ರಾಜ್ಯಾದ್ಯಂತ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರವನ್ನು ಕೊನೆ ಕ್ಷಣದಲ್ಲಿ ಹಿಂಪಡೆಯಲಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ ಸಾರಿಗೆ ನೌಕರರ ಒಕ್ಕೂಟ ಅಧಿಕೃತವಾಗಿ ಮುಷ್ಕರ ವಾಪಸ್ ಪಡೆಯುವುದಾಗಿ ಘೋಷಿಸಿದೆ.ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ನೌಕರರ ಒಕ್ಕೂಟದ ಸಂಚಾಲಕ ಜಯದೇವರಾಜೆ ಅರಸ್, “ಹೈಕೋರ್ಟ್ ಆದೇಶಕ್ಕೆ ಗೌರವ ಸೂಚಿಸಿ ಮುಷ್ಕರವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದರಿಂದ ಬುಧವಾರ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಸಾರ್ವಜನಿಕರಿಗೆ ಎಂದಿನಂತೆ ಸಾರಿಗೆ ಸೇವೆ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.ವೇತನ ಪರಿಷ್ಕರಣೆ, ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು, ಬಾಕಿ ಸೌಲಭ್ಯಗಳ ಜಾರಿಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದವು.

ಮುಷ್ಕರದ ಭೀತಿಯಿಂದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತ್ತು.ಈ ನಡುವೆ ಸರ್ಕಾರ ಹಾಗೂ ನ್ಯಾಯಾಲಯದ ಮಟ್ಟದಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಷ್ಕರ ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. “ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮೊದಲೇ ಮಾಹಿತಿ ನೀಡಲಾಗಿತ್ತು. ಹಠಾತ್ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಜಯದೇವರಾಜೆ ಅರಸ್ ತಿಳಿಸಿದ್ದಾರೆ.ನ್ಯಾಯಾಲಯದ ಆದೇಶ ಪಾಲನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಶಾಲೆ, ಕಾಲೇಜು, ಕಚೇರಿ ಹಾಗೂ ದೂರ ಪ್ರಯಾಣ ಮಾಡುವವರಿಗೆ ಬಸ್ ಸೇವೆ ಎಂದಿನಂತೆ ದೊರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟ ಭರವಸೆ ನೀಡಿದೆ.






