ತಮಾಷೆ ಮಾಡಲು ಹೋಗಿ ಸರ್ಕಾರಿ ಬಸ್ ಡ್ರೈವರ್ (Bus driver) ಕೆಲಸದಿಂದ ಅಮಾನತಾಗಿರುವ ಘಟನೆ ನಡೆದಿದೆ. ಇತ್ತೀಚೆಗೆ ಇವರ ವಿಡಿಯೋ ಒಂದು ವೈರಲ್ ಆಗಿತ್ತು. ಈ ಬಗ್ಗೆ ಕ್ರಮ ಕೈಗೊಂಡಿರುವ ಸಾರಿಗೆ ನಿಯೋಗ ಇತರೇ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.
ಈ ಚಾಲಕ ಬಸ್ ಚಲಾಯಿಸುವಾಗ ಛತ್ರಿ ಹಿಡಿದು NWKRTC ಬಸ್ ಚಲಾಯಿಸಿದ್ದ ವಿಡಿಯೋ ವೈರಲ್ ಆಗಿತ್ತು . ಇದೀಗ ಈ ವಿಡಿಯೋನ ಅಸಲಿಯತ್ತು ಬಯಲಾಗಿದೆ. ಮನೋರಂಜನೆಗಾಗಿ ಛತ್ರಿ ಹಿಡಿದು ಬಸ್ ಚಲಾಯಿಸಿದ್ದ ಡ್ರೈವರ್ ಹನುಮಂತಪ್ಪ ಕಿಲ್ಲೇದಾರ (Hanumanthappa killedara) ಅಮಾನತುಗೊಂಡಿದ್ದಾರೆ.
ಬಸ್ ಸೋರುತ್ತಿದೆ ಎನ್ನುವಂತೆ ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿದ್ದಂತೆಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತನಿಖೆ ನಡೆಸಿದ್ದು, ಮನರಂಜನೆಗಾಗಿ ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಹನುಮಂತಪ್ಪ ಕಿಲ್ಲೇದಾರ ಅವರನ್ನು ಸಸ್ಪೆಂಡ್ (Suspend) ಮಾಡಲಾಗಿದೆ. ಬಸ್‌ನಲ್ಲಿ ಮಳೆ ನೀರು ಸೋರುತ್ತಿರಲಿಲ್ಲ. ಬಸ್ ನಲ್ಲಿ ಪ್ರಯಾಣಿಕರು ಯಾರು ಇಲ್ಲದ ವೇಳೆಯಲ್ಲಿ ಕಂಡಕ್ಟರ್ ಅನಿತಾ ಹೆಚ್ ಬಳಿಯಿದ್ದ ಛತ್ರಿ ತೆಗೆದುಕೊಂಡು ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ಹೀಗಾಗಿ ಚಾಲಕ ಹನುಮಂತಪ್ಪ ಕಿಲ್ಲೇದಾರ, ನಿರ್ವಾಹಕಿ ಅನಿತಾ ಇಬ್ಬರನ್ನೂ ಅಮಾನತು ಮಾಡಲಾಗಿದೆ.