ಬೆಂಗಳೂರು : ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಕುರಿತು ದಾಖಲೆಗಳನ್ನು ಕೇಳುವ ಮೂಲಕ, ತಾವು ರಾಜ್ಯದ ಗೃಹ ಸಚಿವರಾಗಿದ್ದೇವೆ ಎಂಬುದನ್ನು ಜನರಿಗೆ ತೋರಿಸುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್‌ಗೆ ಶತಮಾನದ ಇತಿಹಾಸವಿದೆ. ಇದು ಸ್ವದೇಶಿ ದೇಶಭಕ್ತರಿಂದ ಸ್ಥಾಪಿತವಾದ ಸಂಘಟನೆಯಾಗಿದ್ದು, ಇದನ್ನು ನೋಂದಣಿ ಮಾಡಿಸಿ ಮಾನ್ಯತೆ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದೇಶದಲ್ಲಿ ನೋಂದಾಯಿತ ಹಾಗೂ ನೋಂದಣಿಯಾಗದ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಆರ್‌ಎಸ್‌ಎಸ್ ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಸಮಾಜ ಸೇವೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡುತ್ತ ಬಂದಿದೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನೊಂದೆಡೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ವಂಚಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಪೊಲೀಸ್ ಠಾಣೆಗಳು ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಹಾಗೂ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದವರು ರಾಜಾರೋಷವಾಗಿ ಓಡಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ದಂಪತಿ ವಿರುದ್ಧ ಬಿಎಂಟಿಎಫ್‌ಗೆ ದೂರು
ಇಂತಹ ಗಂಭೀರ ವಿಷಯಗಳತ್ತ ಗಮನ ಹರಿಸಿ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸುವ ಬದಲು, ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ತಮ್ಮ ಪಕ್ಷದ ಹೈಕಮಾಂಡ್‌ನ್ನು ಮೆಚ್ಚಿಸಲು ಹಾಗೂ ಇನ್ನಷ್ಟು ಉನ್ನತ ಹುದ್ದೆಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ದೇಶಭಕ್ತರಿಂದ ಸ್ಥಾಪಿತವಾಗಿ ದೇಶಭಕ್ತರಿಂದಲೇ ನಡೆಯುತ್ತಿರುವ ಸಂಘಟನೆಯಾಗಿದೆ. ಆದ್ದರಿಂದ, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅದರ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸುವ ಯಾವುದೇ ಶಕ್ತಿಗೂ ಆರ್‌ಎಸ್‌ಎಸ್‌ನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರು ಹೈಕಮಾಂಡ್ ಓಲೈಕೆಯನ್ನು ಬದಿಗಿಟ್ಟು, ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದ್ದಾರೆ.






