ಇತ್ತೀಚೆಗಷ್ಟೇ ಟ್ವಿಟರ್ ಇಂಡಿಯಾದ ಹಂಗಾಮಿ ಕುಂದುಕೊರತೆ ಅಧಿಕಾರಿಯಾಗಿ ನೇಮಕಗೊಂಡಿದ್ದ ಧರ್ಮೇಂದ್ರ ಚತುರ್ ಇದೀಗ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕಳೆದ ಕೆಲವು ಸಮಯಗಳಿಂದ ಭಾರತ ಒಕ್ಕೂಟ ಸರ್ಕಾರ ಹಾಗೂ ಟ್ವಿಟರ್ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಧರ್ಮೇಂದ್ರ ಅವರ ನಿರ್ಗಮಿಸುವಿಕೆಯು ಸಾಕಷ್ಟು ಕುತೂಹಲಕಾರಿಯೆನಿಸಿದೆ.
ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಸಾಧಿಸಲು ಭಾರತ ಒಕ್ಕೂಟ ಸರ್ಕಾರ ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದಿತ್ತು. ಇದರ ಪ್ರಕಾರ, ಭಾರತೀಯ ಬಳಕೆದಾರರಿಂದ ದೂರುಗಳನ್ನು ಪರಿಹರಿಸಲು ಮೈಕ್ರೊ-ಬ್ಲಾಗಿಂಗ್ ತಾಣಗಳು ಒಬ್ಬ ಕುಂದುಕೊರತೆ ಪರಿಶೀಲನಾ ಅಧಿಕಾರಿಯನ್ನು(resident grievance officer) ಹೊಂದಿರಬೇಕು. ಈ ನಿಯಮಕ್ಕೆ ಅನುಗುಣವಾಗಿ, ಧರ್ಮೇಂದ್ರ ಚತುರ್ ಅವರನ್ನು ಟ್ವಿಟರ್ ತನ್ನ ಕುಂದುಕೊರತೆ ಪರಿಶೀಲನಾ ಅಧಿಕಾರಿಯನ್ನಾಗಿ ನೇಮಿಸಿಕೊಂಡಿತ್ತು.
ಟ್ವಿಟರ್ ಎಂಡಿಯನ್ನು ವಿಚಾರಣೆಗೆ ಒಳಪಡಿಸಲು ಬೆಂಗಳೂರಿಗೆ ದೌಡಾಯಿಸಿದ ದೆಹಲಿ ಪೊಲೀಸ್
ಸದ್ಯ, ಟ್ವಿಟರ್ ಭಾರತೀಯ ಕುಂದುಕೊರತೆ ಪರಿಶೀಲನಾ ಅಧಿಕಾರಿ ತನ್ನ ಸ್ಥಾನದಿಂದ ಕೆಳಗಿಳಿದಿರುವ ಕಾರಣಕ್ಕೆ ಟ್ವಿಟರ್ ಇಂಡಿಯಾದಲ್ಲಿ ಆ ಸ್ಥಾನ ಖಾಲಿ ಉಳಿದಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್ ಇಂಡಿಯಾ ವರದಿ ಮಾಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು-2021ರ ಪ್ರಕಾರ ಕಂಪನಿಯ ವೆಬ್ಸೈಟ್ ಇನ್ನು ಮುಂದೆ ಅವರ ಹೆಸರನ್ನು ತೋರಿಸುವಂತಿಲ್ಲ.
ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್, ಹೊಸ ಐಟಿ ನಿಯಮಗಳನ್ನು ಉದ್ದೇಶಪೂರ್ವಕವಾಗಿ ಧಿಕ್ಕರಿಸುತ್ತಿದೆ ಎಂದು ಒಕ್ಕೂಟ ಸರ್ಕಾರ ಟ್ವಿಟರ್ ವಿರುದ್ಧ ಆರೋಪ ಹೊರಿಸುತ್ತಿದೆ.
ಮೇ 25ರಿಂದ ಜಾರಿಗೆ ಬಂದ ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಗಳು ಬಳಕೆದಾರರಿಂದ ಅಥವಾ ಸಂತ್ರಸ್ತರಿಂದ ದೂರುಗಳನ್ನು ಪರಿಹರಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕಿದೆ. 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಸಾಮಾಜಿಕ ಜಾಲತಾಣ ಮಾಧ್ಯಮ ಕಂಪನಿಗಳು ಬಳಕೆದಾರರ ಅಥವಾ ಸಂತ್ರಸ್ತರ ದೂರುಗಳನ್ನು ಪರಿಹರಿಸಲು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು ಮತ್ತು ಅಂತಹ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು ಎಂದು ನಿಯಮದಲ್ಲಿದೆ.
ಹೊಸ ಐಟಿ ನಿಯಮ ಉಲ್ಲಂಘನೆ: ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್!
ಹೊಸ ಐಟಿ ನಿಯಮ ಪ್ರಕಾರ, ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸುವುದು ಕಡ್ಡಾಯವಾಗಿದ್ದು, ಇವರೆಲ್ಲರೂ ಭಾರತದಲ್ಲಿ ವಾಸವಿರುವವರೇ ಆಗಿರಬೇಕೆಂದು ಷರತ್ತು ವಿಧಿಸಿದೆ.
ತನಗೆ ನಿಯಂತ್ರಿಸಲಾಗದನ್ನು ಧ್ವಂಸಗೊಳಿಸಲು ನೋಡುತ್ತದೆ: ಟ್ವಿಟರ್ ವಿರುದ್ಧದ ಕೇಂದ್ರದ ನಡೆಗೆ ದೀದಿ ಟೀಕೆ
ಜೂನ್ 5ರಂದು ಸರ್ಕಾರ ನೀಡಿರುವ ಅಂತಿಮ ನೋಟಿಸ್ಗೆ ಪ್ರತಿಕ್ರಿಯೆಯಾಗಿ ಟ್ವಿಟರ್, ಹೊಸ ಐಟಿ ನಿಯಮಗಳನ್ನು ಪಾಲಿಸಲು ನಾವು ತಯಾರಾಗಿದ್ದೇವೆ. ಮುಖ್ಯ ಅನುಸರಣೆ ಅಧಿಕಾರಿಯ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದೆ ಎಂದು ಹೇಳಿತ್ತು. ಈ ನಡುವೆ, ಧರ್ಮೇಂದ್ರ ಚತುರ್ರನ್ನು ಭಾರತದ ಹಂಗಾಮಿ ನಿವಾಸಿ (ರೆಸಿಡೆಂಟ್) ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿತ್ತು. ಈಗ ಅವರ ಪದತ್ಯಾಗ ಮಾಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹೊಸ ಅಧಿಕಾರಿಯನ್ನು ಟ್ವಿಟರ್ ನೇಮಿಸಬೇಕು. ಟ್ವಿಟರ್ ಇದಕ್ಕೆ ವಿಫಲವಾದರೆ, ಕಾನೂನು ಸಮಸ್ಯೆಗಳನ್ನು ಸಂಸ್ಥೆ ಎದುರಿಸಬೇಕಾಗುತ್ತದೆ.
ಟ್ವಿಟರ್ ಈಗ ಭಾರತದ ಕುಂದುಕೊರತೆ ಅಧಿಕಾರಿಯ ವಿವರ ತೋರಿಸಬೇಕಾದ ಜಾಗದಲ್ಲಿ ಅಮೆರಿಕಾದ ತನ್ನ ವಿಳಾಸ ಮತ್ತು ಇಮೇಲ್ ಐಡಿಯೊಂದಿಗೆ ಕಂಪನಿ ಹೆಸರನ್ನು ತೋರಿಸುತ್ತಿದೆ.
ಧರ್ಮೇಂದ್ರ ಅವರ ಪದತ್ಯಾಗವು, ಕಳೆದ ಕೆಲವು ವಾರಗಳಿಂದ ಅಂತರಾಷ್ಟ್ರೀಯ ಗಮನ ಸೆಳೆದಿರುವ ಟ್ವಿಟರ್ vs ಭಾರತ ಒಕ್ಕೂಟ ಸರ್ಕಾರದ ನಡುವಿನ ಸಂಘರ್ಷದ ಮುಂದುವರಿದ ಭಾಗವಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿದೆ. ಆದರೆ, ಇದುವರೆಗೂ ಈ ಬೆಳವಣಿಗೆಗಳ ಕುರಿತು ಅಧಿಕೃತವಾಗಿ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.