• Home
  • About Us
  • ಕರ್ನಾಟಕ
Sunday, July 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಅಸಹಜ ಸಾವುಗಳೂ ಸಾಮಾಜಿಕ ಸಂವೇದನೆಯೂ

ನಾ ದಿವಾಕರ by ನಾ ದಿವಾಕರ
March 2, 2025
in ಕರ್ನಾಟಕ, ಜೀವನದ ಶೈಲಿ, ವಾಣಿಜ್ಯ, ಶೋಧ
0
Share on WhatsAppShare on FacebookShare on Telegram

ಸಹಮಾನವರ ಸಾವಿಗೆ ಸಂತಾಪವೊಂದೇ ಸಾಲದು ನಿಸ್ಪೃಹ ಸೂಕ್ಷ್ಮ ಸ್ಪಂದನೆಯೂ ಅಗತ್ಯ

ADVERTISEMENT

ಯಾವುದೇ ಸಮಾಜವಾದರೂ ತನ್ನ ಔನ್ನತ್ಯವನ್ನು ಕಾಣಬೇಕಿರುವುದು, ಅದು ಲೌಕಿಕ ಜನಜೀವನದ ನಡುವೆ ರೂಢಿಸಿಕೊಳ್ಳುವ ಸಂವೇದನಾಶೀಲ ಹಾಗೂ ಮನುಜ ಸೂಕ್ಷ್ಮ ಸಂಬಂಧಗಳಲ್ಲಿ. ಡಾ. ಬಿ. ಆರ್.‌ಅಂಬೇಡ್ಕರ್‌ಸಂವಿಧಾನ ರಚನೆಯ ಸಂದರ್ಭದಲ್ಲಿ ಭ್ರಾತೃತ್ವದ  ‍(Fraternity) ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದೇ ಅಲ್ಲದೆ, ಭಾರತದಂತಹ ಸ್ತರೀಯ ಅಸಮಾನತೆ (Graded inequality) ಇರುವ ಶ್ರೇಣೀಕೃತ ಸಮಾಜದಲ್ಲಿ ಸಮಾಜಗಳಲ್ಲಿ ಪರಸ್ಪರ ಮನುಜ ಸಂಬಂಧಗಳನ್ನು ಗಟ್ಟಿಗೊಳಿಸುವುದರಿಂದಲೇ ಭಾರತ ತನ್ನ ಏಕತೆ ಮತ್ತು ಅಖಂಡತೆಯನ್ನು ಸಾಕಾರಗೊಳಿಸಬಹುದು ಎಂದು ದೃಢವಾಗಿ ನಂಬಿದ್ದರು. ಭಾರತೀಯ ಸಮಾಜದಲ್ಲಿ ವರ್ತಮಾನದಲ್ಲೂ ತನ್ನ ಗಟ್ಟಿ ಬೇರುಗಳನ್ನು ಉಳಿಸಿಕೊಂಡು ಬಂದಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿಭಿನ್ನ ಮಜಲುಗಳು ಈ ಭ್ರಾತೃತ್ವದ ಕಲ್ಪನೆಗೆ ಬಹುದೊಡ್ಡ ಸವಾಲಾಗಿಯೇ ಇರುತ್ತದೆ.

 ಮತ್ತೊಂದೆಡೆ ಆಧುನಿಕ ಭಾರತವನ್ನು ಶತಮಾನಗಳಿಂದ ಕಾಡುತ್ತಲೇ ಬಂದಿರುವ ಸಾಮಾಜಿಕ ವ್ಯಸನ ಎಂದರೆ ಜಾತಿ-ಮತದ  ಅಸ್ಮಿತೆಗಳು ಮತ್ತು ಅವುಗಳ ಸುತ್ತ ಹಬ್ಬಿಕೊಂಡಿರುವಂತಹ ಧಾರ್ಮಿಕ ಶ್ರದ್ಧಾನಂಬಿಕೆಗಳು. ತಳಮಟ್ಟದ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಜನರು ರೂಢಿಸಿಕೊಳ್ಳುವ ಸಹಬಾಳ್ವೆಯ ಚಿಂತನೆಗಳನ್ನು ಭಂಗಗೊಳಿಸುವುದರಲ್ಲಿ ಈ ಜಾತಿ-ಮತ-ಭಾಷೆಯ ಅಸ್ಮಿತೆಗಳು ಕಾರ್ಯೋನ್ಮುಖವಾಗಿರುತ್ತವೆ. ಮನುಷ್ಯರನ್ನು ಮನುಷ್ಯರಂತೆಯೇ ನೋಡುವ ವ್ಯವಧಾನವನ್ನೇ ಶಿಥಿಲಗೊಳಿಸುವ ನಿರ್ದಿಷ್ಟ ಅಸ್ಮಿತೆಗಳು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸೃಷ್ಟಿಸುವ ನಿರ್ಲಿಪ್ತತೆಯ ಕಾರಣದಿಂದಲೇ, ಸಮಾಜದಲ್ಲಿ ಸಂಭವಿಸುವ ಯಾವುದೇ ಅಹಿತಕರ, ಅಮಾನುಷ, ಅಸಹಜ, ಘಾತುಕ ಬೆಳವಣಿಗೆಗಳು, ವಿಶಾಲ ಸಮಾಜದ ಸಂವೇದನೆಗಳನ್ನು ವಿಚಲಿತಗೊಳಿಸುವುದಿಲ್ಲ. ಇದಕ್ಕೆ ಅಡ್ಡಿಯಾಗುವಂತಹ ಶ್ರೇಷ್ಠತೆಯ ಕಲ್ಪನೆ ಮತ್ತು ಪಾವಿತ್ರ್ಯತೆಯ ಭಾವನೆಗಳು, ಜನಸಾಮಾನ್ಯರ ನಡುವೆ ಗೋಡೆಗಳನ್ನೂ, ಸಮಾಜದೊಳಗೆ ಬಿರುಕುಗಳನ್ನೂ ಮೂಡಿಸುತ್ತಲೇ ಹೋಗುತ್ತವೆ.

 ಇಲ್ಲಿ ಗಮನಿಸಬಹುದಾದ ಇನ್ನೊಂದು ವಿದ್ಯಮಾನ ಎಂದರೆ ಸಾಮಾಜಿಕ-ಆರ್ಥಿಕ ಅಸಮಾನತೆಯನ್ನು ಆರ್ಥಿಕತೆಯ ಪರಿಣಾಮ ಎಂದು ಭಾವಿಸದೆ, ಅದು ಮನುಷ್ಯ ಸಮಾಜವು                       ʼ ಪಡೆದುಕೊಂಡು ಬಂದಂತಹ ʼ ಅವಕಾಶ ಎಂದು ಕಲ್ಪಿಸಿಕೊಳ್ಳುವ ಪ್ರಾಚೀನ-ಪಾರಂಪರಿಕ ನಂಬಿಕೆ. ಹಣೆಬರಹ, ವಿಧಿ ಇತ್ಯಾದಿ ಅರ್ಥಹೀನ ಪದಗಳ ಮೂಲಕ ತಳಸಮಾಜದ ಅಕ್ಷರಸ್ತರನ್ನೂ ಆವರಿಸಿರುವ ಈ ಪರಿಕಲ್ಪನೆಗಳು ಸಮಾಜದೊಳಗಿನ ಹಸಿವು, ಬಡತನ ಮತ್ತು ಅದರಿಂದಾಗುವ ಸಾವು ನೋವುಗಳನ್ನು ಸ್ವಾಭಾವಿಕ ಪ್ರಕ್ರಿಯೆಯಂತೆ ಪರಿಗಣಿಸುವಂತೆ ಮಾಡುತ್ತವೆ. ಹಾಗಾಗಿ ಹಸಿವಿನಿಂದ ಸಂಭವಿಸುವ ಸಾವುಗಳು ʼ ಸಹಜ ಸಾವು ʼ ಎನಿಸಿಬಿಡುತ್ತದೆ. ʼ ದುಡಿದು ತಿನ್ನಬೇಕಿತ್ತು ʼ ಎನ್ನುವ ದಾರ್ಷ್ಟ್ಯದ ಮಾತುಗಳು ಮೇಲ್ಪದರದ ಸಮಾಜದಿಂದ ಬರುವ ಪ್ರತಿಕ್ರಿಯೆ. ಆದರೆ ದುಡಿಮೆಯ ಹಾದಿಗಳನ್ನು ಮುಚ್ಚಿಹಾಕುವ ವ್ಯವಸ್ಥೆಯ ಕ್ರೌರ್ಯ ಈ ಸುಶಿಕ್ಷಿತ-ಆಧುನಿಕ ಸಮಾಜದ ಗ್ರಹಿಕೆಗೂ ನಿಲುಕುವುದಿಲ್ಲ.

 ಅಸಹಜ ಸಾವು ಎಂಬ ಮಿಥ್ಯೆ

 ಡಿ ಡಿಜಿಟಲ್‌ ಯುಗದಲ್ಲೂ ಭಾರತದಲ್ಲಿ ನಮಗೆ ದಿನಬೆಳಗಾದರೆ ಗೋಚರಿಸುತ್ತಿರುವ ʼ ಅಸಹಜ ಸಾವುಗಳು ʼ ಸಮಾಜಘಾತುಕರ ದುಷ್ಕೃತ್ಯಗಳಿಂದ ಸಂಭವಿಸುತ್ತಿವೆ. ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ, ಸಾಮಾಜಿಕ ಬಹಿಷ್ಕಾರದ ಅಂತಿಮ ನ್ಯಾಯ –ಮರ್ಯಾದಾ ಹತ್ಯೆ, ಅಸ್ಪೃಶ್ಯತೆಯ ಆಚರಣೆಯಲ್ಲಿ ಸಂಭವಿಸುವ ಹತ್ಯೆಗಳು, ವರದಕ್ಷಿಣೆ-ಕೌಟುಂಬಿಕ ಕಿರುಕುಳಗಳಿಂದ ಸಂಭವಿಸುವ ಮಹಿಳೆಯರ ಕಗ್ಗೊಲೆ ಇವೆಲ್ಲವನ್ನೂ ಕಾನೂನಾತ್ಮಕವಾಗಿ ʼಅಪರಾಧʼ ಎಂಬ ವಿಶಾಲಕ್ಯಾನ್ವಾಸ್‌ನೊಳಗಿಟ್ಟು ನೋಡಲಾಗುತ್ತದೆ. ಆದರೆ ಈ ಸಾವುಗಳು ಸ್ವಾಭಾವಿಕವಂತೂ ಅಲ್ಲ ಅಲ್ಲವೇ ? ಹಾಗಾದರೆ ಈ ಅಮಾನುಷತೆಗೆ ಉತ್ತರದಾಯಿಗಳು ಯಾರು ? ʼ ನಿರ್ಭಯ ʼ ಹಂತಕರಿಗೆ ಶಿಕ್ಷೆಯಾಯಿತು ಎಂದು ಸಂಭ್ರಮಿಸುವಷ್ಟರಲ್ಲೇ ʼ ಅಭಯʼ ಎದುರಾಗುತ್ತಾಳೆ. ಖೈರ್ಲಾಂಜಿ ವಿಸ್ಮೃತಿಗೆ ಜಾರುವ ಮುನ್ನವೇ ಕೊಪ್ಪಳ ಸಂಭವಿಸುತ್ತದೆ. ಅಧುನಿಕ ಸಮಾಜ ಈ ಸಾವುಗಳನ್ನು ಅಸಹಜ ಎಂದು ನಿರ್ವಚಿಸುವುದಿಲ್ಲ ಆದರೆ ತಾತ್ವಿಕವಾಗಿ ಅದು ವಾಸ್ತವ   ಅಲ್ಲವೇ ?

ಇದೇ ಸರಪಳಿಯ ಮತ್ತೊಂದು ಕೊಂಡಿಯನ್ನು ಕೋಮುಗಲಭೆಗಳಲ್ಲಿ, ಹತ್ಯಾಕಾಂಡಗಳಲ್ಲಿ, ಮತಾಂಧ ಕಾವಲು ಪಡೆಗಳಿಂದ ನಡೆಯುವ ಅಮಾಯಕರ ಹತ್ಯೆಗಳಲ್ಲಿ ಕಾಣಬೇಕಾಗಿದೆ. 1984ರ ಸಿಖ್‌ ಹತ್ಯಾಕಾಂಡದ ರೂವಾರಿ ಸಜ್ಜನ್‌ ಕುಮಾರ್‌ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದು ಸಮಾಧಾನಕರ. ಆದರೆ 1970ರಲ್ಲಿ ನಡೆದ ನೆಲ್ಲಿ ಹತ್ಯಾಕಾಂಡದಿಂದ, ಬಾಬ್ರಿಮಸೀದಿಯ ಧ್ವಂಸ-ಗೋದ್ರಾ-ಗುಜರಾತ್‌—ಮುಝಫರ್‌ಪುರ-ದೆಹಲಿಯವರೆಗೂ ದೃಷ್ಟಿಹಾಯಿಸಿದರೆ, ನಮಗೆ ಕಾಣುವುದು ಸಾವಿರಾರು ಅಮಾಯಕ ಜನರ ಮಾರಣಹೋಮ. ಈ ಸಾವುಗಳನ್ನು ಕಾನೂನಾತ್ಮಕವಾಗಿ ʼಸಾಮೂಹಿಕ ಅಪರಾಧ ʼ ಎಂದು ನಿರ್ವಚಿಸಲಾಗುವುದಾದರೂ,  ಸತ್ತ ವ್ಯಕ್ತಿಯ ಮತೀಯ, ಧಾರ್ಮಿಕ, ಜಾತೀಯ ಅಸ್ಮಿತೆಗಳು ಅಪರಾಧದ ತೀವ್ರತೆಯನ್ನೂ ನಿರ್ಧರಿಸುತ್ತವೆ. ಈ ಅಸಹಜ ಸಾವುಗಳಲ್ಲಿ ಹೆಣಗಳನ್ನು ಅಸ್ಮಿತೆಯ ಆಧಾರದಲ್ಲಿ ಹೆಕ್ಕಿ ತೆಗೆದು ನೋಡುವ ಒಂದು ಆಧುನಿಕ ಪರಂಪರೆಯನ್ನೂ ನಾವು ಮೈಗೂಡಿಸಿಕೊಂಡಿದ್ದೇವೆ.

 ಸ್ವತಂತ್ರ ಭಾರತದ ಮತ್ತೊಂದು ವಿಡಂಬನೆ ಮತ್ತು ವೈಚಿತ್ರ್ಯ ಎಂದರೆ ನಮ್ಮ ಇಡೀ ಸಮಾಜ ಮತ್ತು ಸರ್ಕಾರಗಳೂ ಸಹ, ದುಡಿಮೆಯನ್ನು ಅರಸಿ ತಮ್ಮ ಮೂಲ ನೆಲೆಯಿಂದ ನಿರ್ಗಮಿಸಿ ಕೌಟುಂಬಿಕ ಬದುಕಿನಿಂದ ವಂಚಿತರಾಗುವ ವಲಸೆ ಕಾರ್ಮಿಕರತ್ತ ತಿರುಗಿ ನೋಡಲು ಸ್ವಾತಂತ್ರ್ಯದ 70 ವರ್ಷಗಳ ನಂತರ ಕೋವಿದ್‌ -19 ಸಾಂಕ್ರಾಮಿಕ ಬರಬೇಕಾಯಿತು, ಸಾವಿರಾರು ಕಿಲೋಮೀಟರ್‌ ದೂರದಿಂದ ಬಂದು ತಮ್ಮದಲ್ಲದ ನೆಲದಲ್ಲಿ ಬೆವರು ಸುರಿಸಿ, ಆರ್ಥಿಕ ವೃದ್ಧಿಗೆ ನೆರವಾಗುವ ಈ ಶ್ರಮಜೀವಿಗಳಿಗೆ ʼತವರುʼ ಎಂಬ ಕಲ್ಪನೆಯೇ ಇರುವುದಿಲ್ಲ. ಈ ಶ್ರಮಿಕರ ಸಾವು ನೋವುಗಳು ಆಧುನಿಕ ಭಾರತದ ಅರಿವಿಗೆ ಬಂದಿದ್ದು ಕೋವಿದ್‌ ಸೃಷ್ಟಿಸಿದ ಭೀಕರ ಸನ್ನಿವೇಶದ ಮೂಲಕ. ಈ ಸಂದರ್ಭದಲ್ಲಿ ನೂರಾರು ಕಿಲೋಮೀಟರ್‌ ನಡೆದು ನಿತ್ರಾಣರಾಗಿ, ಹಸಿವನಿಂದ ಬಳಲಿ ಸತ್ತವರ ಸಂಖ್ಯೆ ಇಂದಿಗೂ ನಮಗೆ ಲಭ್ಯವಾಗಿಲ್ಲ. 2020ರಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ರೈಲು ಹಳಿಯ ಮೇಲೆ ಮಲಗಿದ್ದ 16 ಕಾರ್ಮಿಕರು ರೈಲಿನಡಿ ಸಿಕ್ಕು ಮೃತಪಟ್ಟಿದ್ದನ್ನು ಬಹುಶಃ ನಾವು ಮರೆತಿರಲಿಕ್ಕಿಲ್ಲ. ಇಂತಹ ಹಲವು ಸಾವುಗಳನ್ನೂ ನಾವು ʼ ಅಸಹಜ ʼ ಎಂದು ಪರಿಗಣಿಸಲಿಲ್ಲ.

 ಮಾನವ ಸಮಾಜ ಏಕೆ ಹೀಗೆ ? ಈ ಪ್ರಶ್ನೆ ನಮ್ಮ ಪ್ರಜ್ಞೆಯನ್ನು ಕಾಡಲೇಬೇಕಲ್ಲವೇ ? ಕಳೆದ ಮೂರ್ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣದ ಪರಿಸರದಲ್ಲಿ ಭಾರತೀಯ ಸಮಾಜದ ಮಾನವೀಯ ಮಾಲ್ಯಗಳು ಜಡಗಟ್ಟಿರುವ ಹಿನ್ನೆಲೆಯಲ್ಲಿ ನೋಡಿದಾಗ, ಸಹಮಾನವನ ಸಾವನ್ನು ಸಂಭ್ರಮಿಸುವ ಒಂದು ವಿಕೃತ ಸಂಸ್ಕೃತಿಯನ್ನೂ ಗಮನಿಸಬೇಕಿದೆ. ಅತ್ಯಾಚಾರಿಗಳನ್ನು, ಕೊಲೆಗಡುಕರನ್ನು ವೈಭವೀಕರಿಸಿ ವಿಜೃಂಭಿಸುವ , ಸನ್ಮಾನಿಸುವ ಹೊಸ ಪರಂಪರೆಗೆ 21ನೇ ಶತಮಾನ ಸಾಕ್ಷಿಯಾಗಿದೆ. ಈ ತಣ್ಣನೆಯ ಬೌದ್ಧಿಕ ಕ್ರೌರ್ಯದ ಮತ್ತೊಂದು ಆಯಾಮವನ್ನು, ನಮ್ಮ ಸುತ್ತಲೂ ನಡೆಯುವ ಅಮಾನುಷ ಹತ್ಯೆಗಳಿಗೆ ಸಮಾಜದ ಒಂದು ವರ್ಗ ಮೌನ ವಹಿಸುವುದರಲ್ಲೂ ಕಾಣಬಹುದು. ಈ ಎರಡೂ ಪ್ರವೃತ್ತಿಗಳಿಗೆ ತಾತ್ವಿಕವಾಗಿ ಯಾವ ವ್ಯತ್ಯಾಸವೂ ಇರಲಾರದು. ನೆರೆಯಲ್ಲೇ ಸಂಭವಿಸುವ ಸಹಜೀವಿಗಳ ಸಾವಿಗೆ ವಿಚಲಿತರಾಗದೆ ನಿರ್ಲಿಪ್ತರಾಗಿರಲು ಜಾತಿ, ಮತ, ಲಿಂಗ ಮತ್ತು ಸಾಮಾಜಿಕ ಅಂತಸ್ತು ಇವೆಲ್ಲವೂ ಕಾರಣವಾಗುತ್ತವೆ.

ಈ ಸಾವುಗಳು ಏಕೆ ನಮ್ಮ ಸಾಮಾಜಿಕ ಪ್ರಜ್ಞೆಯನ್ನು ವಿಚಲಿತಗೊಳಿಸುವುದಿಲ್ಲ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಇದಕ್ಕೆ ಹಲವು ಆಯಾಮಗಳಲ್ಲಿ ಕಾರಣಗಳನ್ನು ಶೋಧಿಸಬಹುದು.

 ಮೊದಲನೆಯದಾಗಿ, ಧಾರ್ಮಿಕ ಉತ್ಸವ, ಸಮಾವೇಶ ಮತ್ತು ಕುಂಭಮೇಳದಂತಹ ಪ್ರಸಂಗಗಳಲ್ಲಿ ಸಂಭವಿಸುವ ಕಾಲ್ತುಳಿತ ಪ್ರಕರಣಗಳನ್ನು ಗುರುತಿಸಬಹುದು. ಇತ್ತೀಚಿನ ಕುಂಭಮೇಳದಲ್ಲಿ ಮಡಿದ 30ಕ್ಕೂ ಹೆಚ್ಚು ಜನ, ಕಳೆದ ವರ್ಷ ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ಬೋಲೆಬಾಬಾ ಸಮಾವೇಶದಲ್ಲಿ ಮಡಿದ 121 ಜನರು, ತಿರುಪತಿ ದೇವಸ್ಥಾನದ ದರ್ಶನದ ವೇಳೆ ಸತ್ತ 8 ಜನರು ಹೀಗೆ ಧಾರ್ಮಿಕ/ಆಧ್ಯಾತ್ಮಿಕ ಸಮಾವೇಶಗಳಲ್ಲಿ ಭಕ್ತಾದಿಗಳು, ಹಿಮಾಲಯ ತಪ್ಪಲಿನ ಬದರಿ-ಕೇದಾರದಲ್ಲಿ ʼ ಅಸಹಜ ʼ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ಈ ಸಾವುಗಳಿಗೆ ಅಲ್ಲಿ ನೆರೆಯುವ ಭಕ್ತಾದಿಗಳನ್ನೇ ಕಾರಣ ಮಾಡಲಾಗುತ್ತದೆಯೇ ಹೊರತು, ಯಾವುದೇ ಸಂಸ್ಥೆ ಅಥವಾ ಧಾರ್ಮಿಕ ಗುಂಪು ಉತ್ತರದಾಯಿಯಾಗುವುದಿಲ್ಲ. ಸಮಾಜದ ದೃಷ್ಟಿಯಲ್ಲೂ‌ ಈ ಸಾವುಗಳಿಗೆ,  ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸಾವುಗಳಿಗೂ ಸಹ, ನಮ್ಮ ಸಮಾಜ ಉತ್ತರದಾಯಿತ್ವವನ್ನು ಅಪೇಕ್ಷಿಸುವುದಿಲ್ಲ.  ಏಕೆಂದರೆ ಇಲ್ಲಿ ನೆರೆದು, ಮಡಿದ ಜನರ ಶ್ರದ್ಧಾಭಕ್ತಿಗಳು, ಅದರಿಂದುಂಟಾಗುವ ಉನ್ಮಾದ ಇವೇ ಸಾವಿಗೆ ಕಾರಣವಾಗಿಬಿಡುತ್ತದೆ.

