ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಜೂನ್ 13 ರಂದು ಚುನಾವಣೆ ನಡೆಯಲಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಿ.ಟಿ.ರವಿ ಅವರಿಗೆ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ನಾಳೆ ಸಿ.ಟಿ.ರವಿ ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಇನ್ನು ಒಕ್ಕಲಿಗ ಖೋಟಾದಡಿಯಲ್ಲಿ ಸಿ.ಟಿ.ರವಿಗೆ ಹೈಕಮಾಂಡ್ ನಾಯಕರು ಮಣೆ ಹಾಕಿದೆ. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ.ರವಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನ ಅಭ್ಯರ್ಥಿ ಮುಂದೆ ಪರಾಭವಗೊಂಡಿದ್ರು. ಅದರ ಜೊತೆಗೆ ಬಿಜೆಪಿ ಹೈಕಮಾಂಡ್ ನಾಯಕರು ಅವರಿಗೆ ನೀಡಿದ್ದ ಸಂಘಟನಾತ್ಮಕ ಜವಾಬ್ದಾರಿಯಿಂದಲೂ ನಿಯುಕ್ತಿಗೊಳಿಸಿದ್ರು.

ಈಗ ಸಿ.ಟಿ. ರವಿ ಅವರಿಗೆ ಒಕ್ಕಲಿಗ ಖೋಟಾದಡಿಯಲ್ಲಿ ವಿಧಾನಪರಿಷತ್‌ನಲ್ಲಿ ಮಣೆ ಹಾಕಿದ್ದು, ಕೋಟಾ ಶ್ರೀನಿವಾಸಪೂಜಾರಿ ಅವರಿಂದ ತೆರವಾಗಲಿರುವ ವಿಪಕ್ಷ ನಾಯಕನ ಸ್ಥಾನ ಕೂಡ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ ಎನ್ನಲಾಗಿದೆ.