಾಯಿಷಿ ನೀಡಿದ್ದಾರೆ. ಹಾಗೂ ಲಸಿಕೆ ಹಂಚಿಕೆಯಲ್ಲಿ ನಾನು ಯಾವ ರೀತಿಯ ಹಣವನ್ನೂ ಪಡೆದಿಲ್ಲ. ಈ ಸಂಬಂಧ ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ ಬಳಿಕ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ – ಕಾಂಗ್ರೆಸ್
ಬೆಡ್ ಬ್ಲಾಕಿಂಗ್ ದಂಧೆಯ ನಂತರ ಬಿಜೆಪಿಯಿಂದ ಈಗ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಉಚಿತವಾಗಿ ನೀಡಬೇಕಿದ್ದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ. ಇದಕ್ಕೆ ಬೆಂಬಲವಾಗಿ ಆರೋಗ್ಯ ಸಚಿವರೂ ಸೇರಿ ಇಡೀ ಸರ್ಕಾರವೇ ಈ ಹಗರಣದಲ್ಲಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
4 ಕೋಟಿ ಲಸಿಕೆಗಳು ನಾಪತ್ತೆಯಾದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರುಗಳು ಸರ್ಕಾರದ ಉಚಿತ ಹಂಚಿಕೆಯ ಬಡವರ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಿಕೊಂಡು ಕಮಿಷನ್ ಪಡೆಯುತ್ತಿರುವ ‘ಮಹಾ ಹಗರಣ’ ಬೆಳಕಿಗೆ ಬಂದಿದೆ. ಅವರಿಬ್ಬರನ್ನೂ ಚುನಾಯಿತ ಸ್ಥಾನಗಳಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಲಸಿಕೆ ಹಗರಣದಲ್ಲಿ ತೊಡಗಿಕೊಂಡಿರುವ ತೇಜಸ್ವಿ ಸೂರ್ಯ ಹಾಗೂ ರವಿ ಸುಬ್ರಹ್ಮಣ್ಯ ಅವರುಗಳನ್ನು ಕೂಡಲೇ ಬಂಧಿಸಿ, ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇವೆ. ಜನರ ಸಾವಿನ ನಡುವೆ ಬಿಜೆಪಿ ಕೋವಿಡ್‌ನಲ್ಲಿ ನಿರಂತರವಾಗಿ ಹಗರಣ ನಡೆಸಿಕೊಂಡು ಬರುತ್ತಿದೆ, ಇದು ಕೊನೆಯಾಗಬೇಕು, ಬಡವರ ಲಸಿಕೆ ಕಿತ್ತುಕೊಂಡವರಿಗೆ ಶಿಕ್ಷೆ ಅತ್ಯಗತ್ಯ ಎಂದು ಕಾಂಗ್ರೆಸ್ ಹೇಳಿದೆ.
ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಹೆಸರು ಬಂದಿರುವ ಬೆನ್ನಲ್ಲೇ ವ್ಯಾಕ್ಸಿನ್ ಬ್ಲಾಕಿಂಗ್ ಹಾಗೂ ಅಕ್ರಮ ಮಾರಾಟದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಹೆಸರು ಕೇಳಿ ಬಂದಿರುವುದು ಸರ್ಕಾರದ ಕರೋನಾ ಹಗರಣದ ಕುರಿತಂತೆ ಕಾಂಗ್ರೆಸ್ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.