ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದಿಂದ ಸರ್ಕಾರಕ್ಕೆ ಮುಜುಗರ, ದುರಂತ ಬೆನ್ನಲ್ಲೇ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆ, ವಿದೇಶ ಪ್ರವಾಸಕ್ಕೆ ಹೇಮಂತ್ ನಿಂಬಾಳ್ಕರ್‌ಗೆ ಕಡ್ಡಾಯ ರಜೆ ಮಂಜೂರು

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಸರಕಾರ, ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿತ್ತು. ಕಾಲ್ತುಳಿತ ದುರಂತಕ್ಕೆ ಗುಪ್ತಚರ ದಳದ ವೈಫಲ್ಯವೂ ಕಾರಣ ಎಂಬ ಪ್ರತಿಪಕ್ಷಗಳ ಟೀಕೆ ಹಾಗೂ ಸಾರ್ವಜನಿಕ ವಲಯದ ಆಕ್ರೋಶದ ಬೆನ್ನಲ್ಲೇ ಗುಪ್ತಚರ ದಳದ ಮುಖ್ಯಸ್ಥ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ಗುಪ್ತಚರ ದಳದಿಂದ ವರ್ಗಾಯಿಸಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿಯುಕ್ತಿ ಮಾಡಿತ್ತು.
ಇದೀಗ ಹೇಮಂತ್ ನಿಂಬಾಳ್ಕರ್ ಅವರಿಗೆ ಜೂ.12 ರಿಂದ ಜೂ.27ರ ವರೆಗ ವಿದೇಶ ಪ್ರವಾಸ ಕೈಗೊಳ್ಳಲು 16 ದಿನಗಳ ವೇತನ ಸಹಿತ ರಜೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಜತೆಗೆ ಜೂ.28, 29ರ ಎರಡು ದಿನಗಳ ಸಾರ್ವತ್ರಿಕ ರಜೆಯನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ.

ಇಂಟೆಲಿಜೆನ್ಸ್ ವೈಫಲ್ಯವೂ ಕಾರಣ!
ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಲು ಇಂಟೆಲಿಜೆನ್ಸ್ ವೈಫಲ್ಯವೂ ಕಾರಣ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಟೇಡಿಯಂನಲ್ಲಿ ಸನ್ಮಾನ ಮಾಡಲು ಅನುಮತಿ ಪಡೆದಿದ್ದರಾ? ಈ ವೇಳೆ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಅನುಮತಿ ಇಲ್ಲದೇ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರನ್ನು ಬಿಟ್ರೆ ಜವಾಬ್ದಾರಿ ಯಾರದ್ದು?,’ ಎಂದರು.
ಪೊಲೀಸ್ ಆಯುಕ್ತ ದಯಾನಂದ್ ಅಮಾನತು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣದಿಂದ ರಾಜ್ಯ ಸರಕಾರ ದೇಶೀಯ ಮಟ್ಟದಲ್ಲಿ ತೀವ್ರ ಮುಜುಗರ ಅನುಭವಿಸುವಂತಾಯಿತು. ಸೂಮೋಟೊ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಚಾಟಿ ಬೀಸಿತು. ಇದರಿಂದ ಎಚ್ಚೆತ್ತುಕೊಂಡ ಸರಕಾರ ಕರ್ತವ್ಯ ಲೋಪದ ಮೇರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಐದು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿತ್ತು
ಸೀಮಂತ್ ಕುಮಾರ್ ಸಿಂಗ್ ನೂತನ ಪೊಲೀಸ್ ಕಮಿಷನರ್

ನಗರ ಪೊಲೀಸ್ ಕಮಿಷನರೇಟ್ ನೂತನ ಪೊಲೀಸ್ ಆಯುಕ್ತರಾಗಿ ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಅವರನ್ನು ರಾಜ್ಯ ಸರ್ಕಾರ ನೇಮಕಗೊಳಿಸಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಭಾರೀ ಪೈಪೋಟಿಯಲ್ಲಿದ್ದ ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಕೈ ಬಿಟ್ಟು ಸರಕಾರ, ಬಿಎಂಟಿಎಫ್ ಮುಖ್ಯಸ್ಥರಾಗಿದ್ದ ಸೀಮಂತ್‌ಕುಮಾರ್ ಅವರಿಗೆ ಮಣೆ ಹಾಕಿದೆ.