
(ಮೂಲ : ಬಿ . ಶಿವರಾಮನ್ ಅವರ Behind Trumpʼs New Aggressiveness ; Jan Chowk Magazine 19-02-2025 )
ಕನ್ನಡಕ್ಕೆ : ನಾ ದಿವಾಕರ
ಭಾಗ 1
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಆಕ್ರಮಣಶೀಲತೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ‘ಆಕ್ರಮಣಕಾರಿ ರಾಷ್ಟ್ರೀಯತೆ’ ಮತ್ತು ‘ಅತಿರೇಕದ-ರಕ್ಷಣಾವಾದ’ (Ultra Protectionism) ಎಂದು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುತ್ತಿವೆ. ಟ್ರಂಪ್ ಅವರನ್ನು ಹೊಸ ವಾಣಿಜ್ಯ ಯೋಧ, ಹೊಸ ಶೀತಲಸಮರ ಯೋಧ ಮತ್ತು ಸ್ವತಂತ್ರವಾದಿಯ ಪುನರಾಗಮನ ಎಂದೆಲ್ಲಾ ಬಣ್ಣಿಸಲಾಗುತ್ತಿದೆ. ಮಾಧ್ಯಮ ಮತ್ತು ಮಾನವ ಹಕ್ಕುಗಳ ಮೇಲೆ ಯುದ್ಧ ಘೋಷಿಸಿದ, ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಹೊಸ ನಿರಂಕುಶಾಧಿಕಾರಿಯ ಪುನರಾಗಮನ ಎಂದೂ ಹೇಳಲಾಗುತ್ತಿದೆ. ಈ ಎಲ್ಲಾ ವಿವರಣೆಗಳ ಹಿಂದಿನ ಮೂಲ ಸೂತ್ರ ಎಂದರೆ ಟ್ರಂಪ್ ಅವರ ಈ ಅಸಾಂಪ್ರದಾಯಿಕ ರಾಜಕೀಯ ನಡವಳಿಕೆಗಳು ಅವರ ವಿಲಕ್ಷಣ ನಡವಳಿಕೆಯಿಂದ ಹುಟ್ಟಿಕೊಂಡಿದೆ ಮತ್ತು ಅದನ್ನು ಅವರ ವೈಯಕ್ತಿಕ ರಾಜಕೀಯ ಭಾವಾತಿರೇಕದ ಭಾಗವಾಗಿ ನೋಡಲಾಗುತ್ತದೆ.
ಆದರೆ ಟ್ರಂಪ್ ಅವರ ಈ ಸ್ಪಷ್ಟ ಸಾಮಾಜಿಕ-ರಾಜಕೀಯ ವಿಲಕ್ಷಣಗಳು ಅಮೆರಿಕನ್ ಬಂಡವಾಳಶಾಹಿಯು ಆಧರಿಸಿರುವ ಹೊಸ ವಾಸ್ತವಗಳಿಂದ ಮತ್ತು ಅಮೇರಿಕನ್ ಆರ್ಥಿಕತೆಯಲ್ಲಿನ ಹೊಸ ಒತ್ತಡದ ಕೇಂದ್ರಗಳಿಂದ ಹುಟ್ಟಿಕೊಂಡಿವೆ. ಇದರ ಹೊರತಾಗಿಯೂ ಅಮೆರಿಕ ಇನ್ನೂ ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಈ ಒತ್ತಡದ ಅಂಶಗಳು ನಿಖರವಾಗಿ ಯಾವುವು ? ಟ್ರಂಪ್ ಅವರ ಹೊಸ ಆಕ್ರಮಣಶೀಲತೆಯ ಹೊಸ ಆರ್ಥಿಕ ಆಧಾರವೇನು ? ನಾವು ಆಳವಾಗಿ ಅಧ್ಯಯನ ಮಾಡಿ ಅಮೇರಿಕನ್ ಬಂಡವಾಳಶಾಹಿಯ ಸ್ಥಿತಿಯನ್ನು ವಿಸ್ತಾರವಾಗಿ ಪರಿಶೀಲಿಸಬೇಕಿದೆ.

ವ್ಯಾಪಾರ ಸಮರದ ಬೆದರಿಕೆ ಮತ್ತು ಸಾಮಾಜಿಕ ನೆಲೆ
ಟ್ರಂಪ್ ಅವರ ಹೊಸ ಆಕ್ರಮಣಶೀಲತೆಯ ಪ್ರಮುಖ ಲಕ್ಷಣವೆಂದರೆ ಮುಖ್ಯವಾಗಿ ಚೀನಾ ವಿರುದ್ಧ ಸಾರಿರುವ ಸಮರ. ಆದರೆ ಕೆನಡಾ, ಮೆಕ್ಸಿಕೊ, ಐರೋಪ್ಯ ಒಕ್ಕೂಟ ಮತ್ತು ಭಾರತದ ವಿರುದ್ಧವೂ ವಾಣಿಜ್ಯ ಸಮರದ ಸೂಚನೆಗಳನ್ನು ಟ್ರಂಪ್ ನೀಡಿದ್ದಾರೆ. ಹೆಚ್ಚುತ್ತಿರುವ ಸುಂಕಗಳ ತಮ್ಮ ತೀವ್ರವಾದ ಗೀಳನ್ನು ವ್ಯಕ್ತಪಡಿಸುತ್ತಲೇ ಇರುವ ಟ್ರಂಪ್, ಅಮೇರಿಕನ್ ಸರಕು ಮತ್ತು ಸೇವೆಗಳ ಆಮದಿಗೆ ಇತರ ದೇಶಗಳು ವಿಧಿಸುವ ಹೆಚ್ಚಿನ ಸುಂಕಗಳ ವಿರುದ್ಧ ಪರಸ್ಪರ ಸುಂಕಗಳ ನೀತಿಯನ್ನು ಸಹ ಘೋಷಿಸಿದ್ದಾರೆ. ಇದು ಅಮೆರಿಕದ ಪ್ರಮುಖ “ವ್ಯಾಪಾರ ಪಾಲುದಾರರ” ವಿರುದ್ಧ ಪ್ರತೀಕಾರ ಕ್ರಮದ ಪ್ರತಿ-ಸುಂಕವಾಗಿಯೇ ಕಾಣುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅಮೆರಿಕಕ್ಕೆ ಯಾವುದೇ ಸಮಾನ ನೆಲೆಯ ಭೂಮಿಕೆ ಇಲ್ಲ ಎಂದು ಬಲವಾಗಿ ನಂಬುವ ಟ್ರಂಪ್, ಪರಸ್ಪರ ಸುಂಕಗಳು ಮಾತ್ರ ಅಸಮಂಜಸವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿರುವ ದೇಶಗಳ ವಿರುದ್ಧ ಸಮನಾದ ನೆಲೆಯನ್ನು ಸ್ಥಾಪಿಸಬಹುದು ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ಅಮೆರಿಕವು ತನ್ನ ಬಹುತೇಕ ಎಲ್ಲಾ ಪ್ರಮುಖ ವ್ಯಾಪಾರ ಪಾಲುದಾರರ ವಿರುದ್ಧ ಹೊಂದಿರುವ ಹೆಚ್ಚಿನ ವ್ಯಾಪಾರ ಕೊರತೆಯಿಂದ (Trade Deficit) ಅವರು ತತ್ತರಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಟ್ರಂಪ್ ಅವರ ಆಕ್ರಮಣಕಾರಿ ನಿಲುವು ಅವರ ರಾಜಕೀಯ ಚಿಂತನಾ ವಿಧಾನದೊಂದಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ. ಚೀನಾದಿಂದ ಮಾತ್ರವಲ್ಲದೆ ಕೆನಡಾ, ಮೆಕ್ಸಿಕೊ, ಐರೋಪ್ಯ ಒಕ್ಕೂಟ ಮತ್ತು ಮೆಕ್ಸಿಕೊ ಮತ್ತು ಭಾರತದಿಂದಲೂ ಸಹ ಅಗ್ಗದ ಸರಕುಗಳ ದಾಳಿಯಿಂದಾಗಿ ಅಮೆರಿಕದ ಸಾಂಪ್ರದಾಯಿಕ ಕೈಗಾರಿಕಾ ವಲಯಗಳಲ್ಲಿ ಉಂಟಾಗಿರುವ ಕೈಗಾರಿಕಾ ಹಿನ್ನಡೆ (De industrialization) ಹಾಗೂ ಇದರಿಂದ ಬಾಧಿತರಾಗಿರುವ ಬಂಡವಾಳಿಗರ ಬಿಕ್ಕಟ್ಟು ಎರಡೂ ಟ್ರಂಪ್ ಅವರನ್ನು ಕಂಗೆಡಿಸಿದೆ. ರಾಜಕೀಯ ದೃಷ್ಟಿಯಿಂದ ನೋಡಿದಾಗ, ಚುನಾವಣಾ ರಾಜಕಾರಣದಲ್ಲಿ, ಅಮೇರಿಕನ್ ರಾಜ್ಯಗಳನ್ನು ನೀಲಿ ರಾಜ್ಯಗಳು ಮತ್ತು ಕೆಂಪು ರಾಜ್ಯಗಳು ಎಮದು ವರ್ಗೀಕರಿಸಲಾಗಿದೆ. ನೀಲಿ ರಾಜ್ಯಗಳಲ್ಲಿ ಡೆಮೋಕ್ರಾಟ್ಗಳಿಗೆ ಬೆಂಬಲ ಬಲವಾಗಿರುತ್ತದೆ ಮತ್ತು ಕೆಂಪು ರಾಜ್ಯಗಳಲ್ಲಿ ರಿಪಬ್ಲಿಕನ್ನರಿಗೆ ಬೆಂಬಲ ಬಲವಾಗಿರುತ್ತದೆ. ಮಿಚಿಗನ್, ವಿಸ್ಕಾನ್ಸಿನ್ ಮತ್ತು ಇಲಿನಾಯ್ಸ್ನಂತಹ ಕೆಲವು ನೀಲಿ ರಾಜ್ಯಗಳು ಉತ್ಪಾದನಾ ವಲಯದ ಉದ್ಯೋಗಗಳಲ್ಲಿ ಕುಸಿತವನ್ನು ಅನುಭವಿಸಿದ್ದು , ಅಲಬಾಮಾ, ಓಹಿಯೋ ಮತ್ತು ಪಶ್ಚಿಮ ವರ್ಜೀನಿಯಾದಂತಹ ಕೆಂಪು ರಾಜ್ಯಗಳಲ್ಲಿ ಕೈಗಾರಿಕೆಗಳ ಹಿನ್ನಡೆ ಮತ್ತು ಮಧ್ಯಮ ಸ್ತರದ ನಿರುದ್ಯೋಗವು ಹೆಚ್ಚು ತೀವ್ರವಾಗಿದೆ.

