ಸದ್ಯಕ್ಕೆ ವಿಧಾನಸಭಾ ಚುನಾವಣೆ ಕಾರಣಕ್ಕೆ ಇಡೀ ದೇಶದ ಗಮನಸೆಳೆಯುತ್ತಿರುವ ಉತ್ತರಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ರಾಜಕೀಯ ಬೆಳವಣಿಗೆ ಗರಿಗೆದರಿವೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಮಹತ್ವದ ಘೋಷಣೆ ಮಾಡಿದ್ದು, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿಯೇ ಈ ಬಾರಿ, ವಿಧಾನಸಭೆ ಚುನಾವಣೆಗೆ ಹೋಗುವುದಾಗಿ ಹೇಳಿದೆ.
ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಮತ್ತು ಸಂಪೂರ್ಣ ಚುನಾವಣಾ ನಾಯಕತ್ವ ಪ್ರಿಯಾಂಕಾ ಗಾಂಧಿಯವರದೇ ಆಗಿರಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಹಾಗೇ, ಉತ್ತರ ಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿಯೇ ಪ್ರಿಯಾಂಕಾ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಹಾಗೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ, ತಜ್ಞರ ಶಿಫಾರಸಿನ ಮೇಲೆ ತಯಾರಾಲಾಗುವುದಿಲ್ಲ. ಬದಲಾಗಿ ಅದು ಸ್ಥಳೀಯ ಜನರ ಸಾಮಾನ್ಯ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಈ ಪ್ರಣಾಳಿಕೆ ತಮ್ಮದೇ ಎಂದು ಜನಸಾಮಾನ್ಯರು ಹೇಳಬಹುದು ಎಂದೂ ಖುರ್ಷೀದ್ ಹೇಳಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಪ್ರಬಲ ರಾಜಕೀಯ ಮೈತ್ರಿ ರಚನೆಯ ನಿಟ್ಟಿನಲ್ಲಿ ನಾಯಕತ್ವ ವಹಿಸಿರುವ ಕಾಂಗ್ರೆಸ್, ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಪರಿಗಣಿಸಲಾಗುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ವಿಷಯದಲ್ಲಿ ಹೀಗೆ ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿರುವುದು ಅಚ್ಚರಿ ತರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ (ಎಸ್ಪಿ)ದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಈ ಬಾರಿ ಯಾವುದೇ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದಿರುವುದು ಉತ್ತರಪ್ರದೇಶದ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಒಂದು ಕಡೆ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ, ಐದು ವರ್ಷಗಳ ತನ್ನ ಕಟ್ಟರ್ ಉಗ್ರ ಹಿಂದುತ್ವವಾದಿ ಸರ್ಕಾರ ಹಿಂದೂಗಳ ಪರ ಮತ್ತು ಮುಸ್ಲಿಮರ ವಿರುದ್ಧ ಜಾರಿಗೆ ತಂದ ಗೋಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಮುಂತಾದ ನೀತಿ ಮತ್ತು ಸಾಧನೆಗಳ ಬಲದ ಮೇಲೆ ಮತ್ತೊಂದು ಸುತ್ತಿಗೆ ಹಿಂದುತ್ವವಾದಿ ಅಜೆಂಡಾದ ಮೇಲೆ ಅಧಿಕಾರ ಹಿಡಿಯುವ ಹವಣಿಕೆಯಲ್ಲಿದೆ.
ಮತ್ತೊಂದು ಕಡೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ವಿರುದ್ಧ ಮಹಾ ಒಗ್ಗಟ್ಟಿನ ಮಂತ್ರ ಪಠಿಸುವ ಪಕ್ಷಗಳು, ಮುಂದಿನ ಲೋಕಸಭಾ ಚುನಾವಣೆಯ ಲಿಟ್ಮಸ್ ಟೆಸ್ಟ್ ಎನ್ನಲಾಗುತ್ತಿರುವ ಉತ್ತರಪ್ರದೇಶದ ವಿಧಾನಸಭೆಗೆ ಮಾತ್ರ ಒಬ್ಬೊಬ್ಬರು ಒಂದೊಂದು ದಿಕ್ಕು ಎಂಬ ರೀತಿಯಲ್ಲಿ ಕಳಚಿಕೊಂಡು ಏಕಾಂಗಿಯಾಗಿ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಣಕ್ಕಿಳಿಯುತ್ತಿರುವುದು ಗೊಂದಲಕಾರಿಯಾಗಿದೆ.
ಕಾಂಗ್ರೆಸ್ ಪ್ರಿಯಾಂಕಾ ನೇತೃತ್ವದಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ ವೇಳೆಯೇ, ಅದರ ಮಹಾರಾಷ್ಟ್ರ ಅಧಿಕಾರ ಪಾಲುದಾರ ಮತ್ತು ಬಿಜೆಪಿ ವಿರೋಧಿ ರಾಜಕೀಯ ಮೈತ್ರಿಯ ಪ್ರಮುಖ ಪಾತ್ರದಾರ ಶಿವಸೇನೆ ಕೂಡ ಉತ್ತರಪ್ರದೇಶ ವಿಧಾನಸಭೆಗೆ ಯಾವುದೇ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದೆ.
ಹಾಗೇ ಅಮ್ ಅದ್ಮಿ ಪಾರ್ಟಿ ಕೂಡ ಇದೇ ಮಾತನ್ನು ಆಡಿದ್ದು, ತಾನೂ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ನೇರವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿರುವುದಾಗಿ ಎಎಪಿ ಘೋಷಿಸಿದೆ.
ಪ್ರಮುಖವಾಗಿ ಬಿಜೆಪಿಯ ಮತಬ್ಯಾಂಕಿನ ಪಾಲುದಾರರು ಎಂದೇ ಸಾಮಾನ್ಯವಾಗಿ ವ್ಯಾಖ್ಯಾನಿಸುವ ಶಿವಸೇನೆ ಮತ್ತು ಎಎಪಿ ಹೀಗೆ ಮೈತ್ರಿರಹಿತವಾಗಿ ಕಣಕ್ಕಿಳಿಯುತ್ತಿರುವುದು ಸಹಜವಾಗೇ ಬಿಜೆಪಿಗೆ ತಲೆನೋವಿನ ಸಂಗತಿ. ಹಿಂದುತ್ವ ಮತ್ತು ಎಲೈಟ್ ಮಧ್ಯಮವರ್ಗದ ಬಿಜೆಪಿ ಮತಗಳಿಗೆ ಈ ಎರಡೂ ಪಕ್ಷಗಳು ಖಂಡಿತವಾಗಿಯೂ ಕನ್ನ ಹಾಕಲಿವೆ. ಅವು ಏಕಾಂಗಿಯಾಗಿ ಕಣಕ್ಕಿಳಿಯುವ ಬದಲು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಅದರಲ್ಲೂ ಕಾಂಗ್ರೆಸ್, ಎಸ್ಪಿ ಜೊತೆ ಮೈತ್ರಿಯಾಗಿದ್ದರೆ ಹಿಂದೂಗಳ ವಿರುದ್ಧ ಒಂದಾಗಿದ್ದಾರೆ ಎಂಬಂತೆ ಬಿಂಬಿಸಿ ಹಿಂದುತ್ವದ ಲಾಭ ಪಡೆಯುವುದು ಬಿಜೆಪಿಗೆ ಸುಲಭವಿತ್ತು. ಹಾಗೇ ಕಾಂಗ್ರೆಸ್ ಕೂಡ ಎಸ್ಪಿ ಅಥವಾ ಬಿಎಸ್ಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದರೆ ಆಗಲೂ ಬಿಜೆಪಿ ಅದೇ ಮಂತ್ರ ಪಠಿಸಿ ಮತದಾರರನ್ನು ಮರುಳು ಮಾಡುವುದು ಸಾಧ್ಯವಿತ್ತು.
ಆದರೆ ಈ ಬಾರಿಯ ಸದ್ಯದ ಚಿತ್ರಣ ನೋಡಿದರೆ, ಪ್ರತಿಪಕ್ಷಗಳು ಏಕಾಂಗಿಯಾಗಿಯೇ ಕಣಕ್ಕಿಳಿಯುವ ಮೂಲಕ ಬಿಜೆಪಿಗೆ ಅದರ ಸಾಂಪ್ರದಾಯಿಕ ರಕ್ಷಣಾತ್ಮಕ ಆಟಗಳಿಗೆ ಅವಕಾಶ ನೀಡದೆ ಕಟ್ಟಿಹಾಕುವ ಲೆಕ್ಕಾಚಾರಗಳು ನಡೆಯುತ್ತಿರುವಂತಿವೆ.
ಆದರೆ ಬಿಜೆಪಿ ಕೂಡ, ತಂತ್ರಕ್ಕೆ ಪ್ರತಿ ತಂತ್ರ ಹೆಣೆಯುತ್ತಿದ್ದು, ತನ್ನೊಂದಿಗೆ ವಿಶ್ವಾಸದಲ್ಲಿರುವ ಬಿ ಎಸ್ ಪಿ ಮತ್ತು ಎಐಎಂಐಎಂ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ. ಆ ಪಕ್ಷಗಳು ಮುಸ್ಲಿಂ ಮತ್ತು ದಲಿತ ಬಾಹುಳ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದೆ. ಆ ಮೂಲಕ ಬಿಜೆಪಿ ವಿರೋಧಿ ಸೆಕ್ಯುಲರ್ ಮತ್ತು ಅಲ್ಪಸಂಖ್ಯಾತರ ಮತಗಳ ವಿಭಜನೆಯ ಮೂಲಕ ಎಸ್ಪಿ, ಕಾಂಗ್ರೆಸ್ ಗಳಿಗೆ ಪೆಟ್ಟು ನೀಡುವುದು ಕೇಸರಿಪಡೆಯ ತಂತ್ರ ಎನ್ನಲಾಗುತ್ತಿದೆ.
Watch Live Video : 10 ದಿನಗಳವಿಧಾನಮಂಡಲಅಧಿವೇಶನ : ಅಧಿವೇಶನದಮೊದಲನೇದಿನದಕಲಾಪಲೈವ್ ವೀಕ್ಷಿಸಲುಇಲ್ಲಿಕ್ಲಿಕ್ ಮಾಡಿ
ಹಾಗಾಗಿ ಸದ್ಯ ಉತ್ತರಪ್ರದೇಶದ ವಿಧಾನಸಭಾ ಕಣ ಭಾರೀ ಮೇಲಾಟಗಳು, ತಂತ್ರಗಾರಿಕೆಯ ಮೂಲಕ ರಂಗೇರತೊಡಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವರ್ಸಸ್ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗತೊಡಗಿದೆ.