ಶಿವಮೊಗ್ಗ: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಸಾಕಷ್ಟು ಗೊಂದಲಗಳನ್ನ ಸೃಷ್ಟಿ ಮಾಡುವ ಕೆಲಸ ಆಗುತ್ತಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. ಪ್ರತಿ ದಿನ ಮಾಧ್ಯಮಗಳಿಗೆ ವಿಷಯ ಕೊಡುವಂತಹ ಕೆಲಸವನ್ನು ಚೆನ್ನಾಗಿಯೇ ಮಾಡುತ್ತಿದ್ದಾರೆ. ಇದಕ್ಕೆಲ್ಲದಕ್ಕೂ ಇನ್ನೂ ಒಂದು ವಾರದಲ್ಲಿ ತೆರೆ ಬೀಳಲಿದೆ ಎಂದಿದ್ದಾರೆ.

ಈಗ ಪಕ್ಷದಲ್ಲಿ ಸಂಘಟನಾ ಪರ್ವ ನಡೆಯುತ್ತದೆ. ವರಿಷ್ಠರ ಗಮನಕ್ಕೆ ಈ ವಿಚಾರ ಬಂದಿದೆ. ಇದೇ ವೇಳೆ ದೆಹಲಿಯಲ್ಲಿ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲೂ ಪಕ್ಷದ ಆಂತರಿಕ ಚುನಾವಣೆ ಆರಂಭಗೊಂಡಿದೆ. ಶೀಘ್ರದಲ್ಲೇ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಆಗುತ್ತದೆ. ಬಿ.ವೈ.ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೂರಕ್ಕೆ ನೂರರಷ್ಟು ಮುಂದುವರಿಯುವ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ ಸಹೋದರ ರಾಘವೇಂದ್ರ.

ಅವರಿಗೆ ಇರುವ ಅನುಭವ, ತೆಗೆದುಕೊಂಡ ನಿರ್ಧಾರಗಳು ಯಾವುದೇ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡದೆ ಮುಖ್ಯಮಂತ್ರಿಗಳ ವಿರುದ್ಧವೇ ಹೋರಾಟ ಮಾಡಿದ್ದಾರೆ. ಸಂಘಟನೆ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಆದರೆ ಕೆಲವರು ನಾವೇ ಎಲ್ಲಾ ಅಂದುಕೊಂಡಿದ್ದಾರೆ. ಆದರೆ ನಮ್ಮಲ್ಲಿ ಸಂಘಟನೆಯನ್ನು ಕಟ್ಟಿದ ಹಿರಿಯರು, ಶಾಸಕರು, ನಾಯಕರು ಇದ್ದಾರೆ. ಪಕ್ಷದ ಇತ್ತೀಚಿನ ಬೆಳವಣಿಗೆಗೆ ತೆರೆ ಬೀಳಲಿದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಮಧ್ಯ ನಡೆಯುತ್ತಿರುವ ಗುದ್ದಾಟದ ವಿಚಾರವಾಗಿ ಮಾತನಾಡಿ, ಶ್ರೀರಾಮುಲು ಅವರ ಮಾತನ್ನು ಕೇಳಿ ನನಗೂ ಕೂಡ ನೋವಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಏನೂ ಚರ್ಚೆಯಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೂ ಶ್ರೀರಾಮುಲು ಅವರು ನಮ್ಮ ನಾಯಕರು ನಮ್ಮ ಪಕ್ಷದಲ್ಲಿ ಹಿರಿಯರು. ವಿರೋಧ ಪಕ್ಷ ಇಂತಹ ಸಮಯವನ್ನು ಕಾಯುವುದು ಸಹಜ. ಪಕ್ಷದ ಬೆಳವಣಿಗೆ ಇಂದ ನೂರಕ್ಕೆ ನೂರರಷ್ಟು ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ. ಅವರು ಕೂಡ ನೋವಿನಲ್ಲಿದ್ದಾರೆ ಎಂದಿದ್ದಾರೆ. ಕಳೆದ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ಅವರು ನೊಂದಿದ್ದಾರೆ. ಇದರಿಂದ ಪಕ್ಷಕ್ಕೂ ಸಾಕಷ್ಟು ಹಾನಿಯಾಗಿದೆ. ಹಾಗಾಗಿ ಈ ಗೊಂದಲಗಳಿಗೆ ಆದಷ್ಟು ಬೇಗ ತೆರೆ ಎಳೆಯಬೇಕಾಗಿದೆ ಎಂದಿದ್ದಾರೆ.