ಶಿವಮೊಗ್ಗ:ಮಾ.26: ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹೆಮ್ಮೆಯ ಕಾರ್ಖಾನೆ ವಿಶ್ವೇಶ್ವರಯ್ಯ ಐರನ್ ಸ್ಟೀಲ್ ಲಿಮಿಟೆಡ್. ಜನವರಿಯಲ್ಲಿ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಸಲಹೆಯಂತೆ ಬೋರ್ಡ್ ಆಫ್ ಡೈರೆಕ್ಟರ್ ಮೀಟಿಂಗ್ ಈ ಐತಿಹಾಸಿಕ ಕಾರ್ಖಾನೆ ಮುಚ್ಚಲು ನಿರ್ಣಯ ತೆಗೆದುಕೊಂಡಿತ್ತು. ಉತ್ಪಾದನಾ ಹಂತದಲ್ಲೇ ನಷ್ಟದ ಹೆಸರಲ್ಲಿ ಬಂಡವಾಳ ಹೂಡಿಕೆ ಮಾಡದೇ ಮುಚ್ಚಲು ಹೊರಟ ಸರ್ಕಾರಗಳ ವಿರುದ್ಧ ಕಾರ್ಮಿಕರು ಸಿಡಿದೆದ್ದರು. ನೂರಾರು ಗುತ್ತಿಗೆ ಕಾರ್ಮಿಕರು ಭದ್ರಾವತಿ ಭವ್ಯ ಪರಂಪರೆ ಸಾರುತ್ತಿರುವ ಕಾರ್ಖಾನೆ ಮುಚ್ಚುವ ನಿರ್ಣಯದ ವಿರುದ್ಧ ಸಮರ ಸಾರಿದ್ದು ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದಾರೆ. ಭದ್ರವತಿ ಜನರಷ್ಟೇ ಅಲ್ಲದೇ ರಾಜ್ಯದೆಲ್ಲೆಡೆ ಈ ಹೋರಾಟಕ್ಕೆ ಬೆಂಬಲ ದೊರೆತಿದೆ. ನಾನಾ ಮಠದ ಸ್ವಾಮೀಜಿಗಳೂ ಸಹ ಪ್ರತಿಭಟನಾ ನಿರತ ಕಾರ್ಮಿಕರಿಗೆ ಬೆಂಬಲ ನೀಡಿದ್ದಾರೆ.
ಕಾರ್ಖಾನೆ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರ ಚಳವಳಿಗೆ ಅರವತ್ತೇಳು ದಿನ ತುಂಬಿರೋದ್ರಿಂದ ಇಂದು ರಕ್ತ ಪತ್ರ ಚಳವಳಿ ನಡೆಸಿದರು. ಒಂದು ರೂಪಾಯಿ ಪೋಸ್ಟಲ್ ಕಾರ್ಡ್ ನಲ್ಲಿ ಕಾರ್ಮಿಕರು ಮತ್ತು ಮಹಿಳೆಯರು ಸಿರಿಂಜ್ ಲ್ಲಿ ರಕ್ತ ತೆಗೆದು ಲೋಟದಲ್ಲಿ ಸಂಗ್ರಹಿಸಿ ನಂತರ ಕಾರ್ಡ್ ನಲ್ಲಿ Save VISL ಎಂದು ಬರೆದು ಹೆಬ್ಬೆಟ್ಟು ಒತ್ತಿ ಪ್ರಧಾನಿ ಮೋದಿ ವಿಳಾಸಕ್ಕೆ ಕಳುಹಿಸಿದ್ದಾರೆ. ಈ ಪತ್ರಗಳನ್ನ ಟ್ವಿಟ್ಟರ್ ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳನ್ನು ಕೂಡ ಪೋಸ್ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಹೊಸದುರ್ಗ ಕನಕಪೀಠದ ಮಠಾಧೀಶ್ವರ ಈಶ್ವರಾನಂದ ಪುರಿ ಸ್ವಾಮಿಗಳು ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಪ್ರತಿಭಟನಾ ನಿರತ ಕಾರ್ಮಿಕರು ರಕ್ತದಲ್ಲಿ ಪತ್ರ ಬರೆದು ಬಾಕ್ಸ್ ಗೆ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗೆ ನೌಕರ ಸಂಘದ ಪದಾಧಿಕಾರಿ ರಾಕೇಶ್ ರೆಡ್ಡಿ, ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇಂದು ನಮ್ಮ ಕಾರ್ಖಾನೆ ಉಳಿಸಲು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿಗೆ ಕಳಿಸುತ್ತಿದ್ದೇವೆ. ಈ ಕಾರ್ಖಾನೆ ರಾಜಕೀಯ ವ್ಯಕ್ತಿಗಳು ಅಥವಾ ಯಾವುದೋ ಪುಡಾರಿಗಳು ಕಟ್ಟಿರುವಂತಹದಲ್ಲ. ಜನರ ಸಮಸ್ಯೆಗಳನ್ನು ನಿವಾರಣೆ ಆಗಲಿ ಅಭಿವೃದ್ಧಿ ಪಥದತ್ತ ಸಾಗಲಿ ಎಂದು. ಅಂದು ನಾಲ್ವಾಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿರುವಂತಹ ಕಾರ್ಖಾನೆ. ಅಲ್ಲಿಂದ ಇಲ್ಲಿವರೆಗೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ನೋವಿನ ಸಂಗತಿ ಏನೆಂದರೆ ಕಾರ್ಖಾನೆ ನಷ್ಟದ ಹೆಸರಿನಲ್ಲಿ ಮುಚ್ಚಲು ಹೊರಟಿದ್ದಾರೆ. ಕಾರ್ಖಾನೆಗೆ ಒಂದು ರೂಪಾಯಿ ಬಂಡವಾಳ ಹಾಕದೆ ಮುಚ್ಚಲು ಹೇಗೆ ಮನಸ್ಸು ಬರುತ್ತದೆ..? ದಯಮಾಡಿ ಪ್ರಧಾನಿ ನರೇಂದ್ರ ಮೋದಿ ಕಾರ್ಖಾನೆಗೆ ಬಂಡವಾಳ ಹಾಕಿ ಉಳಿಸಿಕೊಡಬೇಕು ಎಂದು ನಾವು ಬೇಡಿಕೊಳ್ಳುತ್ತಿದ್ದೇವೆ ಎಂದರು.

ಕಾರ್ಖಾನೆ ನೌಕರ ಅಮೃತ್ ಮಾತನಾಡಿ, ಮುಂದಿನ ಪೀಳಿಗೆಗಾದರೂ ಈ ಕಾರ್ಖಾನೆ ಉಳಿಯಲೇಬೇಕು. ಈಗಾಗಲೇ ರಾಜ್ಯದ ಮಠಮಾನ್ಯಗಳನ್ನು ಭೇಟಿಯಾಗಿದ್ದೇವೆ. ಕೇಂದ್ರ-ರಾಜ್ಯ ಸಚಿವ ರನ್ನು ಭೇಟಿಯಾಗಿದ್ದೇವೆ. ಎಲ್ಲರೂ ಬೆಂಬಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ತರಲಾಗಿದೆ. ಗೃಹ ಸಚಿವ ಅಮಿತ್ ಶಾಗೂ ಈ ಸಮಸ್ಯೆ ಗೊತ್ತಿದೆ. ಇಂದಿನ ದಿನಗಳಲ್ಲಿ ಇದನ್ನ ಉಳಿಸಿಕೊಳ್ಳಲು ಕೆಲ ಬೆಳವಣಿಗೆಗಳು ಆಗುತ್ತಿವೆ. ಸದ್ಯ ಉತ್ಪಾದನೆ ಆಗುತ್ತಿದೆ. ಮುಂದಿನ ತಿಂಗಳೂ ಸಹ ಉತ್ಪಾದನೆಯಾದರೆ ಉತ್ತಮ ಬೆಳವಣಿಗೆ ಎಂದರು.

ಇನ್ನೊಬ್ಬ ನೌಕರ ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚಲು ಪ್ರಯತ್ನಪಟ್ಟಿದೆ. ಕನಕ ಗುರು ಪೀಠದ ಈಶ್ವರಾನಂದ ಸ್ವಾಮೀಜಿಗಳ ಸಮ್ಮುಖದಲ್ಲಿ ಇಂದು ರಕ್ತ ಚಳವಳಿ ಆರಂಭಿಸಿದ್ದೇವೆ. ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಕೂಡ ಚುನಾವಣಾ ಸಂದರ್ಭ ರಾಜ್ಯಕ್ಕೆ ಬರುತ್ತಿದ್ದಾರೆ. ಎಲ್ಲರಿಗೂ ಈ ಬಗ್ಗೆ ಪ್ರೀತಿ ಇದೆ. ಆದರೆ ಉಳಿಸಿಕೊಡಲು ಪ್ರಯತ್ನಪಡಬೇಕು. ನಮ್ಮ ರಾಜ್ಯದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾರ್ಖಾನೆ ಮುಚ್ಚುತ್ತಿದೆ. ಇದರ ಉಳಿಸಲು ಹೋರಾಟ ನಾವು ನಿರಂತರವಾಗಿ ಮಾಡುತ್ತೇವೆ. ಗೌರವಾಯುತ ಪ್ರಧಾನ ನರೇಂದ್ರ ಮೋದಿಯವರೇ ಈ ಕಾರ್ಖಾನೆಯನ್ನು ಉಳಿಸಿಕೊಡಬೇಕು. ಅವರಿಂದ ಮಾತ್ರ ಸಾಧ್ಯ ಇದೆ ಎಂದು ಸುರೇಶ್ ಹೇಳಿದರು.