ಶಿವಮೊಗ್ಗ:ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ.
ಶಿವಮೊಗ್ಗ ತಾಲೂಕಿನ ಕಲ್ಲಾಪುರ ಗ್ರಾಮದ ಬಳಿ ಭಾನುವಾರ ಮುಂಜಾನೆ ಈ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ವಿವೇಕ್(21), ಕಾರ್ತಿಕ್ (23) ಹಾಗೂ ಮೋಹನ್ (22) ಅವರುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನ ಹಿಂಬದಿ ಕುಳಿತಿದ್ದ ರುದ್ರೇಶ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಸವಳಂಗ ಕಡೆಗೆ ಹೋಗುತ್ತಿದ್ದ KA 17 MA 3581 ಬೊಲೆನೋ ಕಾರು ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಕಲ್ಲಾಪುರ ಗ್ರಾಮದ ಬಳಿ ಸವಳಂಗದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ KA 27 C 3924 ಸಂಖ್ಯೆಯ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅನಾಹುತ ಸಂಭವಿಸಿದೆ. ಅಪಘಾತದ ಬಳಿಕ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.