ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು (Uttar Pradesh Assembly Elections) ಬಿಜೆಪಿ ಮತ್ತೆ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಅದಕ್ಕಾಗಿ ತಮ್ಮ ಸರ್ಕಾರ ಬಂದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ (Law and Order) ಸುಧಾರಿಸಿದೆ ಎಂಬ ಅಂಶವನ್ನೇ ಪದೇ ಪದೇ ಒತ್ತಿ ಒತ್ತಿ ಹೇಳುತ್ತಿದೆ. ಆದರೆ ಉನ್ನಾವೋದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕಡೆಗೆ ಕೊಲೆಯೂ ಆದ ದಲಿತ ಯುವತಿಯ (Unnao Rape Incident) ತಾಯಿ ಸರ್ದಾರ್ ಆಶಾ ಸಿಂಗ್ ಅವರು ಈ ಮಾತನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ (Yogi Adithyanath Government) ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.
ಇಂದು ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನ ನಡೆಯುತ್ತಿದೆ. ಮತದಾನ ನಡೆಯುತ್ತಿರುವ 9 ಜಿಲ್ಲೆಗಳ ಪೈಕಿ 2017ರ ಜೂನ್ 4ರಂದು 17 ವರ್ಷದ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ, ನಂತರ ಕುಟುಂಬದವರಿಗೆ ಶವಸಂಸ್ಕಾರ ಮಾಡುವುದಕ್ಕೂ ಅವಕಾಶ ನೀಡದ ಧಾರುಣ ಘಟನೆ ನಡೆದಿದ್ದ ಉನ್ನಾವೋ ಜಿಲ್ಲೆಯೂ ಸೇರಿದೆ. ಆಗಷ್ಟೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ (Kuldeep Sing Sengar) ಅವರೇ ಈ ಅಮಾನುಷ ಕೃತ್ಯದ ರೂವಾರಿಯಾಗಿದ್ದರು. ಕುಲದೀಪ್ ಸಿಂಗ್ ಸೆಂಗರ್ ಅಪರಾಧಿ ಎಂದು 2019ರ ಡಿಸೆಂಬರ್ 20ರಂದು ನ್ಯಾಯಾಲಯ ಕೂಡ ತೀರ್ಪು ನೀಡಿದೆ.
ಘಟನೆ ನಡೆದಾಗ ಉತ್ತರ ಪ್ರದೇಶ ಪೊಲೀಸರ ವಿರೋಧದ ನಡುವೆಯೂ ಮೃತ ದಲಿತ ಯುವತಿಯ ಮನೆಗೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದರು. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಾ 403 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ ಹಾಗೂ ಶೇಕಡಾ 40ರಷ್ಟು ಮಹಿಳೆಯರಿಗೆ ಟಿಕೆಟ್ ನೀಡಲಿದೆ ಎಂದು ಘೋಷಿಸಿದ್ದರು. ಇದಾದ ಬಳಿಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉನ್ನಾವೋದಲ್ಲಿ ಬಿಜೆಪಿ ಶಾಸಕನಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯೂ ಆದ ದಲಿತ ಯುವತಿಯ ತಾಯಿ ಮತ್ತು ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ (Hathras Gang Rape Incident) ಯುವತಿಯ ತಾಯಿಗೂ ಟಿಕೆಟ್ ನೀಡುವುದಾಗಿ ಘೋಷಿಸಿದ್ದರು.
ಹತ್ರಾಸ್ ಸಂತ್ರಸ್ತೆಯ ತಾಯಿ ಮತ್ತವರ ಕುಟುಂಬ ಮೊದಲಿಗೆ ಒಪ್ಪಿತ್ತಾದರೂ ಅಂತಿಮವಾಗಿ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರು. ಉನ್ನಾವೋ ಸಂತ್ರಸ್ತೆಯ ತಾಯಿ ಸದಾರ್ ಆಶಾ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಧೈರ್ಯ ತೋರಿ ಕಣದಲ್ಲಿದ್ದಾರೆ. ಇಂದು ಮತದಾನದ ಬಳಿಕ ಮಾತನಾಡಿದ ಸದಾರ್ ಆಶಾ ಸಿಂಗ್ ಅವರು ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಏನನ್ನೂ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.
ತಾವು ಕಾಂಗ್ರೆಸ್ ಅಭ್ಯರ್ಥಿ ಆದ ಬಗ್ಗೆ ಪ್ರತಿಕ್ರಿಯಿಸಿದ ಆಶಾ ಸಿಂಗ್ ಅವರು ಪ್ರಿಯಾಂಕಾ ಗಾಂಧೀಜಿ ನನ್ನ ನೋವು ಮತ್ತು ದುಃಖವನ್ನು ಅರ್ಥಮಾಡಿಕೊಂಡು ನನಗೆ ಟಿಕೆಟ್ ನೀಡಿದರು. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಅವರ ಮತ್ತು ಎಲ್ಲಾ ಮಹಿಳೆಯರ ಪರವಾಗಿ ನಿಲ್ಲುತ್ತೇನೆ. ಹೆಚ್ಚಿನ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಮಹಿಳೆಯರು ರಾಜಕೀಯಕ್ಕೆ ಬಂದಾಗ, ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳು ನ್ಯಾಯವನ್ನು ಪಡೆಯಬಹುದು ಎಂದು ಭರವಸೆ ಮೂಡಿಸಿದರು. ಈ ಹಿನ್ನೆಲೆಯಲ್ಲಿ ನಾನು ಎಲ್ಲಾ ಯುವತಿಯರಿಗೆ ‘ಲಡ್ಕಿ ಹೂ.., ಲಡ್ ಸಕ್ತಿ ಹೂ..’ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ನನ್ನ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ. ಬೇರೆ ಸರ್ಕಾರ ಬಂದರೆ ಎಲ್ಲಾ ಮಹಿಳೆಯರಿಗೆ ನ್ಯಾಯ ಸಿಗಬಹುದು. ನನ್ನ ಮಗಳು ಮತ್ತು ಕುಟುಂಬಕ್ಕೆ ಆದದ್ದು ಬೇರೆಯವರಿಗೆ ಆಗಬಾರದು. ನಾನು ನನ್ನ ಇಡೀ ಕುಟುಂಬವನ್ನು ಕಳೆದುಕೊಂಡಿದ್ದೇನೆ. ನನ್ನ ಸೋದರ ಮಾವ ಇನ್ನೂ ಜೈಲಿನಲ್ಲಿದ್ದಾರೆ. ಈಗ ಜನರು ನನಗೆ ಮತ ಹಾಕುತ್ತಾರೆ ಎಂದು ಭಾವಿಸುತ್ತೇನೆ. ನಾನು ಈ ಯುದ್ಧವನ್ನು ಉತ್ತರ ಪ್ರದೇಶದ ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗಾಗಿ ಮಾಡುತ್ತಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ.
ಲಖಿಂಪುರ್ ಖೇರಿ ಪ್ರಕರಣದ ಪರಿಣಾಮ
ಉನ್ನಾವೋ ಘಟನೆಯಷ್ಟೇ ಲಖೀಂಪುರ್ ಖೇರಿ ರೈತರ ಹತ್ಯಾಕಾಂಡವೂ ಕೂಡ ಉತ್ತರ ಪ್ರದೇಶ ಚುನಾವಣೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ಲಖೀಂಪುರ್ ಖೇರಿ ಮತ್ತು ಸುತ್ತಲಿನ ಜಿಲ್ಲೆಗಳಲ್ಲೂ ಇಂದು 4ನೇ ಹಂತದ ಮತದಾನ ನಡೆಯುತ್ತಿದೆ. 2021ರ ಅಕ್ಟೋಬರ್ 3ರಂದು ನಡೆದ ಲಖಿಂಪುರ ಖೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿದರು. ಇದರಿಂದ ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತ ಕೊಲೆಯಾದರು ಎನ್ನುವುದು ಇಲ್ಲಿನ ಜನರ ವಾದ. ಹಾಗಾಗಿ ಈ ಭಾಗದ ರೈತರು ವಿಶೇಷವಾಗಿ ಶೇಕಡಾ 25ರಷ್ಟಿರುವ ಸಿಖ್ ರೈತರು ಬಿಜೆಪಿ ವಿರುದ್ಧ ಕೆಂಡಮಂಡಲರಾಗಿದ್ದಾರೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಲಖಿಂಪುರ ಖೇರಿ ಮತ್ತು ನೆರೆಯ ಜಿಲ್ಲೆಗಳಾದ ಪಿಲಿಭಿತ್, ಹರ್ದೋಯಿ ಮತ್ತು ಸೀತಾಪುರದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು. ಪಿಲಿಭಿತ್ನ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಹರ್ದೋಯ್ನಲ್ಲಿ ಬಿಜೆಪಿ 8 ವಿಧಾನಸಭಾ ಸ್ಥಾನಗಳ ಪೈಕಿ 7 ಸ್ಥಾನಗಳನ್ನು ವಶಪಡಿಸಿಕೊಂಡಿತ್ತು. ಸೀತಾಪುರದಲ್ಲಿ ಬಿಜೆಪಿ 9 ರಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಒಂದೆಡೆ ರೈತರು ಮತ್ತೊಂದೆಡೆ ದಲಿತರು ಮುನಿದಿರುವುದರಿಂದ ಬಿಜೆಪಿ ಚಿಂತಾಕ್ರಾಂತವಾಗಿದೆ. ರೈತರು ಮತ್ತು ದಲಿತರು ಬಿಜೆಪಿಯನ್ನು ಸೋಲಿಸಲೇಬೇಕೆಂದು ನಿರ್ಧರಿಸಿದ್ದರೆ ಬಿಜೆಪಿ ಇಲ್ಲಿ ವೈಟ್ ವಾಷ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಬಹಳ ನಿರ್ಣಾಯಕವಾಗಿರುವ 4ನೇ ಹಂತದಲ್ಲಿ ಉನ್ನಾವೋ ಮತ್ತು ಲಖೀಂಪುರ್ ಖೇರಿ ಪ್ರಕರಣಗಳು ದುಸ್ವಪ್ನವಾಗಿ ಪರಿಣಮಿಸಿವೆ.