ಊರಿಗೌಡ ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಇಟ್ಟು ಒಕ್ಕಲಿಗರನ್ನು ಸೆಳೆಯಲು ಹೊರಟಿದ್ದ ಬಿಜೆಪಿಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಹಳೆ ಮೈಸೂರು ಭಾಗದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗರ ಮತಬ್ಯಾಂಕ್ ಅನ್ನು ದೋಚಿ ಆ ಮೂಲಕ ಲಿಂಗಾಯತ ಹಿಡಿತದಿಂದ ಪಕ್ಷವನ್ನು ಬಿಡಿಸಿಕೊಳ್ಳುವ ಆರ್‌ಎಸ್‌ಎಸ್ ಪ್ಲ್ಯಾನ್ ಗೂ ಸದ್ಯ ಬ್ರೇಕ್ ಬೀಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಟಿಪ್ಪು ಸುಲ್ತಾನರನ್ನು ಕೊಂದ ಒಕ್ಕಲಿಗ ವೀರರು ಎಂದು ಬಿಜೆಪಿ ಹಾಗೂ ಸಂಘಪರಿವಾರ ಉರಿ-ನಂಜೇಗೌಡ ಪಾತ್ರಗಳಿಗೆ ಗಾಳಿ ತುಂಬಿಸಿ ತೇಲಿ ಬಿಟ್ಟಿದ್ದ ಬಿಜೆಪಿಗೆ ಒಕ್ಕಲಿಗರು ಸೊಪ್ಪು ಹಾಕದೆ ಬಲವಾದ ಏಟು ಕೊಟ್ಟಿದ್ದಾರೆ. ಮೊದಲಿಗೆ, ಪ್ರಧಾನಿ ಮೋದಿ ಆಗಮನಕ್ಕೆ ಹಾಕಿದ್ದ ಉರಿಗೌಡ-ನಂಜೇಗೌಡ ದ್ವಾರವನ್ನು ತೆರವುಗೊಳಿಸುವಂತೆ ಮಾಡಿರುವ ಒಕ್ಕಲಿಗರು, ಸದ್ಯ ಚಿತ್ರ ನಿರ್ಮಾಣಕ್ಕೂ ಅಡ್ಡಿ ಪಡಿಸಿದ್ದಾರೆ.
ಬಿಜೆಪಿ ಪ್ಲ್ಯಾನ್ ನಂತೆ ಸಚಿವ ಮುನಿರತ್ನ ಅವರು ನಂಜೇಗೌಡ-ಉರಿಗೌಡ ಚಿತ್ರವನ್ನು ನಿರ್ಮಿಸಬೇಕಿತ್ತು. ಅದಕ್ಕೆ ಅಶ್ವಥ ನಾರಾಯಣ್ ಚಿತ್ರಕಥೆಯೂ ಇರಲಿದೆ ಎನ್ನಲಾಗಿತ್ತು. ಚಿತ್ರದ ಟೈಟಲ್ ಕೂಡಾ ರಿಜಿಸ್ಟರ್ ಮಾಡಿಸಲಾಗಿತ್ತು. ಆದರೆ, ಸದ್ಯ, ನಿರ್ಮಲಾನಂದನಾಥ ಸ್ವಾಮಿ ಅದಕ್ಕೆಲ್ಲಾ ಬ್ರೇಕ್ ಹಾಕಿದ್ದಾರೆ.

ಚಿತ್ರದ ಟೈಟಲ್ ಘೋಷಣೆಯಾಗುತ್ತಿದ್ದಂತೆ ಒಕ್ಕಲಿಗ ಸಮಾಜ ಹಾಗೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೆಚ್ ಡಿ ಕುಮಾರಸ್ವಾಮಿ ಅಂತೂ ಇದನ್ನು ಒಕ್ಕಲಿಗರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಎಂದಿದ್ದರು.
ಒಕ್ಕಲಿಗರ ಆಕ್ರೋಶ ತೀವ್ರವ ಅಗುತ್ತಿದ್ದಂತೆ ಅಶ್ವಥನಾರಾಯಣ ಚಿತ್ರ ನಿರ್ಮಾಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಹೇಳಿ ಜಾರಿಕೊಂಡಿದ್ದರು.
ಈ ನಡುವೆ, ನಿರ್ಮಲಾನಂದನಾಥ ಸ್ವಾಮಿಗಳು ಸಚಿವ ಮುನಿರತ್ನರನ್ನು ಕರೆಸಿ ಸಿನೆಮಾ ನಿರ್ಮಾಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ಸದ್ಯ, ಸಚಿವ ಮುನಿರತ್ನ ಸದ್ಯ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಶ್ರೀಗಳೊಂದಿಗೆ ಮಾತನಾಡಿ ಬಂದ ಸಚಿವ ಮುನಿರತ್ನ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಆ ಮೂಲಕ ಉರಿಗೌಡ-ನಂಜೇಗೌಡ ವಿಚಾರದಲ್ಲಿ ಬಿಜೆಪಿಗೆ ಮತ್ತೊಮ್ಮೆ ಮುಜುಗರ ಉಂಟಾಗಿದೆ. ಟಿಪ್ಪು ಸುಲ್ತಾನರಿಂದ ಲಾಭ ಪಡೆದಿರುವ ಒಕ್ಕಲಿಗರು ಅಷ್ಟು ಸುಲಭಕ್ಕೆ ಕೃತಘ್ನರಾಗಲು ಮುಂದಾಗದಿರುವುದು ಬಿಜೆಪಿಯ ರಾಜಕಾರಣ ಲೆಕ್ಕಾಚಾರಗಳನ್ನು ಬುಡಮೇಲು ಗೊಳಿಸಿದೆ.
