ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು (Russian Ukraine War) ಜಗತ್ತಿನಾದ್ಯಂತ ಸುದ್ದಿಯಲ್ಲಿದೆ. ಕ್ಷಣಕ್ಷಣಕ್ಕೂ ಬಾಂಬ್ ಸದ್ದು ಕೇಳಿಸುತ್ತಿವೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಉಕ್ರೇನ್ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎನ್ನಲಾಗಿದೆ. ಇದರ ನಡುವೆ ಭಾರತೀಯ ವಿದ್ಯಾರ್ಥಿಗಳು (indian students) ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಭಾರತೀಯ ವಿದ್ಯಾರ್ಥಿಗಳನ್ನು ವಾಪಾಸ್ ಕರೆತರಲು ಬೇಕಾದ ಚಿಂತನೆಗಳು ವಿದೇಶಾಂಗ ಸಚಿವಾಲಯ ನಡೆಸುತ್ತಿದೆ. ಇದರ ಜೊತೆಗೆ ಕರ್ನಾಟಕ ವಿದ್ಯಾರ್ಥಿಗಳು ಕೂಡ ಭಯದ ವಾತಾವರಣದಲ್ಲಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ (karnataka government) ತುರ್ತು ಆಪರೇಷನ್ ಸೆಂಟರ್ ತೆರೆದಿದ್ದು ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿ ವಿದೇಶಾಂಗ ಸಚಿವಾಲಯಕ್ಕೆ ರಚಾನಿಸುತ್ತಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಿದ ನಿರ್ದೇಶಕ ಮನೋಜ್ ರಾಜನ್ (manoj rajan) ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಕಂದಾಯ ಇಲಾಖೆಯ (Revenue Department) ಕಚೇರಿಯಲ್ಲಿ ತುರ್ತು ಆಪರೇಷನ್ ಸೆಂಟರ್ ತೆರೆಯಲಾಗಿದೆ. ಉಕ್ರೇನ್ ನಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳ ಸುರಕ್ಷಿತೆಯ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿದೆ.
ಈವರೆಗೆ ತುರ್ತು ಆಪರೇಷನ್ ಸೆಂಟರ್ ನಲ್ಲಿ ಒಟ್ಟು 281 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಇರುವುದಾಗಿ ವರದಿಯಾಗಿದೆ. ಪೋಷಕರ ಹಾಗೂ ಸಂಬಂಧಪಟ್ಟವರಿಂದ ಬಂದ ಮಾಹಿತಿಯ ಆಧಾರದ ಮೇರೆಗೆ ಈ ವರದಿ ತಯಾರಿಸಲಾಗಿದೆ. ಈ ವರದಿಯನ್ನು ಈಗಾಗಲೇ ಸರ್ಕಾರದ ಒಪ್ಪಿಗೆ ಪಡೆದು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಲಾಗಿದೆ. ಅಲ್ಲದೆ ಸುಗಮ ಸಂಪರ್ಕಕ್ಕೆ ರಾಜ್ಯ ಸರ್ಕಾರ ಒಂದು ಆ್ಯಪ್ ಹಾಗೂ ಜಾಲತಾಣವನ್ನು ಸಿದ್ಧಪಡಿಸಿದ್ದು, ಈ ಮೂಲಕ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಮಾಹಿತಿ ಹಂಚಿಕೊಂಡರೆ ಸಾಕು. ukraine.karnataka.tech ಎಂಬ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರು ಮಾಹಿತಿ ಲಗತ್ತಿಸಿದರೆ ಕೂಡಲೇ ತುರ್ತು ಆಪರೇಷನ್ ಸೆಂಟರ್ ಬೇಕಾದ ಕ್ರಮಗಳ ಭರವಸೆ ನೀಡಿದೆ.
ಸುರಕ್ಷಿತೆ, ಆಹಾರ, ರಕ್ಷಣೆ ಹೀಗೆ ಮೂರು ವಿಭಾಗವನ್ನು ಮಾಡಿ ಈ ತುರ್ತು ಆಪರೇಷನ್ ಸೆಂಟರ್ ತಂಡ ಕೆಲಸ ಮಾಡಲಿದೆ. ಮೊದಲು ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಸುರಕ್ಷತೆಗೆ ಆಧ್ಯತೆ ಕೊಡಲಾಗಿದೆ. ಬಳಿಕ ಅವರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಎಂಬೆಸ್ಸಿ ಮೂಲಕ ತಲುಪಿಸುವ ಕೆಲಸ ನಡೆಯಲಿದೆ. ಅದಾದ ಬಳಿಕ ಪರಿಸ್ಥಿತಿ ನೋಡಿಕೊಂಡಿ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವ ಕೆಲಸವಾಗಲಿದೆ ಎಂದು ಈ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿರುವ ಮನೋಜ್ ರಾಜನ್ ತಿಳಿಸಿದ್ದಾರೆ.
ಒಟ್ಟಾರೆ ಉಕ್ರೇನ್ – ರಷ್ಯಾ ನಡುವಣ ಈ ಸಂಘರ್ಷ ಜಗತ್ತಿನಾದ್ಯಂತ ಇರುವ ಜನರ ನಿದ್ದೆಗೆಡಿಸಿದೆ. ಯಾವ ಕ್ಷಣದಲ್ಲೂ ಬೇಕಿದ್ದರೂ ಸಂಘರ್ಷ ಮತ್ತಷ್ಟು ಭೀಕರಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿವೆ.