ನಾ ದಿವಾಕರ
ಬೆಂಗಳೂರು: ಮಾ.18: ಭಾರತದಲ್ಲಿ ಮಹಿಳಾ ಸುಧಾರಣೆಯ ಧ್ವನಿಗೆ ಶತಮಾನಗಳ ಇತಿಹಾಸವೇ ಇದೆ. ವೈದಿಕಶಾಹಿಯಲ್ಲಿ ಅಲ್ಲಗಳೆಯಲಾಗಿದ್ದ ಸ್ತ್ರೀ ಸ್ವಾತಂತ್ರ್ಯ ಮತ್ತು ಮುಕ್ತತೆಯನ್ನು ಬೌದ್ಧ ಧಮ್ಮದ ಉನ್ನತಿಯ ಕಾಲದಲ್ಲಿ ಮರಳಿ ಪಡೆಯಲಾಗಿದ್ದನ್ನು ಇತಿಹಾಸ ದಾಖಲಿಸಿದೆ. ಬೌದ್ಧ ಧಮ್ಮದ ಅವನತಿಯ ನಂತರ ಹಲವು ಶತಮಾನಗಳ ಕಾಲ ಭಾರತದಲ್ಲಿ ಮಹಿಳೆಯರು ಅಸಮಾನತೆಯ ನೆರಳಿನಲ್ಲೇ ಬದುಕಿರುವುದೂ ಚಾರಿತ್ರಿಕ ಸತ್ಯ. 19ನೆಯ ಶತಮಾನದ ಆದಿಯಲ್ಲಿ ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್ ಮುಂತಾದವರು ಸತಿ ಸಹಗಮನ, ಬಾಲ್ಯ ವಿವಾಹ ಪದ್ಧತಿಯನ್ನು ವಿರೋಧಿಸಿದ್ದು, ವಿಧವಾ ವಿವಾಹಕ್ಕೆ ಉತ್ತೇಜನ ನೀಡಿದ್ದು ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದುದನ್ನು ಕಾಣುತ್ತೇವೆ. ಇದೇ ಪರಂಪರೆಯ ಮುಂದುವರಿಕೆಯಾಗಿ ನಾವು ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಮಾಜ ಸುಧಾರಣೆಯ ಪ್ರಯತ್ನಗಳನ್ನು ಗಮನಿಸಬಹುದು.
19ನೆಯ ಶತಮಾನದ ಆರಂಭಿಕ ಹಂತದ ಸಮಾಜ ಸುಧಾರಣೆಗಳಿಗೂ , ಉತ್ತರಾರ್ಧದಲ್ಲಿ ಫುಲೆ ಅವರ ಸತ್ಯಶೋಧಕ ಸಮಾಜ ಕೈಗೊಂಡ ಸುಧಾರಣಾ ಕ್ರಮಗಳಿಗೂ ಇದ್ದ ಮೂಲಭೂತ ವ್ಯತ್ಯಾಸ ಎಂದರೆ, ಜ್ಯೋತಿ ಬಾ ಫುಲೆ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಾಧಿಸಲು ಶಿಕ್ಷಣವೇ ಪ್ರಧಾನ ಅಸ್ತ್ರ ಎಂದು ಪರಿಗಣಿಸಿದ್ದೇ ಅಲ್ಲದೆ, ತಳಸಮುದಾಯದ ಹೆಣ್ಣುಮಕ್ಕಳಿಗೆ ಸಾರ್ವತ್ರಿಕ ಶಿಕ್ಷಣ ನೀಡುವ ಕ್ರಾಂತಿಕಾರಕ ಕ್ರಮಗಳನ್ನು ಕೈಗೊಂಡಿದ್ದರು. ಮಹಿಳೆಯರಿಗೂ ಸಾರ್ವತ್ರಿಕ ಶಿಕ್ಷಣ ಲಭ್ಯವಾಗಬೇಕು ಎಂಬ ಆಲೋಚನೆಗೆ ಸಾರ್ವಜನಿಕ ಮನ್ನಣೆ ದೊರೆತಿದ್ದೇ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾಯ್ ಫುಲೆ ಅವರ ಸಾಂಸ್ಥಿಕ-ಸಂಘಟಿತ ಪ್ರಯತ್ನಗಳ ಮೂಲಕ. ಅಂದಿನ ದಿನಗಳಲ್ಲಿ ಫುಲೆ ದಂಪತಿಗಳು ಎದುರಿಸಿದ ಬವಣೆಯೇ ನಮ್ಮ ಸಮಾಜದಲ್ಲಿ ಇಂದಿಗೂ ಕಾಣಲಾಗುತ್ತಿರುವ ಜಾತಿ ಶ್ರೇಷ್ಠತೆಯ ಕ್ರೌರ್ಯವನ್ನು ಬಿಂಬಿಸುವಂತಿರುತ್ತದೆ.
20ನೆಯ ಶತಮಾನದ ಆರಂಭದಲ್ಲಿ ಚಾಲನೆ ಪಡೆದುಕೊಂಡ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೂ ಸಹ, ಮಹಾತ್ಮ ಗಾಂಧಿಯನ್ನೂ ಸೇರಿದಂತೆ ರಾಷ್ಟ್ರೀಯ ನಾಯಕರಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಪೂರ್ವಗ್ರಹಗಳು ಧಾರಾಳವಾಗಿದ್ದವು. ಗಾಂಧಿ ತಮ್ಮ ಹೋರಾಟಗಳು ಉಚ್ಛ್ರಾಯ ಮಟ್ಟ ತಲುಪಿದ ಹಂತದಲ್ಲಷ್ಟೇ ಮಹಿಳೆಯರು ಸಾರ್ವಜನಿಕವಾಗಿ ಮುಕ್ತವಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಅಭಿಪ್ರಾಯ ತಳೆದಿದ್ದರು. ಆದರೆ ಈ ಕಾಲಘಟ್ಟದ ರಾಷ್ಟ್ರೀಯವಾದಿಗಳಲ್ಲಿ ಮತ್ತು ಸಂಪ್ರದಾಯವಾದಿ ಮೃದು ಧೋರಣೆಯ ನಾಯಕರಲ್ಲಿ ಮಹಿಳೆಯರ ಬಗ್ಗೆ ಇದ್ದ ಸಾಂಪ್ರದಾಯಿಕ ನಿಲುವುಗಳು ಸ್ವಾತಂತ್ರ್ಯಾನಂತರವೂ ಬದಲಾಗಿರಲಿಲ್ಲ ಎನ್ನುವುದು ಹಿಂದೂ ಕೋಡ್ ಬಿಲ್ ಸಂದರ್ಭದಲ್ಲಿ ಕಂಡುಬಂದ ವಿವಾದಗಳಿಂದ ಸ್ಪಷ್ಟವಾಗುತ್ತದೆ.
ಈ ಕಾಲಘಟ್ಟದಲ್ಲಿ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮಧರ್ಮವನ್ನು ಕಟುವಾಗಿ ಟೀಕಿಸುವುದೇ ಅಲ್ಲದೆ, ಈ ವ್ಯವಸ್ಥೆಯೊಳಗಿನ ಸಾಮಾಜಿಕ ಪೀಡೆಗಳನ್ನು, ಜಟಿಲತೆಗಳನ್ನು ಮತ್ತು ಮನುಜ ವಿರೋಧಿ ಧೋರಣೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಕೀರ್ತಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಸಲ್ಲಬೇಕಾಗುತ್ತದೆ. ಜಾತಿ ವ್ಯವಸ್ಥೆಯನ್ನು ಕುರಿತ ತಮ್ಮ ವಿಶ್ಲೇಷಣೆಯಲ್ಲಿ ಅಂಬೇಡ್ಕರ್, ಜಾತಿಯನ್ನು ಮುಚ್ಚಿಡಲ್ಪಟ್ಟ ವರ್ಗಗಳು ಎಂದು ಕರೆಯುತ್ತಾರೆ. ಜಾತಿಯ ಚೌಕಟ್ಟಿನಿಂದಾಚೆಗೆ ವಿವಾಹದ ಸ್ವಾತಂತ್ರ್ಯ ಇಲ್ಲದಿರುವುದೇ ಜಾತಿ ವ್ಯವಸ್ಥೆಯ ಮೂಲ ಸತ್ವ ಎಂದೂ ಗುರುತಿಸುತ್ತಾರೆ. ಈ ವಿಶ್ಲೇಷಣೆಯಿಂದಾಚೆಗೆ ಅಂಬೇಡ್ಕರ್ ಜಾತಿ ವ್ಯವಸ್ಥೆಗೂ ಮಹಿಳೆಯ ಪರಾಧೀನತೆಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ವಿಶ್ಲೇಷಿಸುತ್ತಾರೆ. ಜಾತಿ ವ್ಯವಸ್ಥೆಯ ಸತ್ವವನ್ನು ಮಾಲಿನ್ಯ ಅಥವಾ ಅಸ್ಪೃಶ್ಯತೆಗಿಂತಲೂ ಹೆಚ್ಚಾಗಿ ಅಂತರ್ವಿವಾಹ ಇಲ್ಲದಿರುವುದರಲ್ಲೇ ಕಾಣುತ್ತಾರೆ. ಈ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಮೂಲಕವೇ ಜಾತಿ ವ್ಯವಸ್ಥೆಯಲ್ಲಿ ಮಹಿಳಾ ವಿರೋಧಿ ಎನ್ನಲಾಗುವ ಬಾಲ್ಯ ವಿವಾಹ, ಸತಿ ಪದ್ದತಿ, ಕಡ್ಡಾಯ ವಿಧವೆಯ ಸ್ಥಿತಿ, ಬಲಾತ್ಕಾರದ ಬ್ರಹ್ಮಚರ್ಯ ಮತ್ತು ಎಳೆಯ ಹೆಣ್ಣುಮಕ್ಕಳನ್ನು ಹಿರಿಯರೊಂದಿಗೆ ಮದುವೆ ಮಾಡಿಸುವ ಕೆಲವು ಸಾಮಾಜಿಕ ಅನಿಷ್ಠಗಳು ಪ್ರವೇಶಿಸಿದ್ದನ್ನು ಅಂಬೇಡ್ಕರ್ ಚಾರಿತ್ರಿಕ ಸಂಶೋಧನೆಗಳ ಮೂಲಕ ಹೊರಗೆಳೆಯುತ್ತಾರೆ.
ಭಾರತದಲ್ಲಿ ಮಹಿಳಾ ಸಬಲೀಕರಣ ಎಂಬ ಪರಿಕಲ್ಪನೆಗೆ ಸಾರ್ವಜನಿಕವಾಗಿ ಅವಕಾಶ ದೊರೆತಿದ್ದು ಈ ಅವಧಿಯಲ್ಲೇ. ಭಾರತ ಸ್ವಾತಂತ್ರ್ಯ ಗಳಿಸಿ ಗಣತಂತ್ರವಾಗಿ ಘೋಷಿಸಿಕೊಂಡು, ನಮ್ಮದೇ ಆದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದರೂ ಇಂದಿಗೂ ಸಹ ನಾವು ಮಹಿಳೆಯರ ವಿಚಾರದಲ್ಲಿ ʼ ಸಬಲೀಕರಣ ʼ ಪದವನ್ನು ಬಳಸುತ್ತಲೇ ಬಂದಿದ್ದೇವೆ. ಈ ಪದ ಬಳಕೆಯೇ ಧ್ವನಿಸುವಂತೆ, ಈ ದೇಶದ ಬಹುಪಾಲು ಮಹಿಳೆಯರನ್ನು ಸಮಾಜ, ಸಂಸ್ಕೃತಿ, ಧಾರ್ಮಿಕ ನೆಲೆಗಳು ಹಾಗೂ ಆಡಳಿತ ವ್ಯವಸ್ಥೆ ʼ ಅಬಲೆಯರು ʼ ಎಂದೇ ಪರಿಭಾವಿಸುತ್ತದೆ. ಇದು ವಿಪರ್ಯಾಸ ಎನಿಸಿದರೂ ಸುಡುವಾಸ್ತವ. ಅಂಕಿ ಅಂಶಗಳನ್ನು ಬದಿಗಿಟ್ಟು ನೋಡಿದರೂ ಇಂದಿಗೂ ಭಾರತೀಯ ಮಹಿಳೆ ತನ್ನ ಶಿಕ್ಷಣದ ಹಕ್ಕುಗಳಿಗಾಗಿ, ಘನತೆ ಗೌರವಕ್ಕಾಗಿ, ಬದುಕುವ ಹಕ್ಕಿಗಾಗಿ, ವಿವಾಹ/ವಿಚ್ಚೇದನ ಮುಂತಾದ ಕೌಟುಂಬಿಕ ಹಕ್ಕುಗಳಿಗಾಗಿ, ಉದ್ಯೋಗ/ಪ್ರಾತಿನಿಧ್ಯದ ಹಕ್ಕುಗಳಿಗಾಗಿ ಹೋರಾಡಲೇಬೇಕಿದೆ. ಪಿತೃಪ್ರಧಾನ ವ್ಯವಸ್ಥೆಯ ಬಿಗಿಹಿಡಿತದಿಂದ ಇಂದಿಗೂ ಮುಕ್ತವಾಗದ ಭಾರತದ ಆಡಳಿತ ವ್ಯವಸ್ಥೆ ಈಗಲೂ ಸಹ ʼಸಬಲೀಕರಣʼ ದ ಪ್ರಯತ್ನಗಳನ್ನು ಮಹಿಳೆಯರಿಗೆ ʼ ಕೊಡಲಾಗುವ ʼ ಒಂದು ವಿದ್ಯಮಾನವಾಗಿಯೇ ಪರಿಗಣಿಸುತ್ತದೆ. ಮಹಿಳಾ ಮೀಸಲಾತಿ ಒಂದು ಸ್ಪಷ್ಟ ಉದಾಹರಣೆ. ಮತ್ತೊಂದೆಡೆ ಗೌರವ/ಮರ್ಯಾದಾಹತ್ಯೆ, ಅತ್ಯಾಚಾರ/ದೌರ್ಜನ್ಯ/ಕೌಟುಂಬಿಕ ಕಿರುಕುಳ/ವರದಕ್ಷಿಣೆ ಮುಂತಾದ ಸಾಮಾಜಿಕ ಪಿಡುಗುಗಳು 21ನೆಯ ಶತಮಾನದ ಮೂರನೆಯ ದಶಕದಲ್ಲೂ ಸಹ ಭಾರತೀಯ ಸಮಾಜವನ್ನು ವ್ಯಸನದಂತೆ ಕಾಡುತ್ತಿರುವುದನ್ನೂ ಗಮನಿಸಬೇಕಿದೆ. ಮಹಿಳಾ ಸಬಲೀಕರಣ ಪ್ರಶ್ನೆ ಎದುರಾದಾಗ ಈ ಎಲ್ಲ ಜಟಿಲ/ಸಂಕೀರ್ಣ ಪ್ರಶ್ನೆಗಳೂ ನಮ್ಮೆದುರು ನಿಲ್ಲುತ್ತವೆ.
ಅಂಬೇಡ್ಕರ್ ಮತ್ತು ಮಹಿಳಾ ಸಬಲೀಕರಣ

ಮಹಿಳಾ ಸಬಲೀಕರಣವು ಪ್ರಸ್ತುತ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸವಾಲಿನ ಪ್ರಶ್ನೆಯೇ ಆಗಿದೆ. ಡಾ ಬಿ ಆರ್ ಅಂಬೇಡ್ಕರ್ ನಿಮ್ನ ವರ್ಗಗಳಿಗಾಗಿ ರೂಪಿಸಿದ ಹೋರಾಟದ ಚೌಕಟ್ಟಿನಲ್ಲೇ, ಮಹಿಳೆಯರಿಗಾಗಿಯೇ ರಾಜಕೀಯ ಅಜೆಂಡಾ ರೂಪಿಸುವ ನಿಟ್ಟಿನಲ್ಲಿ ವರ್ಗ, ಜಾತಿ ಮತ್ತು ಲಿಂಗತ್ವ ಸಮಸ್ಯೆಗಳನ್ನು ಮುನ್ನೆಲೆಗೆ ತಂದಿದ್ದುದನ್ನು ಗಮನಿಸಬಹುದಾಗಿದೆ. ಮೇಲ್ಜಾತಿಯ ಹಕ್ಕುಗಳು ಸಹಜವಾಗಿಯೇ ರಕ್ಷಣೆ ಪಡೆಯುವುದು, ಬಡಜನತೆ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗುವುದು ಇಂದಿಗೂ ನಾವು ಎದುರಿಸುತ್ತಿರುವ ಸುಡು ವಾಸ್ತವ. ವರ್ಣ ವ್ಯವಸ್ಥೆಯಲ್ಲಿನ ಶ್ರೇಣೀಕರಣವೇ ಈ ಸಮಾನತೆಗೆ ಅಡ್ಡಿಪಡಿಸುತ್ತವೆ. ಪಾಶ್ಚಿಮಾತ್ಯ ಉದಾರವಾದಿ ಚಿಂತನೆಗಳಿಂದ ಪ್ರೇರಿತರಾದ ಅಂಬೇಡ್ಕರ್ ಸ್ತ್ರೀವಾದಿ ವಿಚಾರಗಳಲ್ಲೂ ಇದೇ ತಾತ್ವಿಕ ನೆಲೆಯಲ್ಲೇ ಗಂಭೀರ ಆಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲೇ 1917ರ ರಷ್ಯಾ ಕ್ರಾಂತಿಯ ನಂತರ 1918ರಲ್ಲಿ ಬ್ರಿಟನ್, 1920ರಲ್ಲಿ ಅಮೆರಿಕ ದೇಶಗಳಲ್ಲಿ ಮಹಿಳೆಯರ ಮತದಾನದ ಹಕ್ಕುಗಳನ್ನು ನೀಡಲಾಗಿತ್ತು. ಮಹಿಳೆಯರ ಶಿಕ್ಷಣದ ಹಕ್ಕು ಮತ್ತು ದುಡಿಮೆಯ ಅವಧಿಯ ಸಮಾನತೆ ಇವೆಲ್ಲವೂ ಆಳುವವರಿಗೆ ಸವಾಲಾಗಿದ್ದವು. ಈ ಜಟಿಲ ಸವಾಲುಗಳನ್ನು ಮನಗಾಣುವ ಮೂಲಕವೇ ಅಂಬೇಡ್ಕರ್ ಬಾಂಬೆ ಶಾಸಕಾಂಗ ಸಮಿತಿಯ ಸದಸ್ಯರಾಗಿ, ವೈಸ್‌ರಾಯ್ ಕರಡು ಸಮಿತಿಯ ಅಧ್ಯಕ್ಷರಾಗಿ, ಪ್ರಥಮ ಕಾನೂನು ಸಚಿವರಾಗಿ ಮಹಿಳೆಯರ ಸಮಾನತೆಗಾಗಿ ಹಲವು ಕಾನೂನುಗಳನ್ನು ರೂಪಿಸಿದ್ದರು. ಗರ್ಭಿಣಿ ಸ್ತ್ರೀಯರಿಗೆ ಪ್ರಸವ ಪೂರ್ವ ಅವಧಿಯಲ್ಲಿ ಮತ್ತು ಹೆರಿಗೆಯ ನಂತರದಲ್ಲಿ ವಿಶ್ರಾಂತಿ ನೀಡುವ ನಿಟ್ಟಿನಲ್ಲಿ ಅಂಬೇಡ್ಕರ್ ಗಂಭೀರ ಚಿಂತನೆ ನಡೆಸಿ, ಕಾರ್ಮಿಕ ಕಾನೂನುಗಳಿಗೆ ಉತ್ತೇಜನ ನೀಡಿದ್ದುದು, ಆ ಕಾಲಘಟ್ಟದ ಕ್ರಾಂತಿಕಾರಕ ಹೆಜ್ಜೆ ಎನ್ನಲಡ್ಡಿಯಿಲ್ಲ.
ಸ್ವಾತಂತ್ರ್ಯ ಸಂಗ್ರಾಮದ ಆರಂಭಿಕ ಘಟ್ಟದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹುಪಾಲು ಇಲ್ಲವಾಗಿದ್ದ ಸಂದರ್ಭದಲ್ಲೇ ಅಂಬೇಡ್ಕರ್ ಅವರ ಹೋರಾಟಗಳಲ್ಲಿ, ಸತ್ಯಾಗ್ರಹಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾಲ್ಗೊಳ್ಳುತ್ತಿದ್ದರು. ಅಸ್ಪೃಶ್ಯ ಮಹಿಳೆಯರ ಸಂಘಟನೆಗಳನ್ನು ಆರಂಭಿಸಿಸುವ ಮೂಲಕ ಅಂಬೇಡ್ಕರ್ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದೇ ಅಲ್ಲದೆ, ಗ್ರಾಮೀಣ ಭಾರತದ ಜಾತಿ ಕೂಪಗಳಿಂದ ಹೊರಬಂದು, ನಗರ ಜೀವನದ ಮುಕ್ತ ವಾತಾವರಣದಲ್ಲಿ ತಮ್ಮ ಧ್ವನಿಯನ್ನು ಎತ್ತರಿಸುವಂತೆ ಉತ್ತೇಜಿಸಿದ್ದರು. ಅಂಬೇಡ್ಕರ್ ಮುಂದಾಳತ್ವ ವಹಿಸಿದ್ದ ಮಹಾಡ್ ಸತ್ಯಾಗ್ರಹದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದುದು ಚಾರಿತ್ರಿಕ ಎನ್ನಬಹುದು. ಮನುಸ್ಮೃತಿ ಸುಡುವ ಆಂದೋಲನದಲ್ಲೂ ಸಹ 50 ಮಹಿಳೆಯರು ಭಾಗವಹಿಸಿದ್ದರು. ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ತಾವೂ ಶಿಕ್ಷಣ ಪಡೆದು ಸಾಮಾಜಿಕ ಬದುಕಿನ ಒಂದು ಭಾಗವಾಗಿರುವಂತೆ ಅಂಬೇಡ್ಕರ್ ಮಹಿಳಾ ಸಮುದಾಯಕ್ಕೆ ಕರೆ ನೀಡುತ್ತಿದ್ದರು. ಶಿಕ್ಷಣ ಪಡೆದು, ಹೋರಾಟಗಳಲ್ಲಿ ಪಾಲ್ಗೊಂಡು ಸಂಘಟಿತರಾಗಲು ಅಂಬೇಡ್ಕರ್ ಮಹಿಳೆಯರಿಗೆ ಬಹಿರಂಗ ಕರೆ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.
ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಅಂಬೇಡ್ಕರ್ ಅವರಾಡಿದ ಈ ಮಾತುಗಳು ಗಮನಾರ್ಹವಾದವು. “ ಅಸ್ಪೃಶ್ಯತೆಯ ವಿನಾಶ ಎಂದರೆ ಅದು ಪುರುಷರಿಗಿಂತಲೂ ಮಹಿಳೆಗೆ ಹೆಚ್ಚು ಸಂಬಂಧಿಸಿದ್ದಾಗಿರುತ್ತದೆ. ನೀವು ನಮಗೆ, ಅಂದರೆ ಪುರುಷರಿಗೆ, ಜನ್ಮ ನೀಡುತ್ತೀರಿ ಇತರರು ನಮ್ಮನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ನೋಡುತ್ತಾರೆ. ಕೆಲವು ಜಾಗಗಳಲ್ಲಿ ನಮ್ಮ ನೆರಳೂ ಬೀಳುವುದನ್ನೂ ಸಹಿಸುವುದಿಲ್ಲ. ಇತರರು ಸರ್ಕಾರಿ ಹುದ್ದೆಗಳಲ್ಲಿ ಕಚೇರಿಗಳಲ್ಲಿ ಉನ್ನತ ಹುದ್ದೆ ಪಡೆಯುತ್ತಾರೆ, ಆದರೆ ನಿಮಗೆ ಜನಿಸಿದ ನಾವು ಕನಿಷ್ಟ ಗೌರವಯುತ ಹುದ್ದೆಯನ್ನೂ ಗಳಿಸುವುದಿಲ್ಲ. ಏಕೆಂದರೆ ನಮ್ಮನ್ನು ಕೆಳಸ್ತರದವರೆಂದು ಪರಿಗಣಿಸಲಾಗುತ್ತದೆ.,,,, ನಿಮಗೂ ಬ್ರಾಹ್ಮಣ ಮಹಿಳೆಯಲ್ಲಿರುವಂತಹ ಗುಣಲಕ್ಷಣಗಳೇ ಇವೆ. ಆದರೂ ನಿಮ್ಮ ಕೂಸುಗಳೇಕೆ ನಿಕೃಷ್ಟರಾಗುತ್ತಾರೆ, ಅವರಿಗೆ ಕನಿಷ್ಟ ಮನುಷ್ಯನಿಗೆ ಇರುವ ಹಕ್ಕೂ ಇರುವುದಿಲ್ಲ. ಇದನ್ನು ನೀವು ಎಂದಾದರೂ ಯೋಚಿಸಿದ್ದೀರಾ,,,,” (ಬಹಿಷ್ಕೃತ ಭಾರತ 1928 ಮಹಾಡ್ ಸತ್ಯಾಗ್ರಹ ಪರಿಷತ್ ಭಾಷಣ).
ಅಂಬೇಡ್ಕರ್ ಬೌದ್ಧ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದ ನಂತರ ಅವರ ಸಮಾಜ ಸುಧಾರಕ ಆಲೋಚನೆಗಳೂ ಸಹ ಅದೇ ದಿಕ್ಕಿನಲ್ಲಿ ಸಾಗಿದ್ದವು. ಬುದ್ಧನು ಹೆಣ್ಣುಮಕ್ಕಳ ಜನನವನ್ನು ದುಃಖಕರ ಭಾವಿಸಿರಲಿಲ್ಲ. ಸಮಾನತೆಯ ನೆಲೆಗಳನ್ನು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ತರಗಳಲ್ಲಿ ವಿಶ್ಲೇಷಿಸಿದ್ದ ಅಂಬೇಡ್ಕರರಿಗೆ ಸ್ತ್ರೀ ಸಮಾನತೆ ಮೂಲಭೂತ ಸಿದ್ಧಾಂತವೂ ಆಗಿತ್ತು. ಅವರ ಕೆಲವು ಹೇಳಿಕೆಗಳನ್ನು ಇಲ್ಲಿ ನಿದರ್ಶನವಾಗಿ ನೋಡಬಹುದು :
“ ನಾನು ಸಮುದಾಯದ ಪ್ರಗತಿಯ ಹಂತವನ್ನು ಅಳೆಯಲು ಮಹಿಳೆಯರು ಸಾಧಿಸಿರುವ ಪ್ರಗತಿಯನ್ನೇ ಮಾನದಂಡವನ್ನಾಗಿ ನೋಡುತ್ತೇನೆ”
“ ಧರ್ಮ , ತತ್ವಶಾಸ್ತ್ರ, ಅಧ್ಯಾತ್ಮಗಳನ್ನು ಕುರಿತು ಮಹಿಳೆಯರು ಸಾರ್ವಜನಿಕ ಸಂಕಥನಗಳಲ್ಲಿ ಪಾಲ್ಗೊಳ್ಳುವ ಕತೆಗಳು ನಮ್ಮ ನಡುವೆ ಹೇರಳವಾಗಿವೆ ”
“ ನಾವು ಸ್ವಾತಂತ್ರ್ಯವನ್ನು ಏಕೆ ಗಳಿಸಿದ್ದೇವೆ ? ನಮಗೆ ಸ್ವಾತಂತ್ರ್ಯ ಲಭಿಸಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ. ಈ ಸಮಾಜದಲ್ಲಿ ಅಸಮಾನತೆ, ತಾರತಮ್ಯ ಮತ್ತು ದೌರ್ಜನ್ಯಗಳು ಹೇರಳವಾಗಿವೆ. ಇವುಗಳು ನಮ್ಮ ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವಾಗಿ ಸಾಗುತ್ತವೆ ”
“ ನಾವು ಉಜ್ವಲ ದಿನಗಳನ್ನು ಶೀಘ್ರದಲ್ಲೇ ಕಾಣಲಿದ್ದೇವೆ. ಪುರುಷರ ಶಿಕ್ಷಣದೊಂದಿಗೇ ಮಹಿಳೆಯರ ಶಿಕ್ಷಣಕ್ಕೂ ಉತ್ತೇಜನ ನೀಡಿದರೆ ಪ್ರಗತಿಯ ವೇಗ ಹೆಚ್ಚಾಗುತ್ತದೆ. ”
“ ಮಹಿಳೆಯರನ್ನು ಒಳಗೊಳ್ಳದಿರುವ ಐಕ್ಯತೆ ಅರ್ಥಹೀನವಾಗುತ್ತದೆ. ಸುಶಿಕ್ಷಿತ ಮಹಿಳೆಯರು ಇಲ್ಲದಿದ್ದಲ್ಲಿ ಶಿಕ್ಷಣವೇ ವ್ಯರ್ಥವಾಗುತ್ತದೆ. ಮಹಿಳೆಯರ ಶಕ್ತಿ ಇಲ್ಲದಿದ್ದರೆ ಪ್ರತಿಭಟನೆ, ಹೋರಾಟಗಳೂ ಅಪೂರ್ಣವಾಗುತ್ತವೆ. ”
ಮಹಿಳಾ ಸಬಲೀಕರಣವನ್ನು ಅಂಬೇಡ್ಕರ್ ಪರಿಭಾವಿಸಿದ್ದು ಕೌಟುಂಬಿಕ ನೆಲೆಯಲ್ಲಿ ಮತ್ತು ಸಮಾಜದ ವಿವಿಧ ಸ್ತರಗಳ ನೆಲೆಯಲ್ಲಿ. ಸಾಂವಿಧಾನಿಕ ಚೌಕಟ್ಟಿನೊಳಗೆ ಅಂಬೇಡ್ಕರ್ ರೂಪಿಸಿದ ಹಲವು ಕಾನೂನುಗಳು ವರ್ತಮಾನದ ಸಂದರ್ಭದಲ್ಲಿ ನಮಗೆ ಅಪ್ಯಾಯಮಾನವಾಗಿ ಕಾಣಲು ಕಾರಣವೇನೆಂದರೆ, ಆಧುನಿಕ ಸುಶಿಕ್ಷಿತ ಸಮಾಜವನ್ನೂ ಒಳಗೊಂಡಂತೆ ನಮ್ಮ ಸಾಮಾಜಿಕ ಬದುಕಿನಲ್ಲಿ ಮಹಿಳೆ ತನ್ನ ಅಸ್ತಿತ್ವ/ಘನತೆ/ಗೌರವ ಹಾಗೂ ಸ್ತ್ರೀವಾದಿ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ. ಸರ್ಕಾರದ ಸಬಲೀಕರಣದ ಕ್ರಮಗಳು ಮಹಿಳೆಯನ್ನು “ಅಬಲಾಶ್ರಮ ವ್ಯವಸ್ಥೆಯಿಂದ ಸಬಲಾಶ್ರಮ ವ್ಯವಸ್ಥೆಗೆ ” ಕರೆದೊಯ್ಯುವ ಆಡಳಿತಾತ್ಮಕ ಸಾಧನಗಳಾಗಿ ಕಾಣುತ್ತವೆ. ಆದರೆ ದೈನಂದಿನ ಬದುಕಿನಲ್ಲಿ ಮಹಿಳೆ ಎದುರಿಸುವ ಕೌಟುಂಬಿಕ ದೌರ್ಜನ್ಯ, ಚಿತ್ರಹಿಂಸೆ, ವರದಕ್ಷಿಣೆಯ ಪಿಡುಗು, ಪಿತೃಪ್ರಧಾನ ಧೋರಣೆ, ಅಸಮಾನತೆಯ ನೆಲೆಗಳನ್ನು ನಾವು ಇಂದಿಗೂ ಸಹ ಸಾಮಾಜಿಕ ನೆಲೆಯಲ್ಲೇ ಗುರುತಿಸಬೇಕಿದೆ. ಸಬಲೀಕರಣದ ನೀತಿಗಳು ಅಬಲೆಯರೆಂದು ಗುರುತಿಸಲಾಗುವ ಮಹಿಳೆಯರ ಸಾಂಸ್ಕೃತಿಕ-ಸಾಮಾಜಿಕ ಮುಂಚಲನೆಗೆ ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎನ್ನುವುದು ಚರ್ಚಾಸ್ಪದವಾಗಿಯೇ ಉಳಿದಿರುವ ವಿಚಾರ.
