ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಮತ್ತೆ ಗೆದ್ದೇ ಗೆಲ್ಲಬೇಕು ಎಂದು ಬಿಜೆಪಿ ಭಾರೀ ಪ್ರಯತ್ನ ಮಾಡುತ್ತಿದೆ. ಆದರೆ ಚುನಾವಣೆ ಹತ್ತಿರ ಆಗುತ್ತಿದ್ದಂತೆ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಗೆ ಭಾರೀ ಭ್ರಮನಿರಸನ ಉಂಟು ಮಾಡುತ್ತಿವೆ. ಸಮಾಜವಾದಿ ಪಕ್ಷದ ಪರ ಮೂಡುತ್ತಿರುವ ಒಲವು ಬಿಜೆಪಿಯನ್ನು ಚಿಂತೆಗೀಡು ಮಾಡುತ್ತಿದೆ. ಇಡೀ ದೇಶದಲ್ಲಿ ಬೇರೆ ಬೇರೆ ಪಕ್ಷದ ಸಚಿವರು, ಶಾಸಕರು, ಸಂಸದರು ಇನ್ನುಳಿದ ನಾಯಕರು ಬಿಜೆಪಿ ಕಡೆ ಬರುತ್ತಿದ್ದರೆ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದಲೇ ಬೇರೆಡೆಗೆ ಜಿಗಿಯುತ್ತಿದ್ದಾರೆ. ಅದರಲ್ಲೂ ಬಿಜೆಪಿ ಗೆಲುವಿನ ದಡ ಮುಟ್ಟಲು ಬಹುವಾಗಿ ನಂಬಿಕೊಂಡಿರುವ ಹಿಂದುಳಿದ ವರ್ಗದ ನಾಯಕರೇ ಪಕ್ಷ ಬಿಡುತ್ತಿರುವುದು ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಪರಿಣಾಮವಾಗಿ ಈಗ ಬಿಜೆಪಿ ‘ಮೈತ್ರಿ ನಿಲುವನ್ನು’ ಸಡಿಲಿಸಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಯ ನೆರವಿನಿಂದ ಮೇಲೆ ಬಂದು ಅಧಿಕಾರ ಉಂಡ ಬಿಜೆಪಿ ಕಡೆಗೆ ಶಿವಸೇನೆಗೆ ಕಡಿಮೆ ಸೀಟು ಕೊಡುವುದಾಗಿ ಹೇಳಿತು. ಇಂಥದೇ ಉದಾಹರಣೆಯನ್ನು ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ವಿಚಾರವಾಗಿ ಕೂಡ ಕಾಣಬಹುದು. ಇದೇ ರೀತಿ ಈಗ ಉತ್ತರ ಪ್ರದೇಶದಲ್ಲಿ ಅಪನಾದಳ ಮತ್ತು ನಿಶಾದ್ ಪಾರ್ಟಿಗಳ ವಿಷಯದಲ್ಲೂ ನಡೆದುಕೊಳ್ಳಲು ಮುಂದಾಗಿತ್ತು. ಎರಡೂ ಪಕ್ಷಗಳಿಗೆ ಕಳೆದ ಬಾರಿಗಿಂತ ಕಡಿಮೆ ಸೀಟು ಕೊಡುವುದಾಗಿ ಹೇಳಿತ್ತು. ಬಿಜೆಪಿಯ ಪ್ರಸ್ತಾಪಕ್ಕೆ ಎರಡೂ ಪಕ್ಷಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಮೈತ್ರಿ ಮುರಿದು ಬೀಳುವ ಸಂಭವವೂ ಉಂಟಾಗಿತ್ತು. ಆದರೆ ಕಡೆಗೀಗ ಬಿಜೆಪಿ-ಅಪನಾದಳ-ನಿಶಾದ್ ಪಾರ್ಟಿಗಳ ಮೈತ್ರಿ ಮುಂದುವರೆದಿದೆ.
ಬಿಜೆಪಿ-ಅಪನಾದಳ-ನಿಶಾದ್ ಪಾರ್ಟಿಗಳ ನಡುವೆ ಮೈತ್ರಿ ಮುಂದುವರೆಯಲು ಪ್ರಮುಖ ಕಾರಣ ಬಿಜೆಪಿ ಮಂಡಿಯೂರಿದ್ದು ಎಂಬುದು ಈಗ ಗಮನಾರ್ಹವಾದ ಸಂಗತಿ. ಬಿಜೆಪಿ ಸಣ್ಣ-ಪುಟ್ಟ ಪಕ್ಷಗಳಾದ ಅಪನಾದಳ ಮತ್ತು ನಿಶಾದ್ ಪಾರ್ಟಿಗಳ ಮುಂದೆ ಸೋಲೊಪ್ಪಿಕೊಳ್ಳಲು ಹಿಂದುಳಿದ ವರ್ಗಗಳ ಮತಗಳು ಕಾರಣ. ಇತ್ತೀಚೆಗೆ ಬಿಜೆಪಿ ಬಿಟ್ಟವರಲ್ಲಿ ಬಹುತೇಕ ನಾಯಕರು ಹಿಂದುಳಿದ ವರ್ಗಗಳಿಗೆ ಸೇರಿದವರು. ಎಲ್ಲರೂ ಪಕ್ಷದಿಂದ ಹೊರಹೋದ ಮೇಲೆ ‘ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ’ ಎಂದೇ ಹೇಳಿದ್ದಾರೆ. ಬಿಜೆಪಿ ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಎನ್ನುತ್ತದೆ. ಕೃತಿಯಲ್ಲಿ ಅದು ಈಗಲೂ ‘ಬ್ರಾಹ್ಮಣ-ಬನಿಯಾ’ ಪಾರ್ಟಿ ಎಂದು ದೂರಿದ್ದಾರೆ.
ಒಂದು ಕಾಲದಲ್ಲಿ ಬಿಜೆಪಿ ನಾಯಕರೇ ನಮ್ಮದು ಬ್ರಾಹ್ಮಣ-ಬನಿಯಾ ಪಾರ್ಟಿ, ಮಾರವಾಡಿಗಳ ಪಾರ್ಟಿ ಎಂದು ಒಪ್ಪಿಕೊಳ್ಳುತ್ತಿದ್ದರು. ಅದೇ ಕಾರಣಕ್ಕೆ ತಾವು ಅಧಿಕಾರ ಹಿಡಿಯಲು ಇಷ್ಟು ವರ್ಷ ಬೇಕಾಯಿತು ಎಂತಲೂ ಹೇಳುತ್ತಾರೆ. ಈಗ ಭಾರೀ ಕಷ್ಟಪಟ್ಟು ‘ಬಿಜೆಪಿ ಎಲ್ಲರ ಪಕ್ಷ’ ಎಂದು ಬಿಂಬಿಸಲಾಗುತ್ತಿದೆ. ಅದರ ಪರಿಣಾಮವಾಗಿ ಅಧಿಕಾರ ಸಿಗುತ್ತಿದೆ. ಆದರೆ ಉತ್ತರ ಪ್ರದೇಶದಂತಹ ನಿರ್ಣಾಯಕವಾದ ರಾಜ್ಯದಲ್ಲಿ ಅದೂ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಬಿಜೆಪಿಗೆ ‘ಬ್ರಾಹ್ಮಣ-ಬನಿಯಾ’ ಪಾರ್ಟಿ ಎಂದು ಬಿರುದು ಬರುತ್ತಿರುವುದು ಪಕ್ಷಕ್ಕೆ ದೊಡ್ಡ ಹೊಡೆತದ ಮುನ್ಸೂಚನೆ ಆಗಿತ್ತು. ಅದೇ ಕಾರಣಕ್ಕೆ ಈಗ ಹಿಂದುಳಿದ ವರ್ಗಗಳ ಜಾತಿಗಳೆಂದೇ ಹೆಸರು ಪಡೆದಿರುವ ಅಪನಾದಳ ಮತ್ತು ನಿಶಾದ್ ಪಾರ್ಟಿಗಳ ಜೊತೆ ಬಿಜೆಪಿ ರಾಜಿಯಾಗಿದೆ.
ಬುಧವಾರ ದೆಹಲಿಯಲ್ಲಿ ಅಪ್ನಾ ದಳದ ನಾಯಕಿ ಹಾಗೂ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಮತ್ತು ನಿಶಾದ್ ಪಕ್ಷದ ನಾಯಕ ಸಂಜಯ್ ನಿಶಾದ್ ಅವರ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧಿಕೃತವಾಗಿ ಬಿಜೆಪಿ-ಅಪನಾದಳ-ನಿಶಾದ್ ಪಾರ್ಟಿಗಳ ನಡುವೆ ಮೈತ್ರಿಯನ್ನು ಘೋಷಣೆ ಮಾಡಿದ್ದಾರೆ. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಬಿಜೆಪಿ, ಅಪನಾದಳ, ನಿಶಾದ್ ಪಾರ್ಟಿಗಳು ಜೊತೆಯಾಗಿ ಎದುರಿಸಲಿವೆ ಎಂದು ಕೂಡ ಹೇಳಿದ್ದಾರೆ. ಆದರೆ ಸೀಟು ಹಂಚಿಕೆ ಕುರಿತು ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಅಪನಾದಳ ಮತ್ತು ನಿಶಾದ್ ಪಾರ್ಟಿಗಳಿಗೆ ಕಳೆದ ಬಾರಿ ಕೊಟ್ಟಿದ್ದಷ್ಟೇ ಸೀಟುಗಳನ್ನು ಬಿಟ್ಟುಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದಾದ ಬಳಿಕ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎನ್ಡಿಎ ನಾಯಕರ ಚಿತ್ರವನ್ನು ಪೋಸ್ಟ್ ಮಾಡಿ, ‘ಮೈತ್ರಿಕೂಟವು ರಾಜ್ಯದಲ್ಲಿ ಮತ್ತೆ 30ರ ಗಡಿ ದಾಟಲಿದೆ’ ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ. ಮೈತ್ರಿ ಮಾತುಕತೆಗಾಗಿ ಉಭಯ ಪಕ್ಷಗಳೊಂದಿಗಿನ ಸಭೆಯ ಕುರಿತು ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, ಎನ್ಡಿಎ ಮತ್ತೆ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಪ್ರತಿಪಾದಿಸಿದ್ದಾರೆ. ಅನುಪ್ರಿಯಾ ಪಟೇಲ್ ಮತ್ತು ಸಂಜಯ್ ನಿಶಾದ್ ಅವರು ‘ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಿಂದುಳಿದ ವರ್ಗಗಳ ಪರ ಕೆಲಸ ಮಾಡುತ್ತಿದೆ. ಒಬಿಸಿ ಆಯೋಗ ರಚಿಸಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಸೇರಿದಂತೆ ಶಿಕ್ಷಣದಲ್ಲಿ ಸಮುದಾಯ ಮೀಸಲಾತಿಯನ್ನು ನೀಡಿದೆ’ ಎಂದು ಹೇಳಿದ್ದಾರೆ.
ಬಿಜೆಪಿ ಸೇರಿದ ಅಪರ್ಣ ಯಾದವ್
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮನ ಹೆಂಡತಿ ಅಪರ್ಣಾ ಯಾದವ್ ಬಿಜೆಪಿ ಸೇರಿ ಶಾಕ್ ನೀಡಿದ್ದಾರೆ. ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವಿನ ಜಗಳ ಬಗೆಹರಿಯಿತು ಎನ್ನುವಷ್ಟರಲ್ಲಿ ಅಪರ್ಣಾ ಯಾದವ್ ಸಮಾಜವಾದಿ ಪಕ್ಷ ಬಿಟ್ಟಿರುವುದು ಆಶ್ಚರ್ಯವನ್ನುಂಟುಮಾಡಿದೆ. ಬಿಜೆಪಿ ಸೇರಿದ ಬಳಿಕ ಮಾತನಾಡಿರುವ ಅಪರ್ಣಾ ಯಾದವ್, ನಾನು ಪಕ್ಷಕ್ಜಾಗಿ ಕೆಲಸ ಮಾಡುತ್ತೇನೆ ಎಂದು ಮಾತ್ರ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ಬಿಟ್ಟುಕೊಟ್ಟಿಲ್ಲ. 2017ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಲಕ್ನೋ ಕ್ಯಾಂಟ್ನಲ್ಲಿ ರೀಟಾ ಬಹುಗುಣ ಜೋಶಿ ವಿರುದ್ಧ ಪರಾಭವಗೊಂಡಿದ್ದರು.