ಮಂಡ್ಯ ಲೋಕಸಭೆ ಕ್ಷೇತ್ರದ (Mandya MP constituency) ಶ್ರೀರಂಗಪಟ್ಟಣ ತಾಲೂಕಿನ ಕೋಡಿ ಶೆಟ್ಟಿಪುರ ಮತ್ತು ಸಿದ್ದಾಪುರ ಗ್ರಾಮಗಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ತಂಗುದಾಣ ಮಂಜೂರಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ (Mysuru Bengaluru express Highway) ಬಸ್ ತಂಗುದಾಣ ನಿರ್ಮಾಣಕ್ಕೆ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೋಡಿ ಶೆಟ್ಟಿಪುರ ಮತ್ತು ಸಿದ್ದಾಪುರ ಢಕಲೆ ಗ್ರಾಮಗಳ ಬಳಿ ಬಸ್ ತಂಗುದಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹೀಗಾಗಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದರು,ಕೇಂದ್ರ ಸಚಿವರು ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎರಡು ಗ್ರಾಮಸ್ಥರ ಜನರಿಗೆ ಅನುಕೂಲ ಆಗುವಂತೆ ಹೆದ್ದಾರಿ ತಂಗುದಾಣಗಳನ್ನು ಮಂಜೂರು ಮಾಡಿದ್ದಾರೆ.
ಪ್ರಯಾಣಿಕರ ಸುರಕ್ಷತೆ, ಅನುಕೂಲಕ್ಕಾಗಿ ತಂಗುದಾಣಗಳನ್ನು ಮಂಜೂರು ಮಾಡಲಾಗಿದೆ. ಸ್ವಕ್ಷೇತ್ರದ ಅಭಿವೃದ್ಧಿಗೆ ತಾವು ಹೊಂದಿರುವ ಕಳಕಳಿಗೆ ಅಭಿನಂದನೆಗಳು ಎಂದು ನಿತಿನ್ ಗಡ್ಕರಿ ಅವರು ಕುಮಾರಸ್ವಾಮಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೋಡಿ ಶೆಟ್ಟಿಪುರ ಮತ್ತು ಸಿದ್ದಾಪುರ ಢಕಲೆ ಗ್ರಾಮಗಳ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಬಸ್ ತಂಗುದಾಣಗಳ ಮಂಜೂರಾತಿ ಕೋರಿ ಕಳೆದ ಸೆಪ್ಟೆಂಬರ್ 19, 2024 ರಂದು ಗಡ್ಕರಿ ಅವರಿಗೆ ಕುಮಾರಸ್ವಾಮಿ ಪತ್ರ ಬರೆದಿದ್ದರು.
ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದಿರುವ ಗಡ್ಕರಿ ಅವರು; ಹೆದ್ದಾರಿ ವ್ಯಾಪ್ತಿಯಲ್ಲಿ ಜನತೆಗೆ ಉತ್ತಮವಾದ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.ಇನ್ನೊಂದೆಡೆ ಹೆದ್ದಾರಿ ಸುರಕ್ಷತೆ ಹಾಗೂ ಅಪಘಾತಗಳನ್ನು ಶೂನ್ಯ ಮಟ್ಟಕ್ಕೆ ಇಳಿಸುವ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ, ಹೆದ್ದಾರಿ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಿದೆ. ಆ ಉದ್ದೇಶದಿಂದಲೇ ಹೆದ್ದಾರಿ ಆಸುಪಾಸಿನಲ್ಲಿ ಅಗತ್ಯ ಇರುವ ಕಡೆ ಬಸ್ ತಂಗುದಾಣ ನಿರ್ಮಾಣ ಮಾಡಲಾಗುವುದು ಎಂದು ಗಡ್ಕರಿ ಅವರು ಹೇಳಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿ ಎರಡು ಗ್ರಾಮಗಳಿಗೆ ಬಸ್ ತಂಗುದಾಣಗಳನ್ನು ಮಂಜೂರು ಮಾಡಿರುವ ಸಾರಿಗೆ ಸಚಿವರಿಗೆ ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.