ಇಲ್ಲಿ ಬದಲಾಗಬೇಕಿರುವುದು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿತೃಪ್ರಧಾನ ಧೋರಣೆ ಮತ್ತು ವರ್ಣಾಶ್ರಮ ಧರ್ಮದ, ಜಾತಿ ಶ್ರೇಣೀಕರಣದ ತಾರತಮ್ಯದ ಮೂಲ ನೆಲೆಗಳು. ಡಾ ಅಂಬೇಡ್ಕರ್ ಅವರ ಸ್ತ್ರೀವಾದಿ ಧೋರಣೆಯಲ್ಲಿ ಈ ಪ್ರಯತ್ನವನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಹಿಜಾಬ್ ಧರಿಸದೆ ಹೊರಬರಲು ಹೆದರುವಂತೆಯೇ ಮತ್ತೊಂದು ಬದಿಯಲ್ಲಿ ಗಂಡಸರ ಎದುರು ಗೂಂಘಟ್ ತೆಗೆದು ನಿಲ್ಲಲು ಹೆದರುವ ಮಹಿಳೆಯರನ್ನೂ ನಾವು ಇಂದಿಗೂ ಕಾಣಬಹುದಲ್ಲವೇ ? ಒಂದೆಡೆ ಪುರುಷಾಧಿಪತ್ಯ ಮತ್ತೊಂದೆಡೆ ಜಾತಿ ಶ್ರೇಷ್ಠತೆ- ಈ ಎರಡು ಅಲಗಿನ ತೂಗುಗತ್ತಿಯ ಕೆಳಗೇ ಭಾರತದ ಮಹಿಳೆ, ಅದರಲ್ಲೂ ತಳಸ್ತರದ ಶೋಷಿತ ಸಮುದಾಯಗಳ ಮಹಿಳೆ, ತನ್ನ ಸ್ತ್ರೀವಾದಿ ನೆಲೆಯನ್ನು, ಹೆಣ್ತನವದ ಗೌರವ ಮತ್ತು ಘನತೆಯನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ. ಸಮಾನ ನಾಗರಿಕ ಸಂಹಿತೆಯ ಪ್ರಶ್ನೆ ಎದುರಾದಾಗ ನಮಗೆ ಮುಖಾಮುಖಿಯಾಗುವುದು ಧಾರ್ಮಿಕ ನೆಲೆಗಳಿಗಿಂತಲೂ ಹೆಚ್ಚಾಗಿ ಈ ಸ್ತ್ರೀವಾದಿ ನೆಲೆಗಳು. ಡಾ ಅಂಬೇಡ್ಕರ್ ಬಯಸಿದ ಸಮಾನ ನಾಗರಿಕ ಸಂಹಿತೆಯ ಮೂಲ ಅಶಯವೂ ಇದೇ ಆಗಿತ್ತು.

ಸಮಾನ ನಾಗರಿಕ ಸಂಹಿತೆ ಮತ್ತು ಅಂಬೇಡ್ಕರ್
ಸಂವಿಧಾನ ರಚಕ ಮಂಡಲಿಯಲ್ಲಿ ನಡೆದ ಚರ್ಚೆಗಳ ಸಂದರ್ಭದಲ್ಲಿ ಅಂಬೇಡ್ಕರ್ ಭಾರತೀಯ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಪಶ್ಚಿಮ ನಾಗರಿಕತೆಗಳಿಂದ ಪ್ರೇರಿತವಾದ ನಾಗರಿಕ ಸಂಹಿತೆಗಳನ್ನು ಅಳವಡಿಸಲು ಶಿಫಾರಸು ಮಾಡಿದ್ದರು. ಇದೇ ಸಂದರ್ಭದಲ್ಲಿ ಶರಿಯತ್ ಬೆಂಬಲಿಸಿದ್ದ ಮುಸ್ಲಿಂ ಪ್ರತಿನಿಧಿಗಳು ವೈಯುಕ್ತಿಕ ಕಾನೂನುಗಳನ್ನು ಶಾಶ್ವತಗೊಳಿಸುವ ಸಲಹೆಯನ್ನು ಅಂಬೇಡ್ಕರ್ ಬಲವಾಗಿ ತಿರಸ್ಕರಿಸಿದ್ದರು.
“ ಧರ್ಮಕ್ಕೆ ಏಕೆ ಇಷ್ಟೊಂದು ವ್ಯಾಪಕವಾದ ನ್ಯಾಯವ್ಯಾಪ್ತಿಯನ್ನು ನೀಡಬೇಕು ಎಂದು ನನಗೆ ಅರ್ಥವಾಗುವುದಿಲ್ಲ. ಇಡೀ ಬದುಕನ್ನು ವ್ಯಾಪಿಸುವ ಮೂಲಕ ಇದು ಶಾಸಕಾಂಗಕ್ಕೆ ಪ್ರವೇಶವನ್ನೇ ನಿರ್ಬಂಧಿಸುತ್ತದೆ. ನಾವು ಈ ಸ್ವಾತಂತ್ರ್ಯವನ್ನು ಏಕೆ ಬಯಸಬೇಕು. ನಮ್ಮ ಸಮಾಜವನ್ನು ಸುಧಾರಿಸಲು ಸ್ವಾತಂತ್ರ್ಯ ಪಡೆದಿದ್ದೇವೆ. ಇದರಲ್ಲಿ ಅಸಮಾನತೆಗಳು ತಾರತಮ್ಯಗಳು ತುಂಬಿತುಳುಕುತ್ತಿವೆ. ನಮ್ಮ ಮೂಲ ಭೂತ ಹಕ್ಕುಗಳಿಗೆ ಇದು ವ್ಯತಿರಿಕ್ತವಾಗಿವೆ. ” ಎಂದು ಖಚಿತವಾಗಿ ಹೇಳುವುದರ ಮೂಲಕ ಅಂಬೇಡ್ಕರರು ಎಲ್ಲ ಧರ್ಮಗಳಲ್ಲೂ ಮಹಿಳೆಯರು ಎದುರಿಸುತ್ತಿರುವ ಅಸಮಾನತೆ ಮತ್ತು ಶೋಷಣೆಯ ನೆಲೆಯಲ್ಲಿ, ಸ್ತ್ರೀವಾದಿ ನೆಲೆಯ ಸಮಾನ ನಾಗರಿಕ ಸಂಹಿತೆಗಾಗಿ ಆಗ್ರಹಿಸಿದ್ದರು. ಆದರೆ ಈ ವಿಚಾರದಲ್ಲಿ ಅಂಬೇಡ್ಕರ್ ಹೆಚ್ಚು ಮುಂದುವರೆಯಲಾಗಲಿಲ್ಲ. ಮುಸ್ಲಿಂ ಅಲ್ಪಸಂಖ್ಯಾತರ ವಿರೋಧ ತೀವ್ರವಾಗಿದ್ದುದೇ ಅಲ್ಲದೆ, ವೈಯುಕ್ತಿಕ ಕಾನೂನುಗಳ ಬಗ್ಗೆ ಹಲವು ಕಾಂಗ್ರೆಸ್ ಸದಸ್ಯರೂ ಸಹ ಉತ್ತರಾಧಿಕಾರದ ಹಕ್ಕು ವಿವಾಹ, ವಿಚ್ಚೇದನ, ದತ್ತು ಪಡೆಯುವುದು ಮುಂತಾದ ವಿಚಾರಗಳಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ವಿರೋಧಿಸಿದ್ದರು. ಹಿಂದೂ ಕೋಡ್‌ಬಿಲ್‌ನಲ್ಲಿ ಇದು ಸ್ಪಷ್ಟವಾಗುತ್ತದೆ.
1948 ನೆಹರೂ ರಚಿಸಿದ ಉಪಸಮಿತಿಯಲ್ಲಿ ಡಾ ಬಿ ಅರ್ ಅಂಬೇಡ್ಕರ್ ಅಧ್ಯಕ್ಷರಾಗಿದ್ದರು. ಗಂಡು ಮತ್ತು ಹೆಣ್ಣಿನ ಸಮಾನ ಹಕ್ಕುಗಳು ಆಸ್ತಿಯ ವಿಚಾರದಲ್ಲೂ ಜಾರಿಯಾಗಬೇಕು ಎಂದು ಮೂಲಭೂತ ಹಕ್ಕು ಎಂದು ಪರಿಗಣಿಸುವಂತೆ ಶಿಫಾರಸು ಮಾಡಲಾಗಿತ್ತು. ಆದರೆ ರಾಜೇಂದ್ರ ಪ್ರಸಾದ್ ಅವರನ್ನೂ ಸೇರಿದಂತೆ ಹಲವು ಹಿಂದೂ ನಾಯಕರು ಈ ಶಿಫಾರಸುಗಳನ್ನು ವಿರೋಧಿಸಿದ್ದರು. “ ಈ ಕಾನೂನುಗಳು ಹಿಂದೂ ಕಾನೂನುಗಳಿಗೆ ಬಾಹ್ಯವಾದವು, ಇದರಿಂದ ಪ್ರತಿ ಕುಟುಂಬವೂ ವಿಘಟನೆಯಾಗುತ್ತದೆ ” ಎಂದು ಪ್ರಸಾದ್ ವಾದಿಸಿದ್ದರು. ಅಂಬೇಡ್ಕರ್ ಅವರಂತೆ ನೆಹರೂ ಸಹ ಈ ಸಂಹಿತೆಯಲ್ಲಿ ಅಧುನಿಕ ಭಾರತದ ಕನಸು ಕಂಡಿದ್ದರು. ಇದನ್ನು ಜಾರಿಗೊಳಿಸಲಾಗದಿದ್ದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. 17 ಸೆಪ್ಟಂಬರ್ 1951ರಂದು ಹಿಂದೂ ಕೋಡ್ ಬಿಲ್ ಸಂಸತ್ತಿನಲ್ಲಿ ಮಂಡಿಸಲಾಗಿತ್ತು, ವಿವಾಹ ಮತ್ತು ವಿಚ್ಚೇದನ ಇತರ ವಿವಾದಾಸ್ಪದ ಅಂಶಗಳನ್ನು ಕೈಬಿಡಲಾಗಿತ್ತು. ಆದರೆ ಹಿಂದೂ ಕೋಡ್ ಬಿಲ್ ಅಂತಿಮವಾಗಿ ನೆನೆಗುದಿಗೆ ಬಿದ್ದಿದ್ದು, ನಂತರ ಡಾ ಬಿ ಆರ್ ಅಂಬೇಡ್ಕರ್ ತಮ್ಮ ಸಚಿವ ಪದವಿಗೆ ರಾಜೀನಾಮೆ ನೀಡಿದ್ದು ಈಗ ಇತಿಹಾಸ.
