ಮೈಸೂರು : ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿ ನಿವಾಸಕ್ಕೆ ಇಂದು ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಮೈಸೂರಿನಲ್ಲಿರುವ ಅವರ ನಿವಾಸಕ್ಕೆ ತೆರಳಿದ ಸಚಿವ ವಿ.ಸೋಮಣ್ಣ ವರುಣ ಕ್ಷೇತ್ರದಲ್ಲಿ ಕಾಪು ಬೆಂಬಲವನ್ನು ಕೇಳಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿದ್ದರು. ಈ ಬಾರಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಕಾಪು ಬೆಂಬಲವನ್ನು ಕೇಳಿದ್ದಾರೆ ಎನ್ನಲಾಗಿದೆ.

ನೀನೆ ನನ್ನ ಸೈನ್ಯದ ಕಮಾಂಡರ್ ಆಗಬೇಕು ಎಂದು ವಿ. ಸೋಮಣ್ಣ ಕಾಪು ಬಳಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಆರಂಭಗೊಳ್ಳಲಿ ಎಂದು ಬೆಳಗ್ಗೆಯೇ ನಿಮ್ಮ ಹೆಸರಲ್ಲಿ ಪೂಜೆ ಮಾಡಿಸಿದ್ದೇನೆ ಎಂದು ಕಾಪು ವಿ.ಸೋಮಣ್ಣ ಬಳಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ

ಕಾಪು ಸಿದ್ದಲಿಂಗಸ್ವಾಮಿಯನ್ನು ಭೇಟಿಯಾದ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಯಾವುದೋ ಜನ್ಮದಲ್ಲಿ ಕಾಪು ನನ್ನ ಅಣ್ಣನಾಗಿಯೋ , ತಮ್ಮನಾಗಿಯೋ ಹುಟ್ಟಿರಬೇಕು. ಸಿದ್ದಲಿಂಗಸ್ವಾಮಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ.ವರುಣಗೆ ಯಡಿಯೂರಪ್ಪ, ಸಿಎಂ, ಛಲವಾದಿ ನಾರಾಯಣಸ್ವಾಮಿ ಬರಲಿದ್ದು.ಆ ಎಲ್ಲಾ ಜವಾಬ್ದಾರಿ ಸಿದ್ದಲಿಂಗಸ್ವಾಮಿಗೆ ನೀಡಿದ್ದೇನೆ.ಇಂದಿನಿಂದ ವರುಣದಲ್ಲಿ ಪ್ರಚಾರ ಆರಂಭಿಸಿದ್ದೇವೆ.ವರುಣವನ್ನ ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಸೋಮಣ್ಣ, ಲಕ್ಷ್ಮಣ ಸವದಿಗೆ ಗುಡ್ ಲಕ್ ಎಂದಿದ್ದಾರೆ.






