(ಕೃಪೆ : ಸಂವಾದ ಮಾಸಪತ್ರಿಕೆ ಆಗಸ್ಟ್ 2026)
ಶೋಷಿತರ ಕಣ್ಣೋಟದಲ್ಲಿ ಚರಿತ್ರೆ
ತಳಸಮುದಾಯಗಳ ದೃಷ್ಟಿಯಿಂದ ಬ್ರಿಟೀಷ್ ಆಳ್ವಿಕೆಯನ್ನು ನೋಡಬಹುದಾದ ಮತ್ತೊಂದು ಆಯಾಮ ಎಂದರೆ ಭೂಮಿಯ ಮೇಲಿನ ಹಕ್ಕುಗಳು ಮತ್ತು ಒಡೆತನ. ಆಸ್ತಿ ಹಕ್ಕುಗಳ ನಿಯಮಗಳನ್ನು ಸಾಂಪ್ರದಾಯಿಕ ಪದ್ಧತಿಗಳಿಂದ ಆಧುನಿಕ ಶಾಸನಾತ್ಮಕ ಸಂಹಿತೆಗಳಿಗೆ ಬದಲಿಸಿದ್ದು ಬ್ರಿಟೀಷ್ ಆಳ್ವಿಕೆಯ ಕೊಡುಗೆ. ಮೈಸೂರಿನ ಟಿಪ್ಪು, ಬರೋಡದ ಶಾಹು ಮಹಾರಾಜ್ ಇನ್ನು ಕೆಲವು ಪ್ರಾಂತ್ಯಗಳನ್ನು ಹೊರತುಪಡಿಸಿದರೆ ಭಾರತದ ಎಲ್ಲ ರಾಜಪ್ರಭುತ್ವಗಳಲ್ಲಿ, ಸಂಸ್ಥಾನಗಳಲ್ಲಿ ಊಳಿಗಮಾನ್ಯ ಪದ್ದತಿಯೇ ಪ್ರಧಾನವಾಗಿ ಚಾಲ್ತಿಯಲ್ಲಿತ್ತು. ಭೂಮಿಯನ್ನು ಉಳುಮೆ ಮಾಡುವ, ಕೃಷಿ ಚಟುವಟಿಕೆಗಳನ್ನು ತಮ್ಮ ಜೀವನೋಪಾಯದ ಆಧಾರವಾಗಿಟ್ಟುಕೊಂಡಿದ್ದ ಬಹುಸಂಖ್ಯಾತ ಜನತೆಗೆ, ಅನ್ನ ಬೆಳೆಯುವ ಭೂಮಿ ದಕ್ಕುತ್ತಿರಲಿಲ್ಲ. ತಳಸ್ತರ ಜಾತಿಗಳ, ತಳಸಮುದಾಯಗಳ ಈ ಜನತೆಗೆ ಭೂ ಹಕ್ಕುಗಳ ಕಲ್ಪನೆ ಮೂಡತೊಡಗಿದ್ದು ಬ್ರಿಟೀಷರು ಭೂಮಿಯನ್ನು ನೋಂದಣಿ ಮಾಡಿಸಬಹುದಾದ ಒಂದು ಸ್ಥಿರಾಸ್ಥಿಯನ್ನಾಗಿ ಮಾಡಿದ ಮೇಲೆ.

1793ರಲ್ಲಿ ಜಾರಿಯಾದ ಬೆಂಗಾಲ ನಿಯಂತ್ರಣ ಕಾಯ್ದೆಯು ಸ್ವಪ್ರೇರಿತ ಭೂ ನೋಂದಣಿ (Voluntary deed registration) ವಂಚನೆಗಳನ್ನು ತಡೆಗಟ್ಟಿ, ಭೂಮಿಯನ್ನು ಹೊಂದಿರುವವರಿಗೆ ಭದ್ರತೆ ನೀಡಿತ್ತು. 1866 ಮತ್ತು 1908ರ ಭಾರತೀಯ ನೋಂದಣಿ ಕಾಯ್ದೆ ಉನ್ನತ ಮೌಲ್ಯದ ಭೂಮಿಗೆ ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿತ್ತು. 1882ರ ಆಸ್ತಿ ಪರಭಾರೆ ಕಾಯ್ದೆಯು ಸ್ಥಿರಾಸ್ಥಿಗಳ ಮಾರಾಟ, ಒತ್ತೆ ಇಡುವುದು, ಭೋಗ್ಯ, ಉಡುಗೊರೆ ಇತ್ಯಾದಿ ನಿಯಮಗಳನ್ನು ಸಂಹಿತೆಗಳನ್ನಾಗಿ ರೂಪಿಸಿತ್ತು. ಆದರೆ ಈ ಉಪಕ್ರಮಗಳು ದೇಶವ್ಯಾಪಿಯಾಗಿ ತಳಸ್ತರದ ಜಾತಿಗಳಿಗೇನೂ ಅನುಕೂಲಕರವಾಗಿ ಪರಿಣಮಿಸಲಿಲ್ಲ. ಮೇಲ್ಜಾತಿಗಳ ಹಿಡಿತ ಮತ್ತು ಗ್ರಾಮಗಳಲ್ಲಿ ಊಳಿಗಮಾನ್ಯ ಪದ್ಧತಿಯ ಪಾರಂಪರಿಕ ಆಧಿಪತ್ಯದ ಪರಿಣಾಮ ದಲಿತ-ಅಸ್ಪೃಶ್ಯ ಸಮುದಾಯಗಳು ಈ ಕಾಯ್ದೆಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಬರೋಡದ ಶಾಹು ಮಹಾರಾಜ್, ಮೈಸೂರಿನ ಟಿಪ್ಪು ಸುಲ್ತಾನ್ ಮೊದಲಾದ ಸಾಂಸ್ಥಾನಿಕ ರಾಜಪ್ರಭುತ್ವಗಳಲ್ಲಿ ತಳಸ್ತರದ ಜಾತಿಗಳಿಗೆ ಭೂಮಿಯನ್ನು ಹಂಚಲಾಗಿತ್ತು. ಬ್ರಿಟೀಷರು ಈ ಕಾಯ್ದೆಗಳನ್ನು ಜಾರಿಗೊಳಿಸುವ ಮುನ್ನವೆ ಟಿಪ್ಪು ತನ್ನ ಆಡಳಿತದಲ್ಲಿ ಭೂ ಹಂಚಿಕೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗಿತ್ತು. ಇನಾಂದಾರಿ, ಜಮೀನ್ದಾರಿ, ದೇವಾಲಯಗಳಿಗೆ ನೀಡುವ ಭೂಮಿ ಮತ್ತು ಮೇಲ್ಜಾತಿಯವರಿಗೆ ರಾಜರು ನೀಡುತ್ತಿದ್ದ ಉಡುಗೊರೆಗಳು ಭೂ ಹಂಚಿಕೆಯ ಪ್ರಧಾನ ಮಾದರಿಗಳಾಗಿದ್ದವು. ಆರ್ಥಿಕವಾಗಿ ನೋಡಿದಾಗ ಬ್ರಿಟೀಷರ ಭೂ ಕಾಯ್ದೆಗಳು ಸ್ಥಳೀಯ ಸಮುದಾಯಗಳ ಕೆಲವು ಹಕ್ಕುಗಳನ್ನು ಕಸಿದುಕೊಳ್ಳುವ ಅಸ್ತ್ರಗಳಾಗಿ ಪರಿಣಮಿಸಿದ್ದನ್ನೂ ಚರಿತ್ರೆ ದಾಖಲಿಸಿದೆ. ಆದರೆ ದಲಿತರೂ, ಅಸ್ಪೃಶ್ಯರೂ ಭೂಮಿಯ ಒಡೆತನ ಹೊಂದಲು ಅಗತ್ಯವಾದ ಕಾನೂನುಗಳನ್ನು ಈ ಕಾಲಘಟ್ಟದಲ್ಲಿ ಕಾಣಬಹುದು.

ಸಮಾಜಗಳನ್ನು ಬೆಸೆದ ಆಧುನಿಕತೆ
ಇದರ ಹೊರತಾಗಿಯೂ ಸ್ವತಂತ್ರ ಭಾರತದಲ್ಲೂ ಸಹ ಭಾರತೀಯ ಸಮಾಜದಲ್ಲಿ ಬೇರೂರಿದ್ದ ಊಳಿಗಮಾನ್ಯ ಪದ್ಧತಿಗಳು ದಲಿತ ಸಮುದಾಯಗಳನ್ನು ಭೂವಂಚಿತರನ್ನಾಗಿಯೇ ಉಳಿಸಿರುವುದು ವಾಸ್ತವ. ಚಾರಿತ್ರಿಕವಾಗಿ ಭೂ ಹಂಚಿಕೆಯನ್ನು ಅಳವಡಿಸಲಾಗಿದ್ದ ಸಂಸ್ಥಾನಗಳನ್ನು (ಮೈಸೂರು ಮತ್ತು ಬರೋಡ) ಹೊರತುಪಡಿಸಿದರೆ ಉಳಿದಂತೆ ಕೆಳಸ್ತರದ ಜಾತಿಗಳಿಗೆ ಭೂ ಒಡೆತನ ಮರೀಚಿಕೆಯಾಗಿಯೇ ಉಳಿದಿತ್ತು. ನೆಹರೂ ಆಳ್ವಿಕೆಯಲ್ಲಿ ಕೈಗೊಳ್ಳಲಾದ ಭೂ ಸುಧಾರಣಾ ಕ್ರಮಗಳು, ವಿನೋಬಾ ಭಾವೆ ಅವರ ಭೂದಾನ ಚಳುವಳಿ 1960-70ರ ವೇಳೆಗೆ ಈ ಅವಕಾಶವಂಚಿತ ಸಮುದಾಯಗಳಿಗೂ ಭೂಮಿಯ ಹಕ್ಕನ್ನು ಸ್ಥಾಪಿಸಲು ಸಾಧ್ಯವಾಗಿತ್ತು. ಇದನ್ನು ಚಾರಿತ್ರಿಕವಾಗಿ ನೋಡಿದಾಗ ಭೂಮಿಯನ್ನು ಮೇಲ್ಜಾತಿ-ಮೇಲ್ವರ್ಗದ ಹಿಡಿತದಿಂದ ಹೊರತರಲು ಅಗತ್ಯವಾದ ಶಾಸನಾತ್ಮಕ ಕ್ರಮಗಳ ಅಡಿಪಾಯವನ್ನು ಬ್ರಿಟೀಷ್ ಆಳ್ವಿಕೆಯಲ್ಲಿ ಗುರುತಿಸಬಹುದು.
ಅಪಾರ ಜನಸಂಖ್ಯೆ ಮತ್ತು ವಿಶಾಲ ಭೂಮಿಯನ್ನು ಹೊಂದಿರುವ ಭಾರತವನ್ನು ಒಂದಾಗಿಸುವ ನಿಟ್ಟಿನಲ್ಲಿ ಎರಡು ಆಧುನಿಕ ಸೌಕರ್ಯಗಳು ಬಹೋಪಯೋಗಿಯಾಗಿದ್ದನ್ನು ಚರಿತ್ರೆಯಲ್ಲಿ ಗುರುತಿಸಬಹುದು. ಮೊದಲನೆಯದು ವ್ಯಕ್ತಿಗತವಾಗಿ ಸಮಾಜದ ಸದಸ್ಯರಿಗೆ ದೂರದಲ್ಲಿರುವವರನ್ನೂ ಸಂಪರ್ಕಿಸಲು ಸಾಧ್ಯವಾಗಿಸಿದ ಅಂಚೆ ಪದ್ಧತಿ , ಎರಡನೆಯದು ಈ ಸಂಪರ್ಕವನ್ನು ವೈಯುಕ್ತಿಕಗೊಳಿಸಿ, ಪರಸ್ಪರ ಭೇಟಿಯಾಗಲು, ಮುಖಾಮುಖಿಯಾಗಲು ಅವಕಾಶ ಕಲ್ಪಿಸಿದ ರೈಲ್ವೆ ಸಾರಿಗೆ ವ್ಯವಸ್ಥೆ. ಈಸ್ಟ್ ಇಂಡಿಯಾ ಕಂಪನಿಯ ಅವಧಿಯಲ್ಲೇ 1766-74ರಲ್ಲಿ ಲಾರ್ಡ್ ಕ್ಲೈವ್ ಮತ್ತು ವಾರೆನ್ ಹೇಸ್ಟಿಂಗ್ಸ್ ಕಲ್ಕತ್ತಾ, ಮದ್ರಾಸ್ ಮತ್ತು ಬಾಂಬೆಯಲ್ಲಿ ಪ್ರಧಾನ ಅಂಚೆ ಕಚೇರಿಗಳನ್ನು ಸ್ಥಾಪಿಸಿದ್ದರು. 1837ರ ಅಂಚೆ ಕಚೇರಿ ಕಾಯ್ದೆ ಪತ್ರಗಳ ರವಾನೆ ಪ್ರಕ್ರಿಯೆಯನ್ನು ಕೇಂದ್ರೀಕರಿಸಿ, ಸರ್ಕಾರದ ಸ್ವಾಮ್ಯಕ್ಕೆ ಒಳಪಡಿಸಿತ್ತು.

19ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭವಾದ ರೈಲು ಮಾರ್ಗಗಳು ಭಾರತದ ಉದ್ದಗಲಕ್ಕೂ ಜನರು ಪರಸ್ಪರ ಸಂಪರ್ಕಿಸುವ ಒಂದು ಸೇತುವೆಯಾಗಿ ಪರಿಣಮಿಸಿತ್ತು. ರೈಲು ಮಾರ್ಗಗಳ ನಿರ್ಮಾಣದಲ್ಲೂ ಬ್ರಿಟೀಷರ ಸ್ವಾರ್ಥ ಮತ್ತು ಮಾರುಕಟ್ಟೆ ಲೆಕ್ಕಾಚಾರಗಳೇ ಪ್ರಧಾನವಾಗಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ಸರಕು ಸಾಗಾಣಿಕೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ಆಂತರಿಕವಾಗಿ ಅನುಕೂಲ ಕಲ್ಪಿಸಿದ ರೈಲು ಮಾರ್ಗಗಳು ಲಕ್ಷಾಂತರ ಸಣ್ಣ ಊರುಗಳನ್ನು, ಹಳ್ಳಿಗಳನ್ನು ಪರಸ್ಪರ ಸಂಪರ್ಕಿಸುವಂತೆ ಮಾಡಿದ್ದು ವಾಸ್ತವ. ಮೇಲ್ನೋಟಕ್ಕೆ ಗಮನಿಸಿದರೂ, ರೈಲು ಮಾರ್ಗಗಳು ಹಾದು ಹೋಗುವ ಬಹುತೇಕ ಸಣ್ಣ ಪಟ್ಟಣಗಳು ಕ್ರಮೇಣ ನಗರಗಳಾಗಿ ಬೆಳೆದಿರುವುದನ್ನು, ಆರ್ಥಿಕತೆಯ ಕೇಂದ್ರಗಳಾಗಿರುವುದನ್ನು ಗುರುತಿಸಬಹುದು.
ಬ್ರಿಟೀಷ್ ಲೂಟಿ ಮತ್ತು ಬಂಡವಾಳಿಗರ ಆಸಕ್ತಿ
ಈ ಕೆಲವು ಸಕಾರಾತ್ಮಕ ಸಂಗತಿಗಳ ನಡುವೆ ಗುರುತಿಸಲೇಬೇಕಾದ ಅಂಶ ಎಂದರೆ ಬ್ರಿಟೀಷ್ ವಸಾಹತುಶಾಹಿಯು ಭಾರತದ ಆರ್ಥಿಕ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಲೂಟಿ ಮಾಡಿರುವ ವಿಧಾನ ಮತ್ತು ಪ್ರಮಾಣ. ಇಂಗ್ಲಿಷ್ ನಿಘಂಟಿಗೆ ಸೇರ್ಪಡೆಯಾದ ಪ್ರಪ್ರಥಮ ಹಿಂದಿ ಪದ ಲೂಟ್ (Loot) ಎಂದು ಚರಿತ್ರಕಾರರು ಹೇಳುತ್ತಾರೆ. ಲೂಟಿ ಎನ್ನುವ ಪದವನ್ನು ಆಂಗ್ಲೀಕರಿಸಿದ್ದೇ ಅಲ್ಲದೆ, ಭಾರತದ ರಾಜಪ್ರಭುತ್ವಗಳು ಅನುಸರಿಸಿಕೊಂಡು ಬಂದಿದ್ದ ಅನ್ಯ ಸಂಸ್ಥಾನಗಳನ್ನು ಲೂಟಿ ಮಾಡುವ ಪರಂಪರೆಗೆ ಅಂತಾರಾಷ್ಟ್ರೀಯ ರೂಪ ಕೊಟ್ಟಿರುವುದು ಬ್ರಿಟಿಷ್ ಆಳ್ವಿಕೆಯೇ. ಇದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗುವುದಿಲ್ಲ. ಭಾರತದ ಸ್ಥಳೀಯ ಕೈಮಗ್ಗದ ಉತ್ಪಾದನಾ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ ಅಪಕೀರ್ತಿ ಬ್ರಿಟೀಷರಿಗೇ ಸಲ್ಲುತ್ತದೆ.
ಬ್ರಿಟೀಷರ ಆಗಮನಕ್ಕೂ ಮುನ್ನ ವಿದೇಶಗಳಲ್ಲಿ ಭಾರತವನ್ನು ಚಿನ್ನದ ಹಕ್ಕಿ (Sone ki chidiya) ಎಂದು ಕರೆಯಲಾಗುತ್ತಿತ್ತು ಎಂಬ ಪ್ರತೀತಿ ಇದೆ. ಆದರೆ ಮೊಘಲ್ ಸಾಮ್ರಾಜ್ಯದ ಪತನದ ನಂತರ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬ್ರಿಟೀಷ್ ಆಳ್ವಿಕೆಯನ್ನು ಶಶಿ ತರೂರ್ ಹೀಗೆ ವ್ಯಾಖ್ಯಾನಿಸುತ್ತಾರೆ : “ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ, ಭಾರತವು ಬ್ರಿಟನ್ನ ಅತಿದೊಡ್ಡ ಆದಾಯದ ಮೂಲವಾಗಿತ್ತು, ಬ್ರಿಟಿಷ್ ರಫ್ತುಗಳಿಗೆ ವಿಶ್ವದ ಅತಿದೊಡ್ಡ ಖರೀದಿದಾರನಾಗಿತ್ತು ಮತ್ತು ಬ್ರಿಟಿಷ್ ನಾಗರಿಕ ಸೇವಕರು ಮತ್ತು ಸೈನಿಕರಿಗೆ ಭಾರತದ ಸ್ವಂತ ಖರ್ಚಿನಲ್ಲಿ ಹೆಚ್ಚಿನ ಸಂಬಳದ ಉದ್ಯೋಗದ ಮೂಲವಾಗಿತ್ತು. ಭಾರತೀಯರು ಅಕ್ಷರಶಃ ತಮ್ಮದೇ ಆದ ದಬ್ಬಾಳಿಕೆಗೆ ಬೆಲೆ ತೆತ್ತರು.” ( ಶಶಿ ತರೂರ್, ಇನ್ಗ್ಲೋರಿಯಸ್ ಎಂಪೈರ್: ವಾಟ್ ದಿ ಬ್ರಿಟಿಷರು ಡಿಡ್ ಟು ಇಂಡಿಯಾ )

1859ರಲ್ಲಿ ಜಾರ್ಜ್ ವಿನ್ಗೇಟ್ ಎಂಬ ವಿದ್ವಾಂಸರು ಅಂದಾಜು ಮಾಡಿದ ಹಾಗೆ ಬ್ರಿಟೀಷರು 1835-51ರ 17 ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ನಾಲ್ಕು ದಶಲಕ್ಷ ಪೌಂಡ್ನಂತೆ ಭಾರತದ ಸಂಪತ್ತನ್ನು ಬರಿದು ಮಾಡಿದ್ದರು. ಮಾಸ್ಕೋ ವಿಶ್ವವಿದ್ಯಾಲಯದ ಪ್ರೊ. ವಿ. ಐ. ಪಾವ್ಲೋವ್ ಅವರು ಹೇಳುವಂತೆ 1930ರ ವೇಳೆಗೆ ಬ್ರಿಟೀಷರು ಭಾರತದಿಂದ 130 ರಿಂದ 140 ದಶಲಕ್ಷ ಪೌಂಡ್ ಮೊತ್ತವನ್ನು ಕಪ್ಪ ಕಾಣಿಕೆಗಳ ರೂಪದಲ್ಲೇ ಸುಲಿಗೆ ಮಾಡಿತ್ತು. ಈ ಆರ್ಥಿಕ ದಬ್ಬಾಳಿಕೆಯ ಪರಿಣಾಮವಾಗಿ ಬ್ರಿಟೀಷರು ಆಗಮಿಸುವ ಮುನ್ನ ವಿಶ್ವದ ಅತ್ಯುತ್ತಮ ಜಿಡಿಪಿ (GDP) ಹೊಂದಿದ್ದ ಭಾರತ 1947ರ ವೇಳೆಗೆ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಬ್ರಿಟೀಷ್ ಚರಿತ್ರಕಾರ, ಅರ್ಥಶಾಸ್ತ್ರಜ್ಞ ಆಗಸ್ ಮ್ಯಾಡಿಸನ್ ಅಂದಾಜು ಮಾಡುವಂತೆ, ಜಾಗತಿಕ ಜಿಡಿಪಿಯಲ್ಲಿ (World GDP) ಭಾರತದ ಪಾಲು ಕ್ರಿ.ಶಕ 1700ರಲ್ಲಿ ಶೇಕಡಾ 24.4ರಷ್ಟಿದ್ದುದು 1950ರ ಹೊತ್ತಿಗೆ ಶೇಕಡಾ 4.2ಕ್ಕೆ ಕುಸಿದಿತ್ತು.
ಈ ಲೂಟಿ ಮತ್ತು ಭಾರತೀಯರನ್ನು ಆರ್ಥಿಕವಾಗಿ, ಬೌದ್ಧಿಕವಾಗಿ, ಸಾಮಾಜಿಕವಾಗಿ ದಾಸ್ಯಕ್ಕೆ ದೂಡಿದ ಬ್ರಿಟೀಷ್ ವಸಾಹತುಶಾಹಿಯನ್ನು ಯಾವ ಮಗ್ಗುಲಿನಿಂದ ನೋಡಿದರೂ ಸಮರ್ಥಿಸಲಾಗುವುದಿಲ್ಲ. ಕ್ಷಮಿಸಲೂ ಸಾಧ್ಯವಿಲ್ಲ. ಆದರೆ ಈ ಆರೋಪಗಳ ನಡುವೆಯೂ ಬ್ರಿಟೀಷರು ಜಾರಿಗೊಳಿಸಿದ ಶಿಕ್ಷಣ ನೀತಿಗಳು, ಸಾರಿಗೆ ಸಂಪರ್ಕ ಯೋಜನೆಗಳು, ಭೂ ಸುಧಾರಣೆಯ ಕ್ರಮಗಳು, ಭಾರತೀಯ ಸಮಾಜದಲ್ಲಿ ಶತಮಾನಗಳ ಶೋಷಣೆಗೊಳಗಾಗಿದ್ದ ಬಹುಸಂಖ್ಯಾತ ಸಮುದಾಯಗಳಿಗೆ ಪ್ರಗತಿಯ ಅಡಿಪಾಯ ಒದಗಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಬಂಡವಾಳಶಾಹಿಯ ಮೂಲ ಲಕ್ಷಣವೇ ಸಂಪನ್ಮೂಲಗಳ ಲೂಟಿ ಎನ್ನುವುದನ್ನು ಡಿಜಿಟಲ್ ಯುಗದಲ್ಲೂ ಕಾಣುತ್ತಲೇ ಇದ್ದೇವೆ. ಜನಸಾಮಾನ್ಯರ ದೃಷ್ಟಿಯಿಂದ ಇದು ಒಂದೇ ರೀತಿಯಲ್ಲಿ ಕಂಡರೂ, ಸಾರ್ವಜನಿಕವಾಗಿ ಹೊಸ ರೂಪದಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ.

ಚಾರಿತ್ರಿಕ ಹಿನ್ನೋಟ-ಭವಿಷ್ಯದ ಮುನ್ನೋಟ
ವರ್ತಮಾನದಲ್ಲಿ ನಿಂತು ಚರಿತ್ರೆಯನ್ನು ಪರಾಮರ್ಶಿಸುವಾಗ ನಾವು ನಿಂತ ನೆಲ ಯಾವುದು ಮತ್ತು ನಮ್ಮ ಕಣ್ಣೋಟವನ್ನು ನಿರ್ದೇಶಿಸುವ ಮನಸ್ಥಿತಿ ಎಂತಹುದು ಎನ್ನುವುದು ಮುಖ್ಯವಾಗುತ್ತದೆ. ಇಂದಿಗೂ ಬಂಡವಾಳಶಾಹಿಯ ಶೋಷಣೆ, ಊಳಿಗಮಾನ್ಯದ ದಬ್ಬಾಳಿಕೆ, ಮೇಲ್ಜಾತಿಯ ಸಾಂಸ್ಕೃತಿಕ ದೌರ್ಜನ್ಯ ಮತ್ತು ಜಾತಿ ವ್ಯವಸ್ಥೆಯ ಕರಾಳ ಬಾಹುಗಳಲ್ಲಿ ಸಿಲುಕಿರುವ ಶೋಷಿತ ಸಮುದಾಯಗಳ ನಡುವೆ ನಿಂತು ವಸಾಹತುಶಾಹಿ ಚರಿತ್ರೆಯೊಳಗೆ ಇಣುಕಿದಾಗ, ಅಲ್ಲಿ ನಿರ್ಮಿಸಿದ ಕೆಲವು ಅಡಿಪಾಯಗಳನ್ನು ತಳ್ಳಿಹಾಕಲಾಗುವುದಿಲ್ಲ. ಇದರಲ್ಲಿ ಬಹಳ ಮುಖ್ಯವಾಗಿ ಕಾಣುವುದು ಶಿಕ್ಷಣ ಮತ್ತು ಜ್ಞಾನ ಕೇಂದ್ರಗಳು.
ಈ ಕೊಡುಗೆಗಳಿಗಾಗಿ ವರ್ತಮಾನದ ಭಾರತೀಯರು ಬ್ರಿಟೀಷರಿಗೆ ಋಣಿಯಾಗಿರಬೇಕಿಲ್ಲ ಏಕೆಂದರೆ ಅವರು ಕೈಗೊಂಡ ಕ್ರಮಗಳೆಲ್ಲವೂ ಕೈಗಾರಿಕಾ ಬಂಡವಾಳಶಾಹಿ ಮತ್ತು ಭೌಗೋಳಿಕ ಸಾಮ್ರಾಜ್ಯಶಾಹಿಯ ವಿಸ್ತರಣೆ, ಭದ್ರತೆ, ಉತ್ತಮ ಭವಿಷ್ಯಕ್ಕಾಗಿ ಮಾತ್ರ. ಆದರೆ ಈ ಕೊಡುಗೆಗಳನ್ನು ಅಲ್ಲಗಳೆಯುವಷ್ಟು ಕೃತಘ್ನರೂ ಆಗಬೇಕಿಲ್ಲ. ಚರಿತ್ರೆಯನ್ನು ಚಾರಿತ್ರಿಕ ಕಣ್ಣೋಟದಿಂದಲೇ ನೋಡಿದಾಗ, ಆಂತರಿಕವಾಗಿಯೇ ಭಾರತೀಯರು ಎದುರಿಸಿರುವ ದಬ್ಬಾಳಿಕೆ ಮತ್ತು ದೌರ್ಜನ್ಯಗಳನ್ನೂ ಗಮನಿಸಿ, ಬ್ರಿಟೀಷ್ ಆಳ್ವಿಕೆಯ ದಬ್ಬಾಳಿಕೆಯನ್ನು ವಿಮರ್ಶಾತ್ಮಕವಾಗಿ ನೋಡುವುದು ಸಾಧ್ಯವಾಗುತ್ತದೆ.
ಈ ಎರಡು ಶತಮಾನಗಳ ದಾಸ್ಯ ಮತ್ತು ಸಂಪತ್ತಿನ ಲೂಟಿಯ ಹೊರತಾಗಿಯೂ ಭಾರತ ಒಂದು ಸ್ವಾವಲಂಬಿ ರಾಷ್ಟ್ರವಾಗಿ ನಿಂತಿರುವುದಕ್ಕೆ ಕಾರಣ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ನಿರ್ದೇಶನಗಳು, ಜವಹರಲಾಲ್ ನೆಹರೂ ಅವರ ಆಧುನಿಕ ಆರ್ಥಿಕ ಚಿಂತನೆ ಮತ್ತು ಸ್ವಾತಂತ್ರ್ಯದ ಪೂರ್ವಸೂರಿಗಳ ಸ್ವಾಭಿಮಾನ ಮತ್ತು ಪರಿಶ್ರಮ ಹಾಗೂ ಸ್ವತಂತ್ರ ಭಾರತದ ಆರಂಭದ ಹೆಜ್ಜೆಗಳಲ್ಲಿ ಗುರುತಿಸಬಹುದಾದ ಪ್ರಾಮಾಣಿಕತೆ ಮತ್ತು ಜನಪರ ಚಿಂತನೆಗಳು.






