ರಾಜ್ಯ ಹೈ ಕೋರ್ಟ್ ಆದೇಶದ ಮೇರೆಗೆ ನ್ಯಾಯ ಮೂರ್ತಿ ಎ ಬಿ ಪಾಟೀಲ ಏಕ ಸದಸ್ಯ ನ್ಯಾಯಾಂಗ ಆಯೋಗವು ತನ್ನ ತನಿಖೆಯನ್ನು ಮೈಸೂರಿನಲ್ಲಿ ಕಚೇರಿ ತೆಗೆದು ಆರಂಭಿಸಿದೆ. ಈ ಕಚೇರಿಯನ್ನು ಸಂತ್ರಸ್ಥರು ಇರುವ ಚಾಮರಾಜನಗರದಲ್ಲೇ ಆರಂಭಿಸಬೇಕೆಂದು ಜಿಲ್ಲೆಯ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸುವ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ನಡುವೆ ಅನ್ ಲಾಕ್ ಮತ್ತು ನಿರ್ಬಂಧಗಳ ಸಡಿಲಿಕೆಯ ಘೋಷಣೆ ಹೊರಬಿದ್ದಿರುವುದರಿಂದ ಸಂತ್ರಸ್ಥ ಕುಟುಂಬಗಳ ಕಣ್ಣೀರ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ.

ತಾಯಿ ಕಳೆದು ಕೊಂಡವರು, ತಂದೆ ಕಳೆದುಕೊಂಡವರು, ಹೆತ್ತ ಮಗನನ್ನು ಕಳೆದುಕೊಂಡವರು ಹೀಗೆ ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಕಣ್ಣೀರಿನ ಕಥೆಗಳು ಈ ದುರಂತದ ಗರ್ಭದಲ್ಲಿ ಅಡಗಿದ್ದು ಒಂದೊಂದಾಗಿ ಹೊರಬರುತ್ತಿವೆ. ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ಗ್ರಾಮದ 37 ವರ್ಷದ ಜಯಶಂಕರ್ ಮೇ.2 ರಂದು ರಾತ್ರಿ ತಮ್ಮ ಪತ್ನಿಯ ಕಣ್ಣೆದುರೇ ಆಕ್ಸಿಜನ್ ಖಾಲಿಯಾಗಿ ಮೃತಪಟ್ಟಿದ್ದರು. ಜಯಶಂಕರ್ ಅವರ 7 ವರ್ಷದ ಮಗಳು ಪ್ರತೀಕ್ಷಾಳ ಮಾತು ಕೇಳಿದರೆ ಎಂತಹವರ ಕರುಳು ಚುರುಕ್ ಎನಿಸದೆ ಇರದು. ನಮ್ಮಪ್ಪ ಇದ್ದಿದ್ದರೆ ನಾನು ಕೇಳಿದ್ದನ್ನೆಲ್ಲಾ ಕೊಡಿಸ್ತಾ ಇದ್ರು, ಚೆನ್ನಾಗಿ ನೋಡಿಕೊಳ್ತಾ ಇದ್ರು, ನನ್ನನ್ನು ಓದಿಸಿ ದೊಡ್ಡವಳಾಗಿ ಮಾಡ್ತಾ ಇದ್ರು. ಈಗ ನನ್ನಪ್ಪ ಇಲ್ಲ ಎನ್ನುವಾಗ ಆ ಮಗುವಿನ ಕಣ್ಣಾಲಿಗಳು ತುಂಬಿ ಬಂದಿದ್ದವು.
ಆಕ್ಸಿಜನ್ ಸಿಕ್ಕಿದ್ದರೆ ಅಪ್ಪ ಬದುಕ್ತಾ ಇದ್ರು, ಈಗ ಅಮ್ಮ ಒಬ್ಬಳೆ ಆಗಿದ್ದಾಳೆ, ಅಮ್ಮ ನಮ್ಮನ್ನು ಹೇಗೆ ಸಾಕ್ತಾಳೆ, ಯುನಿಫಾರಂ ಹೇಗೆ ಕೊಡಿಸ್ತಾಳೆ? ಸ್ಕೂಲ್ ಫೀಸ್ ಹೇಗೆ ಕಟ್ತಾಳೆ? ಆಟೋಗೆ ಹೇಗೆ ದುಡ್ಡು ಕೊಡ್ತಾಳೆ ಎಂದು ಪತ್ರಕರ್ತರ ಮುಂದೆ ಮನ ಕಲಕುವ ಪ್ರಶ್ನೆಗಳನ್ನು ಮುಂದಿಟ್ಟಳು ಪ್ರತೀಕ್ಷಾ . ನಮ್ಮಮ್ಮನಿಗೆ ಕೆಲಸ ಕೊಟ್ರೆ ನಮ್ಮನ್ನ ಸಾಕ್ತಾಳೆ ಎನ್ನುವುದು ಪ್ರತೀಕ್ಷಾಳ ಆಶಾಭಾವನೆಯಾಗಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 36 ಮಂದಿ ಎಂದು ವರದಿಗಳು ಹೇಳುತ್ತಿದ್ದರು 24 ಮಂದಿಯ ಕುಟುಂಬಗಳಿಗೆ ಮಾತ್ರ ಸರ್ಕಾರ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದೆ. ಆದರೆ ಆಕ್ಸಿಜನ್ ಕೊರತೆಯಿಂದಲೇ ಮೃತಪಟ್ಟ ಜಯಶಂಕರ್ ಅವರ ಹೆಸರು 24 ಮಂದಿಯ ಪಟ್ಟಿಯಲ್ಲಿ ಇಲ್ಲ, ಅವರು ತಮ್ಮ ಪತ್ನಿ ಸಿದ್ದರಾಜಮ್ಮನ ಎದುರೇ ಆಕ್ಸಿಜನ ಇಲ್ಲದೆ ಮೃತಪಟ್ಟಿದ್ದರು. ಅವರ ಶವವನ್ನ ರಾತ್ರೋರಾತ್ರಿ ಪತ್ನಿಗೆ ಹಸ್ತಾಂತರಿಸಿ ಆಸ್ಪತ್ರೆಯ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ.

ನನ್ನ ಪತಿಗೆ ತೀವ್ರ ಉಸಿರಾಟ ಸಮಸ್ಯೆ ಇತ್ತು. ಕೋವಿಡ್ ರಿಪೋರ್ಟ್ ನೆಗೆಟಿವ್ ಇಲ್ಲದ್ದರೂ ಕೋವಿಡ್ ರೀತಿಯ ಲಕ್ಷಣಗಳು ಇದ್ದುದ್ದರಿಂದ ಏಪ್ರಿಲ್ 27 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೆವು. ಎರಡು ದಿನಗಳ ನಂತರ ಆಕ್ಸಿಜನ್ ನೀಡಲಾಗುತ್ತಿತ್ತು. ಮೇ. 2 ರಂದು ರಾತ್ರಿ ಸುಮಾರು 11 ಗಂಟೆಯ ಮೇಲೆ ಅಕ್ಸಿಜನ್ ಖಾಲಿಯಾಯ್ತು. ನರ್ಸ್ ಗಳಿಗೆ ವಿಷಯ ತಿಳಿಸಿದಾಗ ಅವರು ಮೈಸೂರಿನಿಂದ ಬರಬೇಕು ಎಂದು ಕೈ ಚೆಲ್ಲಿದರು. ನನ್ನ ಪತಿಯನ್ನು ಬೆನ್ನು ಮೇಲೆ ಮಾಡಿ ಮಲಗಿಸಿ ನ್ಯೂಸ್ ಪೇಪರ್ ನಲ್ಲಿ ಗಾಳಿ ಬೀಸುತ್ತಾ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ನನ್ನ ಪತಿ ನನ್ನ ಕಣ್ಣೆದುರೇ ಸಾವನ್ನಪ್ಪಿದರು. ಮಧ್ಯರಾತ್ರಿಯೇ ಶವವನ್ನ ತೆಗೆದುಕೊಂಡು ಹೋಗುವಂತೆ ತಮ್ಮ ಮೇಲೆ ಒತ್ತಡ ಹೇರಲಾಯಿತು. ದಿಕ್ಕು ತೋಚದೆ 2500 ಸಾವಿರ ಹಣ ನೀಡಿ ಆ್ಯಂಬುಲೆನ್ಸ್ ನಲ್ಲಿ ಪತಿಯ ಶವವನ್ನ ಊರಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಿದೆವು ಎಂದು ಅಂದಿನ ಘಟನೆಯನ್ನು ಜಯಶಂಕರ್ ಅವರ ಪತ್ನಿ ಸಿದ್ದರಾಜಮ್ಮ ವಿವರಿಸಿದರು. ನನ್ನ ಪತಿ ಆಕ್ಸಿಜನ್ ಕೊರತೆಯಿಂದ ಮೃತ ಪಟ್ಟರೂ ಸರ್ಕಾರ ನಮಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಮೃತ ಪಟ್ಟವರ ಪಟ್ಟಿಯಲ್ಲಿ ನನ್ನ ಪತಿಯ ಹೆಸರು ಇಲ್ಲ. ನನ್ನ ಪತಿಯೇ ಕುಟುಂಬದ ಆಧಾರ ಸ್ಥಂಭವಾಗಿದ್ದರು. ವಯಸ್ಸಾದ ಅತ್ತೆ, ಮಾವ, ಏನು ಅರಿಯದ ಇಬ್ಬರು ಹೆಣ್ಣು ಮಕ್ಕಳನ್ನ ಹೇಗೆ ಸಾಕಲಿ ಎಂದು ಸಿದ್ದರಾಜಮ್ಮ ಕಣ್ಣೀರಿಡುತ್ತಿದ್ದಾರೆ. ಪತ್ನಿಯ ಅಳಲು ಒಂದೆಡೆಯಾದ್ರೆ ಅವರ ಮಗಳು ಪ್ರತೀಕ್ಷಾಳಲ್ಲಿ ಮೂಡಿರುವ ಪ್ರಶ್ನೆಗಳಂತೂ ಎಂತಹವರ ಮನವನ್ನು ಕಲಕುವಂತಿವೆ.

ಇದು ಬರೇ ಒಂದು ಕುಟುಂಬದ ಕಥೆಯಲ್ಲ. ಏಕೆಂದರೆ ಈ ದುರಂತದಲ್ಲಿ ಮೃತಪಟ್ಟ ಬಹುತೇಕ ಕುಟುಂಬಗಳು ಜೀವನದ ಆಧಾರ ಸ್ಥಂಭವನ್ನೆ ಕಳೆದುಕೊಂಡಿವೆ. ಮತ್ತೊಂದೆಡೆ ಅಧಿಕಾರಿಗಳು ದುರಂತದಲ್ಲಿ ಮೃತಪಟ್ಟವರು 24 ಜನರು ಮಾತ್ರ ಎಂದು ಹೇಳುತಿದ್ದಾರೆ. ಆ ಕುಟುಂಬಗಳಿಗೆ ಪರಿಹಾರವೂ ಸಿಕ್ಕಿದೆ. ಆದರೆ ದಾಖಲಾತಿಯೇ ಇಲ್ಲದ ಇನ್ನುಳಿದ 12 ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವವರಾರು ? ಜಿಲ್ಲಾಸ್ಪತ್ರೆ ಅಧಿಕಾರಿಗಳನ್ನು ಕೇಳಿದರೆ ದಾಖಲಾತಿಗಳನ್ನು ತನಿಖೆಗಾಗಿ ತೆಗೆದುಕೊಂಡು ಹೋಗಲಾಗಿದೆ. ನಮ್ಮ ಬಳಿ ಆಸ್ಪತ್ರೆಗೆ ದಾಖಲಾದವರ ಅಥವಾ ಮೃತಪಟ್ಟವರ ಮಾಹಿತಿ ಇಲ್ಲ ಎಂದು ಹೇಳುತ್ತಾರೆ ಎಂದು ದುರಂತದಲ್ಲಿ ತಮ್ಮ ಮಗ ನಾಗರಾಜುವನ್ನು ಕಳೆದುಕೊಂಡ 70 ವರ್ಷದ ವೃದ್ದ ಶಿವನಂಜಯ್ಯ ಹೇಳುತ್ತಾರೆ. ಇರುವ ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು , ಇತರ ಜಮೀನುಗಳಿಗೂ ಕೂಲಿ ಕೆಲಸಕ್ಕೆ ಹೋಗಿ ಮಗನು ಇಬ್ಬರು ಮಕ್ಕಳು , ನಮ್ಮನ್ನೂ ಸಾಕುತ್ತಿದ್ದ. ಈಗ ನಮಗೆ ಯಾರೂ ದಿಕ್ಕಿಲ್ಲ ಎಂದು ಕಣ್ಣೊರೆಸಿಕೊಂಡರು..
ರಾಜ್ಯದ ಹಿಂದುಳಿದ ಜಿಲ್ಲೆ ಎಂದೇ ಗುರುತಿಸಿಕೊಂಡಿರುವ ಚಾಮರಾಜನಗರದ ದುರಂತದಲ್ಲಿ ಮೃತಪಟ್ಟವರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ಈ ಕುಟುಂಬಗಳಿಗೆ ನ್ಯಾಯ ದೊರೆಯುವುದೇ ಎಂಬ ದೊಡ್ಡ ಪ್ರಶ್ಣೆ ಎಲ್ಲರನ್ನೂ ಕಾಡುತ್ತಿದೆ.








