2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತಯಾರಿ ನಡೆಸಿದ್ದು ಯುಪಿಯಲ್ಲಿ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ವಿವಿಧ ಘೋಷಣೆಗಳನ್ನು ಮಾಡುತ್ತಿದೆ. ಮೊದಲಿಗೆ ಮಹಿಳೆಯರಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಶೇಕಡ 40% ಮೀಸಲಾತಿ ಘೋಷಿಸಿದ್ದು ಭಾರಿ ಸುದ್ದಿಯಾಗಿತ್ತು. ಈಗ ಮತ್ತೊಮ್ಮೆ ಹೊಸ ಘೋಷಣೆ ಮಾಡುವ ಮೂಲಕ ಯುಪಿ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ ʻʻನಿನ್ನೆ ನಾನು ಕೆಲವು ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದೆ. ಅವರು, ನನ್ನ ಬಳಿ ತಮ್ಮ ವಿದ್ಯಾಭ್ಯಾಸಕ್ಕೆ ಮತ್ತು ಭದ್ರತೆಗಾಗಿ ಸ್ಮಾರ್ಟ್‌ಫೋನ್‌ನ ಅಗತ್ಯವಿದೆ ಎಂದು ಹೇಳಿದರು. ಯುಪಿಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯೊಂದಿಗೆ ಚರ್ಚಿಸಿದ ಪ್ರಿಯಾಂಕ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಿದರೆ 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಉಚಿತ ಸ್ಮಾರ್ಟ್‌ಫೋನ್ ಮತ್ತು ಪದವೀಧರ ಯುವತಿಯರಿಗೆ ಎಲೆಟ್ರಾನಿಕ್ ಸ್ಕೂಟಿಯನ್ನು ನೀಡಲಾಗುವುದುʼʼ ಎಂದು ಘೋಷಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಹಿಳಾ ಕೇಂದ್ರಿತ ಯೋಜನೆಗಳನ್ನು ಘೋಷಣೆ ಮಾಡುತ್ತಿರುವುದು ರಾಷ್ಟ್ರಾದ್ಯಂತ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸ್ವತಃ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರಿಗೆ ಪ್ರಿಯಾಂಕರ ಈ ನಡೆಯು ಆಶ್ಚರ್ಯಗೊಳಿಸಿದೆ. ಏಕೆಂದರೆ ಉತ್ತರ ಪ್ರದೇಶದಲ್ಲಿ ಸಾಕ್ಷರತ ಪ್ರಮಾಣವು ಶೇಕಡ 69.72% ಇದೇ ಅದರಲ್ಲಿ ಪುರುಷರು 79.24% ರಷ್ಟಿದರೆ, ಮಹಿಳೆಯರ ಸಾಕ್ಷರತ ಪ್ರಮಾಣವು 59.26% ರಷ್ಟಿದೆ ಅಂದರೆ ಮಹಿಳೆಯರ ಸಾಕ್ಷರತ ಪ್ರಮಾಣವು ಪುರುಷರಿಗಿಂತ 20% ಕಮ್ಮಿ ಇದೇ. ವಿದ್ಯಾರ್ಥಿನಿಯರು ಹೆಚ್ಚಾಗಿ ಶಾಲಾ ಕಾಲೇಜು ಕಡೆ ಬರಲಿ ಎಂಬ ಅಂಶವನ್ನ ಗುರಿಯಲ್ಲಿಟ್ಟಕೊಂಡು ಕಾಂಗ್ರೆಸ್ ಈ ಯೋಜನೆಯನ್ನ ಘೋಷಣೆ ಮಾಡಿರಬಹದು.
ಮತ್ತೊಂದೆಡೆ ದೇಶದೆಲ್ಲಡೆ ಉತ್ತರ ಪ್ರದೇಶ ಆಗಾಗ ಸದ್ದು ಮಾಡುತ್ತಿರುತ್ತದೆ ಮಹಿಳೆಯರ ಮೇಲಿನ ಹಲ್ಲೆ, ಲೈಂಗಿಕ ಕಿರುಕುಳ, ಕೋಮು ಗಲಭೆಯಂತಹ ಪ್ರಕರಣಗಳಲ್ಲಿ ಯುಪಿ ರಾಜ್ಯವು ಹೆಚ್ಚು ಕುಖ್ಯಾತಿ ಪಡೆದಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವಲ್ಲಿ ಉ.ಪ್ರ ಸರ್ಕಾರವು ವಿಫಲವಾಗಿರುವುದನ್ನು ನಾವು ನೋಡಬಹುದು. ಅದಕ್ಕಾಗಿ ವಿರೋಧ ಪಕ್ಷವು ಯೋಗಿ ಸರ್ಕಾರಕ್ಕೆ ಇಟ್ಟಿರುವ ಹೆಸರು ʻಗೂಂಡಾ ರಾಜ್ʼ ಸರ್ಕಾರ ಎಂದೆ ದೇಶಾದ್ಯಂತ ಕುಖ್ಯಾತಿ ಪಡೆದಿದೆ.

ದೇಶದಲ್ಲಿ ಯಾವುದಾದರು ಒಂದು ರಾಜ್ಯ ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲವೆಂದರೆ ಅದು ಉತ್ತರ ಪ್ರದೇಶ ಎಂದು ಜನರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ವಿಪಕ್ಷಗಳು ಆಡಳಿತ ಪಕ್ಷ ಬಿಜೆಪಿ ವಿರುದ್ದ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿವೆ ಮತ್ತು ಮುಂಬರುವ ಚುನಾವಣೆಯಲ್ಲಿ ಇದನ್ನೇ ಬಳಸಿ ಚುನಾವಣಾ ಎದುರಿಸಲು ಸಜ್ಜಾಗಿವೆ.
ಈ ನಡುವೆ ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಗುರಿಯಲ್ಲಿಟ್ಟುಕೊಂಡು ಚುನಾವಣಾ ಪೂರ್ವ ಘೋಷಣೆಗಳನ್ನು ಮಾಡುತ್ತಿದೆ. ಮೊದಲಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಪಕ್ಷದಿಂದ 40% ಮೀಸಲಾತಿ ಘೋಷಿಸಲಾಗಿತ್ತು. ಅಂದರೆ, ಯುಪಿಯ 403 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸರಿ ಸುಮಾರು 160 ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಚುನಾವಣೆಗೆ ಸ್ಪರ್ದಿಸಲು ಟಿಕೆಟ್ ನೀಡಲಾಗುವುದು. ಇದಕ್ಕಾಗಿ ಯುಪಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಮಹಿಳೆಯರು ನವೆಂಬರ್ 15ರ ಹೊತ್ತಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂಬ ಪ್ರಕಟನೆಯನ್ನು ಸಹ ಹೊರಡಿಸಿದೆ. ಇದೀಗ ಪದವಿಧರ ಯುವತಿಯರಿಗೆ ಎಲೆಟ್ರಾನಿಕ್ ಸ್ಕೂಟಿ ಮತ್ತು ಇಂಟರ್ ಪಾಸ್ ಆದ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ಫೋನ್ ನೀಡಲಾಗುವುದು ಎಂದು ಘೋಷಿಸಿರುವುದು ಎಲ್ಲರು ಆಶ್ಚರ್ಯ ಪಡುವಂತಾಗಿದೆ ಮತ್ತು ಈ ಘೋಷಣೆಗಳಲ್ಲಿ ಅಲ್ಲಿನ ಸ್ಥಳೀಯ ನಾಯಕರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
2019ರಲ್ಲಿ ದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಒಟ್ಟು 14,43,16,893 ಮತದಾರರಿದ್ದಾರೆ ಎಂದು ತಿಳಿದು ಬಂದಿತ್ತು. ಇದರಲ್ಲಿ 7,81,88,467 ಪುರುಷ ಮತದಾರರಿದ್ದಾರೆ 6,61,20,052 ಮಹಿಳಾ ಮತದಾರರಿದ್ದಾರೆ.
ಐತಿಹಾಸಿಕವಾಗಿ ಪುರುಷರಿಗಿಂತ ಮಹಿಳೆಯರ ಪಾತ್ರ ರಾಜಕೀಯದಲ್ಲಿ ಕಮ್ಮಿ ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರ ಪಾತ್ರವನ್ನ ಇನ್ನಷ್ಟೆ ಗುರುತಿಸಬೇಕಿದೆ. ಆದರೆ, 2022ರಲ್ಲಿ ನಡೆಯುವ ಚುನಾವಣೆ ಅದನ್ನು ಬದಲಿಸಬಹುದು ಎಂದು ಹೇಳಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಮತದಾರರಾಗಿ ಮಹಿಳೆಯರ ಭಾಗವಹಿಸುವಿಕೆಯು ಗಮರ್ನಾಹವಾಗಿ ಹೆಚ್ಚಾಗಿದೆ. 1991ರಲ್ಲಿ ಶೇಕಡ 44.2% ರಷ್ಟಿದ್ದ ಸಂಖ್ಯೆಯು 2019ರಲ್ಲಿ 59.2%ರಷ್ಟು ಹೆಚ್ಚಾಗಿದೆ. ಕಳೆದ ಮೂರು ದಶಕಗಳಲ್ಲಿ ಇದು 15%ಗೆ ಹೆಚ್ಚಾಗಿರುವುದು ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಹಾಗು ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಸೂಚನೆಯಾಗಿದೆ.
ಇದೀಗ ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರನ್ನು ಗುರಿಯಲ್ಲಿಟ್ಟುಕೊಂಡು ಘೋಷಣೆಗಳನ್ನು ಮಾಡುತ್ತಿರುವುದು ಕಾಂಗ್ರೆಸ್‌ಗೆ ಪೂರಕವಾದ ವಾತವರಣ ಸೃಷ್ಟಿಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.