ಬಿರುಸು ಪಡೆದುಕೊಂಡಿರುವ ಮುಂಗಾರು ಮಳೆ ರಾಜ್ಯದ ಪುಟ್ಟ ಜಿಲ್ಲೆಗೆ ಜೀವಕಳೆ ತಂದಿದೆ. ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಬೇಸಿಗೆ ಅವಧಿಯ ರಜೆಯಲ್ಲಿ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದರೆ. ಮಾನ್ಸೂನ್ ಅವಧಿಯಲ್ಲಿ ಜಲಪಾತಗಳ ವೀಕ್ಷಣೆ ,ರಿವರ್ ರ‍್ಯಾಫ್ಟಿಂಗ್‌ನಂತಹ ಜಲಕ್ರೀಡೆಗಳತ್ತ ಪ್ರವಾಸಿಗರು ಒಲವು ತೋರುತ್ತಾರೆ. ಕಳೆದ ವಾರ ಕಾವೇರಿ ನದಿಯು ನೀರಿನ ಹರಿಯುವಿಕೆ ಅಪಾಯ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದುಬಾರೆ ರಿವರ್ ರ್ಯಾಫ್ಟಿಂಗ್ ಸ್ಥಗಿತಗೊಳಿಸಿದ್ದು ಮೂರು ದಿನಗಳ ನಂತರ ರ‍್ಯಾಫ್ಟಿಂಗ್ ಕಾರ್ಯಾರಂಭ ಮಾಡಿದ್ದು, ಪ್ರವಾಸಿಗರು ಆಗಮಿಸುತಿದ್ದಾರೆ.
ಭೋರ್ಗರೆವ ಹಾಲ್ನೊರೆಯ ಹಿನ್ನೀರ ನಡುವೆ ಮೈನವಿರೇಳಿಸುವ ಸವಾಲಿನ ವೈಟ್ ವಾಟರ್ ರ‍್ಯಾಫ್ಟಿಂಗ್ ಕ್ರೀಡೆ ಕೊಡಗಿನ ಆಕರ್ಷಣಿಯ ಪ್ರವಾಸಿ ತಾಣವಾದ ದುಬಾರೆ ಹಾಗೂ ಬರಪೊಳೆಗಳಲ್ಲಿ ಈಗಾಗಲೇ ಪ್ರಾರಂಭಗೊಂಡಿದೆ.
ಅರಣ್ಯ ಇಲಾಖೆಯ ಸಾಕಾನೆ ಶಿಬಿರದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ದುಬಾರೆಯಲ್ಲಿ 2002 ರಲ್ಲಿ ರಾಜ್ಯ ಸರಕಾರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ (Jungle Lodge and Resort) ನಿಗಮದ ಮೂಲಕ ರ‍್ಯಾಫ್ಟಿಂಗ್(Raffting) ಕ್ರೀಡೆಯನ್ನು ಪರಿಚಯಿಸಿತು. ನಂತರದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರ‍್ಯಾಫ್ಟಿಂಗ್ ಕ್ರೀಡಾ ನಿರ್ವಹಣೆ ಹಾಗೂ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿ ಹಲವು ನಿಯಮದೊಂದಿಗೆ ಜಲಕ್ರೀಡೆ ಪುನರಾರಂಭಗೊಂಡಿತು. ನಂತರ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಸಮೀಪದ ಕೆ.ಕೆ.ಆರ್.ನಲ್ಲೂ ಜಲಕ್ರೀಡೆ (Water Activities) ಆರಂಭಗೊಂಡಿತು. ರ‍್ಯಾಫ್ಟಿಂಗ್ ಕ್ರೀಡಾ ಆಯೋಜಕರು, ಸಂಬಂಧಪಟ್ಟ ಅರಣ್ಯ ಇಲಾಖೆ(Forest Department), ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ, ಪೊಲೀಸ್, ಲೋಕೋಪಯೋಗಿ ಇಲಾಖೆ, ಪಂಚಾಯಿತಿ, ವಿಮೆ ಜೊತೆಗೆ ರಾಷ್ಟಿಯ ಜಲ ಕ್ರೀಡಾಸಂಸ್ಥೆಯ ತರಬೇತಿ ಪಡೆದ ರ‍್ಯಾಫ್ಟರ್‌ಗಳ ಅಂಗೀಕೃತ ಪತ್ರ ಪಡೆದು ಜಲಕ್ರೀಡೆಗೆ ಅನುಮತಿ ನೀಡಲಾಗಿದೆ. ಈ ಬಾರಿ ಕೊಡಗಿನ ಕುಶಾಲನಗರದ ಸಮೀಪದ ದುಬಾರೆಯಲ್ಲಿ 45 ಆಯೋಜಕರು 72 ರ‍್ಯಾಫ್ಟ್ಗಳು, ದಕ್ಷಿಣ ಕೊಡಗಿನ ಕೆಕೆಆರ್‌ನ ಬರಪೊಳೆಯಲ್ಲಿ 4 ಆಯೋಜಕರು 20 ರ‍್ಯಾಫ್ಟ್ಗಳನ್ನು ಬಳಸಿಕೊಂಡು ಜಲಕ್ರೀಡೆ ನಡೆಸುತ್ತಿದ್ದಾರೆ.
ಧುಮ್ಮಿಕ್ಕಿ ಹರಿಯುವ ನೀರಿನ ನಡುವೆ ಪ್ರವಾಸಿಗರು ಹೆಲ್ಮೆಟ್, ಲೈಫ್ ಜಾಕೆಟ್ ಸೇರಿದಂತೆ ರಕ್ಷಣಾ ಕವಚದೊಂದಿಗೆ ಗಾಳಿ ತುಂಬಿದ ಬೃಹತ್ ಗಾತ್ರದ ರ‍್ಯಾಫ್ಟಿಂಗ್ ಬೋಟ್‌ನೊಂದಿಗೆ ನುರಿತ ರ‍್ಯಾಫ್ಟರ್‌ಗಳ ಮಾರ್ಗದರ್ಶನದಲ್ಲಿ ರೋಚಕ ರ‍್ಯಾಫ್ಟಿಂಗ್ ಸಾಹಸಕ್ರೀಡೆಯನ್ನು ಅಸ್ವಾದಿಸಬಹುದಾಗಿದೆ. ಕರ್ನಾಟಕದ ಹಲವೆಡೆ ಇಂತಹ ವೈಟ್ ವಾಟರ್ ರ‍್ಯಾಫ್ಟಿಂಗ್ ಸಾಹಸ ಕ್ರೀಡೆ ಇದ್ದರೂ ಪುಟ್ಟ ಜಿಲ್ಲೆಯಾದ ಕೊಡಗಿನ ದುಬಾರೆಯಲ್ಲಿ ಕಾನನದ ನಡುವೆ ಸಾಕಾನೆ ಶಿಬಿರವನ್ನು ನೋಡುತ್ತಾ ಮೈನವಿರೇಳಿಸುವ ರ‍್ಯಾಫ್ಟಿಂಗ್ ಅನುಭವ ನೀಡಿದರೆ ದಕ್ಷಿಣ ಕೊಡಗಿನ ಬರಪೊಳೆಯಲ್ಲಿ ದಟ್ಟ ಕಾಡಿನ ನಡುವೆ ಧುಮ್ಮಿಕ್ಕಿ ಭೋರ್ಗರೆಯುವ ಕಲ್ಲುಬಂಡೆಗಳ ನಡುವಿನ ಹಿನ್ನೀರ ನಡುವೆ ಸಾಗುವ ಸಾಹಸ ರೋಮಾಂಚನಗೊಳಿಸುತ್ತದೆ. ಈ ವರ್ಷ ಮಳೆ ಕೊಂಚ ತಡವಾಗಿ ಬಿರುಸು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಕಳೆದ ನಾಲ್ಕು ದಿನಗಳಿಂದ ದುಬಾರೆಯಲ್ಲಿ ವೈಟ್ ವಾಟರ್ ರ‍್ಯಾಫ್ಟಿಂಗ್ ಕ್ರೀಡೆ ಪ್ರಾರಂಭಿಸಲಾಗಿದೆ. ಉತ್ತಮ ಸ್ಪಂದನ ಪ್ರವಾಸಿಗರಿಂದ ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ಇದರಿಂದ ಮಾನ್ಸೂನ್ ಅವಧಿಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ದುಬಾರೆ ರ‍್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮೊಣ್ಣಂಡ ವಿಜು ಚಂಗಪ್ಪ ತಿಳಿಸಿದ್ದಾರೆ. ಬರಪೊಳೆಯ ವೈಟ್‌ವಾಟರ್ ರ‍್ಯಾಫ್ಟಿಂಗ್‌ಕ್ರೀಡೆ ಪ್ರಾರಂಭವಾಗಿರುವ ಬಗ್ಗೆ ಪ್ರಚಾರಪಡಿಸಲಾಗುತ್ತಿದೆ. ಆನ್‌ಲೈನ್ ಬುಕ್ಕಿಂಗ್ ಅವಕಾಶವೂ ಕಲ್ಪಿಸಲಾಗಿದೆ ಎಂದು ರ‍್ಯಾಫ್ಟಿಂಗ್ ಆಯೋಜಕ ಚಟ್ಟಂಗಡ ಸೋಮಣ್ಣ ತಿಳಿಸಿದ್ದಾರೆ.