ಶಾಶ್ವತ ಆಸ್ಪತ್ರೆಯಾಗಿ ಬೆಳಗಾವಿ ಸುವರ್ಣ ಸೌಧ: ಜಾಲತಾಣದಲ್ಲಿ ಜನಾಗ್ರಹ

ಗುರುವಾರ ಸಂಜೆಯ ಹೊತ್ತಿಗೆ ಕರ್ನಾಟಕದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಐವತ್ತು ಸಾವಿರದ ಗಡಿ ದಾಟಿದ್ದರೆ, ನಿತ್ಯ ಸಾವಿನ ಸಂಖ್ಯೆ 350ಕ್ಕೂ ಹೆಚ್ಚಾಗಿದೆ. ಈ ನಡುವೆ ಲಾಕ್ ಡೌನ್ ಪರಿಣಾಮವಾಗಿ ನಗರವಾಸಿಗಳು ಹಳ್ಳಿಗಳತ್ತ ಮುಖಮಾಡಿರುವುದರಿಂದ ಗ್ರಾಮೀಣ ಭಾಗಗಳಲ್ಲಿ;  ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಕರಣಗಳು ಆಘಾತಕಾರಿ ಪ್ರಮಾಣದಲ್ಲಿ ಏರತೊಡಗಿವೆ.

ಆದರೆ, ಉತ್ತರಕರ್ನಾಟಕದ ದೊಡ್ಡ ಮಿತಿ ಎಂದರೆ ಅಲ್ಲಿನ ದುರ್ಬಲ ವೈದ್ಯಕೀಯ ವ್ಯವಸ್ಥೆ. ಹುಬ್ಬಳ್ಳಿ ಕಿಮ್ಸ್ ನಂತಹ ದೊಡ್ಡ ಆಸ್ಪತ್ರೆಯನ್ನು ಹೊರತುಪಡಿಸಿದರೆ, ಬಹುತೇಕ ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಗಳು ವಿರಳ. ಅದರಲ್ಲೂ ಬಡವರು ಮತ್ತು ಜನಸಾಮಾನ್ಯರ ಕೈಗೆಟಕುವಂತಹ ಸಾರ್ವಜನಿಕ ವೈದ್ಯಕೀಯ ಸೌಲಭ್ಯಗಳಂತೂ ಇಲ್ಲವೇ ಇಲ್ಲ!

ಪರಿಸ್ಥಿತಿ ಹೀಗಿರುವಾಗ ಭಾರೀ ವೇಗದಲ್ಲಿ ಹಬ್ಬುತ್ತಿರುವ ಮಾರಣಾಂತಿಕ ಕರೋನಾದ ಎರಡನೇ ಅಲೆ ಅಲ್ಲಿನ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ. ಬೆಂಗಳೂರಿನ ರಾಜಧಾನಿಯಲ್ಲಿ ಕೂತ ಅಧಿಕಾರಸ್ಥರಿಗೆ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳ ಪರಿಸ್ಥಿತಿಯ ಮೇಲೆಯೇ ಗಮನವಿಲ್ಲ; ವ್ಯವಸ್ಥೆಯ ಮೇಲೆ ಹಿಡಿತವಿಲ್ಲ ಎಂಬುದಕ್ಕೆ ಚಾಮರಾಜನಗರದಲ್ಲಿ ಮೊನ್ನೆ ನಡೆದ 28 ಮಂದಿಯ ಸಾಮೂಹಿಕ ಮಾರಣಹೋಮವೇ ಸಾಕ್ಷಿ. ಮಾಧ್ಯಮಗಳು ಕೂಡ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳ ಮೇಲೆಯೇ ಹೆಚ್ಚು ಗಮನಹರಿಸುವುದರಿಂದ ಚಾಮರಾಜನಗರದ ದುರ್ಘಟನೆ ನಡೆದ ದಿನ ಮತ್ತು ಅದರ ಮಾರನೇ ದಿನ ಉತ್ತರ ಕರ್ನಾಟಕದ ಬೆಳಗಾವಿ, ಕಲ್ಬುರ್ಗಿ ಮತ್ತಿತರ ಕಡೆ ನಡೆದ ಸಾಲು ಸಾಲು ಸಾವುಗಳು ಗಮನ ಸೆಳೆಯದೇ ಹೋದವು.

ಕರೋನಾದಂತಹ ಭೀಕರ ಕಾಯಿಲೆಯ ವಿಷಯದಲ್ಲಂತೂ, ಬೆಳಗಾವಿ, ಬೀದರ್, ವಿಜಯಪುರದಂತಹ ಗಡಿ ನಾಡ ಹಳ್ಳಿ ಮೂಲೆಯ ಮಂದಿ ಜೀವ ಉಳಿಸಿಕೊಳ್ಳಲು ಹುಬ್ಬಳ್ಳಿ, ಬೆಂಗಳೂರು, ಮಂಗಳೂರಿನಂತಹ ವೈದ್ಯಕೀಯ ಅನುಕೂಲಗಳಿರುವ ಊರುಗಳಿಗೆ ತಲುಪುವುದರಲ್ಲೇ ಜನ ಹಾದಿಬೀದಿ ಹೆಣವಾಗುವ ದಾರುಣ ಪರಿಸ್ಥಿತಿ ಇದೆ. ಒಂದು ಕಡೆ ದೂರದ ಪ್ರಯಾಣದ ಸವಾಲು, ಮತ್ತೊಂದು ಕಡೆ ಲಾಕ್ ಡೌನ್ ನಡುವೆ ದುಡಿಮೆ ಇರದೆ, ಭಾರೀ ಹಣಕಾಸು ವೆಚ್ಚದ ಸವಾಲು. ಹಾಗಾಗಿ ಆಸ್ಪತ್ರೆಯ ಮೆಟ್ಟಿಲು ಹತ್ತುವ ಮುನ್ನವೇ ಹಲವರ ಪ್ರಾಣಪಕ್ಷಿ ಹಾರಿಹೋಗುವುದು ಸಾಮಾನ್ಯ.

ಆಸ್ಪತ್ರೆ ಹಾಸಿಗೆ ಸಿಗದೆ, ಆಮ್ಲಜನಕ ಸಿಗದೆ ಬಹುತೇಕ ಕೋವಿಡ್ ಸಾವುಗಳು ಸಂಭವಿಸುತ್ತಿರುವ ತೀರಾ ಹೀನಾಯ ಸ್ಥಿತಿಯಲ್ಲಿ ಉತ್ತರ ಕರ್ನಾಟಕದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸರ್ಕಾರ ತತಕ್ಷಣಕ್ಕೆ ಮಾಡಬಹುದಾದ ಘನಕಾರ್ಯವೆಂದರೆ; ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಶಾಶ್ವತವಾಗಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವುದು ಎಂಬ ಅಭಿಪ್ರಾಯ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೊಳಗಾಗಿದೆ.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಅವರು ಬೆಳಗ್ಗೆ ತಮ್ಮ ಟ್ವಟಿರ್ ನಲ್ಲಿ ಮುಖ್ಯಮಂತ್ರಿಯವರ ಖಾತೆಗೆ ಟ್ಯಾಗ್ ಮಾಡಿ, ಈ ವಿಷಯ ಪ್ರಸ್ತಾಪಿಸಿ, “ವರ್ಷದಲ್ಲಿ ಒಂದೋ, ಎರಡೋ ಬಾರಿ ಮಾತ್ರ ವಿಧಾನ ಮಂಡಲ ಅಧಿವೇಶನ ನಡೆಸಲು ಬಳಸಿ, ಉಳಿದಂತೆ ವರ್ಷವಿಡೀ ಖಾಲಿ ಇರುವ ಬೆಳಗಾವಿಯ ಸುವರ್ಣ ವಿಧಾನಸೌಧವನ್ನು, ಉತ್ತರ ಕರ್ನಾಟಕದ ಜನರ ಆರೋಗ್ಯ ಸೇವೆಗಾಗಿ ಶಾಶ್ವತವಾಗಿ ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬಹುದು ಎಂಬುದು ನನ್ನ ಸಲಹೆ” ಎಂದು ಹೇಳಿದ್ದರು.

