ಶಿವಮೊಗ್ಗ:ಮಾ.18: ಸಾಹಿತಿ, ರಾಜಕಾರಣಿ, ವಚನ ಸಾಹಿತ್ಯ ಸಂಶೋಧಕಿ ಲೀಲಾದೇವಿ ಆರ್ ಪ್ರಸಾದ್ ಹಿಂದೆ ಕನ್ನಡ ಹಾಗೂ ಸಂಸ್ಕೃತಿ ಸಚಿವೆಯಾಗಿದ್ದವರು. ಬಹಳಷ್ಟು ಜನರಿಗೆ ಗೊತ್ತಿಲ್ಲ, ಅವರು ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿಯಲ್ಲಿ 5 ದಶಕಗಳ ಹೊರಾಟ ಮಾಡಿಕೊಂಡು ಬಂದವರು. ಅಂದು ಅಕ್ಕನ ದೇಗುಲದ ಸುತ್ತಲ ಬೀಳು ಬಿದ್ದಿದ್ದ, ಪೊದೆ, ಗಿಡ-ಗಂಟಿಗಳಿಂದ ಕೂಡಿದ್ದ, ಒತ್ತುವರಿಯಾಗುತ್ತಿದ್ದ ಗೋಮಾಳ ಜಾಗವನ್ನ ಉಳಿಸಿಕೊಂಡು ಬಂದವರು. ಸರ್ಕಾರದಿಂದ ಜಮೀನು ಪಡೆದು ಉಡುತಡಿ ಅಕ್ಕಮಹಾದೇವಿ ಸಮಿತಿಗೆ ರಿಜಿಸ್ಟರ್ ಮಾಡಿಸಿದ್ದಕ್ಕಾಗಿ ಇಂದು ಭವ್ಯವಾದ ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಂಡಿದೆ ಹಾಗೂ ಸುತ್ತಲ ಜಾಗ ಅಕ್ಷರಧಾಮವಾಗಿ ರೂಪುಗೊಳ್ಳುತ್ತಿದೆ. ಇಂತಹ ಸಾಧಕಿ ಹಾಗೂ ಸಂರಕ್ಷಕಿಯನ್ನ ಹಿಂದಿನಿಂದಲೂ ಯಡಿಯೂರಪ್ಪ ಕುಟುಂಬ ಗೌರವಿಸಿಕೊಂಡು ಬಂದಿದ್ದು, ಅವರ ಆಶಯದಂತೆ ಸ್ಥಳ ಅಭಿವೃದ್ಧಿ ಮಾಡಿದೆ. ದುರಾದೃಷ್ಟವಶಾತ್ ಇಂದು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಹಾಗೂ ಯಡಿಯೂರಪ್ಪ ಜೊತೆ ಕೂತಿದ್ದ ಲೀಲಾದೇವಿಗೆ ಮಾತನಾಡಲು ಅವಕಾಶನೇ ನೀಡಲಿಲ್ಲ. ಕಷ್ಟದ ದಿನಗಳನ್ನ ಹೇಳಿಕೊಳ್ಳಬೇಕು ಎಂದುಕೊಂಡಿದ್ದ ಲೀಲಾದೇವಿ ಗದ್ಗದಿತರಾದರು. ಅಕ್ಕನ ಕಾರ್ಯಕ್ರಮದಲ್ಲಿ ಮಹಿಳೆಗೆ ಅವಕಾಶ ಇಲ್ಲ. ಈ ಜಾಗ ಉಳಿಸಿಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದೇನೆ ಎಂದು ನನಗೆ ಮಾತ್ರ ಗೊತ್ತು.ಅಂದು ಮುಸ್ಲಿಂ ಸಮುದಾಯದವರೂ ಸಹ ನನ್ನ ಮೇಲೆ ದಂಡೆತ್ತಿ ಬಂದಿದ್ದರು ಎಂದು ಹಳೆಯ ದಿನಗಳನ್ನ ನೆನೆದರು.
ಇದು ಪವಿತ್ರವಾದ ಕಾರ್ಯಕ್ರಮ. ಸುಮಾರು ಐವತ್ತು ವರ್ಷಗಳ ಹಿಂದೆ ಉಡುತಡಿಗೆ ನಾನು ಬಂದವಳು. ಹಿಂದೆ ನಾನು ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ಬಸವಕಲ್ಯಾಣ ಮಾಡುವಾಗ ಉಡುತಡಿ ಮಾಡಬೇಕು ಎಂದು ಹೇಳಿದವಳು ನಾನು. ಅಗ ಉಡುತಡಿಯಲ್ಲೇನಿದೆ ಎಂದು ನನ್ನ ಪ್ರಶ್ನಿಸುತ್ತಿದ್ದರು. ಅಕ್ಕಮಹಾದೇವಿ ಸುಪ್ರಭಾತದಿಂದ ಸಂಪುಟದವರೆಗೆ ರಚಿಸಿ, ಯಾತ್ರೆಯನ್ನೂ ಮಾಡಿಸಿದವಳು ನಾನು. ಈ ಮಟ್ಟಿಗೆ ಇದು ಅಭಿವೃದ್ಧಿಯಾಗಲು ನಾನೇ ಕಾರಣ. ಅಂದು ನನಗೆ ಹುಚ್ಚು ಹಿಡಿದಿದೆ ಎನ್ನುತ್ತಿದ್ದರು. ಅಭಿವೃದ್ಧಿ ಮಾಡುತ್ತೇನೆ ಎಂದರೆ ನಗುತ್ತಿದ್ದರು. ಗೋಮಾಳವನ್ನ ರಕ್ಷಣೆ ಮಾಡಿ ಮೂವತ್ತು ವರ್ಷ ಲೀಸ್ ಪಡೆದಿದ್ದೆ. ಅದನ್ನ ಕೊಂಡುಕೊಳ್ಳುತ್ತೀರಾ ಎಂದಿದ್ದರು. ಅಂದು ಹಣ ನೀಡಿ ಸಮಿತಿಗೆ ಭೂಮಿ ಪಡೆದಿದ್ದೆ. ಅದೇ ಜಾಗ ಇಂದು ಅಭಿವೃದ್ಧಿಗೆ ಅನುವಾಗಿದೆ ಎಂದು ಲೀಲಾದೇವಿ ಬೇಸರ ವ್ಯಕ್ತಪಡಿಸಿದರು.
ತೊಂಭತ್ತರ ಆಸುಪಾಸಿನಲ್ಲಿರುವ ಲೀಲಾದೇವಿ ಅಕ್ಕನ ವಚನ ಸಾಹಿತ್ಯ ಹೊರದೇಶದಲ್ಲಿ ಪಸರಿಸಲು, ನಾನಾ ಭಾಷೆಯಲ್ಲಿ ತರ್ಜುಮೆ ಮಾಡಲು ಶ್ರಮಿಸಿದವರು. ಶಿವಮೊಗ್ಗ ಎಂಪಿ ಬಿವೈ ರಾಘವೇಂದ್ರ ಅವಕಾಶ ನೀಡೋದಾಗಿ ಹೇಳಿದ್ದರು ಆದರೆ ನೀಡಲಿಲ್ಲ. ನಾನು ಮಹಿಳೆ ಎಂದು ತಾತ್ಸಾರ ಮಾಡಿದ್ದಾರೆ. ಎರಡು ನಿಮಿಷ ಮಾತಾಡ್ತಿದ್ದೆ. ಅದರ ಅವಶ್ಯಕತೆ ಇತ್ತು ಎಂದು ಲೀಲಾದೇವಿ ಕಣ್ಣೀರಿಟ್ಟರು.