ಬೆಂಗಳೂರು: ರಾಜ್ಯದ ಹಲವೆಡೆ ಭರ್ಜರಿಯಾಗಿ ಸುರಿಯುತ್ತಿರುವ ಮಳೆರಾಯ, ಬೆಂಗಳೂರಿಗರನ್ನೂ ನೆನೆಸಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ರಸ್ತೆಗಳೆಲ್ಲ ಜಲಾವೃತವಾಗಿವೆ.
ಜೂನ್ ತಿಂಗಳ ಮೊದಲ ದಿನದಿಂದಲೇ ಬೆಂಗಳೂರಿನಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ಇಂದು ಕೂಡ ಭರ್ಜರಿಯಾಗಿಯೇ ಸುರಿದಿದ್ದಾನೆ. ಭಾನುವಾರ ನಗರದಲ್ಲಿ ಭರ್ಜರಿಯಾಗಿಯೇ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಯಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ಜನ – ಜೀವನ ಅಸ್ತವ್ಯಸ್ಥಗೊಂಡಿದೆ.
ಹಲವೆಡೆ ಗಾಳಿ ಸಹಿತ ಮಳೆ(Rain)ಯಾಗಿದೆ. ಇನ್ನೂ ಹಲವೆಡೆ ಮಳೆಯಾಗುತ್ತಿದೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್ಹಾಲ್, ಕೆ.ಆರ್.ಮಾರ್ಕೆಟ್ , ಕಾರ್ಪೊರೇಷನ್, ಶಿವಾಜಿನಗರ, ಯಲಹಂಕ, ವೈಟ್ ಫೀಲ್ಡ್, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಮಳೆ ವ್ಯಾಪಕವಾಗಿ ಸುರಿದಿದೆ. ರಸ್ತೆಗಳೆಲ್ಲ ನೀರು ಎನ್ನುವಂತಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಬಿರುಗಾಳಿಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದೆ.
ಬೆಂಗಳೂರಿನಲ್ಲಿ ಜೂ. 1ರಿಂದ 5 ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಇವತ್ತಿನಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಇಂದಿನಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಭಾರೀ ಮಳೆ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಹಲವೆಡೆ ಕೂಡ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ.