ಬಹಳ ವರ್ಷಗಳ ನಂತರ ಸ್ಯಾಂಡಲ್‌ವುಡ್ ನಟ ಕೋಮಲ್ ಕುಮಾರ್ ಅಭಿನಯದ ʻಉಂಡೆನಾಮʼ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ʻಉಂಡೆನಾಮʼ.. ಕಾಮಿಡಿ ಕಚಗುಳಿ ಜೊತೆಗೆ ಕ್ಲೈಮ್ಯಾಕ್ಸ್‌ನಲ್ಲಿ ಒಂದೊಳ್ಳೆ ಮೆಸೇಜ್ ಕೊಡುವ ಸಿನಿಮಾ.

ಚಿತ್ರದ ಆರಂಭದಲ್ಲೇ ಜೈಲು ಸೇರಿರುವ ನಾಯಕ.. ನಾಯಕ ಯಾಕೆ ಜೈಲು ಪಾಲಾದ ಅಂತ ಸಿನಿಮಾವನ್ನ ಕೊನೆಯ ಹಂತದವರೆಗೂ ನೋಡಲೇ ಬೇಕು.. ಚಿಕ್ಕ ವಯಸ್ಸಿನಲ್ಲಿ ಮಗನ ಬಾಯಿ ಮುಚ್ಚಿಸೋಕೆ ತಂದೆ ಹೇಳುವ ಮಾತು, ಆತನನ್ನೇ ಗೋಜಿಗೆ ಸಿಲುಕಿಸುವಂತೆ ಮಾಡುತ್ತೆ. ನಾಯಕ ದೊಡ್ಡವನಾದ ಮೇಲೆ ತನ್ನ ತಂದೆ ಯಾಕೆ ಆ ರೀತಿ ಹೇಳಿದ್ರು ಅಂತ ಮಗನಿಗೆ ಅರಿವಾಗುವಷ್ಟರಲ್ಲಿ, ಆತನಿಗೆ ಮದುವೆಯಾಗಬೇಕೆಂಬ ಆಸೆ ಬಂದುಬಿಡುತ್ತೆ.

ಮಾತು ಮಾತಿಗೂ ಅಪಶಕುನದ ಮಾತುಗಳ್ನಾಡೋ ತಾಯಿ ಜೊತೆ ಹೆಣ್ಣು ನೋಡೋ ಶಾಸ್ತ್ರಕ್ಕೆ ಹೋಗ್ತಾನೆ ನಾಯಕ.. ಇನ್ನೇನು ಎಲ್ಲಾ ಓಕೆ ಅನ್ನೋ ಅಷ್ಟರಲ್ಲೇ ಮದುವೆ ಕ್ಯಾನ್ಸಲ್.. ತನ್ನ ಮದುವೆ ಯಾಕೆ ಕ್ಯಾನ್ಸಲ್ ಆಗ್ತಿದೆ ಅಂತ ಕಾರಣ ಹುಡುಕಿಕೊಂಡು ಹೊರಟ ನಾಯಕನಿಗೆ ಅಲ್ಲೊಂದು ಶಾಕ್ ಕಾದಿರುತ್ತೆ.. ತಂದೆಗಾಗಿ ಮದುವೆಯಾಗೋ ಆಸೆಯನ್ನೇ ಬಿಡುವ ನಾಯಕ, ಅಡ್ಡದಾರಿ ಹಿಡಿಯಲು ಹೋಗ್ತಾನೆ.

ಇರಲಾರದೆ ಇರುವೆ ಬಿಟ್ಟುಕೊಂಡ್ರು ಅನ್ನೋ ಹಾಗೆ, ಯಾವೋದೋ ಆಸೆಗೆ ಬಿದ್ದು ಪಜೀತಿಗೆ ಸಿಕ್ಕಿಹಾಕಿಕೊಳ್ತಾನೆ.. ಎಂಜಾಯ್‌ಮೆಂಟ್‌ಗೆ ಅಂತ ಬಂದ ನಾಯಕನ ಫ್ರೆಂಡ್ ಕೂಡ ಆತನ ಜೊತೆ ಮನೆಯಲ್ಲೇ ಲಾಕ್ ಆಗ್ತಾನೆ.. ಕೊರೊನಾ ಲಾಕ್‌ಡೌನ್ ಟೈಮ್ ಹೇಗಿತ್ತು ಅನ್ನೋದನ್ನ ತೋರಿಸುವುದರ ಜೊತೆಗೆ ವೀಕ್ಷಕರಿಗೆ ಮುಜುಗರವಾಗುವಂತಹ ದೃಶ್ಯಗಳೂ ಕೂಡ ಈ ಚಿತ್ರದಲ್ಲಿವೆ.

ಅಲ್ಲಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳು ಇದ್ದರೂ, ಕೆಲ ಡೈಲಾಗ್‌ಗಳು ಸಿನಿಪ್ರೇಕ್ಷಕರ ಮೊಗದಲ್ಲಿ ಮುಗುಳ್ನಗೆ ತರಿಸಬಹುದು. ತಾನು ಮಾಡಿದ ಯಡವಟ್ಟಿನಿಂದ ಹೊರಗೆ ಬರೋದು ಹೇಗೆ ಅಂತ ಸಿಕ್ಕಾಪಟ್ಟೆ ಸರ್ಕಸ್ ಮಾಡೋ ನಾಯಕ ಕೊನೆಗೆ ತಾನಾಗಿಯೇ ಸರೆಂಡರ್ ಆಗ್ತಾನೆ.. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಕೆಲಸವನ್ನ ನಿರ್ದೇಶಕರು ಮಾಡಿದ್ದಾರೆ.

ನಟ ಕೋಮಲ್ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿರೋ ಮೊದಲ ಸಿನಿಮಾ ಅಂತ, ಬಹಳ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಸಿನಿಮಾ ನೋಡಿದ್ಮೇಲೆ ತುಸು ಬೇಸರವಾಗೋದಂತೂ ಪಕ್ಕಾ.. ಒಟ್ನಲ್ಲಿ ಅರೆಬರೆ ಕಾಮಿಡಿ ಜೊತೆಗೆ ಒಂದೆಳ್ಳೆ ಮೆಸೇಜ್ ಸಾರುತ್ತಾ ʻಉಂಡೆನಾಮʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ ನಟ ಕೋಮಲ್ ಕುಮಾರ್.