 ಸಾಮಾಜಿಕ ಸೂಕ್ಷ್ಮತೆ ಮತ್ತು ಸ್ಪಂದನೆ

ಎರಡನೆಯದಾಗಿ, ಆರ್ಥಿಕ ದುಸ್ಥಿತಿಯಿಂದ ಮತ್ತು ಅಸಮಾನತೆಯ ಯಾತನೆಯನ್ನು ತಡೆಯಲಾಗದೆ ಸಾವನ್ನಪ್ಪುವ ತಳಸಮಾಜದ ಅಸಂಖ್ಯಾತ ಜನರ ಸಾವುಗಳಿಗೆ ಯಾರನ್ನೂ ದೂಷಿಸುವುದಿಲ್ಲ. ಲಕ್ಷಾಂತರ ರೈತರ ಆತ್ಮಹತ್ಯೆ ಒಂದು ನಿದರ್ಶನ. ಸಮಾಜದಲ್ಲಿ ಅಸಮಾನತೆ ಏಕೆ ಹೆಚ್ಚಾಗುತ್ತದೆ, ದುಡಿಯುವ ದೈಹಿಕ ಶಕ್ತಿ ಇರುವವರೂ ಏಕೆ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ? ಇದಕ್ಕೆ ಕಾರಣ ನಮ್ಮ ಸರ್ಕಾರಗಳು ಅನುಸರಿಸುವ ಆರ್ಥಿಕ ನೀತಿಗಳು ಎನ್ನುವುದು ನಿರ್ವಿವಾದ ಸತ್ಯ. ಆದರೆ ಯಾವುದೇ ಕಾಲಘಟ್ಟದಲ್ಲೂ ಈ ಸಾವುಗಳಿಗೆ ಸರ್ಕಾರಗಳು ಉತ್ತರದಾಯಿಯಾಗುವುದನ್ನು ಚರಿತ್ರೆಯಲ್ಲಿ ಕಾಣಲಾಗುವುದಿಲ್ಲ. ಇತ್ತೀಚೆಗೆ ತೆಲಂಗಾಣದ ಶ್ರೀಶೈಲಂ ಎಡದಂಡೆ ನಾಲೆಯ ಸುರಂಗ ನಿರ್ಮಾಣದ ವೇಳೆ ಎಂಟು ಕಾರ್ಮಿಕರು ಸಿಲುಕಿದ್ದಾರೆ. ಹಿಮಾಲಯ ತಪ್ಪಲಿನ ಚಮೋಲಿಯಲ್ಲಿ ಹಿಮಪಾತಕ್ಕೆ ಸಿಲುಕಿ ಪಾರುಮಾಡಲಾಗಿದ್ದರೂ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. 2021ರಲ್ಲಿ ಇದೇ ಪ್ರದೇಶದಲ್ಲಿ 15  ಕಾರ್ಮಿಕರು ಮೃತಪಟ್ಟಿದ್ದರು.

 ಇಂತಹ ಅವಘಡಗಲ್ಲಿ ಸಾವನ್ನಪ್ಪುವ ಕಾರ್ಮಿಕರು ಬಹುತೇಕ ವಲಸೆ ಬಂದವರಾಗಿರುತ್ತಾರೆ. ತೆಲಂಗಾಣದ ಘಟನೆಯಲ್ಲಿ ಇನ್ನೂ ಭೂಗತರಾಗಿರುವಎಂಟು ಜನರೂ ಜಾರ್ಖಂಡ್‌, ಬಿಹಾರ ಮೊದಲಾದ ಉತ್ತರ ರಾಜ್ಯಗಳಿಗೆ ಸೇರಿದವರು. ಸಾವಿರಾರು ಕಿಲೋಮೀಟರ್‌ ದೂರದಿಂದ ದುಡಿಮೆಗಾಗಿ ವಲಸೆ ಬರುವ ಈ ಕಾರ್ಮಿಕರಿಗೆ ದಿನಕ್ಕೆ ಎಂಟು ಗಂಟೆಯ ದುಡಿಮೆಗೆ 300 ರಿಂದ 600 ರೂ ದಿನಗೂಲಿ ನೀಡಲಾಗುತ್ತದೆ ಇದು ಸರ್ಕಾರವೇ ನಿಗದಿಪಡಿಸಿರುವ ಮಿತಿಗಿಂತಲೂ ಕಡಿಮೆ. ಜೊತೆಗೆ ಈ ಕಾರ್ಮಿಕರಿಗೆ ಸೂಕ್ತ ಸುರಕ್ಷತೆಯ ವ್ಯವಸ್ಥೆಯೂ ಇರುವುದಿಲ್ಲ ಎಂದು ಕಾರ್ಮಿಕರ ಬಂಧುಗಳು ಹೇಳುತ್ತಾರೆ. (ನೋಡಿ : Looking for workers at the end of tunnel – ದ ಹಿಂದೂ ಮಾರ್ಚ್‌ 1 2025.) ಒಂದು ವೇಳೆ ಈ ಕಾರ್ಮಿಕರು ಮೃತಪಟ್ಟರೂ ಅವರ ಸಾವುಗಳಿಗೆ ಗುತ್ತಿಗೆದಾರರಾಗಲೀ, ಉದ್ಯೋಗದಾತರಾಗಲೀ ಉತ್ತರದಾಯಿತ್ವ ಹೊರುವುದಿಲ್ಲ. ನಿಷೇಧದ ಹೊರತಾಗಿಯೂ ಮಲಗುಂಡಿಯೊಳಗೆ ಇಳಿದು ಮೃತಪಟ್ಟ ದಾರುಣ ಘಟನೆಗಳು ನಮ್ಮ ಕಣ್ಣ ಮುಂದಿವೆ.

 300-600 ರೂ ದಿನಗೂಲಿಗಾಗಿ 1400 ಕಿಲೋಮೀಟರ್‌ ದೂರದಿಂದ ಶ್ರಮಿಕರು ಏಕೆ ವಲಸೆ ಬರುತ್ತಾರೆ ? ಅವರ ತವರಿನಲ್ಲೇ ಇದಕ್ಕಿಂತಲೂ ಕಡಿಮೆ ಕೂಲಿ ದೊರೆತರೂ ಜೀವನ ನಡೆಸಬಹುದಲ್ಲವೇ ? ಹೀಗೆ ವಲಸೆ ಹೋಗುವಂತೆ ಮಾಡುವ ಅರ್ಥವ್ಯವಸ್ಥೆಗೆ ಜವಾಬ್ದಾರರು ಯಾರು ? ನಾಗರಿಕ ಸಮಾಜದ ಗುಂಪುಗಳಲ್ಲೂ (Civil Society groups)  ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋಗುವುದಿಲ್ಲ. ಹಾಗಾಗಿ ಈ ದುಡಿಮೆಗಾರರ ಸಾವು ʼ ಅಸಹಜ ʼ ಎನಿಸಿಕೊಳ್ಳುವುದಿಲ್ಲ. ಬದಲಾಗಿ ಆರ್ಥಿಕ ಅಭಿವೃದ್ಧಿಗಾಗಿ ಮಾಡಬೇಕಾದ ʼ ತ್ಯಾಗ ʼ ಎನಿಸಿಕೊಳ್ಳುತ್ತದೆ ಅಥವಾ ವ್ಯವಸ್ಥೆಯ ಒಂದು ಭಾಗವಾಗಿಬಿಡುತ್ತದೆ. ಈಗಲೂ ಭಾರತದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ʼ ವಲಸೆ ಕಾರ್ಮಿಕ ನೀತಿ ʼಯನ್ನು ರೂಪಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

 ಮೂರನೆಯದಾಗಿ ಕೋಮು ಸಂಘರ್ಷಗಳಲ್ಲಿ, ಜಾತಿ ಕೇಂದ್ರಿತ ಘಟನೆಗಳಲ್ಲಿ ಸಾವನ್ನಪ್ಪುವ ಅಮಾಯಕ ಜನರು ಪರಿಸ್ಥಿತಿಯ ಕೂಸುಗಳಾಗಿಬಿಡುತ್ತಾರೆ. ಕಲಿತ ಸಮಾಜದ ಸಂಕಥನಗಳಲ್ಲಿ                         ʼ ಅವರೇಕೆ ಹಾಗೆ ಮಾಡಬೇಕಿತ್ತು ? ಅವನು ಜಾತಿ ನಿಯಮಗಳನ್ನು ಏಕೆ ಉಲ್ಲಂಘಿಸಬೇಕಿತ್ತು ? ಅವಳೇಕೆ ಆ ಹೊತ್ತಿನಲ್ಲಿ ಹೊರಗೆ ಹೋಗಬೇಕಿತ್ತು ?ʼ ಎಂಬ ಪ್ರಶ್ನೆಗಳೇ ಪ್ರಧಾನವಾಗಿ ಕೇಳಿಬರುತ್ತವೆ. ಅತ್ಯಾಚಾರಕ್ಕೊಳಗಾಗಿ , ಹತ್ಯೆಯಾದ ಮಹಿಳೆಯೂ ಇದೇ ಪ್ರಶ್ನೆ ಎದುರಿಸುತ್ತಾಳೆ. ಅಂದರೆ ಸಂತ್ರಸ್ತರೇ ತಮ್ಮ ಸಾವುನೋವಿಗೆ ಕಾರಣರಾಗುವ ಒಂದು ಸಂಸ್ಕೃತಿಯನ್ನು ನಾವು ರೂಢಿಸಿಕೊಂಡಿದ್ದೇವೆ. ಹಾಗಾಗಿಯೇ ಆಸಿಫಾ, ಹಾಥ್ರಸ್‌, ಅಕ್ಲಾಖ್‌, ಪೆಹ್ಲೂ ಖಾನ್‌, ಸೌಜನ್ಯ ಯಾವುದೇ ಪ್ರಕರಣವನ್ನು ಗಮನಿಸಿದರೂ ಅಲ್ಲಿ ಉತ್ತರದಾಯಿತ್ವ ಎನ್ನುವುದು ಕಾಣುವುದಿಲ್ಲ. ಈ ಅಮಾನುಷ ಸಾವುಗಳು                         ʼ ಅಸಹಜ ʼ ಎಂದು ನಿರ್ವಚಿಸಲ್ಪಡುವುದೂ ಇಲ್ಲ. ನಾವೇ ಕಟ್ಟಿರುವ ಸಮಾಜ ಮತ್ತು ಸಾಮಾಜಿಕ–ಸಾಂಸ್ಕೃತಿಕ-ರಾಜಕೀಯ-ಧಾರ್ಮಿಕ ಚೌಕಟ್ಟುಗಳೇ ಉತ್ತರದಾಯಿ ಎಂಬ ಪ್ರಜ್ಞೆ ಕಾಣುವುದೂ ಇಲ್ಲ. ಆದರೆ ಅಕಾಲಿಕ ಮರಣಕ್ಕೆ ತುತ್ತಾದ ಈ ಅಮಾಯಕರ ಸಾವು ತಾತ್ವಿಕವಾಗಿ ʼ ಅಸಹಜ ʼ ಅಲ್ಲವೇ ?

 ಸಹಮಾನವರ ʼ ಸಾವನ್ನು ಸಂಭ್ರಮಿಸುವ ʼ ವಿಕೃತ ಮನಸ್ಥಿತಿಯನ್ನು ಹೊರಗಿಟ್ಟು ನೋಡಿದರೂ, ವಿಶಾಲ ಸಮಾಜದಲ್ಲೂ ಸಹ ಇಂತಹ ಸಾವುಗಳು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ. ಪುಲ್ವಾಮಾ ಘಟನೆಯಲ್ಲಿ ಭಾರತೀಯ ಯೋಧರು ಭಯೋತ್ಪಾದಕ ಕೃತ್ಯಕ್ಕೆ ತುತ್ತಾಗಿ ಹುತಾತ್ಮರಾಗಿ ಐದು ವರ್ಷಗಳೇ ಕಳೆದಿವೆ. ಈವರೆಗೂ ಈ ಘಟನೆಯ ಉತ್ತರದಾಯಿಯನ್ನು ಗುರುತಿಸಲು, ಹುತಾತ್ಮ ಯೋಧರಿಗೆ ನ್ಯಾಯ ದೊರಕಿಸಲು ಯಾವುದೇ ರೀತಿಯ ಹೋರಾಟಗಳು ಕಂಡುಬಂದಿಲ್ಲ. ಏಕೆಂದರೆ ನಾವು ಸಹಮಾನವರ ಸಾವು ನೋವುಗಳನ್ನೂ ನಾವೇ ಸೃಷ್ಟಿಸಿಕೊಂಡಿರುವ ʼಅಸ್ಮಿತೆʼಗಳ ಮಸೂರದಲ್ಲೇ ನೋಡುವ ಒಂದು ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದೇವೆ. ನಮ್ಮ ನ್ಯಾಯಕ್ಕಾಗಿ ಹೋರಾಟ, ಪ್ರತಿಭಟನೆ, ಪ್ರತಿರೋಧ, ಸಂವಾದ, ಚರ್ಚೆ ಮತ್ತು ವಿಚಾರ ಸಂಕಿರಣಗಳೂ ಇದೇ ದಿಕ್ಕಿನಲ್ಲಿ ಸಾಗುತ್ತವೆ.

 ಸಾವಿಗೆ ಸ್ಪಂದಿಸುವ ಸಂವೇದನೆ !

 ಸಾವನ್ನು ಸಂಭ್ರಮಿಸುವುದಕ್ಕೂ, ಸಮ್ಮತಿಸಿ ಮೌನ ವಹಿಸುವುದಕ್ಕೂ ತಾತ್ವಿಕವಾಗಿ ಏನೇನೂ ವ್ಯತ್ಯಾಸ ಇರುವುದಿಲ್ಲ. ಮೊದಲನೆಯದು ಕ್ರೌರ್ಯ ಎನಿಸುತ್ತದೆ, ಎರಡನೆಯದು ಕ್ರೌರ್ಯದ ಅನುಮೋದನೆಯಾಗುತ್ತದೆ.  ಈ ವಿದ್ಯಮಾನವನ್ನು ಒಂದು ಪ್ರಬುದ್ಧ ಸಮಾಜವಾಗಿ ನಾವು ವಸ್ತುನಿಷ್ಠರಾಗಿ, ಸಮಷ್ಟಿ ಪ್ರಜ್ಞೆಯೊಂದಿಗೆ, ವಿಶಾಲ ದೃಷ್ಟಿಕೋನದಲ್ಲಿ, ಮುಕ್ತ ಚಿಂತನೆಯ ಮೂಲಕ ಪರಾಮರ್ಶಿಸಬೇಕಿದೆ. ಇದು ರಾಜಕೀಯ ಪ್ರಶ್ನೆ ಅಲ್ಲ, ನಮ್ಮನ್ನು ಕಾಡಬೇಕಾದ ಸಾಮಾಜಿಕ-ಸಾಂಸ್ಕೃತಿಕ ಪ್ರಶ್ನೆ. ಇಲ್ಲವಾದರೆ ವಾಹನ ಅಪಘಾತಗಳಿಂದಾಗುವ ಸಾವುಗಳಿಗೂ, ಮಾನವ ನಿರ್ಮಿತ ಅಪಾಯಗಳಿಂದಾಗುವ ಸಾವುಗಳಿಗೂ ವ್ಯತ್ಯಾಸವೇ ಇಲ್ಲವಾಗಿಬಿಡುತ್ತದೆ. ಭ್ರಾತೃತ್ವ-ಸೋದರಿತ್ವ-ಸಮನ್ವಯ-ಸೌಹಾರ್ದತೆ ಮೊದಲಾದ ಸಾಂವಿಧಾನಿಕ ಪದಗಳನ್ನು ನಿರ್ವಚಿಸುವಾಗ ಈ ಮಾನವೀಯ ಪ್ರಜ್ಞೆ ನಮ್ಮೊಳಗೆ ಜಾಗೃತವಾಗಿರಬೇಕು. ಉತ್ತರದಾಯಿತ್ವ ಇಲ್ಲದ ಸಮಾಜ ಆರೋಗ್ಯಕರವಾಗಿ ಬೆಳೆಯಲಾಗುವುದಿಲ್ಲ.  ಬಹುಶಃ ಈ ವಿದ್ಯಮಾನವನ್ನು ವಿಶಾಲ ನೆಲೆಯಲ್ಲಿ ಚರ್ಚಿಸುವಂತಹ ವಿಚಾರ ಸಂಕಿರಣಗಳಾಗಲೀ, ಸಾರ್ವಜನಿಕ ಗುಂಪು ಚರ್ಚೆ-ಸಂವಾದಗಳಾಗಲೀ ಸಾಂಸ್ಥಿಕವಾಗಿಯೂ ನಡೆಯುತ್ತಿಲ್ಲ, ಸಾಂಘಿಕವಾಗಿಯೂ ಕಂಡುಬರುವುದಿಲ್ಲ.