ಅಮೇರಿಕದ ಉತ್ಪಾದನೆಯ ಬಿಕ್ಕಟ್ಟು
ಮೋಟಾರು ವಾಹನಗಳ ಕೈಗಾರಿಕೆಗಳು (Automotive Industries) ಅಲಬಾಮಾ ರಾಜ್ಯದ ಡೆಟ್ರಾಯಿಟ್ ಪಟ್ಟಣದಲ್ಲಿ ಕೇಂದ್ರೀಕೃತವಾಗಿದೆ. ಅಮೇರಿಕ ಆಟೋ ಉದ್ಯಮದ ಬಿಕ್ಕಟ್ಟು ಅಲ್ಲಿ ಕೇಂದ್ರೀಕೃತ ಸ್ವರೂಪವನ್ನು ಪಡೆದಿದೆ. ಡೆಟ್ರಾಯಿಟ್ನಲ್ಲಿ ತೀವ್ರವಾದ ಕೈಗಾರಿಕಾ ಹಿನ್ನಡೆಯ (De industrialization) ನಂತರ, ಆಟೋ ನಗರವು ಮುಚ್ಚಿದ ಕಾರ್ಖಾನೆಗಳಿಂದ ತುಂಬಿಹೋಗಿದ್ದು ನಿರುದ್ಯೋಗ ಭತ್ಯೆಗಳಿಂದಲೇ ಬದುಕು ಸವೆಸುವ ನಿರುದ್ಯೋಗಿ ಕಾರ್ಮಿಕರಿಂದ ತುಂಬಿರುವ ಕೈಗಾರಿಕಾ ಮಸಣದಂತೆ ಕಾಣುತ್ತದೆ. ಹೊರಗುತ್ತಿಗೆ ಮತ್ತು ದೇಶೀಯ ಉದ್ಯೋಗ-ಕೊಲ್ಲುವ ಅಗ್ಗದ ಆಮದುಗಳ ವಿರುದ್ಧ ಟ್ರಂಪ್ ಅವರ ರಕ್ಷಣಾವಾದಿ ನೀತಿಗಳು ಇಲ್ಲಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಬಂಡವಾಳಿಗರಿಂದ ಮತ್ತು ಬಾಧೆಗೊಳಗಾಗಿರುವ ಕಾರ್ಮಿಕ ವರ್ಗಗಳಿಂದ ವ್ಯಾಪಕ ಬೆಂಬಲವನ್ನು ಪಡೆಯುತ್ತವೆ.

ಅಗ್ಗದ ವಿದೇಶಿ ಸರಕುಗಳು ಮತ್ತು ಸೇವೆಗಳಿಂದ ಹೆಚ್ಚಾಗಿ ದಾಳಿಗೆ ಒಳಗಾಗುತ್ತಿರುವ ಅಮೇರಿಕದ ಸರಕುಗಳು ಮತ್ತು ಸೇವೆಗಳು ಅಲ್ಲಿನ ಉತ್ಪಾದನೆಯ ಹಿಂದಿನ ಬಿಕ್ಕಟ್ಟಿನ ಮೂಲಭೂತ ಕಾರಣವಾಗಿದೆ. ಅಮೇರಿಕದ ರಫ್ತುಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಕ್ರಮೇಣ ಕಳೆದುಕೊಳ್ಳುತ್ತಿವೆ. ಇದರ ಸಾಮಾಜಿಕ ಪರಿಣಾಮವನ್ನು ಕೈಗಾರಿಕೆಗಳ ಮುಚ್ಚುವಿಕೆ ಮತ್ತು ಭಾರಿ ಉದ್ಯೋಗ ನಷ್ಟಗಳಲ್ಲಿ ಗುರುತಿಸಬಹುದು. ಚೀನಾ, ಕೆನಡಾ, ಮೆಕ್ಸಿಕೊ ಮತ್ತು ಐರೋಪ್ಯ ಒಕ್ಕೂಟದ ವಿರುದ್ಧದ ಬೆದರಿಕೆಯ ತಂತ್ರಗಳ ಟ್ರಂಪ್ ಅವರ ಹೊಸ ಆಕ್ರಮಣಕಾರಿ ವ್ಯಾಪಾರ ನೀತಿಗಳಿಗೆ ಇದೇ ಮುಖ್ಯ ಹಿನ್ನೆಲೆಯಾಗಿದೆ. ಈ ಹಿನ್ನೆಲೆಯಲ್ಲೇ ಟ್ರಂಪ್ ಚುನಾವಣೆಗಳಲ್ಲಿ ಪೀಡಿತ ವರ್ಗಗಳಿಗೆ ಮನವಿ ಮಾಡುವ ಮೂಲಕ ಎಮ್.ಕೆ. ಹ್ಯಾರಿಸ್ ವಿರುದ್ಧ ಹೆಚ್ಚಿನ ಬಹುಮತವನ್ನು ಗಳಿಸಿದರು. ಅಮೇರಿಕನ್ ಉತ್ಪಾದನೆಯ ಕೆಲವು ವಲಯಗಳಿಗೆ ರಕ್ಷಣೆ ಬೇಕು ಎಂದು ಮತದಾರರಿಗೆ ಮನವರಿಕೆ ಮಾಡುವುದರಲ್ಲಿ ಟ್ರಂಪ್ ಯಶಸ್ವಿಯಾದರು. ಆದರೆ ಸುಂಕಗಳು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡಬಲ್ಲವು. ದೀರ್ಘಾವಧಿಯಲ್ಲಿ ಅವರು ಈ ಸಮಸ್ಯೆಯನ್ನು ಪರಿಹರಿಸಬಹುದೇ ? ಕಾದು ನೋಡಬೇಕಿದೆ.
ಕುಸಿಯುತ್ತಿರುವ ಸ್ಪರ್ಧಾತ್ಮಕತೆ ಆರ್ಥಿಕ ಹಿಂಜರಿಕೆ

ಅಮೆರಿಕದ ಬಂಡವಾಳಶಾಹಿಯ ಪ್ರಸ್ತುತ ಒತ್ತಡಕ್ಕೆ ಮೂಲ ಸಮಸ್ಯೆಯನ್ನು, ಆರ್ಥಿಕತೆಯು ಅದರ ರಫ್ತು ಪ್ರಮಾಣ ಮತ್ತು ಸ್ಪರ್ಧಾತ್ಮಕತೆಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸವಾಲುಗಳಲ್ಲಿ ಗುರುತಿಸಬಹುದಾಗಿದೆ. ಕಳೆದ ಮೂರು ದಶಕಗಳಲ್ಲಿ ಅಮೆರಿಕವು ಜಾಗತಿಕ ರಫ್ತಿನಲ್ಲಿ ತನ್ನ ಪಾಲಿನಲ್ಲಿ ಸತತ ಕುಸಿತವನ್ನು ಎದುರಿಸುತ್ತಿದೆ. ಒಟ್ಟು ಜಾಗತಿಕ ರಫ್ತು ವಹಿವಾಟಿನಲ್ಲಿ ಅಮೆರಿಕದ ಪಾಲು 1990 ರಲ್ಲಿ ಸರಿಸುಮಾರು 22.47% ರಷ್ಟಿತ್ತು. ಇದು 2000 ರಲ್ಲಿ 18.16% ಕ್ಕೆ ಇಳಿದು 2010 ರಲ್ಲಿ 11.70% ಕ್ಕೆ ಮತ್ತಷ್ಟು ಕುಸಿಯಿತು. 2020 ರಲ್ಲಿ 13.44% ಕ್ಕೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡ ನಂತರ, 2024 ರಲ್ಲಿ ಇದು ಸುಮಾರು 10.5% ರಷ್ಟಾಗುವ ನಿರೀಕ್ಷೆಯಿದೆ. ದಕ್ಷಿಣ ಕೊರಿಯಾ, ತೈವಾನ್ ಮತ್ತು ಚೀನಾ ಮತ್ತು ಅಮೆರಿಕ ಖಂಡದ ಕೆನಡಾ, ಬ್ರೆಜಿಲ್ ಮತ್ತು ಮೆಕ್ಸಿಕೊದಂತಹ ಹೆಚ್ಚು ಸ್ಪರ್ಧಾತ್ಮಕ ರಫ್ತುಗಳನ್ನು ಹೊಂದಿರುವ ಆರ್ಥಿಕತೆಗಳ ಏರಿಕೆ ಇದಕ್ಕೆ ಭಾಗಶಃ ಕಾರಣವಾಗಿದೆ. ಇದು ಉತ್ತರ ಅಮೆರಿಕಾದ ಮುಕ್ತ ವ್ಯಾಪಾರ ಸಂಘವನ್ನು (NAFTA) ಸಂಪೂರ್ಣವಾಗಿ ಈ ದೇಶಗಳಿಗೆ ಅನುಕೂಲಕರವಾಗಿ ಪರಿವರ್ತಿಸಿದರೆ, ಅಮೆರಿಕದ ಪಾಲಿಗೆ ಅನಾನುಕೂಲವೇ ಹೆಚ್ಚಾಗಿತ್ತು. ಇಲ್ಲಿ ಉದ್ಭವಿಸಿರುವ ವಿರೋಧಾಭಾಸವೆಂದರೆ ವಿಶ್ವದ ಅತ್ಯಂತ ಉತ್ಪಾದಕ ಆರ್ಥಿಕತೆಯು ಈಗ ಸ್ಪರ್ಧಾತ್ಮಕತೆ ಕ್ಷೀಣಿಸುತ್ತಿರುವುದನ್ನು ನೋಡುತ್ತಿದೆ. ಮತ್ತೊಂದು ಸಂದಿಗ್ಧತೆ ಎಂದರೆ ಬಲವಾದ ಡಾಲರ್ನಿಂದಾಗಿ ಪ್ರಪಂಚದಾದ್ಯಂತದ ಬಂಡವಾಳವು ಅಮೆರಿಕದ ಕಡೆಗೆ ಹರಿಯುತ್ತದೆ. ಆದರೆ ಬಲವಾದ ಡಾಲರ್ ವಿದೇಶಿ ಮಾರುಕಟ್ಟೆಗಳಲ್ಲಿ ಅಮೇರಿಕನ್ ಸರಕು ಮತ್ತು ಸೇವೆಗಳನ್ನು ದುಬಾರಿಯನ್ನಾಗಿ ಮಾಡುತ್ತದೆ ಮತ್ತು ಆದ್ದರಿಂದ ಕಡಿಮೆ ಸ್ಪರ್ಧಾತ್ಮಕವಾಗಿರುತ್ತದೆ
.
ಉತ್ಪಾದಕತೆಯಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಯೊಂದಿಗೆ ದೃಢವಾಗಿ ಬೆಳೆಯುತ್ತಿರುವ ಆರ್ಥಿಕತೆ ಮಾತ್ರ ನಿರಂತರ ರಫ್ತು ಬೆಳವಣಿಗೆಗೆ ಪೂರಕವಾಗಿರುತ್ತದೆ. ಆದರೆ ಅಮೇರಿಕನ್ ಆರ್ಥಿಕತೆಯು ನಿಧಾನಗತಿಯತ್ತ ಸಾಗುತ್ತಿದೆ. ಅಮೆರಿಕದ ಬೆಳವಣಿಗೆ 2025 ರಲ್ಲಿ 1.6% ರಷ್ಟು ಬೆಳೆಯುವ ನಿರೀಕ್ಷೆಯಿದೆ ಮತ್ತು 2026 ರಲ್ಲಿ 2.1% ರಷ್ಟು ಸಂಭಾವ್ಯ ನಕಾರಾತ್ಮಕ ಬೆಳವಣಿಗೆ ದಾಖಲಿಸುವ ಸೂಚನೆಗಳಿವೆ. ಅಮೆರಿಕದ ಆರ್ಥಿಕ ಹಿಂಜರಿತದ ವ್ಯಾಖ್ಯಾನದ ಅನುಸಾರ, ಸತತ ಎರಡು ತ್ರೈಮಾಸಿಕಗಳ ನಕಾರಾತ್ಮಕ ಬೆಳವಣಿಗೆಯನ್ನು ಹಿಂಜರಿತ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅಮೆರಿಕದ ಆರ್ಥಿಕತೆಯು 2026 ರಲ್ಲಿ ಹಿಂಜರಿತದ ವಾತಾವರಣವನ್ನು ಪ್ರವೇಶಿಸುಸುವ ಸಂಭವಗಳು ಹೆಚ್ಚಾಗಿವೆ. ಅರ್ಥಾತ್ ಟ್ರಂಪ್ 2.0 ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸುತ್ತಿರುವ ಆರ್ಥಿಕತೆಯನ್ನು ಆನುವಂಶಿಕವಾಗಿ ಪಡೆಯುತ್ತಿದೆ. ಈ ಸಂಭಾವ್ಯ ಹಿಂಜರಿತವು ಅಮೇರಿಕನ್ ರಫ್ತುಗಳನ್ನು ಮತ್ತಷ್ಟು ನಾಶಪಡಿಸುತ್ತದೆ. ಮಾರ್ಕ್ಸ್ವಾದಿ ಪರಿಭಾಷೆಯಲ್ಲಿ ಹೇಳುವುದಾದರೆ, ಬಂಡವಾಳಶಾಹಿಯ ನಿಯತಕಾಲಿಕ ಬಿಕ್ಕಟ್ಟಿನಲ್ಲಿ ಆರ್ಥಿಕ ಉತ್ಕರ್ಷದ ಹಂತವು ಕುಸಿತದ ಅವಧಿಗೆ ತಿರುಗಿದಾಗ, ಬಂಡವಾಳಶಾಹಿ ಮತ್ತು ರಾಜ್ಯದ ರಾಜಕೀಯ ನಾಯಕತ್ವವು ಪ್ರತಿದಾಳಿ ಕ್ರಮಗಳೊಂದಿಗೆ ಬಂಡವಾಳಶಾಹಿಯನ್ನು ರಕ್ಷಿಸಲು ಬರುತ್ತದೆ. ಟ್ರಂಪ್ ಅವರ ಹೊಸ ಆಕ್ರಮಣಶೀಲತೆಯ ಹಿಂದಿನ ತಿರುಳು ಇದೇ ಆಗಿದೆ.

ಆದರೆ ಈ ಆಕ್ರಮಣಶೀಲತೆಯ ಹಿಂದೆ ಕೆಲವು ವಿರೋಧಾಭಾಸಗಳನ್ನೂ ಗುರುತಿಸಬಹುದು. ಪ್ರಧಾನವಾಗಿ, ಬಂಡವಾಳಶಾಹಿ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಬಂಡವಾಳಿಗ ವರ್ಗಕ್ಕೆ ಫೆಡರಲ್ ನಿಧಿಯ ರೂಪದಲ್ಲಿ ದೊಡ್ಡಮಟ್ಟದ ಪ್ರಭುತ್ವದ ಬೆಂಬಲ ಇರಬೇಕೇ ಎನ್ನುವ ಪ್ರಶ್ನೆಯನ್ನು ಅವಲಂಬಿಸಿರುತ್ತದೆ . ಮಾರ್ಕ್ಸ್ವಾದಿ ನೆಲೆಯಲ್ಲಿ ನೋಡಿದಾಗ, 20 ನೇ ಶತಮಾನದ ಆರಂಭದಲ್ಲಿ ಮುಂದುವರಿದ ಪಶ್ಚಿಮ ದೇಶಗಳಲ್ಲಿ (Advanced West) ಬಂಡವಾಳಶಾಹಿಯನ್ನು ಪ್ರಭುತ್ವ-ಏಕಸ್ವಾಮ್ಯ ಬಂಡವಾಳಶಾಹಿ (State Monopoly Capitalism) ಎಂದು ಪ್ರಪ್ರಥಮವಾಗಿ ವ್ಯಾಖ್ಯಾನಿಸಿದವರು ರಷ್ಯನ್ ಕ್ರಾಂತಿಯ ನಾಯಕ ವ್ಲಾಡಿಮಿರ್ ಲೆನಿನ್. “ ತಮ್ಮ ಸಾಮ್ರಾಜ್ಯಶಾಹಿ, ಬಂಡವಾಳಶಾಹಿಯ ಅತ್ಯುನ್ನತ ಹಂತ ” ಹಾಗೂ “ ಪ್ರಭುತ್ವ ಮತ್ತು ಕ್ರಾಂತಿ” ಕೃತಿಗಳಲ್ಲಿ ಲೆನಿನ್, ಸಾರ್ವಜನಿಕ ಹಣವನ್ನು ಬಂಡವಾಳಶಾಹಿಗಳ ಕೈಗೆ ತಲುಪಿಸುವ ಮೂಲಕ ಬಂಡವಾಳಶಾಹಿ ಪ್ರಭುತ್ವವು ಬಂಡವಾಳಶಾಹಿಯ ಬೆಳವಣಿಗೆಯನ್ನು ಉಳಿಸಿಕೊಳ್ಳುವಲ್ಲಿ ಮತ್ತು ಉತ್ತೇಜಿಸುವಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಆದಾಗ್ಯೂ ಇದು ಅದರದೇ ಆದ ಆಂತರಿಕ ವಿರೋಧಾಭಾಸಗಳಿಲ್ಲದೆ ಸಾಧ್ಯವಾಗುವುದಿಲ್ಲ. ಬಂಡವಾಳಶಾಹಿಯಲ್ಲಿನ ನವ-ಉದಾರವಾದಿ ವಿಚಾರ ಧಾರೆಗಳು ಯಾವುದೇ ರಾಜ್ಯ ನಿಯಂತ್ರಣವನ್ನು ವಿರೋಧಿಸಿತು ಆದರೆ ಬಂಡವಾಳಶಾಹಿಗೆ ಪ್ರಭುತ್ವದ ಪ್ರಚಾರ ಮತ್ತು ಸಹಾಯದ ಪ್ರಯತ್ನಗಳನ್ನು ವಿರೋಧಿಸಲಿಲ್ಲ.
2008 ರ ಜಾಗತಿಕ ನವ-ಉದಾರವಾದದ ಬಿಕ್ಕಟ್ಟು
2008 ರ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಸಂದರ್ಭದಲ್ಲಿ, ಬಂಡವಾಳಶಾಹಿ ಏಕಸ್ವಾಮ್ಯವನ್ನು ಉಳಿಸಲು ಅಮೆರಿಕದ ಸರ್ಕಾರವು ಬೇಲ್ಔಟ್ಗಳೊಂದಿಗೆ (Bail out )̤ ಹೇಗೆ ಹೆಜ್ಜೆ ಹಾಕಿತು ಎಂಬುದನ್ನು ನಾವು ನೋಡಿದ್ದೇವೆ. (ತೀವ್ರ ಬಿಕ್ಕಟ್ಟು ಅಥವಾ ದೀವಾಳಿತನವನ್ನು ಎದುರಿಸುತ್ತಿರುವ ಉದ್ಯಮ ಅಥವಾ ದೇಶಗಳಿಗೆ ಹಣಕಾಸು ನೆರವನ್ನು ಒದಗಿಸುವ ಒಂದು ಆರ್ಥಿಕ ಪ್ರಕ್ರಿಯೆಯನ್ನು ಬೇಲ್ ಔಟ್ ಎಂದು ನಿರ್ವಚಿಸಲಾಗುತ್ತದೆ. ಇದು ಸಾಲ, ಬಾಂಡ್ಗಳು ಅಥವಾ ಶೇರು ಖರೀದಿ ಮುಂತಾದ ಮಾದರಿಗಳಲ್ಲಿ ವ್ಯಕ್ತವಾಗಬಹುದು –ಅನು). 2008ರ ಬಿಕ್ಕಟ್ಟು ಬ್ಯಾಂಕುಗಳು ಮತ್ತು ಹಣಕಾಸು ಹೂಡಿಕೆ ಸಂಸ್ಥೆಗಳನ್ನು ದಿವಾಳಿಯ ಅಂಚಿಗೆ ತಳ್ಳುವಂತಹ ಆರ್ಥಿಕ ಕುಸಿತವಾಗಿ ಪರಿಣಮಿಸಿದ ಹಂತದಿಂದ, 600 ಬಿಲಿಯನ್ ಡಾಲರ್ ಸಾಲ ಮತ್ತು ಹೂಡಿಕೆಗೆ ಒಡ್ಡಿಕೊಂಡ ಲೆಹ್ಮನ್ ಬ್ರದರ್ಸ್ನಂತಹ ಹಣಕಾಸು ದೈತ್ಯ ದಿವಾಳಿಯಾದಾಗಿನಿಂದ, ಅಮೇರಿಕನ್ ಪ್ರಭುತ್ವವು ಬಲವಾಗಿ ನೆರವಿಗೆ ಧಾವಿಸಿ ಸುಮಾರು 700 ಬಿಲಿಯನ್ ಡಾಲರ್ ಮೊತ್ತದ ಬೇಲ್ಔಟ್ಗಳನ್ನು ಖರ್ಚು ಮಾಡಿತು.

ಹಣಕಾಸು ಮತ್ತು ವಿಮಾ ಕ್ಷೇತ್ರದ ಪ್ರಮುಖ ಉದ್ಯಮ ಎಐಜಿ ಸಮೂಹ (AIG Group) 182 ಬಿಲಿಯನ್ ಡಾಲರ್, ಬ್ಯಾಂಕ್ ಆಫ್ ಅಮೇರಿಕಾ 45 ಬಿಲಿಯನ್ ಡಾಲರ್, ಸಿಟಿ ಗ್ರೂಪ್ 45 ಬಿಲಿಯನ್ ಡಾಲರ್ ಮೊತ್ತದ ಬೇಲ್ಔಟ್ಗಳನ್ನು ಪಡೆದವು. ಈ ಉದ್ಯಮಗಳ ನಿಷ್ಕ್ರಿಯ ಆಸ್ತಿಗಳಿಗೆ 300 ಬಿಲಿಯನ್ ಡಾಲರ್ವರೆಗೆ ಸರ್ಕಾರವು ಗ್ಯಾರಂಟಿಗಳನ್ನು ಪಡೆದುಕೊಂಡಿತು. ಹೂಡಿಕೆ ಸಂಸ್ಥೆಗಳಾದ ಜೆಪಿ ಮಾರ್ಗನ್ 25 ಬಿಲಿಯನ್ ಡಾಲರ್, ಗೋಲ್ಡ್ಮನ್ ಸ್ಯಾಚ್ಸ್ 10 ಬಿಲಿಯನ್ ಡಾಲರ್ ಪಡೆದಿದ್ದವು. ಇದು ಪ್ರಮುಖ ಏಕಸ್ವಾಮ್ಯ ಬಂಡವಾಳಶಾಹಿಯ ಅಸ್ತಿತ್ವವಾದದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅದರ ಉಳಿವಿಗಾಗಿ ಅನುಸರಿಸಲೇಬೇಕಾದ ಕ್ರಮವಾಗಿತ್ತು . ಹೀಗಾಗಿ, 21 ನೇ ಶತಮಾನದ ಮೊದಲ ಪ್ರಮುಖ ಬಂಡವಾಳಶಾಹಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಆರ್ಥಿಕತೆಯಲ್ಲಿ ಪ್ರಭುತ್ವವು ಯಾವುದೇ ಪಾತ್ರವನ್ನು ಹೊಂದಿರಬಾರದು ಮತ್ತು ಎಲ್ಲವನ್ನೂ ಮಾರುಕಟ್ಟೆ ಶಕ್ತಿಗಳಿಗೆ ಬಿಡಬೇಕು ಎಂಬ ನವ-ಉದಾರವಾದಿ ಸಿದ್ಧಾಂತವು ಅಂದಿಗೇ ತನ್ನ ಅವಸಾನ ಕಂಡಿತ್ತು.
ತದನಂತರ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕನ್ ಪ್ರಭುತ್ವವು ಸ್ಥಳೀಯ ಕಾರ್ಪೊರೇಷನ್ಗಳಿಗೆ ಸಹಾಯ ಮಾಡಲು ಸುಮಾರು 2 ಟ್ರಿಲಿಯನ್ ಡಾಲರ್ ಖರ್ಚು ಮಾಡಿರುವುದನ್ನೂ ಗಮನಿಸಬೇಕಿದೆ. ನವ ಉದಾರವಾದಿಗಳು ಇದು ಅಸಾಧಾರಣ ಪರಿಸ್ಥಿತಿ ಎಂಬ ನೆಪ ಒಡ್ಡುವ ಮೂಲಕ ಮೌನ ಸಮ್ಮತಿ ವ್ಯಕ್ತಪಡಿಸಿದ್ದರು. ಆದರೂ, ನವ ಉದಾರವಾದಿ ಸಿದ್ಧಾಂತಿಗಳು ಬಂಡವಾಳಶಾಹಿಯ ಕಾರ್ಯಸಾಧ್ಯತೆಗೆ ಪ್ರಭುತ್ವದ ಪಾತ್ರವನ್ನು ಕಡಿಮೆ ಮಾಡುವುದೊಂದೇ ಆಯ್ಕೆ ಎಂದು ವಾದಿಸುತ್ತಲೇ ಇದ್ದರು. ಟ್ರಂಪ್ ಕೂಡ ಈ ಸ್ವಯಂ-ವಿರೋಧಾಭಾಸದಿಂದ ಮುಕ್ತರಾಗಿರಲಿಲ್ಲ. ಟ್ರಂಪ್ ಕೃತಕ ಬುದ್ಧಿಮತ್ತೆಗಾಗಿ (Artificial Intellegence-AI) 500 ಬಿಲಿಯನ್ ಡಾಲರ್ ಯೋಜನೆಯನ್ನು ಘೋಷಿಸಿದರೂ, ಅದನ್ನು ಖಾಸಗಿ ಹೂಡಿಕೆಗೆ ಸೀಮಿತಗೊಳಿಸಲು ಅವರು ಉತ್ಸುಕರಾಗಿದ್ದರು. ನರೇಂದ್ರ ಮೋದಿ ಅವರ ಸಹ-ಅಧ್ಯಕ್ಷತೆಯಲ್ಲಿ ನಡೆದ ಪ್ಯಾರಿಸ್ AI ಶೃಂಗಸಭೆಯಲ್ಲಿ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟ್ರಂಪ್ ಅವರ ಅಭಿಪ್ರಾಯವನ್ನೇ ಪುನರುಚ್ಛಾರ ಮಾಡಿದ್ದು, ಈ ನಿಟ್ಟಿನಲ್ಲಿ ನಿಯಂತ್ರಣ ನೀತಿಯನ್ನು ಪ್ರಸ್ತಾಪಿಸಿದ ಐರೋಪ್ಯ ಒಕ್ಕೂಟವನ್ನು ಟೀಕಿಸಿದರು. ತನ್ಮೂಲಕ ಅನಿಯಂತ್ರಿತ AI ಪ್ರೇರಿತ ಬಂಡವಾಳಶಾಹಿಯನ್ನು ಪ್ರತಿಪಾದಿಸಿದರು.
ಫೆಡರಲ್ ನಿಧಿಯ ಕುರಿತು ಟ್ರಂಪ್ ಅವರ ನಿಲುವಿನಲ್ಲಿ ಸ್ವಯಂ ವಿರೋಧಾಭಾಸವನ್ನೂ ಪರಾಮರ್ಶಿಸಬೇಕಿದೆ. ಬಹುತೇಕ ಎಲ್ಲಾ ನಿಗಮಗಳ ನಿರ್ಬಂಧಗಳು ಮತ್ತು ವಿಶ್ವ ವಾಣಿಜ್ಯ ಸಂಸ್ಥೆ (WTO) ಮತ್ತು NAFTA ನಂತಹ ಬಹುಪಕ್ಷೀಯ ವ್ಯಾಪಾರ ಒಪ್ಪಂದಗಳು ( ಇದು ನಂತರದಲ್ಲಿ USMCA ಅಮೆರಿಕ- ಮೆಕ್ಸಿಕೊ ಮತ್ತು ಕೆನಡಾ ಒಪ್ಪಂದವಾಗಿ ಬದಲಾವಣೆಯಾಯಿತು) ವಿಧಿಸಲಾದ ನಿರ್ಬಂಧಗಳಿಂದಾಗಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಅಮೆರಿಕದ ಫೆಡರಲ್ ನಿಧಿಯನ್ನು ಕೋವಿಡ್ ನಂತರದ ಅವಧಿಯಲ್ಲಿ ಪುನಾರಚಿಸಲಾಯಿತು. ಬಹಳ ಮುಖ್ಯವಾಗಿ ತಾಂತ್ರಿಕ ನಾವೀನ್ಯತೆಗಾಗಿ (Technological Innovationş) ಸಂಶೋಧನೆ ಮತ್ತು ಮುಂದುವರಿದ ಸಂವಹನ (Advanced Communication) ಮತ್ತು ಡಿಜಿಟಲ್ ತಂತ್ರಜ್ಞಾನಗಳಂತಹ ಉನ್ನತ ತಂತ್ರಜ್ಞಾನ ಕ್ಷೇತ್ರಗಳ (High Tech Areas) ಅಭಿವೃದ್ಧಿಗೆ ಮೂಲಸೌಕರ್ಯವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಲಾಯಿತು. ಮೂಲತಃ ಕೃತಕ ಬುದ್ಧಿಮತ್ತೆಯಲ್ಲಿ (AI) ಬಂಡವಾಳಶಾಹಿ ಬೆಳವಣಿಗೆ ಮತ್ತು ವಿಸ್ತರಣೆಗೆ ಇದು ಚಾಲಕಶಕ್ತಿಯಾಗಿ ಪರಿಣಮಿಸುತ್ತದೆ ಎಂಬ ನಂಬಿಕೆಯೊಂದಿಗೆ ಇದನ್ನು ಮಾಡಲಾಯಿತು.
ಮುಂದುವರೆಯುತ್ತದೆ.