“ಸಾರ್ವಜನಿಕ ತೆರಿಗೆ ಹಣದ ನೂರಾರು ಕೋಟಿ ವೆಚ್ಚದಲ್ಲಿ, ಸೆಂಟ್ರಲ್ ವಿಸ್ತಾದ ರೀತಿ ಪ್ರತಿಷ್ಠೆಗಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡ ಅದು. 145,730 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಆ ಕಟ್ಟಡ ವರ್ಷದ ಬಹುತೇಕ ವೇಳೆ ಬೀಗ ಹಾಕಿದ ಸ್ಥಿತಿಯಲ್ಲಿರುತ್ತದೆ ಮತ್ತು ಅದರ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಕರ್ಚು ಮಾಡಲಾಗುತ್ತಿದೆ. ವಿಸ್ತಾರ ನೆಲಮಾಳಿಗೆ ಮತ್ತು ನಾಲ್ಕು ಅಂತಸ್ತಿನ ಆ ಬೃಹತ್ ಭವನ ಸುಸಜ್ಜಿತ ಆಸ್ಪತ್ರೆಗೆ ಹೇಳಿಮಾಡಿಸಿದಂತಿದೆ. ನೀವು ಬೇಕಾದರೆ ಪ್ರಧಾನಿ ಮೋದಿಯವರಿಂದಲೇ ಅದರ ಉದ್ಘಾಟನೆ ಮಾಡಿಸಿ, ಈ ಕೋವಿಡ್ ಬಿಕ್ಕಟ್ಟಿನ ಹೊತ್ತಲ್ಲಿ ನಿಮ್ಮ ಮತ್ತು ಅವರ ಸರ್ಕಾರದ ಮುಕ್ಕಾದ ಪ್ರತಿಷ್ಠೆಯನ್ನು ಕೂಡ ಕೆಲಮಟ್ಟಿಗೆ ಗಳಿಸಬಹುದು. ಅದಕ್ಕೇನೂ ಅಭ್ಯಂತರವಿಲ್ಲ. ಈ ಕಾರ್ಯ ಮಾಡಿದರೆ ಜನ ಕೂಡ ಬಹುಶಃ ನಿಮ್ಮೆಲ್ಲಾ ಹಗರಣಗಳನ್ನೂ ಮನ್ನಿಸಬಹುದು” ಎಂದು ಸುಗತ ಅವರು ಹೇಳಿದ್ದರು.

ಜೊತೆಗೆ ಇಂತಹದ್ದೊಂದು ಜನಪರ ತೀರ್ಮಾನಕ್ಕೆ ಆತ್ಮಸಾಕ್ಷಿ ಹೊಂದಿರುವ ಪ್ರತಿಪಕ್ಷಗಳ ನಾಯಕರೂ ದನಿಗೂಡಿಸಿ ಸಾಧ್ಯವಾದಷ್ಟು ಬೇಗ ಈ ಬಗ್ಗೆ ವಿಧಾನಮಂಡಲದಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದರು.

ಅವರ ಈ ಸಲಹೆಯ ಬೆನ್ನಲ್ಲೇ ಆ ಸರಣಿ ಟ್ವೀಟ್ ವೈರಲ್ ಆಗಿತ್ತು. ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್, ಎಂ ಬಿ ಪಾಟೀಲ್, ಡಾ ಅಂಜಲಿ ನಿಂಬಾಳ್ಕರ್, ಮೋಹನ್ ಕೊಂಡಜ್ಜಿ ಸೇರಿದಂತೆ ನೂರಾರು ಮಂದಿ ರೀಟ್ವೀಟ್ ಮಾಡಿ, ಬಹಳ ಅಮೂಲ್ಯವಾದ ಮತ್ತು ಸಕಾಲಿಕ ಸಲಹೆ. ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಉತ್ತರ ಕರ್ನಾಟಕದ ಮಂದಿಯ ಜೀವರಕ್ಷಣೆಯ ನಿಟ್ಟಿನಲ್ಲಿ ಇಂತಹದ್ದೊಂದು ಕ್ರಮ ಕೈಗೊಳ್ಳಬೇಕು. ಜನರ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ವರ್ಷದ ಒಂದೆರಡು ವಾರದ ಅಧಿವೇಶನಕ್ಕಾಗಿ ಬೃಹತ್ ಸೌಧವನ್ನು ವ್ಯರ್ಥ ಮಾಡುವ ಬದಲು, ಇಡೀ ಉತ್ತರ ಕರ್ನಾಟಕದ ಭಾಗದ ಜೀವ ರಕ್ಷಣೆಯ ನಿಟ್ಟಿನಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವುದಕ್ಕಿಂತ ದೊಡ್ಡ ಕಾರ್ಯ ಈ ಬಿಕ್ಕಟ್ಟಿನ ಹೊತ್ತಿನಲ್ಲಿ ಮತ್ತೊಂದು ಇರಲಾರದು ಎಂದು ಪ್ರತಿಕ್ರಿಯಿಸಿದ್ದಾರೆ.

“ರಾಜ್ಯದ ಇತರೆ ಭಾಗಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಕರೋನಾದ ಪರಿಣಾಮಗಳು ಭೀಕರ ಸ್ವರೂಪ ಪಡೆಯಲಿವೆ. ಹಾಗಾಗಿ ಈಗಲೇ ಅಂತಹ ಪರಿಸ್ಥಿತಿ ಎದುರಿಸಲು ತಯಾರಿ ಮಾಡಿಕೊಳ್ಳುವುದು ಒಳಿತು. ಮುಖ್ಯಮಂತ್ರಿಗಳು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಬೇಕು. ಬೆಳಗಾವಿಯ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್  ಟ್ವೀಟ್ ಮಾಡಿದ್ದಾರೆ.

“ಬಿಐಇಸಿಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವುದು ಸಾಧ್ಯವಿದ್ದರೆ, ಇದು ಯಾಕೆ ಸಾಧ್ಯವಿಲ್ಲ” ಎಂದು ಪ್ರಶ್ನಿಸಿರುವ ಮತ್ತೊಬ್ಬ ಹಿರಿಯ ನಾಯಕ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿ ಡಾ ಎಂ ಬಿ ಪಾಟೀಲ್, “ಸೂಕ್ತ ಸೌಲಭ್ಯ ಮತ್ತು ಮೂಲಸೌಕರ್ಯಗಳೊಂದಿಗೆ ಉತ್ತಮ ಆಸ್ಪತ್ರೆಯಾಗಿ ಅದನ್ನು ಮಾಡಬಹುದು. ಈ ಸಲಹೆಯನ್ನು ಜಾರಿಗೊಳಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ” ಎಂದು ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ನಾಯಕಿ, ಹಾಗೂ ಬೆಳಗಾವಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕೂಡ ರೀ ಟ್ವೀಟ್ ಮಾಡಿದ್ದು, “ಈ ಸಲಹೆಯನ್ನು ಆದಷ್ಟು ಬೇಗ ಪರಿಗಣಿಸಿ, ಉತ್ತರ ಕರ್ನಾಟಕದ ಜನರಿಗೆ ನೆರವಾಗಬೇಕು. ಬೆಳಗಾವಿಯಲ್ಲಿ ನಿನ್ನೆ ಒಂದೇ ದಿನ 920 ಕೋವಿಡ್ ಪ್ರಕರಣಗಳು ವರದಿಯಾಗಿರುವುದನ್ನು ಗಮನಿಸಿದರೆ, ಆ ಭಾಗಕ್ಕೆ ಇಂತಹ ಆಸ್ಪತ್ರೆಯ ಅಗತ್ಯ ಎಷ್ಟಿದೆ ಎಂಬುದು ಅರಿವಾಗುತ್ತದೆ” ಎಂದು ಹೇಳಿದ್ದಾರೆ.

ಒಟ್ಟಾರೆ, ಕೋವಿಡ್ ಬಿಕ್ಕಟ್ಟಿನ ನಡುವೆ, ಒಂದು ಕಡೆ ರೋಗಿಗಳು ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗದೆ, ಸಕಾಲದಲ್ಲಿ ಆಮ್ಲಜನಕ ಸಿಗದೆ, ಔಷಧಿ, ಚಿಕಿತ್ಸೆ ಸಿಗದೆ ಜೀವಬಿಡುತ್ತಿರುವ ಸಂದರ್ಭದಲ್ಲಿ, ಜನರ ತೆರಿಗೆ ಹಣದ ಸಾವಿರಾರು ಕೋಟಿ ವೆಚ್ಚದ ಕಟ್ಟಡವೊಂದು ಖಾಲಿ ಬಿದ್ದಿರುವುದನ್ನು ಆಡಳಿತದ ಚುಕ್ಕಾಣಿ ಹಿಡಿದವರ ಗಮನಕ್ಕೆ ತಂದು, ಆ ಬೃಹತ್ ಸೌಧವನ್ನು ಜನರ ಜೀವ ಉಳಿಸಲು ಬಳಸಿ ಎಂಬ ಕೂಗು ಎದ್ದಿದೆ. ಅಂತಹದ್ದೊಂದು ಜನಪರ ರಚನಾತ್ಮಕ ನಿರ್ಧಾರಕ್ಕೆ ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು ಮತ್ತು ಉತ್ತರ ಕರ್ನಾಟಕದ ಜನರ ಜೀವ ರಕ್ಷಣೆಯ ನಿಟ್ಟಿನಲ್ಲಿ ದೇಶಕ್ಕೇ ಮಾದರಿಯಾದ ಒಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಬಲವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಕರ್ನಾಟಕದ ಜನರ ಹಕ್ಕೊತ್ತಾಯವಾಗಿ ಈ ಸಲಹೆ ಇದೀಗ ಮಾರ್ದನಿಸತೊಡಗಿದೆ.

ಉತ್ತರ ಕರ್ನಾಟಕದ ಜನತೆಯ ವಿಶ್ವಾಸ ಮತ್ತು ಬೆಂಬಲದ ಮೇಲೆ ನಿಂತಿರುವ ಬಿಜೆಪಿ ಪಕ್ಷ ಮತ್ತು ಸಿ ಎಂ ಯಡಿಯೂರಪ್ಪ ಅವರ ಕಡೆಯಿಂದ ಈ ದಿಸೆಯಲ್ಲಿ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...