ಸಮಾನ ನಾಗರಿಕ ಸಂಹಿತೆಯ ಸುತ್ತ ಚರ್ಚೆಗಳು 1948ರಿಂದಲೇ ನಡೆಯುತ್ತಿದೆ. ಸಂವಿಧಾನದ ಪರಿಚ್ಚೇದ 44ರಲ್ಲಿ ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಪ್ರಜೆಗಳಿಗೆ ಸಮಾನ ನಾಗರಿಕ ಸಂಹಿತೆಯನ್ನು ಅನ್ವಯಿಸಲು ಪ್ರಭುತ್ವ ಅಪೇಕ್ಷಿಸುತ್ತದೆ ಎಂದೇ ಹೇಳಲಾಗಿದೆ. ಧರ್ಮಗ್ರಂಥಗಳು ಮತ್ತು ಸಂಪ್ರದಾಯ ಪರಂಪರೆಗಳನ್ನು ಆಧರಿಸಿದ ವೈಯುಕ್ತಿಕ ಕಾನೂನುಗಳನ್ನು ಈ ಸಂಹಿತೆಯ ಮೂಲಕ ನಿರ್ಬಂಧಿಸಲಾಗುತ್ತದೆ. ಸಂವಿಧಾನ ರಚಕ ಮಂಡಲಿಯಲ್ಲಿ ಕೆ ಎಮ್ ಮುನ್ಸಿ, ಅಲ್ಲಾಡಿ ಕೃಷ್ಣಸ್ವಾಮಿ ಮತ್ತು ಅಂಬೇಡ್ಕರ್ ಸಂಹಿತೆಗೆ ಬೆಂಬಲ ಸೂಚಿಸಿದ್ದರು. ಆದಾಗ್ಯೂ ಸಂಹಿತೆಯು ಆಯ್ಕೆಯ ಪ್ರಶ್ನೆಯಾಗಬೇಕು ಎಂದು ವಾದಿಸಿದ್ದರು. ಅಂತಿಮವಾಗಿ ನಿರ್ದೇಶಕ ತತ್ವಗಳ ಮೂಲಕ ಈ ಪರಿಚ್ಚೇದವನ್ನು ಅಳವಡಿಸಲಾಯಿತು.
ಭಾರತದಲ್ಲಿ ವಿವಾಹ ಮತ್ತು ವಿಚ್ಚೇದನಕ್ಕೆ ಸಂಬಂಧಿಸಿದಂತೆ ಹಿಂದೂ ಕಾನೂನು, ಶರಿಯತ್ ಕಾನೂನು, ಶಿಯಾ ಕಾನೂನು, ಕ್ರೈಸ್ತ ವಿವಾಹ ಕಾಯ್ದೆ, ಪಾರ್ಸಿ ವಿವಾಹ ಕಾಯ್ದೆ ಮತ್ತು ವಿಚ್ಚೇದನ ಕಾಯ್ದೆ ಜಾರಿಯಲ್ಲಿವೆ. ಮುಸ್ಲಿಂ ಕಾನೂನಿನ ಅನುಸಾರ ಬಹುಪತ್ನಿತ್ವವನ್ನು ಅನುಮೋದಿಸಲಾಗುತ್ತದೆ. ಆದರೆ ಮಹಿಳೆಗೆ ಬಹುಪತಿಗಳನ್ನು ಹೊಂದುವ ಅಧಿಕಾರ ಇರುವುದಿಲ್ಲ. ಶಹಬಾನೋ ಪ್ರಕರಣಕ್ಕೂ ಮುನ್ನ ವಿಚ್ಚೇದಿತ ಮುಸ್ಲಿಂ ಮಹಿಳೆಗೆ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಮುಸ್ಲಿಂ ಮಹಿಳೆ ಸಮ್ಮತಿಸದೆ ಹೋದರೆ ವಿವಾಹವು ಊರ್ಜಿತವಾಗುವುದಿಲ್ಲ . ಹಿಂದೂ ಮಹಿಳೆಗೆ ಈ ಆಯ್ಕೆ ಇಲ್ಲ. ಮುಸ್ಲಿಂ ಮಹಿಳೆಗೆ ಆಸ್ತಿಯಲ್ಲಿ ಪುರುಷ ಉತ್ತರಾಧಿಕಾರಿಗೆ ಲಭಿಸುವ ಅರ್ಧದಷ್ಟು ಆಸ್ತಿಯ ಮೇಲೆ ಹಕ್ಕು ಇರುತ್ತದೆ. ಹಿಂದೂ ಅಲ್ಪಸಂಖ್ಯಾತ ಮತ್ತು ಪೋಷಕತ್ವ ಕಾಯ್ದೆಯ ಅನುಸಾರ ತಾಯಂದಿರಿಗೆ ಎರಡನೆ ಸ್ಥಾನವನ್ನು ನೀಡಲಾಗುತ್ತದೆ. ವೈವಾಹಿಕ ಆಸ್ತಿಯ ಹಂಚಿಕೆಯಲ್ಲಿ, ಮಹಿಳೆಯರಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ವಿನೀತಾಶರ್ಮ ವರ್ಸಸ್ ರಾಕೇಶ್ ಶರ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವಿಭಜಜಿತ ಹಿಂದೂ ಕುಟುಂಬದ ಮಹಿಳೆಯರಿಗೆ ಸಮಾನ ಪಾಲು ನೀಡಲು ಆದೇಶಿಸಿದೆ. ಶಬರಿಮಲೆ ಪ್ರಕರಣದಲ್ಲಿ ಮುಟ್ಟಾದ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸುವ ಹಕ್ಕನ್ನು ಸುಪ್ರೀಂ ಎತ್ತಿಹಿಡಿದಿದೆ.
ಸಮಾನ ನಾಗರಿಕ ಸಂಹಿತೆಯ ಆಶಯಗಳು
ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಆದರೆ, ಅಲ್ಲಿ ಯಾವುದೇ ನಿರ್ದಿಷ್ಟ ಮತಧರ್ಮದ ಹಸ್ತಕ್ಷೇಪ ಇರಕೂಡದು. ಬದಲಾಗಿ ಸ್ತ್ರೀವಾದಿ ನೆಲೆಯಲ್ಲಿ, ಮಹಿಳಾ ಸಮಾನತೆಯ ನೆಲೆಗಟ್ಟಿನಲ್ಲಿ, ವಿವಾಹ, ವಿಚ್ಚೇದನ, ಆಸ್ತಿಯ ಹಕ್ಕು, ಉತ್ತರಾಧಿಕಾರದ ಹಕ್ಕು ಮತ್ತು ದತ್ತುಪಡೆಯುವ ಹಕ್ಕುಗಳನ್ನು ಸಮಸ್ತ ಮಹಿಳೆಯರಿಗೂ ಸಮಾನವಾಗಿ ನೀಡುವಂತಾಗಬೇಕು. ಧರ್ಮ ಅಥವಾ ಸಮುದಾಯದ ಆಧಾರದ ಮೇಲೆ ವಿಶೇಷ ಸವಲತ್ತುಗಳನ್ನು ನಿರ್ಧರಿಸುವುದಕ್ಕಿಂತಲೂ ಹೆಚ್ಚಾಗಿ, ಪ್ರತಿಯೊಂದು ಧರ್ಮದ ಆಚರಣೆಗಳಲ್ಲೂ ಆಸ್ತಿ ಹಕ್ಕಿನಿಂದ, ವಿವಾಹ ಮತ್ತು ವಿಚ್ಚೇದನ ಹಕ್ಕುಗಳಿಂದ ವಂಚಿತರಾಗುತ್ತಿರುವ ಮಹಿಳೆಯರ ಶೋಷಣೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು. ಈವರೆಗೆ ಭಾರತದಲ್ಲಿ ಮಹಿಳಾ ಸ್ವಾತಂತ್ರ್ಯವನ್ನು ದೃಢೀಕರಿಸುವ ಮತ್ತು ಮಹಿಳೆಯರನ್ನು ಮೇಲೆತ್ತುವ ಯಾವುದೇ ಕ್ರಾಂತಿಕಾರಿ ನೀತಿಯನ್ನು ಜಾರಿಗೊಳಿಸಲಾಗಿಲ್ಲ. ಹಿಂದೂ ಕಾನೂನುಗಳಲ್ಲೂ ಸಾಕಷ್ಟು ಲೋಪಗಳಿವೆ. ಮುಸ್ಲಿಂ, ಕ್ರೈಸ್ತ, ಪಾರ್ಸಿ ಕಾನೂನುಗಳು ತಾರತಮ್ಯದಿಂದ ಕೂಡಿವೆ.

ಭಾರತದಂತಹ ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆ ಇರುವ ದೇಶಗಳಲ್ಲಿ ಸಮಸ್ತ ಜನತೆಗೂ ಅನ್ವಯಿಸುವಂತಹ ಸಮಾನ ನಾಗರಿಕ ಸಂಹಿತೆಯನ್ನು ಅಳವಡಿಸುವುದು ಸವಾಲಿನ ಪ್ರಶ್ನೆಯಾಗುತ್ತದೆ. ಸ್ತ್ರೀವಾದಿ ನೆಲೆಯ ಪ್ರತಿಪಾದನೆಗಳು ಎಲ್ಲ ಧರ್ಮಗಳಿಂದಲೂ ವಿರೋಧ ಎದುರಿಸುವುದು ಸಹಜ. ಮೂಲತಃ ಆಸ್ತಿ ಹಕ್ಕು ಮತ್ತು ಆಸ್ತಿಯ ಉತ್ತರಾಧಿಕಾರದ ಹಕ್ಕುಗಳೇ ಪ್ರಧಾನವಾಗಿರುವುದರಿಂದ ಎಲ್ಲ ಧರ್ಮಗಳಲ್ಲೂ ಪ್ರಬಲವಾಗಿರುವ ಪಿತೃಪ್ರಧಾನತೆ ಈ ದಿಕ್ಕಿನಲ್ಲಿ ಸಾಗುವ ಯಾವುದೇ ಸಮಾನ ಸಂಹಿತೆಗಳಿಗೆ ಅಡ್ಡಿ ಉಂಟುಮಾಡುತ್ತದೆ. ಬಹುಪತ್ನಿತ್ವದ ವಿಚಾರದಲ್ಲಿ ಹಿಂದುತ್ವದ ಗುಂಪುಗಳು ಮತ್ತು ಸಂಘಪರಿವಾರ, ಇಸ್ಲಾಂ ಧರ್ಮದಲ್ಲಿ ನಾಲ್ಕು ಪತ್ನಿಯರನ್ನು ಹೊಂದುವ ಅವಕಾಶ ಇರುವುದನ್ನೇ ಪ್ರಧಾನವಾಗಿ ಮುನ್ನೆಲೆಗೆ ತಂದು ಇದರಿಂದ ಮುಸ್ಲಿಂ ಜನಸಂಖ್ಯೆ ಶೀಘ್ರವಾಗಿ ಬೆಳೆಯುತ್ತದೆ, ಹಿಂದೂ ಧರ್ಮದಲ್ಲಿ ಈ ಅವಕಾಶವಿಲ್ಲದಿರುವುದರಿಂದ ಕಾಲಕ್ರಮೇಣ ಹಿಂದೂ ಜನಸಂಖ್ಯೆ ಕ್ಷೀಣಿಸುತ್ತದೆ ಎಂಬ ವಾದವನ್ನು ಮಂಡಿಸುತ್ತದೆ. ಆದರೆ ಬಹುಪತ್ನಿತ್ವದ ಬಗ್ಗೆ ದಾಖಲಾಗಿರುವ ಅಂಕಿಅಂಶಗಳು ಬೇರೆಯೇ ಚಿತ್ರಣವನ್ನು ನೀಡುತ್ತವೆ. ಹಿಂದೂ ಧರ್ಮದಲ್ಲಿ ಬಹುಪತ್ನಿತ್ವ ಚಾಲನೆಯಲ್ಲಿಲ್ಲವಾದರೂ, ವಾಸ್ತವ ಜಗತ್ತಿನಲ್ಲಿ ಇಂದಿಗೂ ಸಹ ರಾಜಕೀಯ ನಾಯಕರು, ಸಿನಿಮಾ ನಟರು, ಉದ್ಯಮಿಗಳು ಒಬ್ಬರಿಗಿಂತ ಹೆಚ್ಚು ಪತ್ನಿಯರೊಡನೆ ಜೀವನ ನಡೆಸುತ್ತಿದ್ದಾರೆ. ಕಾನೂನಾತ್ಮಕವಾಗಿ ಇಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅವಕಾಶಗಳೂ ಇಲ್ಲದಿರುವುದರಿಂದ, ಅನಧಿಕೃತವಾಗಿ ಬಹುಪತ್ನಿತ್ವವು ಎಲ್ಲ ಧರ್ಮಗಳಲ್ಲೂ ಜಾರಿಯಲ್ಲಿದೆ.
ಮತ್ತೊಂದು ಆಯಾಮದಿಂದ ನೋಡಿದಾಗ, ಬಹುಪತ್ನಿತ್ವ ಪದ್ಧತಿಯು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪುರುಷಾಧಿಪತ್ಯವನ್ನು ಸಾಧಿಸುವ ಒಂದು ಪ್ರಯತ್ನವಾಗಿಯೇ ಕಂಡುಬರುತ್ತದೆ. ಆಸ್ತಿ ಹಂಚಿಕೆಯ ವಿಚಾರ ಎದುರಾದಾಗ ಗಂಡುಮಕ್ಕಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದ ಗಂಡುಮಕ್ಕಳಿಲ್ಲದ ಪತ್ನಿಯರು ಆಸ್ತಿಯಿಂದ ವಂಚಿತರಾಗಿಯೇ ಬದುಕಬೇಕಾಗುತ್ತದೆ. ಗಂಡುಮಕ್ಕಳನ್ನು ಪಡೆಯಲೆಂದೇ ಮತ್ತೊಂದು, ಮಗದೊಂದು ವಿವಾಹವಾಗುವ ಪಿತೃಪ್ರಧಾನ ಧೋರಣೆಯ ಒಂದು ಪರಂಪರೆ ಭಾರತದಲ್ಲಿ ಇಂದಿಗೂ ಜಾರಿಯಲ್ಲಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ. ಬಹುಪತ್ನಿತ್ವದಿಂದ ಸೃಷ್ಟಿಯಾಗುವ ಜಟಿಲ ಸಮಸ್ಯೆಗಳನ್ನು ಮಹಿಳಾ ಸಮಾನತೆಯ ಸ್ತ್ರೀವಾದಿ ನೆಲೆಯಲ್ಲಿ ನಿಂತು ನೋಡಿದಾಗ ಅಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಯಾತನೆ, ಶೋಷಣೆ ಮತ್ತು ತುಮುಲಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಸಾಂಪ್ರದಾಯಿಕ ಸಮಾಜಗಳಲ್ಲಿ ಈ ಸಮಸ್ಯೆಗಳನ್ನು ಸಹಜವಾಗಿ ಅನುಭವಿಸಬೇಕಾದುದೆಂದೇ ಭಾವಿಸಲಾಗುತ್ತದೆ. ಹಾಗಾಗಿಯೇ ಈ ಸಮಾಜದ ಮೇಲೆ ಹಿಡಿತ ಸಾಧಿಸುವ ಪುರುಷ ಸಮಾಜ ಮತ್ತು ಪಿತೃಪ್ರಧಾನ ವ್ಯವಸ್ಥೆ ಮಹಿಳೆಯರ ಆಂತರಿಕ ತುಮುಲಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಹಿಂದೂ ಧರ್ಮದ ನಿಯಮಗಳ ಅನುಸಾರ ಪಿತೃವಿಗೆ ತರ್ಪಣ ನೀಡುವ ಅಥವಾ ತಂದೆಯ ಸಾವಿನ ನಂತರ ಕರ್ಮಗಳನ್ನು ನೆರವೇರಿಸುವ ಮತ್ತು ಪಿತೃವಿಗೆ ಸದ್ಗತಿ ದೊರೆಯುವಂತೆ ಮಾಡುವ, ಗಂಡುಮಕ್ಕಳಿಗೆ ಈ ಕಾರಣಕ್ಕಾಗಿಯೇ ಆಸ್ತಿಯ ಪರಭಾರೆ ಮಾಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಕರ್ಮಗಳನ್ನು ಮಾಡುವ ಅಧಿಕಾರ ಮತ್ತು ಅವಕಾಶ ಇಲ್ಲದಿರುವುದರಿಂದ, ಆಸ್ತಿಯ ಮೇಲಿನ ಹಕ್ಕನ್ನೂ ಕಳೆದುಕೊಳ್ಳುತ್ತಾರೆ. ಈ ತಾರತಮ್ಯವನ್ನು ಗಮನಿಸಿಯೇ ಡಾ ಬಿ ಆರ್ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಮೂಲಕ ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿಯ ಹಕ್ಕು ನೀಡುವಂತೆ ಒತ್ತಾಯಿಸಿದ್ದರು.
ಉಪಸಂಹಾರ
ಪ್ರಪಂಚದ ಯಾವುದೇ ಪ್ರಮುಖ ದೇಶಗಳಲ್ಲೂ ಎಲ್ಲ ಮತಧರ್ಮಗಳಿಗೆ ಅನ್ವಯಿಸುವಂತಹ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿರುವಂತೆ ಕಾಣುವುದಿಲ್ಲ. ಆದರೆ ಪ್ರತಿಯೊಂದು ದೇಶದಲ್ಲೂ ಆದಿವಾಸಿಗಳು ಅಥವಾ ಮೂಲನಿವಾಸಿಗಳ ಸಾಂಸ್ಕೃತಿಕ ನೆಲೆಗಳನ್ನು ರಕ್ಷಿಸುವ ಸಲುವಾಗಿ ಕಾನೂನು, ಸಂಹಿತೆಗಳನ್ನು ರೂಪಿಸಲಾಗಿರುತ್ತದೆ. ಯೂರೋಪ್‌ನ ಬಹುತೇಕ ದೇಶಗಳಲ್ಲಿ ಆಸ್ತಿ ಉತ್ತರಾಧಿಕಾರದ ತೆರಿಗೆಯನ್ನು ವಿಧಿಸಲಾಗುತ್ತದೆ. ಈ ಉತ್ತರಾಧಿಕಾರ ತೆರಿಗೆಗೆ ಭಾರತದಲ್ಲಿ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಗೋವಾದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿದ್ದರೂ, ಅಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಮೂಲತಃ ವರ್ತಮಾನದ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆಯ ಸಂಕಥನದಲ್ಲಿ ಸ್ತ್ರೀವಾದಿ ಧ್ವನಿಯನ್ನು ಮೂಡಿಸುವುದೇ ಆದರೆ, ಅದು ಜಾತಿ, ಧರ್ಮ, ಪಂಥ, ಸಮುದಾಯ ಮತ್ತು ಅಧಿಕಾರ ರಾಜಕಾರಣದ ವ್ಯಾಪ್ತಿಯನ್ನು ದಾಟಿ, ಲಿಂಗತ್ವ ಸಮಾನತೆ ಮತ್ತು ಲಿಂಗತ್ವ ನ್ಯಾಯದ ದೃಷ್ಟಿಯಿಂದಲೇ ಹೊರಹೊಮ್ಮಬೇಕಿದೆ. ಯಾವುದೇ ಧರ್ಮಗಳ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕಿದೆ. ಧಾರ್ಮಿಕ ನಾಯಕರಿಗಿಂತಲೂ ಹೆಚ್ಚಾಗಿ ಸಮಾಜ ಶಾಸ್ತ್ರಜ್ಞರು ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಲ್ಲಿ ಸ್ತ್ರೀ ಸಮಾನತೆಯ ಪ್ರತಿಪಾದನೆಗಳಿಗೂ ಮಾನ್ಯತೆ ದೊರೆಯುತ್ತದೆ.
ಸಮಾನ ನಾಗರಿಕ ಸಂಹಿತೆ ಮೂಲತಃ ಇರಬೇಕಾದ್ದು ಪ್ರತಿಯೊಂದು ಕುಟುಂಬಗಳಲ್ಲಿ, ಸಮಾಜದಲ್ಲಿ, ಸಮುದಾಯದಲ್ಲಿ, ಗುಂಪಿನಲ್ಲಿ ಮತ್ತು ಈ ವಲಯಗಳ ಸಾಂಸ್ಕೃತಿಕ-ಮನುಜ ಸಂಬಂಧಿ ನೆಲೆಗಳಲ್ಲಿ. ಸಮಾನ ನಾಗರಿಕ ಸಂಹಿತೆ ಸ್ತ್ರೀ ಸಮೂಹದ ಮೂಲಭೂತ ಹಕ್ಕು ಎನ್ನುವುದೇ ಆದರೆ ಅದು ಸ್ತ್ರೀವಾದಿ ನೆಲೆಯಲ್ಲಿ, ಪುರುಷ ಪ್ರಧಾನ ಸಮಾಜದ ವಿರುದ್ಧ, ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ ಸಮರ ಸಾರಬೇಕಿದೆ. ಕಾನೂನು ಗ್ರಂಥಗಳಲ್ಲಿರುವ ಸಂಹಿತೆಗಳು ತುಳಿತಕ್ಕೊಳಗಾದವರನ್ನು, ಅವಕಾಶವಂಚಿತರನ್ನು, ಅವಘಡ ಸಂಭವಿಸಿದ ನಂತರ ಕಾಪಾಡುವ ನಿಯಮಗಳು. ಆದರೆ ಈ ಅವಘಡಗಳನ್ನು, ಅಪಸವ್ಯಗಳನ್ನು, ಅವಾಂತರಗಳನ್ನು ಮತ್ತು ನಿತ್ಯ ಜೀವನದಲ್ಲಿ ಮಹಿಳೆಯರು ಎದುರಿಸಬಹುದಾದ ಅಪಾಯಗಳನ್ನು, ಸಿಕ್ಕುಗಳನ್ನು, ಜಟಿಲತೆಗಳನ್ನು ಹೋಗಲಾಡಿಸಬೇಕಾದರೆ, ನಮ್ಮ ಸಾಮಾಜಿಕ ಬದುಕಿನಲ್ಲೇ ಸಮಾನ ನಾಗರಿಕ ಸಂಹಿತೆಗಾಗಿ ನಾವು ಹೋರಾಡಬೇಕಿದೆ. ನನ್ನ ಅಭಿಪ್ರಾಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಇದನ್ನೇ ಹೇಳಿದ್ದಾರೆ.
ಕೊನೆಯ ಹನಿ :
ನಾಗರಿಕ ಸಂಹಿತೆಯೊಂದು ಜಾರಿಯಲ್ಲಿರುವ ದೇಶವೊಂದರಲ್ಲಿ ಓರ್ವ ಪ್ರಜೆ ತನ್ನ ಸಾವಿನ ನಂತರ ತನ್ನೆಲ್ಲಾ ಆಸ್ತಿ ಮತ್ತು ಸಂಪತ್ತನ್ನು ದೇಶಕ್ಕೇ ಸಮರ್ಪಿಸುವುದೇ ಆದರೆ ಆ ದೇಶವು ಪ್ರತಿಯೊಬ್ಬ ಪ್ರಜೆಗೂ ಬದುಕು ಮತ್ತು ಘನತೆಯನ್ನು ಖಾತರಿಪಡಿಸಬೇಕು. ಭಾರತದ ಸಂವಿಧಾನ ಈ ಘನತೆಯ ಬದುಕನ್ನು ಪ್ರತಿಯೊಬ್ಬ ಪ್ರಜೆಗೂ ಕಲ್ಪಿಸುತ್ತದೆ.
-೦-೦-೦-೦-