 ಭವಿಷ್ಯದ ತಲೆಮಾರಿಗೆ ನಾವು ಸಕಲ ಜೀವಿಗಳ ಶ್ರೇಯ ಬಯಸುವ ʼ ಸರ್ವ ಜನಾಂಗದ ಶಾಂತಿಯ ತೋಟ ʼವೊಂದನ್ನು ಬಿಟ್ಟುಹೋಗುವುದಾದರೆ, ಅಲ್ಲಿ ಮಾನವತೆಯ ಬೀಜಗಳನ್ನು ಬಿತ್ತುವ ಕೆಲಸವನ್ನು ಈಗಲೇ ಮಾಡಬೇಕಲ್ಲವೇ ? ಈ ಬೀಜ ಬಿತ್ತನೆಗೆ ನೆಲ ಹಸನುಗೊಳಿಸುವ ಪ್ರಕ್ರಿಯೆಯಲ್ಲಿ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೆಳೆಸುವ ಕೆಲಸ ಬಹಳ ಮುಖ್ಯವಾಗುತ್ತದೆ. ಉತ್ತರದಾಯಿತ್ವ ಇರುವ ಒಂದು ಸಮಾಜವನ್ನು ಕಟ್ಟಬೇಕಿದೆ. “ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ” ಎಂಬ ಕ್ಲೀಷೆಯಿಂದಾಚೆ ಯೋಚಿಸಿದಾಗ ನಮ್ಮ ನಾಗರಿಕ ಪ್ರಜ್ಞೆ ಚುರುಕಾಗುವುದೇನೋ ?

-೦-೦-೦-

Tags: accidental deathbessel van der kolk trauma and the brainbrand newcarceral institutionsdealing with deathDeathdeath of a childdeath worlddeaths in custodyeducationaleducational videosfacial expression studyhealth sciencehow to grieve the death of a petlaw and crimelaw and crime networkmysterious deathpersonality and transformationstransgender questionstransitioningwhy are dog deaths so sad
Previous Post

ಮೇಕೆದಾಟು ಹೋರಾಟಕ್ಕೆ ಚಿತ್ರರಂಗದ ಸಹಕಾರ ಸಿಗದೇ ಹೋದದ್ದು ದುರಂತ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಕಲಾವಿದರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ – ಎಲ್ಲರೂ ನಿಮ್ಮ ಅಡಿಯಾಳಗಬೇಕಾ..? : ಡಿಕೆಗೆ ಆರ್.ಅಶೋಕ್ ಟಾಂಗ್ ..! 

Related Posts

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 
Top Story

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 

by Chetan
July 20, 2025
0

ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ (Mass burials) ಆರೋಪದ ಕೇಸ್ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಯ ನಂತರ ಅಂತಿಮವಾಗಿ ರಾಜ್ಯ ಸರ್ಕಾರ ಎಸ್.ಐ.ಟಿ (SIT) ರಚನೆಗೆ ಅಸ್ತು...

Read moreDetails
BREAKING NEWS : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ರಚನೆಗೆ ರಾಜ್ಯ ಸರ್ಕಾರ ಅಸ್ತು 

BREAKING NEWS : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ರಚನೆಗೆ ರಾಜ್ಯ ಸರ್ಕಾರ ಅಸ್ತು 

July 20, 2025
ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

July 20, 2025
ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 

ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 

July 20, 2025
ಡಿಸಿಎಂ ದೆಹಲಿಗೆ ಬಂದಿದ್ದೇಕೆ..?! ಹೈಕಮ್ಯಾಂಡ್ ತಲೆ ಕೆಡಿಸಿದ ಡಿಕೆ ನಿಗೂಢ ನಡೆ..! 

ಧಿಡೀರ್ ದೆಹಲಿ ಪ್ರವಾಸ  – ಮಧ್ಯರಾತ್ರಿ ಬೆಂಗಳೂರಿಗೆ ವಾಪಸ್..! – ಡಿಕೆಶಿ ಭೇಟಿ ರಹಸ್ಯ ಟಾಪ್ ಸೀಕ್ರೆಟ್..?!

July 20, 2025
Next Post
ಕಲಾವಿದರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ – ಎಲ್ಲರೂ ನಿಮ್ಮ ಅಡಿಯಾಳಗಬೇಕಾ..? : ಡಿಕೆಗೆ ಆರ್.ಅಶೋಕ್ ಟಾಂಗ್ ..! 

ಕಲಾವಿದರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ - ಎಲ್ಲರೂ ನಿಮ್ಮ ಅಡಿಯಾಳಗಬೇಕಾ..? : ಡಿಕೆಗೆ ಆರ್.ಅಶೋಕ್ ಟಾಂಗ್ ..! 

Recent News

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 
Top Story

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 

by Chetan
July 20, 2025
BREAKING NEWS : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ರಚನೆಗೆ ರಾಜ್ಯ ಸರ್ಕಾರ ಅಸ್ತು 
Top Story

BREAKING NEWS : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ರಚನೆಗೆ ರಾಜ್ಯ ಸರ್ಕಾರ ಅಸ್ತು 

by Chetan
July 20, 2025
ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ  ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 
Top Story

ಬಿಕ್ಲು ಶಿವು ಹತ್ಯೆಗೆ ಅಸಲಿ ಕಾರಣ ರಿವೀಲ್ – ಕಿತ್ತಗನೂರು ಜಮೀನಿನ ಕೌಂಪೌಂಡ್ ನಿಂದ ಶುರುವಾಯ್ತು ಗಲಾಟೆ ! 

by Chetan
July 20, 2025
ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ
Top Story

ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

by ಪ್ರತಿಧ್ವನಿ
July 20, 2025
ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 
Top Story

ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ವಿ.ಸೋಮಣ್ಣ..? – ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್..?! 

by Chetan
July 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 

July 20, 2025
BREAKING NEWS : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ರಚನೆಗೆ ರಾಜ್ಯ ಸರ್ಕಾರ ಅಸ್ತು 

BREAKING NEWS : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ರಚನೆಗೆ ರಾಜ್ಯ ಸರ್ಕಾರ ಅಸ್ತು 

July 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada